ಭಾನುವಾರ, ಮೇ 16, 2021
26 °C

ಫ್ಯೂಷನ್ ಪ್ರವೀಣೆ

ಪ್ರೊ. ಮೈಸೂರು ವಿ. ಸುಬ್ರಹ್ಮಣ್ಯ Updated:

ಅಕ್ಷರ ಗಾತ್ರ : | |

ಫ್ಯೂಷನ್ ಪ್ರವೀಣೆ

ನಾಳೆ (ಬುಧವಾರ, ಸೆ. 21) ಪ್ರಾರಂಭವಾಗಲಿರುವ 42ನೇ ಸಂಗೀತ ವಿದ್ವಾಂಸರ ಸಮ್ಮೇಳನದ ಅಧ್ಯಕ್ಷ ಪೀಠವನ್ನು ಹಿರಿಯ ಗಾಯಕಿ ಆರ್.ಎ. ರಮಾಮಣಿ ಅಲಂಕರಿಸುತ್ತಿದ್ದಾರೆ.ಸಂಗೀತದಲ್ಲಿ ಸ್ನಾತಕೋತ್ತರ ಪದವಿ ಗಳಿಸಿ, ಹಿರಿಯರಿಂದ ಕಲಿತು, ತಮ್ಮ ಸಂಗಿತ ಜೀವನಕ್ಕೆ ಭದ್ರ ಬುನಾದಿ ಹಾಕಿಕೊಂಡಿರುವ ರಮಾಮಣಿ, ಕರ್ನಾಟಕ ಶಾಸ್ತ್ರೀಯ ಹಾಡುಗಾರಿಕೆಯಲ್ಲದೆ ಮೃದಂಗ, ಕೊನ್ನಕೋಲ್‌ಗಳಲ್ಲೂ ಪರಿಣಿತೆ.ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಪ್ರಮುಖ ಸಭೆ, ಸಮ್ಮೇಳನಗಳಲ್ಲಿ ಹಾಡಿರುವ ಅವರ ಲಯಜ್ಞಾನ ಹಾಗೂ ಮನೋಧರ್ಮ ಅಪೂರ್ವ. ಕೃತಿ ಭಂಡಾರವೂ ಅಗಾಧ. ಎರಡೂ ಕೈಗಳಲ್ಲಿ ಭಿನ್ನ ನಡೆ, ಭಿನ್ನ ತಾಳಗಳನ್ನು ತೋರಿಸುವ ಕ್ಲಿಷ್ಟವಾದ ಅವಧಾನದಲ್ಲೂ ಅವರು ನಿಷ್ಣಾತೆ.ಬಾನುಲಿಯ ಉನ್ನತ ದರ್ಜೆಯ ಗಾಯಕಿ. ಪಾಶ್ಚಾತ್ಯ ಸಂಗೀತದೊಂದಿಗೆ ಫ್ಯುಷನ್ ಕಾರ್ಯಕ್ರಮಗಳಲ್ಲೂ ಜನಪ್ರಿಯರು. ಜಾಸ್ ಮ್ಯೂಸಿಕ್‌ನಲ್ಲಂತೂ ಪ್ರಪಂಚ ಪ್ರಖ್ಯಾತಿ!ಮೊರಾಕ್ಕೊದಲ್ಲಿ ನಡೆದ  ವಾಯ್ಸ ಫೆಸ್ಟಿವಲ್‌ನಲ್ಲಿ ಪಾಲ್ಗೊಂಡ ಅಪರೂಪದ ಭಾರತೀಯ ಕಲಾವಿದೆ. ಹಾಗೆಯೇ ಪ್ರತಿಷ್ಠಿತ ವೇದಿಕೆಗಳಾದ ಲಂಡನ್‌ನ ಎಲಿಜಬೆತ್ ಹಾಲ್, ಆಸ್ಟ್ರೇಲಿಯದ ಆಕ್ಟೋಜೆನ್ ಥಿಯೇಟರ್, ಬೀರೂತ್‌ನ ಐವಾಲ್ವ ಹೋಂ, ಪೋಲೆಂಡ್‌ನ ಜಾಸ್ ಜಂಬೂರಿ, ಎಡ್ಮಂಟನ್ ಫೆಸ್ಟಿವಲ್, ಜರ್ಮನಿಯ ಅಬರ್‌ಡೀನ್ ಸಂಗೀತ ಉತ್ಸವಗಳಲ್ಲಿ ರಮಾಮಣಿ ಅವರ ಇನಿದನಿ ಮಾರ್ದನಿಗೊಂಡಿದೆ.ಭಾರತೀಯ ಸಂಗೀತದ ಸೊಗಡು ಕಾಪಾಡಿಕೊಂಡು ಜಾಸ್ ಸಂಗೀತದ ನಾದ ರಸಾಯನವನ್ನು ಉಣಬಡಿಸಿ, ಸಂಗೀತ ಪರಿಮಳವನ್ನು ಪಸರಿಸುತ್ತಿದ್ದಾರೆ.ಅವರು ಉತ್ತಮ ಸಂಯೋಜಕಿಯೂ ಹೌದು. ಅವರು ಸಂಯೋಜಿಸಿ, ನಿರ್ದೇಶಿಸಿ, ಹಾಡಿರುವ ಆಲ್ಬಂಗಳು ಪ್ರಪಂಚದ ವಿವಿಧೆಡೆ ಮನೆ ಮಾತಾಗಿವೆ. ಅವರ ರಚನೆಗಳು ಲತಾಪಾದ, ಶೋಭನಾ ಜೈಸಿಂಗ್ ಮುಂತಾದ ಖ್ಯಾತರ ನೃತ್ಯದಲ್ಲೂ ಬಳಕೆಯಾಗಿವೆ.ಹೀಗಾಗಿ ಭಾರತದ ನೈಜ ಸಾಂಸ್ಕೃತಿಕ ರಾಯಭಾರಿಯಾಗಿ ಎಲ್ಲೆಡೆ ಸಂಚರಿಸುತ್ತಿದ್ದಾರೆ. ಸಾಕಷ್ಟು ಜನ ವಿದೇಶೀಯರಿಗೂ ಸಂಗೀತ ಶಿಕ್ಷಣ ನೀಡಿ, ಕರ್ನಾಟಕ ಸಂಗೀತದ ಎಲ್ಲೆಯನ್ನು ವಿಸ್ತರಿಸಿದ್ದಾರೆಹೀಗೆ ಗಾಯಕಿ, ಬೋಧಕಿ, ರಾಗ ಸಂಯೋಜಕಿಯಾದ ಅವರಿಗೆ ಸಹಜವಾಗಿ ಅನೇಕ ಗೌರವ, ಪ್ರಶಸ್ತಿಗಳು ಸಂದಿವೆ.

 

ಕರ್ನಾಟಕ ಗಾನಕಲಾ ಪರಿಷತ್, ಗಾಯನ ಸಮಾಜ, ಮ್ಯೂಸಿಕ್ ಅಕಾಡೆಮಿಗಳಿಂದ ಬಹುಮಾನಗಳನ್ನು ಬಹಳ ಹಿಂದೆಯೇ ಗಳಿಸಿದ್ದು ಯುವ ಕಲಾವಿದರ ಸಂಗೀತ ಸಮ್ಮೇಳನದ ಅಧ್ಯಕ್ಷತೆ ವಹಿಸಿ, ಗಾನಕಲಾಶ್ರೀ  ಬಿರುದಿಗೂ ಪಾತ್ರರಾಗಿದ್ದಾರೆ. ಕರ್ನಾಟಕ ಸಂಗೀತ ನತ್ಯ ಅಕಾಡೆಮಿಯ ವಾರ್ಷಿಕ ಪ್ರಶಸ್ತಿಗೂ ಭಾಜನರಾಗಿದ್ದಾರೆ.ಹಿರಿಯ ಲಯವಾದ್ಯಗಾರ ಟಿ.ಎ.ಎಸ್. ಮಣಿ ಅವರ ಅರ್ಧಾಂಗಿಯಾದ ರಮಾಮಣಿ ಅವರ ಮಗ ಎಸ್. ಕಾರ್ತಿಕ್ ಅವರೂ ಕ್ಷಿಪ್ರವಾಗಿ ಜನಪ್ರಿಯತೆಯ ಮೆಟ್ಟಲೇರುತ್ತಿದ್ದಾರೆ. ಸಂಗೀತ ಕ್ಷೇತ್ರದಲ್ಲಿ ಪ್ರತಿಷ್ಠಿತ ಸ್ಥಾನ ಗಳಿಸಿದ್ದರೂ ಅವರು ನಿಜಜೀವನದಲ್ಲಿ ಸರಳರು, ನಿಗರ್ವಿ.

ಇದೀಗ ರಮಾಮಣಿ ಅವರು ಕರ್ನಾಟಕ ಗಾನಕಲಾ ಪರಿಷತ್ತಿನ ವಿದ್ವತ್ ಸದಸ್ಸಿನಲ್ಲಿ (ಸೆ. 25)  ಗಾನಕಲಾ ಭೂಷಣ  ಬಿರುದು ಸ್ವೀಕರಿಸಲಿದ್ದಾರೆ.

 

ಅದರಿಂದ ಗಂಡ ಹೆಂಡತಿಯರಿಬ್ಬರೂ ಗಾನಕಲಾ ಭೂಷಣರಾದ ಪ್ರಥಮ ಕಲಾವಿದ ಜೋಡಿಯಾಗಲಿದ್ದಾರೆ.ಬೇಡಿಕೆಯ ಕಲಾವಿದ

ಇದೇ ಸಂದರ್ಭದಲ್ಲಿ ನಡೆಯಲಿರುವ ಯುವ ಕಲಾವಿದರ ಸಂಗೀತ ಸಮ್ಮೇಳನದ ಅಧ್ಯಕ್ಷತೆ ವಹಿಸಲಿರುವ ಪ್ರತಿಭೆ ಎ.ಎಸ್.ಎನ್. ಸ್ವಾಮಿ.ಅವರು ಲಯವಾದ್ಯಗಳಲ್ಲಿ ಉತ್ತಮ ಸಾಧಕ. ಆರ್.ಎನ್. ಪ್ರಕಾಶ್ ಅವರಲ್ಲಿ ಪ್ರಾರಂಭಿಕ ಶಿಕ್ಷಣ ಪಡೆದು ಟಿ.ಎ.ಎಸ್. ಮಣಿ ಅವರಲ್ಲಿ ಪ್ರೌಢ ಶಿಕ್ಷಣ ಪಡೆದು, ಮೃದಂಗ-ಖಂಜರಿಗಳೆರಡರಲ್ಲೂ ಕಛೇರಿ ಮಾಡುತ್ತಿದ್ದಾರೆ. ಖಂಜರಿಯಲ್ಲಂತೂ ಬಹು ಬೇಡಿಕೆ ಉಳ್ಳ ಕಲಾವಿದರು.ರಾಜ್ಯದ ಒಳ, ಹೊರಗೆ ಕಾರ್ಯಕ್ರಮಗಳನ್ನು ನೀಡಿರುವ ಸ್ವಾಮಿ ಅಕಾಡೆಮಿ, ಗಾನಕಲಾ ಪರಿಷತ್ ಮುಂತಾದ ಸಂಸ್ಥೆಗಳ ಬಹುಮಾನಕ್ಕೆ ಪಾತ್ರರಾಗಿದ್ದಾರೆ. ಗಾನಕಲಾ ಪರಿಷತ್ತಿನ ಯುವಜನ ವಿಭಾಗದ ಸಂಚಾಲಕರಾಗೂ ಸೇವೆ ಸಲ್ಲಿಸಿದ್ದು ಸಮಾರೋಪದಂದು (ಸೆ.25)  ಗಾನಕಲಾಶ್ರೀ  ಬಿರುದಿಗೆ ಬಾಧ್ಯರಾಗಲಿದ್ದಾರೆ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.