ಫ್ಲೆಚರ್ಗೆ ಬಿಸಿಸಿಐ ಬೆಂಬಲ

ವದೆಹಲಿ (ಪಿಟಿಐ): ಭಾರತ ಕ್ರಿಕೆಟ್ ತಂಡದ ಕೋಚ್ ಡಂಕನ್ ಫ್ಲೆಚರ್ ಅವರನ್ನು ಹುದ್ದೆಯಿಂದ ಕೆಳಗಿಳಿಸುವ ಯೋಜನೆ ಸದ್ಯಕ್ಕಿಲ್ಲ ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಸ್ಪಷ್ಟಪಡಿಸಿದೆ.
ಮಾತ್ರವಲ್ಲ, ಟೀಕೆಗೆ ಗುರಿಯಾಗಿ ರುವ ಫ್ಲೆಚರ್ಗೆ ‘ಸಂಪೂರ್ಣ ಬೆಂಬಲ’ ನೀಡುವುದಾಗಿ ಮಂಡಳಿ ಹೇಳಿದೆ. ಭಾರತ ತಂಡ ವಿದೇಶಿ ನೆಲದಲ್ಲಿ ಕಳಪೆ ಪ್ರದರ್ಶನ ನೀಡಿರುವ ಕಾರಣ ಕೋಚ್ ಅವರನ್ನು ಬದಲಿಸಬೇಕು ಎಂಬ ಕೂಗು ಎದ್ದಿತ್ತು. ಫ್ಲೆಚರ್ ಅವರನ್ನು ಕೆಳಗಿಳಿಸಿ ಯುವ ಕೋಚ್ ಒಬ್ಬರನ್ನು ನೇಮಿಸಬೇಕು ಎಂದು ಮಾಜಿ ಆಟಗಾರ ಸುನಿಲ್ ಗಾವಸ್ಕರ್ ಹೇಳಿದ್ದರು.
ತಂಡದ ಕಳಪೆ ಪ್ರದರ್ಶನದ ಬಗ್ಗೆ ವಿವರಣೆ ಕೇಳಲು ಬಿಸಿಸಿಐ ಅಧ್ಯಕ್ಷ ಎನ್. ಶ್ರೀನಿವಾಸನ್ ಗುರುವಾರ ಫ್ಲೆಚರ್ ಅವರನ್ನು ಕರೆಸಿಕೊಂಡಿದ್ದರು. ಈ ವೇಳೆ ಫ್ಲೆಚರ್ಗೆ ಮಂಡಳಿ ಯಾವುದೇ ಎಚ್ಚರಿಕೆ ಕೊಟ್ಟಿಲ್ಲ. ಅದರ ಬದಲು ಆತ್ಮವಿಶ್ವಾಸದಿಂದ ಕೆಲಸ ಮಾಡುವಂತೆ ಅವರಿಗೆ ಸೂಚಿಸಿದೆ.
‘ಕೋಚ್ ಫ್ಲೆಚರ್ಗೆ ಬಿಸಿಸಿಐ ಪೂರ್ಣ ರೀತಿಯ ಬೆಂಬಲ ನೀಡುತ್ತದೆ. ಅವರನ್ನು ಹುದ್ದೆಯಿಂದ ಕೆಳಗಿಳಿಸುವ ಕುರಿತ ಯಾವುದೇ ಚರ್ಚೆ ನಡೆದಿಲ್ಲ’ ಎಂದು ಮಂಡಳಿಯ ಕಾರ್ಯದರ್ಶಿ ಸಂಜಯ್ ಪಟೇಲ್ ಶುಕ್ರವಾರ ತಿಳಿಸಿದ್ದಾರೆ. ‘ನಿಮ್ಮ ಸಾಮರ್ಥ್ಯದ ಬಗ್ಗೆ ಮಂಡಳಿಗೆ ಪೂರ್ಣ ವಿಶ್ವಾಸವಿದೆ. ಆತಂಕಪಡುವ ಅಗತ್ಯವಿಲ್ಲ ಎಂದು ನಾವು ಫ್ಲೆಚರ್ಗೆ ಹೇಳಿದ್ದೇವೆ’ ಎಂದು ನುಡಿದಿದ್ದಾರೆ.
‘ಎನ್. ಶ್ರೀನಿವಾಸನ್ ಅವರು ಫ್ಲೆಚರ್ಗೆ ಎಚ್ಚರಿಕೆ ಕೊಟ್ಟಿದ್ದಾರೆ ಎಂಬ ವರದಿಯಲ್ಲಿ ಯಾವುದೇ ಹುರುಳಿಲ್ಲ’ ಎಂದು ಪಟೇಲ್ ಇದೇ ವೇಳೆ ಸ್ಪಷ್ಟಪಡಿಸಿದರು. ಗಾವಸ್ಕರ್ ಹೇಳಿಕೆಯ ಬಗ್ಗೆ ಪ್ರತಿಕ್ರಿಯೆ ನೀಡಿದ ಪಟೇಲ್, ‘ನನಗೂ ಒಂದು ಅಭಿಪ್ರಾಯ ಇರುವಂತೆ, ಗಾವಸ್ಕರ್ ಅವರಿಗೂ ಅಭಿಪ್ರಾಯ ತಿಳಿಸುವ ಅಧಿಕಾರ ಇದೆ. ಆದರೆ ಬಿಸಿಸಿಐ ಅದನ್ನು ಒಪ್ಪಿಕೊಳ್ಳಬೇಕು ಎಂದೇನಿಲ್ಲ. ಅದು ಅವರ ಅಭಿಪ್ರಾಯ. ಅದರ ಬಗ್ಗೆ ಬಿಸಿಸಿಐ ತಲೆಕೆಡಿಸಿಕೊಂಡಿಲ್ಲ’ ಎಂದು ಹೇಳಿದ್ದಾರೆ.
ಈಗ ಸಿದ್ಧನಿಲ್ಲ: ರಾಹುಲ್ ದ್ರಾವಿಡ್
ಮುಂಬೈ (ಪಿಟಿಐ): ಭಾರತ ತಂಡದ ಕೋಚ್ ಹುದ್ದೆ ಅಲಂಕರಿಸಲು ಈಗ ನಾನು ಸಿದ್ಧನಿಲ್ಲ ಎಂದು ಮಾಜಿ ಆಟಗಾರ ರಾಹುಲ್ ದ್ರಾವಿಡ್ ನುಡಿದಿದ್ದಾರೆ.
‘ನನಗೆ ಭಾರತ ತಂಡದ ಕೋಚ್ ಆಗುವ ಸಾಮರ್ಥ್ಯ ಇದೆ ಎಂದು ಗಾವಸ್ಕರ್ ಹೇಳಿದ್ದರು. ಇದರಿಂದ ಸಂತಸವಾಗಿದೆ. ಆದರೆ ಕೋಚ್ ಆದರೆ ಅದಕ್ಕಾಗಿ ಸಾಕಷ್ಟು ಸಮಯ ಮೀಸಲಿಡುವುದು ಅನಿವಾರ್ಯ. ವರ್ಷದಲ್ಲಿ 11 ತಿಂಗಳನ್ನು ಕೂಡಾ ಈ ಹುದ್ದೆಗೆ ಮೀಸಲಿಡುವುದು ಅಗತ್ಯ. ನಾನು ಕ್ರಿಕೆಟ್ನಿಂದ ನಿವೃತ್ತಿಯಾಗಿ ಹೆಚ್ಚಿನ ಕಾಲ ಆಗಿಲ್ಲ. ಸಮಯದ ಇತಿಮಿತಿ ಇರುವ ಕಾರಣ ಗಾವಸ್ಕರ್ ಸಲಹೆಯನ್ನು ಸದ್ಯ ತಿರಸ್ಕರಿಸುವೆ’ ಎಂದು ಶುಕ್ರವಾರ ಇಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡ ದ್ರಾವಿಡ್ ನುಡಿದಿದ್ದಾರೆ.
ಆದರೆ ಭವಿಷ್ಯದಲ್ಲಿ ಭಾರತ ತಂಡದ ಕೋಚ್ ಆಗುವ ಸಾಧ್ಯತೆಯನ್ನು ಅವರು ತಳ್ಳಿಹಾಕಿಲ್ಲ. ‘ಈ ಬಾರಿಯ ಐಪಿಎಲ್ನಲ್ಲಿ ರಾಜಸ್ತಾನ ರಾಯಲ್ಸ್ ತಂಡದ ಸಲಹೆಗಾರನಾಗಿ ಕಾರ್ಯನಿರ್ವಹಿಸಲಿದ್ದೇನೆ. ಭವಿಷ್ಯದಲ್ಲಿ ಏನಾಗಬಹುದು ಎಂಬುದು ಯಾರಿಗೂ ತಿಳಿದಿಲ್ಲ’ ಎಂದಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.