ಶನಿವಾರ, ಜೂಲೈ 11, 2020
24 °C

ಫುಕುಶಿಮಾ ಈಗ ಹಿರೊಶಿಮಾ

ನಾಗೇಶ ಹೆಗಡೆ Updated:

ಅಕ್ಷರ ಗಾತ್ರ : | |

ಫುಕುಶಿಮಾ ಈಗ ಹಿರೊಶಿಮಾ

ಸೂರ್ಯೋದಯದ ನಾಡು ಅದು. ಆದರೂ ಲಕ್ಷೋಪಲಕ್ಷ ಜಪಾನೀಯರಿಗೆ ಮಾರ್ಚ್ 11ರಂದು ಬೆಳಗಾಗಲೇ ಇಲ್ಲ. ಭೂಮಿ, ನೀರು, ಗಾಳಿ, ಬೆಂಕಿ, ಆಕಾಶ ಈ ಎಲ್ಲ ಪಂಚಮಹಾಭೂತಗಳೂ ಒಟ್ಟಾಗಿ ಅದರ ಮೇಲೆ ದಾಳಿ ನಡೆಸುತ್ತಿರುವುದನ್ನು ಇಡೀ ಜಗತ್ತೇ ದಿಗಿಲುದುಂಬಿ ನೋಡುತ್ತಿತ್ತು. ನೋಡುತ್ತಲೇ ಇದೆ. ಮೊದಲು ಭೂಕಂಪನದ ಆಘಾತ; ಅದರ ಹಿಂದೆ ಸುನಾಮಿಯ ಘೋರ ಅಲೆಗಳ ಹೊಡೆತ; ಅದರ ಹಿಂದೆ ಉಪಕಂಪನಗಳು; ಅದರ ಹಿಂದೆ ತೈಲಸ್ಥಾವರಗಳಲ್ಲಿ ಬೆಂಕಿ ಅಪಘಾತ; ಮತ್ತೆ ಸುನಾಮಿಯ ಭಯ; ಜತೆಗೆ ಪರಮಾಣು ಸ್ಥಾವರಗಳಲ್ಲಿ ಸರಣಿ ಸ್ಫೋಟ. ಕಟ್ಟಡ ಕುಸಿತ, ಹೆದ್ದಾರಿ ಬಿರಿತ, ನೌಕೆಗಳ ಪಲ್ಟಿ, ರೈಲಿಗೆ ರೈಲೇ ನಾಪತ್ತೆ; ಕಗ್ಗತ್ತಲು, ಘೋರ ಚಳಿ; ಆಕ್ರಂದನವೇ ಇಲ್ಲದ ಅಬ್ಬರ. ಪ್ರಳಯದ ಸಿನೆಮಾ ದೃಶ್ಯಗಳನ್ನೇ ಹೋಲುವ ನೈಜ ಸಾಕ್ಷ್ಯಚಿತ್ರಗಳು.ಭೂಗೋಲವನ್ನೇ ಬದಲಿಸಿ, ಇತಿಹಾಸವನ್ನೇ ನಿರ್ಮಿಸಿದ ವಿದ್ಯಮಾನ.

ಜಪಾನ್ ಎಂದರೆ ಭೂಕಂಪನಗಳ ನಾಡು; ಸುನಾಮಿಯೆಂಬ ರಕ್ಕಸ ಅಲೆಗಳ ಉಗಮತಾಣ; ಪರಮಾಣು ಬಾಂಬ್ ದಾಳಿಗೆ ತುತ್ತಾದ ಏಕೈಕ ದೇಶ. ಇಂಥ ದುಸ್ವಪ್ನಗಳನ್ನೇ ಹಾಸಿಹೊದ್ದರೂ ಎಲ್ಲವನ್ನೂ ತಂತ್ರಜ್ಞಾನದಿಂದಲೇ ಜಯಿಸುವ ಛಲ ಮತ್ತು ಆತ್ಮವಿಶ್ವಾಸದಿಂದ ತಲೆಯೆತ್ತಿ ಟೊಯೊಟಾ, ಸೋನಿ, ಮಿತ್ಸುಬಿಷಿ, ನಿಸ್ಸಾನ್‌ಗಳನ್ನೇ ಲಾಂಛನವನ್ನಾಗಿ ಮೆರೆದ ನಾಡು. ಈಗ ನೆಲದೊಳಗಿನ ಒಂದೇ ಒಂದು ಒದೆತದಿಂದಾಗಿ ನಖಶಿಖಾಂತ ಜರ್ಝರಿತಗೊಂಡ ನಾಡು.1923ರಲ್ಲಿ ಸೌದೆ ಒಲೆಯಲ್ಲಿ ಅಡುಗೆ ಬೇಯಿಸುತ್ತಿದ್ದಾಗಲೇ ಸಂಭವಿಸಿದ ಭೂಕಂಪನದಲ್ಲಿ 140 ಸಾವಿರ ಜನ ಸಾವಪ್ಪಿದ್ದರು. ಅರ್ಧಕ್ಕರ್ಧ ಜನ ಬೆಂಕಿಗೇ ಬಲಿಯಾದರು. ಅಗ್ನಿನಿರೋಧಕ ಕಟ್ಟಡಗಳು ತಲೆಯೆತ್ತಿದವು. 1995ರಲ್ಲಿ ಕೋಬೆ ನಗರದ ಭೂಕಂಪನದಲ್ಲಿ ಕಟ್ಟಡ, ಕಂಬ, ಕಂಬಿಗಳು ಕುಸಿದು 6400 ಜನರು ಅಸುನೀಗಿದರು. ಸುಲಭಕ್ಕೆ ಕುಸಿಯದ ಬಹುಮಹಡಿಗಳು, ಕುಸಿದರೂ ಪೆಟ್ಟಾಗದಂಥ ಕಾರ್ಡ್‌ಬೋರ್ಡ್ ಮನೆಗಳು ತಲೆಯೆತ್ತಿದವು. ಈ ಬಾರಿ ಕಾಲ್ಕೆಳಗಿನ ಶಿಲಾಸ್ತರಗಳು ಕಂಪಿಸಲಿಲ್ಲ. ಸಮುದ್ರದ ತಳವೇ ಮೇಲೆದ್ದು ಚಿಮ್ಮಿತು.ನೀರು ತುಂಬಿದ ಪಾತ್ರೆಗೆ ತಳದಿಂದ ಯಾರೋ ಗುದ್ದಿದಂತೆ ಅಂದು 10 ಮೀಟರ್ ಎತ್ತರದ ಅಲೆಗಳು ಎದ್ದವು. ತಮ್ಮೆದುರು ಬಂದ ಎಲ್ಲವನ್ನೂ ಬೀಳಿಸುತ್ತ, ಕೊಚ್ಚಿ ಸಾಗಿಸುತ್ತ ಒಳನಾಡಿನತ್ತ ನುಗ್ಗಿದವು. ಚಿಂದಿಯಾದ ಸಾವಿರಾರು ಪ್ಲೈವುಡ್/ರಟ್ಟಿನ ಮನೆಗಳನ್ನೆಲ್ಲ ಒತ್ತುತ್ತ ಸಾಗಿಬಂದ ಮಹಾ ಅಲೆಗಳು ಎದುರು ಸಿಕ್ಕಿದ ವಿದ್ಯುತ್ ತಂತಿ, ಕೊಳಾಯಿಗಳನ್ನು ಕಿತ್ತೆಸೆಯುತ್ತ ಸಾಗಿದವು. ಮನೆಗಳು ಹಡಗುಗಳಂತೆ ತೇಲಿದವು. ಹಡಗುಗಳು ಕಾಗದದ ದೋಣಿಗಳಂತೆ ಪಲ್ಟಿ ಹೊಡೆದು ಕಮರಿಗೆ ಬಿದ್ದವು. ಕಾರುಗಳು ಮನೆಯ ಛಾವಣಿ ಏರಿದವು. ಲೋಹದ ಕಂಬಿಗಳು, ಕಟ್ಟೆಗಳು, ಪೆಟ್ರೋಲಿನ ಪೀಪಾಯಿಗಳು ಒಂದಕ್ಕೊಂದು ತಾಕಲಾಡಿ ಕಿಡಿ ಹೊತ್ತಿಕೊಂಡು ಆಸ್ಫೋಟಿಸಿದವು. ಇಡೀ ದ್ವೀಪವೇ ಇಪ್ಪತ್ತು ಅಡಿ ದೂರ ಸರಿಯಿತು.ಯಾವ ಹೊಡೆತಕ್ಕೂ ಬೀಳದಂತೆ ಬಲಭದ್ರವಾಗಿ ನಿರ್ಮಿಸಿದ್ದ ಫುಕುಶಿಮಾ ಪರಮಾಣು ಕೇಂದ್ರದ ಐದು ಸ್ಥಾವರಗಳು ಭೂಕಂಪನಕ್ಕೆ ತಾವಾಗಿ ಸ್ಥಗಿತವಾದವು; ಯುರೇನಿಯಂ ಕೊಳ್ಳಿಗಳು ಸ್ವಿಚಾಫ್ ಆದವು. ಅರ್ಧಗಂಟೆಯ ನಂತರ ಸುನಾಮಿ ಅಲೆಗಳು ನುಗ್ಗಿ ಬಂದವು. ಪರಮಾಣು ಇಂಧನದ ಸರಳುಗಳೆಂದರೆ ಸೌದೆಯಂತಲ್ಲ. ಅವು ಸದಾ ನೀರೊಳಗೇ ನಿಗಿನಿಗಿ ಉರಿಯುತ್ತಿರುತ್ತವೆ. ಕುಕ್ಕರ್‌ನಂತೆ ಸೀಲ್ ಮಾಡಿದ ಗರ್ಭಗುಡಿಯಲ್ಲಿ ಸದಾಕಾಲ ಅತಿ ಒತ್ತಡದಲ್ಲಿ ನೀರು ಚಲಿಸುತ್ತ ಒಳಗಿನ ಶಾಖವನ್ನು ಹೊರಕ್ಕೆ ಸಾಗಿಸುತ್ತಲೇ ಇರಬೇಕು.ಇಂಧನದ ಸರಳುಗಳನ್ನು ಸ್ವಿಚಾಫ್ ಮಾಡಿದರೂ ಅವು 10-12 ಗಂಟೆಗಳ ಕಾಲ ಉರಿಯುತ್ತಲೇ ಇರುತ್ತವೆ. ನೀರನ್ನು ಪೂರೈಸುವ ಪೈಪ್‌ಗಳು ಸುನಾಮಿಯ ಹೊಡೆತಕ್ಕೆ ಕಿತ್ತೆದ್ದು ಬಂದವು. ತುರ್ತಾಗಿ ಬದಲೀ ನೀರಿನ ಪೂರೈಕೆಗೆಂದು ಡೀಸೆಲ್ ಪಂಪ್‌ಸೆಟ್ ಇತ್ತಾದರೂ ಅವನ್ನು ಚಾಲೂ ಮಾಡಲು ವಿದ್ಯುತ್ ಇರಲಿಲ್ಲ. ಕುಕ್ಕರ್ ಒಳಗಿನ ನೀರು ಖಾಲಿಯಾಗುತ್ತ ಬಂದ ಹಾಗೆ ನಿಗಿನಿಗಿ ಸರಳುಗಳು ಕರಗುವ ಹಂತಕ್ಕೆ ಬಂದವು. ದಾಯಿಚಿ 1ನೇ ಘಟಕದಲ್ಲಿ ಜಲಜನಕ ಅನಿಲ ಸ್ಫೋಟ ಸಂಭವಿಸಿತು. ಐದು ಕಿಲೊಮೀಟರ್ ಸುತ್ತ ಇರುವ ಎಲ್ಲರೂ ದೂರ ಓಡುವಂತೆ ಸೂಚನೆ ಬಂತು.ಅದಾಗಿ ಮಾರನೆಯ ದಿನ ದಾಯಿಚಿ 3ನೆಯ ಘಟಕದಲ್ಲೂ ನೀರು ಖಾಲಿಯಾಗಿ ಕೊಳ್ಳಿಯ ಕೆನ್ನಾಲಗೆ ಹೊರಚಾಚಿ ಅಲ್ಲೂ ಜಲಜನಕ ಅನಿಲ ಸ್ಫೋಟಗೊಂಡಿತು. ಸುತ್ತಲಿನ 20 ಕಿಮೀ ಫಾಸಲೆಯಲ್ಲಿನ ಎಲ್ಲರೂ ಓಡುವಂತೆ ಆದೇಶ ಬಂತು. ಓಡಲು ಮಾರ್ಗ ಎಲ್ಲಿ? ಹಾಲು-ಹಣ್ಣು- ತರಕಾರಿ ಏನನ್ನೂ ಸೇವಿಸದಂತೆ ಆದೇಶ ಬಂತು. ತಿನ್ನಲು ಕುಡಿಯಲು ಏನಿದೆ ಅಲ್ಲಿ?ಮತ್ತೊಂದು ಚೆರ್ನೊಬಿಲ್ ಸಂಭವಿಸೀತೆ? ಉಸಿರು ಬಿಗಿ ಹಿಡಿದು ನೋಡುತ್ತಿದ್ದವರಿಗೆ ರಷ್ಯದ ಚೆರ್ನೊಬಿಲ್ ಸ್ಫೋಟದ ಕರಾಳ ನೆನಪುಗಳು ನುಗ್ಗಿ ಬಂದವು. ಅಲ್ಲಿನ ಉಕ್ರೇನ್ ರಾಜ್ಯದ ಹೊಚ್ಚ ಹೊಸ ಪರಮಾಣು ಸ್ಥಾವರ 1986ರ ಏಪ್ರಿಲ್ 26ರಂದು ಕಾರ್ಮಿಕರ ಅಚಾತುರ್ಯದಿಂದ ಸ್ಫೋಟಿಸಿದಾಗ ಹೊಗೆ, ಉಗಿ, ವಿಕಿರಣ ಇಂಧನವೆಲ್ಲ 2000 ಟನ್ ತೂಕದ ಛಾವಣಿಯ ಜತೆಗೇ ಜ್ವಾಲಾಮುಖಿಯಂತೆ ಆಕಾಶಕ್ಕೆ ಸಿಡಿದವು. ಜ್ವಾಲೆಯನ್ನು ಹೇಗಾದರೂ ನಂದಿಸಲೆಂದು ಬರ್ಫ, ಸೀಸ, ಬೋರಾನ್ ಮತ್ತು ಹಸಿ ಕಾಂಕ್ರೀಟ್ ಮುದ್ದೆಗಳನ್ನು ಆಕಾಶದಿಂದ ಸುರಿಯಲಾಯಿತು. ಸುರಿದಷ್ಟೂ ಭುಗ್ಗೆನ್ನುತ್ತಿದ್ದ ಜ್ವಾಲೆಯ ಮೇಲೆ ಹೆಲಿಕಾಪ್ಟರ್‌ಗಳೇ ಕುಸಿದು ಬಿದ್ದು ಪೆಟ್ರೋಲ್ ಸುರಿದವು. ವಿಕಿರಣ ಮೇಘ ಉಕ್ರೇನ್ ದಾಟಿ, ರಷ್ಯದ ಗಡಿಯಾಚೆ ಯುರೋಪ್‌ನ ಸ್ವೀಡನ್, ನಾರ್ವೆ, ಹಂಗೆರಿ, ರೊಮೇನಿಯಾಕ್ಕೂ ಪಸರಿಸಿದವು. ಚೆರ್ನೊಬಿಲ್ ಪಕ್ಕದ ಪ್ರೀಪ್ಯಾತ್ ನಗರವನ್ನೂ ಸುತ್ತಲಿನ ಹಳ್ಳಿಗಳನ್ನೂ ತುರ್ತು ಖಾಲಿ ಮಾಡುತ್ತಿದ್ದಾಗಲೇ ಕರಿಮಳೆ ಸುರಿದು ಹೂಹಣ್ಣು ಗೆಲ್ಲು ಹುಲ್ಲೆಲ್ಲ ವಿಷಮಯವಾಯಿತು. ಅತ್ತ ದುಃಖ ಸಂಕಟಗಳ ಅಲೆ ವಿಸ್ತರಿಸುತ್ತ ದೂರ ದೇಶಗಳತ್ತ ಸಾಗಿದ ಹಾಗೆ ಇತ್ತ ಎರಡೂವರೆ ಲಕ್ಷ ಚದರ ಕಿಲೊಮೀಟರ್ ವಿಸ್ತೀರ್ಣದಲ್ಲಿ ಗುಳೆ ಗೋಳಾಟ, ಸಾವಿನ ಸರಣಿ, ಗರ್ಭಸ್ರಾವದ ಸರಣಿ, ವಿಕಾರ ಶಿಶುಜನನದ ಸರಣಿ. ಬಾಯ್ದೆರೆದ ಅಣುಸ್ಥಾವರದಲ್ಲಿ ಉಳಿದಿದ್ದ ಶೇ. 90 ಪಾಲು ಇಂಧನವನ್ನು ಹೇಗಾದರೂ ಮುಚ್ಚಲೆಂದು ಎಂಟು ಲಕ್ಷ ಕಾರ್ಮಿಕರು ಆರು ತಿಂಗಳು ಶ್ರಮಿಸಿದರು. ಅವರಲ್ಲಿ ನಾನಾ ಕಾಯಿಲೆಗಳಿಗೆ ತುತ್ತಾಗಿ ನರಳಿದವರಿಗೆ ಲೆಕ್ಕವಿಲ್ಲ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಒಟ್ಟು 50 ಲಕ್ಷ ಜನರು ವಿಕಿರಣಪೀಡಿತರಾದರು. ತಮಗೆ ತಟ್ಟಿದ ನಾನಾ ಕಾಯಿಲೆಗಳನ್ನು ಮುಂದಿನ ಪೀಳಿಗೆಗೂ ರವಾನಿಸಬೇಕಾದ ಶಾಪಗ್ರಸ್ತರಾದರು.ಫುಕುಶಿಮಾ ಮತ್ತೊಂದು ಚೆರ್ನೊಬಿಲ್ ಆದೀತೆ? ಇದನ್ನು ಬರೆಯುವ ವೇಳೆಗೆ ಮೂರನೆಯ ಪರಮಾಣು ಘಟಕವೂ ಸ್ಫೋಟಿಸಿದ ವರದಿ ಬರುತ್ತಿದೆ. ‘ಪರಿಸ್ಥಿತಿ ಸಾಕಷ್ಟು ಗಂಭೀರ’ ಎಂದು  ಪ್ರಧಾನಿ ಹೇಳಿದ್ದಾರೆ. ಮೊದಲ ಘಟಕ ಇನ್ನೆಂದೂ ದುರಸ್ತಿಯಾಗದಷ್ಟು ಧ್ವಂಸವಾಗಿದೆ ಎಂಬ ವಾರ್ತೆ ಬರುತ್ತಿದೆ. ಇಂಧನ ಸರಳು ಕರಗಿ ಬಸಿದರೆ ಏನಾದೀತು? ಅಮೆರಿಕದ ಥ್ರೀಮೈಲ್ ಐಲ್ಯಾಂಡ್‌ನ ಪರಮಾಣು ಸ್ಥಾವರದಲ್ಲಿ 1979ರಲ್ಲಿ ನೀರು ಖಾಲಿಯಾಗಿ ಇಂಧನ ಸರಳುಗಳು ಕರಗಿ ತಳಕ್ಕಿಳಿದಾಗ ‘ಚೈನಾ ಸಿಂಡ್ರೋಮ್’ ಭಯ ಹಬ್ಬಿತ್ತು. ಇಂಧನ ಕರಗುತ್ತ ಅಡಿಪಾಯಕ್ಕೂ ಇಳಿದು, ಶಿಲಾಸ್ತರಗಳನ್ನು ಕರಗಿಸುತ್ತ ಅಮೆರಿಕದಿಂದ ಭೂಮಿಯ ಇನ್ನೊಂದು ಮಗ್ಗಲಿನ ಚೀನಾವರೆಗೂ ರಂಧ್ರವಾಗುವ ಕಲ್ಪನೆಗೆ  ‘ಚೈನಾ ಸಿಂಡ್ರೋಮ್’ ಎನ್ನುತ್ತಾರೆ. ಹಾಗೇನೂ ಆಗಲಿಲ್ಲ.ಅಂದಿನಿಂದ ಒಂದೂ ಹೊಸ ಅಣುಸ್ಥಾವರವನ್ನು ಕಟ್ಟಿರದ ಅಮೆರಿಕ ಇದೀಗ ಭಾರತದಲ್ಲಿ ಸರಣಿ ಸ್ಥಾವರಗಳ ನಿರ್ಮಾಣಕ್ಕೆ ಕುಮ್ಮಕ್ಕು ನೀಡುತ್ತಿದೆ. ನಾವೂ ಬಹುದೊಡ್ಡ ಪ್ರಮಾಣದಲ್ಲಿ ಅಣುಶಕ್ತಿಯನ್ನು ಅಪ್ಪಿಕೊಳ್ಳಲು ಹೊರಟಿದ್ದೇವೆ. ಚೆರ್ನೊಬಿಲ್ ಅಥವಾ ಫುಕುಶಿಮಾದಂಥ ಭಾನಗಡಿ ನಮ್ಮಲ್ಲಿ ಆದೀತೆ? ಆಗಿದ್ದೇ ಆದರೆ ನಾವು ಅದನ್ನು ನಿಭಾಯಿಸಲು ಸಾಧ್ಯವೆ?ಪರಮಾಣು ತಂತ್ರಜ್ಞಾನವನ್ನು ಪಳಗಿಸಲು ಕಠೋರ ಶಿಸ್ತು ಬೇಕು. ಸ್ಥಾವರ ನಿರ್ಮಾಣದಿಂದ ಹಿಡಿದು ಯಂತ್ರೋಪಕರಣ ಜೋಡಣೆ, ಭದ್ರತಾ ವ್ಯವಸ್ಥೆಯವರೆಗೆ ಮಿಲಿಟರಿ ಶಿಸ್ತು, ಅಲ್‌ಖೈದಾ ಬದ್ಧತೆ ಬೇಕು. ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಅಸೂಯೆ, ಭಯೋತ್ಪಾತ, ಚಾರ್‌ಸೌಬೀಸಿಯ ಲವಲೇಶವೂ ಇರಕೂಡದು. ಅವನ್ನೇ ಹಾಸುಹೊದ್ದ ಈ ಸಮಾಜದಲ್ಲಿ ನಕಲಿ ಪೈಲಟ್‌ಗಳೂ ಇದ್ದಾರೆ. ಅಸಲೀ ವಂಚಕರೂ ಎತ್ತರದ ಹುದ್ದೆಗೇರುತ್ತಾರೆ. ಜಪಾನ್‌ಗೆ ಹೋಲಿಸಿದರೆ ನಮ್ಮಲ್ಲಿ ಭೂಕಂಪನಗಳ ಸಾಧ್ಯತೆ, ತೀವ್ರತೆ ಕಡಿಮೆ; ಜ್ವಾಲಾಮುಖಿ, ಸುನಾಮಿಗಳೂ ಇಲ್ಲ. ಆದರೆ ಅದ್ಯಾವುದೂ ಇಲ್ಲದೆಯೇ ಕೈಗಾ ಗುಮ್ಮಟ ಕುಸಿದಿತ್ತು ತಾನೆ? ಅಲ್ಲಿನ ಘನಭದ್ರತೆಯ ನಡುವೆಯೂ ಟ್ರೀಶಿಯಂ ವಿಕಿರಣವಸ್ತುವನ್ನು ಯಾರೋ ಕುಡಿಯುವ ನೀರಿಗೆ ಸುರಿದಿದ್ದರು ತಾನೆ? ಶತ್ರುಗಳು ಫೈಟರ್ ಜೆಟ್‌ನಲ್ಲಿ ಬಂದು ಸಾಮಾನ್ಯ ಶೆಲ್ ದಾಳಿ ನಡೆಸಿದರೂ ಒಂದಿಡೀ ಸ್ಥಾವರವೇ ಅಣುಬಾಂಬ್ ಆಗಲು ಸಾಧ್ಯ ತಾನೆ?ಕಳೆದ ಐವತ್ತು ವರ್ಷಗಳಲ್ಲಿ ನಾವು ನಮ್ಮದೇ ಭಾರಜಲ ಆಧರಿತ ಅಣು ತಂತ್ರಜ್ಞಾನವನ್ನು ಹಾಗೂ ಹೀಗೂ ಏಗುತ್ತ ರೂಢಿಸಿಕೊಂಡಿದ್ದೆವು. ನರೋರಾ ಸ್ಥಾವರದಲ್ಲಿ ಬೆಂಕಿ ಆಕಸ್ಮಿಕ, ಕಲ್ಪಾಕ್ಕಮ್‌ನಲ್ಲಿ ಚಂಡಮಾರುತ ಹೊಡೆತ, ತಾರಾಪುರ ಮತ್ತು ರಾವತ್‌ಭಾಟಾದಲ್ಲಿ ಸೋರಿಕೆಯ ಅಧ್ವಾನ, ರಟ್ಣಹಳ್ಳಿಯಲ್ಲಿ ರೇಲ್ವೆ ಸೈಡಿಂಗ್ ಅಚಾತುರ್ಯ, ಕಕ್ರಪಾರಾ ಘಟಕದಲ್ಲಿ ನೀರಿನ ಅಭಾವವೇ ಮುಂತಾದ ಅಸಂಖ್ಯ ಚಿಕ್ಕಪುಟ್ಟ ತುರ್ತುಸ್ಥಿತಿಗಳನ್ನು ಹೇಗೋ ನಿಭಾಯಿಸಿದ್ದೆವು.ಈಗಿರುವ 14 ಘಟಕಗಳ ಜತೆಗೆ ಭಾರೀ ಗಾತ್ರದ ಇನ್ನೂ ಇಪ್ಪತ್ತು ಸ್ಥಾವರಗಳನ್ನು ಕಟ್ಟುವ ಕನಸು ನಮ್ಮದು. ರಷ್ಯ ಮತ್ತು ಫ್ರಾನ್ಸ್‌ನಿಂದ ಬರುತ್ತಿರುವ ಆ ಘಟಕಗಳಲ್ಲಿ ಬೇರೆಯದೇ ತಂತ್ರಜ್ಞಾನ ಇದೆ. ಹೊಸದಾಗಿ ಕಲಿಯಬೇಕು. ಇದೀಗ ರತ್ನಗಿರಿಯ ಬಳಿ ಜಯತ್‌ಪುರದಲ್ಲಿ ಜನಾಕ್ರೋಶದ ನಡುವೆಯೇ ತಲೆಯೆತ್ತಲಿರುವ ‘ಅರೆವಾ’ ಫ್ರೆಂಚ್ ಘಟಕವಂತೂ ಜಗತ್ತಿಗೇ ಹೊಸತು. ಅದನ್ನು ನಮ್ಮ ನೆಲದಲ್ಲೇ ಪ್ರಯೋಗಾರ್ಥ ಸ್ಥಾಪಿಸಬೇಕಿತ್ತೆ? ದುರಂತ ನಡೆದರೆ ಪರಿಹಾರಕ್ಕೂ ತಾವು ಹೊಣೆಯಲ್ಲವೆಂದು ಅವು ನುಣುಚಿಕೊಂಡಿವೆ. ಹೊಸ ಘಟಕಗಳೆಲ್ಲ ಬಹುಪಾಲು ಸಮುದ್ರತಟದ ಸಮೀಪದಲ್ಲೇ ತಲೆಯೆತ್ತಲಿವೆ. ವಿಕಿರಣ ಸೋರಿಕೆಯಾದರೆ ನೂರಿನ್ನೂರು ಕಿಮೀವರೆಗಿನ ದಟ್ಟ ಜನವಸತಿಯನ್ನು ಎಲ್ಲಿ ತಳ್ಳಬೇಕು?ಬಡಜನರ ಕಷ್ಟನಷ್ಟ ಯಾರಿಗೆ ಬೇಕು? ಕಳೆದ ವರ್ಷ ಬಡರಾಷ್ಟ್ರ ಹೈಟಿಯಲ್ಲಿ ಭೂಕಂಪನದಿಂದಾಗಿ ಎರಡೂವರೆ ಲಕ್ಷ ಜನರು ಸತ್ತರು. ಗತಿಗೆಟ್ಟ ಹತ್ತಾರು ಲಕ್ಷ ಜನರನ್ನು ಈಗಲೂ ಹೇಳಕೇಳುವವರಿಲ್ಲ. ಮಾಧ್ಯಮಗಳಿಗೂ ಕಾರು, ಹಡಗು, ವಿಮಾನಗಳ ಪಲ್ಟಿಯ ರೋಚಕ ದೃಶ್ಯಗಳೇ ಬೇಕು. ಅವನ್ನೆಲ್ಲ ನಾವು ಎಲ್ಲಿಂದ ತರೋಣ? ಸೋರಿಕೆಯ ಅಪಾಯ ದೂರ ಸಾಗಲೆಂದು ಗಾಳಿ ಸಮುದ್ರದ ಕಡೆಗೆ ಬೀಸುತ್ತಿರುವಾಗ ಮಾತ್ರ ಸೋರಿಕೆಯಾಗುವಂತೆ ನಮ್ಮ ಸ್ಥಾವರಗಳಿಗೆ ಮಂತ್ರಮಾಟ ಮಾಡೋಣವೆ?ಮಂತ್ರ-ಮಾಟ, ಹರಕೆ-ಯಾಗ, ರಾಹು-ಗುಳಿಕಗಳ ಮೂಢಜಗತ್ತಿನಿಂದ ನಾವಿನ್ನೂ ಹೊರಕ್ಕೆ ಬಂದಿಲ್ಲ. ಪುಟ್ಟ ಅಪಶಕುನಗಳಿಗೆ, ಕೆಟ್ಟ ಕನಸುಗಳಿಗೆ ಏನೇನೋ ಅರ್ಥ ಕಟ್ಟಿ ಅಂಜುವವರು ನಾವು. ಇದಕ್ಕೆ ತದ್ವಿರುದ್ಧವಾಗಿ ಜಪಾನ್ ಮಾದರಿಯಲ್ಲಿ ಭೂಕಂಪನ, ಚಂಡಮಾರುತಗಳಿಗೂ ಸಡ್ಡು ಹೊಡೆದು ತಂತ್ರಸ್ಥಾವರಗಳನ್ನು ಕಟ್ಟುತ್ತೇವೆಂದು ತೊಡೆತಟ್ಟಿ ಹೊರಟ ಜೆಟ್‌ಸೆಟ್ ಹುಂಬರೂ ನಮ್ಮಲ್ಲಿದ್ದಾರೆ.ಈ ಎರಡು ಅಸಂಗತಗಳ ನಡುವೆ ನಾಳಿನ ಪೀಳಿಗೆಯನ್ನು ರೂಪಿಸಬೇಕಾದ ಕರ್ಮ ನಮ್ಮದು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.