ಶನಿವಾರ, ಮೇ 15, 2021
22 °C

ಫೇಸ್‌ಬುಕ್ ಜತೆ ಫಿಕ್ಕಿಮೈತ್ರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಾಗಿನ್

ಫೇಸ್‌ಬುಕ್ ಬಹುತೇಕ ಎಲ್ಲ ದೇಶಗಳ ಯುವಜನರ ಮೆಚ್ಚಿನ ಸಾಮಾಜಿಕ ನಂಟಿನ ತಾಣ ಎನ್ನುವುದರಲ್ಲಿ ಅನುಮಾನವೇ ಇಲ್ಲ.ಯುವಜನರಷ್ಟೇ ಅಲ್ಲ ಇತ್ತೀಚಿನ ದಿನಗಳಲ್ಲಿ 40 ವರ್ಷ ದಾಟಿದವರೂ, 60ರ ಅಂಚಿನಲ್ಲಿರುವವರೂ ಫೇಸ್‌ಬುಕ್ ಸದಸ್ಯರಾಗಿದ್ದಾರೆ.ಸಮಾನ ಅಭಿರುಚಿ, ಆಸಕ್ತಿ, ಹವ್ಯಾಸ, ಜೀವನಶೈಲಿಯ ಜನರ ಸ್ನೇಹ ಸಂಪಾದಿಸಲು ಹುಡುಕಾಟ ನಡೆಸುತ್ತಿರುವವರನ್ನು ಒಂದುಗೂಡಿಸುವ ಕೆಲಸದಲ್ಲಿ ನೆರವಾಗುತ್ತಿರುವ ಫೇಸ್‌ಬುಕ್‌ನ ಅನುಕೂಲಗಳನ್ನು ಈಗ ಉದ್ಯಮ ಕ್ಷೇತ್ರವೂ ಬಳಸಿಕೊಳ್ಳಲು ಮುಂದಾಗಿದೆ.ಫಿಕ್ಕಿ ಗೊತ್ತಲ್ಲ? ಅದೇ ಫೆಡರೇಷನ್ ಆಫ್ ಇಂಡಿಯನ್ ಚೇಂಬರ್ಸ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರಿ. ಫಿಕ್ಕಿ ಬಗ್ಗೆ ನಿಮಗೆ ಹೆಚ್ಚಿನ ಮಾಹಿತಿ ಬೇಕೆ? ಲಾಗಿನ್ `ಫೇಸ್‌ಬುಕ್~.

ಭಾರತದ ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳ ಬಗೆಗೆ, ಅವುಗಳ ಉತ್ಪನ್ನ, ಬ್ರಾಂಡ್, ಮಾರುಕಟ್ಟೆ ವಿಚಾರ ತಿಳಿಯಬೇಕೆ? ನಿಮಗೆ ಅಗತ್ಯವಾದ ಉತ್ಪನ್ನ ಎಲ್ಲಿ ಸಿಗುತ್ತದೆ? ಅದರ ಬೆಲೆ ಎಷ್ಟು? ಈಗಾಗಲೇ ಆ ಉತ್ಪನ್ನ ಬಳಸಿದವರ ಫೀಡ್‌ಬ್ಯಾಕ್ ಬೇಕೆ?ಜಸ್ಟ್ ಲಾಗಿನ್ `ಫೇಸ್‌ಬುಕ್~.

ಇಂಟರ್‌ನೆಟ್ ಹಾಗೂ ಸಾಮಾಜಿಕ ಮಾಧ್ಯಮದ ಶಕ್ತಿಯ ಲಾಭ ಪಡೆಯಲು ಯೋಜಿಸಿರುವ ಫೆಡರೇಷನ್ ಆಫ್ ಇಂಡಿಯನ್ ಚೇಂಬರ್ಸ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರಿ(ಎಫ್‌ಐಸಿಸಿಐ), ಫೇಸ್‌ಬುಕ್ ಜತೆ ಒಡಂಬಡಿಕೆ ಮಾಡಿಕೊಂಡಿದೆ.`ಫೇಸ್‌ಬುಕ್~ನಲ್ಲಿ ಲಭ್ಯವಿರುವ ಅನುಕೂಲಗಳನ್ನು ಪಡೆದು ದೇಶದ ಸಣ್ಣ ಹಾಗೂ ಮಧ್ಯಮ ಗಾತ್ರದ ಉದ್ಯಮಗಳಿಗೆ ನೆರವಾಗಬೇಕೆಂಬುದು ತನ್ನ ಉದ್ದೇಶವಾಗಿದೆ ಎಂದಿದೆ ಫಿಕ್ಕಿ.

ಈ ವಿಶಿಷ್ಟ ಒಡಂಬಡಿಕೆಯು ಫೇಸ್‌ಬುಕ್‌ನ ಜಾಗತಿಕ ಸಣ್ಣ ಹಾಗೂ ಮಧ್ಯಮ ಗಾತ್ರದ ಉದ್ಯಮಗಳ(ಎಸ್ ಎಂಇ) ಪ್ರೋತ್ಸಾಹ ಕಾರ್ಯಕ್ರಮವನ್ನು ಭಾರತದಲ್ಲಿ ವಿಸ್ತರಿಸಲಿದ್ದು, ಭಾರತೀಯ ಎಸ್‌ಎಂಇಗಳು ವ್ಯಾಪಾರ ವೃದ್ಧಿಸಿಕೊಳ್ಳಲು ಸಹಾಯಕವಾಗಲಿದೆ.ಇದಕ್ಕಾಗಿ ಫೇಸ್‌ಬುಕ್ ಶೈಕ್ಷಣಿಕ ಸಂಪನ್ಮೂಲ ಹಾಗೂ ಉಚಿತ ಜಾಹೀರಾತು ಸೇವೆ ಒದಗಿಸಲಿದೆ. ಆ ಮೂಲಕ ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳು ವಿಶ್ವದಾದ್ಯಂತದ ಗ್ರಾಹಕರನ್ನು ಆಕರ್ಷಿಸಲು ಅನುಕೂಲವಾಗಲಿದೆ ಎಂಬುದು ಫಿಕ್ಕಿ ನಿರೀಕ್ಷೆ.ಒಟ್ಟಿನಲ್ಲಿ ವಿಶ್ವದ ಬಹಳಷ್ಟು ದೇಶಗಳ ಉದ್ದಿಮೆಗಳು ತಂತ್ರಜ್ಞಾನದ ನೆರವು ಪಡೆದುಕೊಂಡು ಪ್ರಗತಿಯ ಹಾದಿ ತುಳಿದು ವರ್ಷಗಳೇ ಕಳೆದಿದ್ದರೂ, ಭಾರತದ ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳು ತಡವಾಗಿಯಾದರೂ `ತಂತ್ರಜ್ಞಾನ~ದ ಅನುಕೂಲಗಳನ್ನು ಅರಿತುಕೊಂಡು ಲಾಭ ಮಾಡಿಕೊಳ್ಳಲು ಮನಸ್ಸು ಮಾಡಿವೆ.ಸದ್ಯ ಭಾರತದಲ್ಲಿ 6400 ಕೈಗಾರಿಕಾ ಪ್ರದೇಶಗಳಿದ್ದು, ಅದರಲ್ಲಿ 6000 ಪ್ರದೇಶಗಳು ಮಾತ್ರ ಸಣ್ಣ ಪ್ರಮಾಣದಲ್ಲಿಯಷ್ಟೇ ತಂತ್ರಜ್ಞಾನ  ಹೊಂದಿವೆ.ಸ್ಪರ್ಧಾತ್ಮಕ ಮಾರುಕಟ್ಟೆಯ ಈ ಸಂದರ್ಭದಲ್ಲಿ ಲಭ್ಯವಿರುವ ತಂತ್ರಜ್ಞಾನವನ್ನು ಬಳಸಿಕೊಳ್ಳದೇ ಇರುವುದು ಈ ಎಸ್‌ಎಂಇಗಳ ನಿದಾನಗತಿ ಪ್ರಗತಿಗೆ ಕಾರಣವಾಗಿದೆ.

ಸ್ಪರ್ಧಾತ್ಮಕವಾದ ಜಾಗತಿಕ  ಮಾರುಕಟ್ಟೆಯಲ್ಲಿ ಭಾರತದ ಸಣ್ಣ ಉದ್ದಿಮೆಗಳೂ ಬೆಳವಣಿಗೆ ಕಾಣುವಂತಾಗಲು ತಂತ್ರಜ್ಞಾನವನ್ನು ಚಾಲಕ ಶಕ್ತಿಯಾಗಿಸಿಕೊಳ್ಳಲು ಫಿಕ್ಕಿ ಇದೀಗ ಫೇಸ್‌ಬುಕ್‌ನ ಜತೆ ಕೈಜೋಡಿಸಿದೆ.ಫೇಸ್‌ಬುಕ್‌ನಂತಹ ಸಾಮಾಜಿಕ ಮಾಧ್ಯಮಗಳು ಉತ್ಪನ್ನದ ಬ್ರಾಂಡ್ ಪ್ರಚಾರಕ್ಕೆ ತನ್ನದೇ ಆದ ರೀತಿಯಲ್ಲಿ ನೆರವಾಗುತ್ತವೆ. ನಿತ್ಯ ಫೇಸ್‌ಬುಕ್ ಬಳಸುವವರ ಸಮೂಹದಲ್ಲಿ ಈ ಸಣ್ಣ ಉದ್ಯಮಗಳಿಗೆ ನಿತ್ಯ ಜಾಹೀರಾತು. ವಿವಿಧ ಶ್ರೇಣಿಯ ಗ್ರಾಹಕರ ಅಭಿಮತ (ಫೀಡ್‌ಬ್ಯಾಕ್) ಸಹ ಇಲ್ಲಿ ದಾಖಲಾಗುವುದರಿಂದ ಸಣ್ಣ ಉದ್ದಿವೆುಗಳು ತನ್ನ ಉತ್ಪನ್ನ ಸುಧಾರಣೆಗೂ ಅನುಕೂಲ.ಒಂದು ಸಂಸ್ಥೆ ಗ್ರಾಹಕರನ್ನು ಅರ್ಥಮಾಡಿಕೊಳ್ಳಲು ಇದು ಸುಲಭದ ಮಾರ್ಗ. ಗ್ರಾಹಕರ ಬೇಡಿಕೆ ಯಾವ ಬಗೆಯದು ಎಂದು ಅರ್ಥವಾಗುವುದರಿಂದ ಮಾರ್ಕೆಟಿಂಗ್ ಸಹ ಉತ್ತಮಪಡಿಸಿಕೊಳ್ಳಲು ಸಾಧ್ಯ.ಇಷ್ಟೇ ಅಲ್ಲದೆ, ನೇಮಕಾತಿ, ವ್ಯಾಪಾರ ಸ್ವಾಧೀನ, ಸಂಶೋಧನೆ, ಉತ್ಪನ್ನ ಅಭಿವೃದ್ಧಿ ಹಾಗೂ ಖರೀದಿ ವಿಚಾರಗಳಲ್ಲೂ `ಫೇಸ್‌ಬುಕ್~ನಂತಹ ಸಾಮಾಜಿಕ ತಾಣಗಳು, ತಂತ್ರಜ್ಞಾನ ನೆರವಾಗುತ್ತವೆ.ಭಾರತದಲ್ಲಿ ಫೇಸ್‌ಬುಕ್ ಬಳಕೆದಾರರು 4.60 ಕೋಟಿ ಮಂದಿ ಇದ್ದು, ದೇಶದ ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳಿಗೆ ಇಷ್ಟು ದೊಡ್ಡ ಗ್ರಾಹಕ ಸಮೂಹದ ಸಂಪರ್ಕ ಸುಲಭದಲ್ಲಿ ಸಾಧ್ಯವಾಗಲಿದೆ ಎಂಬುದು ಫಿಕ್ಕಿ ಪ್ರಧಾನ ಕಾರ್ಯದರ್ಶಿ ರಾಜೀವ್ ಕುಮಾರ್ ಅವರ ವಿಶ್ವಾಸದ ನುಡಿ.`ಸಾಮಾಜಿಕ ನೆಟ್‌ವರ್ಕ್ ಮೂಲಕ ನಮ್ಮ ವ್ಯಾಪಾರ ಪ್ರದರ್ಶನ ಹಾಗೂ ಸಮಾವೇಶಗಳಿಗೆ ಆನ್‌ಲೈನ್ ಮಾರ್ಕೆಟಿಂಗ್ ಬಗ್ಗೆ ತರಬೇತಿ ಕಾರ್ಯಕ್ರಮಗಳನ್ನು ಫಿಕ್ಕಿ ಹಾಗೂ ಫೇಸ್‌ಬುಕ್ ಅಳವಡಿಸಿಕೊಳ್ಳಲಿವೆ~ ಎನ್ನುತ್ತಾರೆ ಅವರು.ಹೊಸ ಗ್ರಾಹಕರನ್ನು ತಲುಪಲು, ಕಂಪನಿಯ ಹಿರಿಮೆ ಹೆಚ್ಚಿಸಿಕೊಳ್ಳಲು ಫೇಸ್‌ಬುಕ್ ಗಮನಾರ್ಹ ರೀತಿ ನೆರವಾಗುತ್ತಿದೆ. ನಮ್ಮ ಉತ್ಪನ್ನಗಳ ಬಗ್ಗೆ ಫೀಡ್‌ಬ್ಯಾಕ್ ಸಹ ಪಡೆಯಲು ಇದು ಸಹಾಯಕವಾಗಿದೆ.

 

ಬಳಕೆದಾರರ ಪ್ರತಿಕ್ರಿಯೆ ಆಧರಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲೂ ನಮ್ಮ ಕಂಪನಿಗೆ ಸಾಧ್ಯವಾಗುತ್ತಿದೆ ಎನ್ನುತ್ತಾರೆ ವಿದ್ಯುತ್ ಪರಿಕರಗಳ ತಯಾರಿಕೆ ಮತ್ತು ಮಾರಾಟ ಸಂಸ್ಥೆ `ಫ್ರೀಪ್ಲೇ ಎನರ್ಜಿ ಇಂಡಿಯ~ದ ದೇವಿನ್ ನಾರಂಗ್.ಭಾರತೀಯ ಸಣ್ಣ ಟೀ ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಜಿ.ಚಕ್ರವರ್ತಿ ಸಹ ಫೇಸ್‌ಬುಕ್ ಬಳಕೆದಾರರೇ ಆಗಿದ್ದಾರೆ. ಚಹಾ ತೋಟದ ಮಾಲೀಕರಲ್ಲಿ ಶೇ. 70ಕ್ಕೂ ಅಧಿಕ ಮಂದಿ ತರುಣರು, ಸುಶಿಕ್ಷಿತರು, ಅಂತರ್ಜಾಲ ಮತ್ತು ಸಾಮಾಜಿಕ ಜಾಲ ತಾಣಗಳ ನಂಟು ಹೊಂದಿರುವವರು ಇದ್ದಾರೆ.ವಿಶ್ವದ ವಿವಿಧ ದೇಶದಲ್ಲಿ ಆಯಾ ವರ್ಷದ ಚಹಾ ಉತ್ಪಾದನೆ, ಬೇಡಿಕೆ-ಪೂರೈಕೆ ವ್ಯತ್ಯಾಸ, ಮಾರುಕಟ್ಟೆ ಧಾರಣೆ ಏರಿಳಿತ ಅರಿತುಕೊಳ್ಳಲು ಅಂತರ್ಜಾಲ ತಕ್ಕಮಟ್ಟಿಗೆ ನೆರವಾಗುತ್ತಿದೆ. ಈಗ ಸಾಮಾಜಿಕ ನಂಟಿನ ತಾಣಗಳೂ ಹೊಸ ಗ್ರಾಹಕರನ್ನು ಪಡೆಯಲು, ಅವರ ಅಭಿರುಚಿ ತಿಳಿಯಲು ನಮ್ಮಂತಹವರಿಗೆ ಬಹಳ ಸಹಾಯಕವಾಗಿವೆ ಎನ್ನುತ್ತಾರೆ ಚಕ್ರವರ್ತಿ. 

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.