ಸೋಮವಾರ, ಜೂಲೈ 13, 2020
29 °C

ಬಂಗಾರದ ಕಣಿವೆಯಲ್ಲಿ...

ಶಿವಾನಂದ ಜೋಶಿ Updated:

ಅಕ್ಷರ ಗಾತ್ರ : | |

ಇದು, ಮೆಕೆನ್ನಾಸ್ ಗೋಲ್ಡ್ ಅಲ್ಲ. ಬದರಿನಾಥನ ಬಂಗಾರದ ಕಿರೀಟ. ಈ ಬಂಗಾರ ಭಗವಂತ ಬದರಿನಾಥನ ಸ್ವತ್ತು. ಇದನ್ನು ನೋಡಬೇಕೆಂದರೆ ಬದರಿನಾಥನ ಸನ್ನಿಧಿಗೇ ಹೋಗಬೇಕು.ಉತ್ತರಾಂಚಲದಲ್ಲಿರುವ ಬದರಿನಾಥನ ದರ್ಶನಕ್ಕೆ ನಾನು ಹೋಗಿದ್ದುದು ನವೆಂಬರ್ ಒಂದರಂದು.ಹಿಂದಿನ ಸಂಜೆ ಹಿಮ ಉದುರುತ್ತಿದ್ದಾಗ ಹೋಟೆಲ್ ಕೋಣೆಗೆ ಪ್ರವೇಶ ಪಡೆದಾಗಿತ್ತು. ‘ನಾಳೆ ರಾಜ್ಯೋತ್ಸವಕ್ಕೆ ಬದರಿನಾಥ ನಿಮಗೆ ಬೇಕಾದಷ್ಟು ಬಂಗಾರ ಕೊಡುತ್ತಾನೆ. ತೆಗೆದುಕೊಂಡು ಹೋಗುವ ಜವಾಬ್ದಾರಿ ನಿಮ್ಮದು’ ಎಂದು ನಮ್ಮ ಟೂರ್ ಮ್ಯಾನೇಜರ್ ಒಗಟಾಗಿ ಮಾತನಾಡುತ್ತಾ, ಹಿಮಗಿರಿ ಸ್ವರ್ಣಗಿರಿಯಾಗುವ ರಹಸ್ಯವನ್ನು ಹೊರಗೆಡವಿದ್ದ.ಬದರಿನಾಥ ದೇವಾಲಯ ಸಮುದ್ರ ಮಟ್ಟದಿಂದ ಹನ್ನೆರಡು ಸಾವಿರ ಅಡಿ ಎತ್ತರದಲ್ಲಿದೆ. ಅದರ ಬಲ ಪಕ್ಕದಲ್ಲಿ ಸ್ವಲ್ಪ ದೂರದಲ್ಲಿ ನೀಲಕಂಠ ಗಿರಿ ಶಿಖರವಿದೆ. ಸೂರ್ಯನ ಮೊದಲನೇ ಕಿರಣ ಈ ಗಿರಿಯ ಶಿಖರದ ತುಟ್ಟ ತುದಿಗೆ ಛಕ್ ಎಂದು ಅಪ್ಪಳಿಸುತ್ತದೆ. ಹಿಮಚ್ಛಾದಿತ ಶಿಖರ ತಕ್ಷಣ ಬಂಗಾರದ ಬಣ್ಣಕ್ಕೆ ತಿರುಗುತ್ತದೆ. ಮುಂದೆ ಕೆಲವು ನಿಮಿಷಗಳಲ್ಲಿ ನಮ್ಮ ದೃಷ್ಟಿಗೆ ಗೋಚರವಾಗುವಷ್ಟು ಶಿಖರ ಪ್ರದೇಶ ಬಂಗಾರಮಯವಾಗುತ್ತದೆ.ನೀಲಕಂಠ ಪರ್ವತ, ನಾವು ಉಳಿದುಕೊಂಡಿದ್ದ ಕೋಣೆಯಿಂದ ನೇರವಾಗಿ ಗೋಚರಿಸುತ್ತದೆ. ಕಿಟಕಿಯ ಸರಳುಗಳ ನಡುವಿನಿಂದ ಚಿಕ್ಕ ಡಿಜಿಟಲ್ ಕ್ಯಾಮರಾ ತೂರಿಸಿಕೊಂಡು ಆರು ಗಂಟೆಯಿಂದಲೇ ಚಮತ್ಕಾರಕ್ಕಾಗಿ ಕಾದು ಕುಳಿತಿದ್ದೆ. ಗಮನವೆಲ್ಲ ಶಿಖರದ ಮೇಲೆಯೇ ಇತ್ತು. ನಾನು ಕ್ಯಾಮರಾ ಫೋಕಸ್ ಮಾಡುವ ಆ ಕ್ಷಣ ಹೊತ್ತಿನಲ್ಲೇ ಬಂಗಾರದ ಬಣ್ಣ ಕೆಳಮುಖವಾಗಿ ಪಸರಿಸುತ್ತ ಹೋಯಿತು. ಅದು ನಮ್ಮ ಕಣ್ಣಿಗೆ ಕಾಣಿಸುವಷ್ಟು ಪಸರಿಸಿದ ನಂತರ ಮುಂದೆ ಹದಿನೈದು ಇಪ್ಪತ್ತು ನಿಮಿಷ ಆ ಮನಮೋಹಕ ದೃಶ್ಯ ಒಂದು ಚಮತ್ಕಾರವಾಗಿ ನಮ್ಮ ಮನಸ್ಸಿನ ಆಳಕ್ಕೆ ಇಳಿಯುತ್ತದೆ. ನೂರಾರು ಪ್ರವಾಸಿಗರು ಮೂಕವಿಸ್ಮಿತರಾಗಿ ಅದನ್ನು ಮೈಮರೆತು ವೀಕ್ಷಿಸಿ ಧನ್ಯರಾಗುತ್ತಾರೆ. ಸುತ್ತಲಿನ ಪರ್ವತ ಸಾಲುಗಳಲ್ಲಿ ನೀಲಕಂಠನೇ ಎತ್ತರದವನು.ಭಾವುಕರು ಬಂಗಾರ ಬಳಿದುಕೊಂಡ ಶಿಖರದ ತುದಿಯಲ್ಲಿ ಗಣಪತಿಯ ಆಕಾರವನ್ನು ಕಾಣಲು ತವಕಿಸುತ್ತಾರೆ. ಯಾರೋ ಹಾಗೆ ಹೇಳುತ್ತಾರೆ.ಉಳಿದವರು ನಂಬುತ್ತಾರೆ. ಸೂರ್ಯನ ಪ್ರಖರತೆಗೆ ಬಂಗಾರದ ಲೇಪ ಅಳಿದುಹೋದ ಮೇಲೆ ಅಲ್ಲಿ ಯಾವ ಆಕಾರವೂ ಇರುವುದಿಲ್ಲ.ಹಿಮಾಲಯದ ಜಿಲ್ಲೆಗಳಲ್ಲಿ ನೀವು ಎಲ್ಲಿ ಹೋದರೂ ನಿಮ್ಮನ್ನು ಅಟ್ಟಿಕೊಂಡು ಬರುವ ನದಿ ಅಲಕನಂದಾ. ದೇವಪ್ರಯಾಗದಲ್ಲಿ ಗಂಗೆಯನ್ನು ಸೇರಿದರೂ ಮತ್ತೊಂದು ಹರವಿನಲ್ಲಿ ಬದರಿನಾಥನ ಪಾದ ತೊಳೆದು ಸರಸ್ವತಿ (ಗುಪ್ತಗಾಮಿನಿ)ಯನ್ನು ತಬ್ಬಿಕೊಂಡು ಶುಭ್ರವಸ್ತ್ರಧಾರಿಯಾಗಿ ಸಾಗುತ್ತಾಳೆ ಅಲಕನಂದಾ. ಇವಳ ದಂಡೆಗುಂಟ ದೇವಪ್ರಯಾಗ, ರುದ್ರಪ್ರಯಾಗ, ನಂದಪ್ರಯಾಗ, ಕೃಷ್ಣಪ್ರಯಾಗ ಮೊದಲಾದ ಸುರಮ್ಯ ತಾಣಗಳಿವೆ. ಇಂಡೋ-ಟಿಬೆಟ್ ಗಡಿಯಲ್ಲಿ ಭಾರತದ ಕೊನೆಯ ಗ್ರಾಮ ಮಾಣಾ ಕೂಡ ಅಲಕನಂದಾ ದಡದಲ್ಲಿದೆ.ಪ್ರಸಿದ್ಧ ಜ್ಯೋತಿರ್ಲಿಂಗ ಕ್ಷೇತ್ರ ಕೇದಾರಕ್ಕೆ ಡೋಲಿಯಲ್ಲಿ ಕುಳಿತು ಎತ್ತರಕ್ಕೆ ಏರುವ ಮಾರ್ಗದಲ್ಲಿ ಎದುರಿಗೆ ಕಾಣುವ ಹಿಮಚ್ಛಾದಿತ ಪರ್ವತಗಳ ಸಾಲು. ಆಕಾಶದಲ್ಲಿ ವಿಜೃಂಭಿಸಿದ ಮೋಡಗಳ ಹಿನ್ನೆಲೆಯಿಂದ ದೃಶ್ಯಕ್ಕೆ ಮೆರುಗುಬಂದಿರುತ್ತದೆ. ಕೇದಾರ ಆರಂಭದ ಸ್ಥಳ ಗೌರಿಕುಂಡದಿಂದ 14 ಕಿಲೋಮೀಟರ್ ದೂರದಲ್ಲಿದೆ, ಸಮುದ್ರ ಪಾತಳಿಯಿಂದ 12000 ಅಡಿಗಳಷ್ಟು ಎತ್ತರದಲ್ಲಿದೆ. ಜೀವಮಾನದಲ್ಲಿ ಒಮ್ಮೆಯಾದರೂ ಪಡೆಯಬೇಕಾದ ಪ್ರವಾಸಿ ಅನುಭವವಿದು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.