ಗುರುವಾರ , ಜನವರಿ 30, 2020
23 °C
‘ಶಹನಾಯ್‌’ ಕವನ ಸಂಕಲನ ಲೋಕಾರ್ಪಣೆ

ಬಂಡಾಯ ಸಾಹಿತ್ಯದ ಕಾಲಘಟ್ಟ ಅಂತ್ಯ: ಗಿರಡ್ಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ‘ಬಂಡಾಯ ಸಾಹಿತ್ಯದ ಕಾಲಘಟ್ಟ ಮುಗಿದು ಹೋಗಿದ್ದು, ಅದನ್ನು ಪುನರುಜ್ಜೀವನಗೊಳಿಸಬೇಕು ಎಂಬ ಪ್ರಯತ್ನಗಳು ನಡೆಯುತ್ತಿವೆ. ಆದರೆ, ಅದು ಸಾಧ್ಯವಿಲ್ಲ’ ಎಂದು ವಿಮರ್ಶಕ ಡಾ.ಗಿರಡ್ಡಿ ಗೋವಿಂದರಾಜ ಅಭಿಪ್ರಾಯಪಟ್ಟರು.ನಗರದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಆರ್‌.ಜಿ.ಹಳ್ಳಿ ನಾಗರಾಜ ಅವರ ‘ಶಹನಾಯ್‌’ ಕವನ ಸಂಕಲನ ಲೋಕಾರ್ಪಣೆ ಮಾಡಿ, ಅವರು ಮಾತನಾಡಿದರು.‘ಬಂಡಾಯ ಸಾಹಿತ್ಯ ಕೃಷಿಯಲ್ಲಿ ತೊಡಗಿಕೊಂಡವರು ಅದಕ್ಕೆ ಸಾವಿಲ್ಲ ಎಂದು ವಾದಿಸುತ್ತಾರೆ. ಆದರೆ, ಆ ಕಾಲ ಅಂತ್ಯವಾಗಿದೆ. ಬಂಡಾಯ ಸಾಹಿತಿಗಳಿಗೆ ಚಿಂತೆ, ಭಯ ಕಾಡುತ್ತಿದೆ. ಸಾಹಿತ್ಯದ ಪಂಥಗಳು ಆಯಾ ಕಾಲಘಟ್ಟದ ಸಾಮಾಜಿಕ ಹಾಗೂ ಸಾಂಸ್ಕೃತಿಕ ಪರಿಸ್ಥಿತಿಯಲ್ಲಿ ಹುಟ್ಟಿಕೊಂಡವು. ಪ್ರಸ್ತುತ ಬಂಡಾಯವು ರೂಪಾಂತರಗೊಳ್ಳಬೇಕು’ ಎಂದು ಹೇಳಿದರು.‘ನವ್ಯ, ಬಂಡಾಯ ಚಳವಳಿ ಮುಗಿದ ಬಳಿಕ ಈ ನಾಡು ಅಂತಹ ಸಾಹಿತ್ಯ ಆಂದೋಲನಗಳನ್ನು ಕಾಣಲಿಲ್ಲ. ಕನ್ನಡದಲ್ಲಿ ಬಹಳಷ್ಟು ಕವಿಗಳಿದ್ದಾರೆ. ಆದರೆ, ಅತ್ಯುತ್ತಮ ಕವನಗಳು ಹೊರಬರುತ್ತಿಲ್ಲ ಎಂಬ ಆಕ್ಷೇಪವೂ ಇದೆ ಎಂದು ಹೇಳಿದರು.‘ಹುಡುಕಾಟ’ ಎಂಬುದು ಎಲ್ಲ ಕವಿಗಳಲ್ಲೂ ಇರಬೇಕು. ಉತ್ತಮ ಸಮಾಜಕ್ಕಾಗಿ ಆ ‘ಹುಡುಕಾಟ’ ನಡೆಯಬೇಕು. ತಾವು ಬರೆದ ಹಾಗೆ ಬದುಕಬೇಕು; ಬದುಕಿದ ಹಾಗೆ ಬರೆಯಬೇಕು ಎಂಬ ಮಾತಿದೆ. ಆದರೆ, ಅಂತಹ ಪ್ರಯತ್ನಗಳು ಕಡಿಮೆ ಎಂದು ವಿಷಾದಿಸಿದರು.

ಎಲ್ಲ ಸಾಹಿತ್ಯಕ್ಕೂ ವಚನ ಸಾಹಿತ್ಯ ಕೇಂದ್ರವಾದದ್ದು. ವಚನ ಸಾಹಿತ್ಯ ಭಾಷಾಂತರ ಕಷ್ಟ. ಭಾಷಾಂತರ ಮಾಡಿದರೂ ಕನ್ನಡದ ಕಾವ್ಯತ್ವವನ್ನು ಅದು ಬಿಟ್ಟುಕೊಡುವುದಿಲ್ಲ. ಘಜಲ್‌ ಕೂಡ ಅಷ್ಟೆ. ಉರ್ದುತ್ವ ಬಿಟ್ಟುಕೊಡದು. ಅದನ್ನು ಆ ಭಾಷೆಯಲ್ಲೇ ಕೇಳಬೇಕು. ಆಗ ಅದರ ಮಹತ್ವ ಅರಿವಿಗೆ ಬರುತ್ತದೆ. ಆಯಾ ಭಾಷೆಯಲ್ಲಿಯೇ ಘಜಲ್‌ ಕೇಳುವಾಗ ಪ್ರೇಕ್ಷಕರು ಭಾವಪರವಶ ಗೊಳ್ಳುತ್ತಾರೆ. ಕನ್ನಡದಲ್ಲಿ ಕೇಳುವಾಗ ಅಂತಹ ಪ್ರತಿಕ್ರಿಯೆ ವ್ಯಕ್ತವಾಗುವುದಿಲ್ಲ. ಕನ್ನಡಕ್ಕೆ ಅದು ಸರಿಹೊಂದುತ್ತಿಲ್ಲ ಎಂದು ಹೇಳಿದರು.ವಿಮರ್ಶಕ ಸತೀಶ ಕುಲಕರ್ಣಿ ಮಾತನಾಡಿ, ಆರ್‌.ಜಿ.ಹಳ್ಳಿ ನಾಗರಾಜ ತಕರಾರು ಮನಸ್ಸಿನ ಕವಿ. ಕವಿಗಳು ಕಾವ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದರೆ ಮಾತ್ರ ಉತ್ತಮ ಕವನ ರಚಿಸಲು ಸಾಧ್ಯ ಎಂದು ಸಲಹೆ ನೀಡಿದರು.ಪ್ರಾಧ್ಯಾಪಕ ಡಾ.ಲೋಕೇಶ್‌ ಅಗಸನಕಟ್ಟೆ ಮಾತನಾಡಿ, ನಾಗರಾಜ ಅವರ ವ್ಯಕ್ತಿತ್ವ ಸಾಹಿತ್ಯದಿಂದ ಬೇರೆ ಆಗಿಲ್ಲ. ವ್ಯಕ್ತಿಯ ಅಭಿವ್ಯಕ್ತಿಯಾಗಿ ಸಾಹಿತ್ಯ ಇರುತ್ತದೆ. ಆರ್‌.ಜಿ.ಹಳ್ಳಿ ಅವರು, ಬದುಕನ್ನು ಎತ್ತರದ ಹಂತದಲ್ಲಿ ಇಟ್ಟುಕೊಂಡು ಹುಡುಕಾಟ ನಡೆಸಿದ್ದಾರೆ ಎಂದ ಅವರು, ಕಾವ್ಯ ಎಂಬುದು ಕ್ಷಣದಿಂದ ಅನಂತವಾಗಬೇಕು. ಇಲ್ಲದಿದ್ದರೆ ಕವಿತೆ ಆಗುವುದಿಲ್ಲ ಎಂದು ನುಡಿದರು.ಕನ್ನಡದಲ್ಲಿ ಇರುವಷ್ಟು ಕವಿಗಳು ಬೇರೆಲ್ಲೂ ಇಲ್ಲ. ಕೇರಿ–ಕೇರಿಗಳಲ್ಲಿ ಕಾಣಿಸುತ್ತಾರೆ. ಪದಗಳ ಜೋಡಣೆ ಕಾವ್ಯ ಎನಿಸದು. ಮೂಲ ತಿಳಿದುಕೊಂಡವರಿಗೆ ಕಾವ್ಯ ರಚನೆ ಕಷ್ಟ ಎಂಬುದು ಅರಿವಿಗೆ ಬರುತ್ತದೆ. ಕಾವ್ಯ ಅರ್ಥಮೀರಿ ಅನುಭವ ಆಗಬೇಕು. ಅನುಭವ ಕಟ್ಟಿಕೊಡುವ ಮೂಲಕ ಗಮನಸೆಳೆಯಬೇಕು ಎಂದು ಅನಿಸಿಕೆ ವ್ಯಕ್ತಪಡಿಸಿದರು.ಪತ್ರಕರ್ತ ಬಿ.ಎನ್‌.ಮಲ್ಲೇಶ್‌ ಪ್ರಸ್ತಾವಿಕವಾಗಿ ಮಾತನಾಡಿ, ಕವಿಯೊಬ್ಬ ಸಮಾಜಮುಖಿಯಾಗಿ ವರ್ತಮಾನದ ಜತೆಗೆ ಸ್ಪಂದಿಸಬೇಕು. ಸ್ಪಂದಿಸದಿದ್ದರೆ ಆತ ಕವಿ ಆಗಲಾರ. ಕವಿಗೆ ‘ಹುಡುಕಾಟ’ದ ಜಾಯಮಾನ ಇರಬೇಕು. ಅದು ಜೀವಂತಿಕೆಯ ಲಕ್ಷಣವೂ ಹೌದು. ನಾಗರಾಜ್‌ ಅವರಿಗೆ ಗೊತ್ತಿರುವುದು ಪ್ರೀತಿ ಹಾಗೂ ದ್ವೇಷ. ಇವುಗಳ ಮಧ್ಯೆ ಬದುಕುಕಟ್ಟಿಕೊಂಡಿದ್ದಾರೆ. ತಪ್ಪು ಕಂಡೊಡನೆ ಎದುರು ಹಾಕಿಕೊಳ್ಳುವ ಮನೋಭಾವ ಇಂದಿಗೂ ಅವರಲ್ಲಿ ಇದೆ ಎಂದು ಹೇಳಿದರು. ಡಾ.ಎಂ.ಜಿ. ಈಶ್ವರಪ್ಪ ಅಧ್ಯಕ್ಷತೆ ವಹಿಸಿದ್ದರು. ಆರ್‌.ಜಿ.ಹಳ್ಳಿ ನಾಗರಾಜ ಹಾಜರಿದ್ದರು. 

ಪ್ರತಿಕ್ರಿಯಿಸಿ (+)