ಸೋಮವಾರ, ಆಗಸ್ಟ್ 10, 2020
24 °C
ರಸಾಸ್ವಾದ

ಬಗೆ ಬಗೆ ಪಿಜ್ಜಾ

ರಮೇಶ ಕೆ. Updated:

ಅಕ್ಷರ ಗಾತ್ರ : | |

ಬಗೆ ಬಗೆ ಪಿಜ್ಜಾ

ಹೋಟೆಲ್‌ನ ಒಳಾಂಗಣ ಪ್ರವೇಶಿಸುತ್ತಿದ್ದಂತೆ ಇಟಾಲಿಯನ್ ಸಂಗೀತ ಕಿವಿಗೆ ಅಪ್ಪಳಿಸುತ್ತದೆ. ಅಬ್ಬರದ ಸಂಗೀತವಾದರೂ ಕೇಳಲು ಹಿತ. ಗ್ರಾಹಕರಿಗೆ ಕಾಣುವಂತೆ ಇದ್ದ ಅಡುಗೆಕೋಣೆಯೊಳಗಿನ ಓವನ್‌ನಿಂದ `ಬ್ಯಾಸಿಲ್'ನ (ಇಟಲಿಯಲ್ಲಿ ಅಡುಗೆಗೆ ಬಳಸುವ ಎಲೆ) ಘಮಲು ಮೂಗಿಗೆ ಅಡರುತ್ತಿತ್ತು. ಉದ್ದನೆ ಬಿಳಿ ಟೊಪ್ಪಿ ಹಾಕಿಕೊಂಡ ಬಾಣಸಿಗ ಒಂದೊಂದೇ ಪಿಜ್ಜಾಗಳನ್ನು ತೆಗೆದು ತಟ್ಟೆಗೆ ಹಾಕುತ್ತಿದ್ದಂತೆ ಸರ್ವರ್ ಗ್ರಾಹಕರತ್ತ ತಂದು ಬಡಿಸುತ್ತಿದ್ದರು.`ಮೂವ್‌ಎನ್‌ಪಿಕ್' (Movenpick) ಹೋಟೆಲ್‌ನ ಮೆಝಲೂನಾ ರೆಸ್ಟೋರೆಂಟ್‌ನಲ್ಲಿ ಜುಲೈ 21ರವರೆಗೆ ಆಯೋಜಿಸಿರುವ `ಅಮಿಯಾಮೊ ಲಾ ಪಿಜ್ಜಾ' ಆಹಾರೋತ್ಸವದಲ್ಲಿ 14 ಬಗೆಯ ಪಿಜ್ಜಾಗಳು ಆಹಾರಪ್ರಿಯರನ್ನು ಆಕರ್ಷಿಸುತ್ತಿವೆ. ಇಟಲಿಯ ಆಹಾರಕ್ಕಾಗೇ ಇರುವ ಈ ರೆಸ್ಟೋರೆಂಟ್ ಇಟಲಿಯ ವಿವಿಧ ಪ್ರದೇಶಗಳ ಪಿಜ್ಜಾಗಳನ್ನು ಪರಿಚಯಿಸುತ್ತಿದೆ.ಸಿಸಿಲಿ ಪ್ರದೇಶದ `ಕ್ಯಾಪ್ರಿನಾ', `ಸಿಸಿಲಿಯಾನ', ನೆಪೋಲಿ ಪ್ರದೇಶದ `ಕಾಂಟಾಡಿನಾ', ಜಿನೊದ `ಬಾಸಿಯಾ ಡಿ ಫೆರೋ' ಪಾರ್ಮಾದ `ಪಿಜ್ಜಾ ಈ ಫಿಚಿ', ನ್ಯಾಪ್ಲೆಸ್ ಪ್ರದೇಶದ `ವೆಸುವಿಯೊ', `ಬುಫಲಿನಾ'... ಹೀಗೆ 14 ಬಗೆಯ ಸಸ್ಯಾಹಾರಿ, ಮಾಂಸಾಹಾರಿ ಪಿಜ್ಜಾಗಳು ಫಾಸ್ಟ್‌ಫುಡ್ ಪ್ರಿಯರ ರುಚಿ ತಣಿಸಲಿವೆ. ಮೈದಾಹಿಟ್ಟಿನಿಂದ ಮಾಡಿದ ಪಿಜ್ಜಾ ಇಷ್ಟಪಡದವರಿಗೆ ಗೋಧಿ ಹಿಟ್ಟಿನ ಪಿಜ್ಜಾ ಕೂಡ ಇಲ್ಲಿ ದೊರೆಯುತ್ತದೆ. ಇಲ್ಲಿನ ವೃತ್ತಾಕಾರದ ಪಿಜ್ಜಾ ಸಾಕಷ್ಟು ದೊಡ್ಡದಾಗಿದ್ದು, ತೆಳುವಾಗಿರುತ್ತವೆ.`ನಾದಿದ ಹಿಟ್ಟಿನ ಮೇಲೆ ಟೊಮೆಟೊ ಸಾಸ್ ಸವರಲಾಗುತ್ತದೆ. ತೆಳುವಾದ, ರೋಟಿ ಆಕಾರದ ಹಿಟ್ಟಿಗೆ ಬ್ಯಾಸಿಲ್, ಮೆಣಸು, ಕೆಂಪು ಕ್ಯಾಪ್ಸಿಕಂ, ಅಣಬೆ ಹಾಗೂ ಮೇಕೆ ಹಾಲಿನಿಂದ ಮಾಡಿದ ಚೀಸ್ ಹಾಕಿ ಓವೆನ್‌ನಲ್ಲಿ ಇಡುತ್ತೇವೆ. 300 ಡಿಗ್ರಿ ಬಿಸಿಯಲ್ಲಿ ಆರರಿಂದ ಏಳು ನಿಮಿಷ ಬೇಯಿಸಿದ ಮೇಲೆ ಕ್ಯಾಪ್ರಿನಾ ಪಿಜ್ಜಾ ಸಿದ್ಧವಾಗುತ್ತದೆ' ಎಂದು ಹೇಳುತ್ತಾರೆ ಕೋಲ್ಕತ್ತದ ಬಾಣಸಿಗ ದೇಬೊ ಪ್ರಿಯೊ.`ಇಟಲಿಯ ಆಹಾರವಾದರೂ ಬೆಂಗಳೂರಿಗರು ಹೆಚ್ಚಾಗಿ ಇಷ್ಟಪಡುತ್ತಾರೆ. ಹೆಚ್ಚು ಮಸಾಲೆ ಸ್ವಾದವಿಲ್ಲದ, ಭಿನ್ನ ರುಚಿಯ ಪಿಜ್ಜಾ ಎಲ್ಲಾ ಪ್ರದೇಶಗಳ ಜನರಿಗೂ ಇಷ್ಟವಾಗುತ್ತದೆ. ಮೇಕೆ, ಎಮ್ಮೆ, ಹಸು ಹಾಲಿನ ಚೀಸ್‌ನಿಂದ ಪಿಜ್ಜಾ ಮಾಡಿದರೆ ವಿಭಿನ್ನ ರುಚಿ ಇರುತ್ತದೆ. ಹಾಗಾಗಿ ವೈವಿಧ್ಯವನ್ನು ಗುರ್ತಿಸಬಹುದು' ಎಂದು ಮಾತು ಸೇರಿಸುತ್ತಾರೆ ದೇಬೊ ಪ್ರಿಯೊ.`ನಗರದ ಯಾವುದೇ ಹೋಟೆಲ್‌ಗಳಲ್ಲಿ ಆಹಾರೋತ್ಸವ ಆದರೂ ಅಲ್ಲಿ ಹಾಜರಿರುತ್ತೇನೆ. ವಿವಿಧ ಪ್ರದೇಶಗಳ ಪಾಕವೈವಿಧ್ಯದ ರುಚಿ ನೋಡುತ್ತೇನೆ. ಕಾಂಟಿನೆಂಟಲ್ ಫುಡ್, ನವಾಬಿ ಫುಡ್ ಇಷ್ಟವಾಗುತ್ತದೆ. ಹಾಗಾಗಿ ಪಿಜ್ಜಾ ಉತ್ಸವಕ್ಕೆ ಬಂದಿದ್ದೇನೆ. ಬಗೆ ಬಗೆಯ ಪಿಜ್ಜಾ ರುಚಿ ಚೆನ್ನಾಗಿದೆ' ಎಂದು ಆಹಾರಪ್ರೀತಿಯನ್ನು ಬಣ್ಣಿಸುತ್ತಾರೆ ರಾಜಾಜಿನಗರದ ವಿವೇಕ್.ಸಂಜೆ 7ರಿಂದ ರಾತ್ರಿ 11ರವರೆಗೆ ಪಿಜ್ಜಾ ಮೇಳವಿರುತ್ತದೆ. ಇದರ ಜೊತೆಗೆ ಪ್ರತಿದಿನದ ಇಟಲಿ ಆಹಾರವೂ ಲಭ್ಯವಿರುತ್ತದೆ.

ಸ್ಥಳ: ಮೂವ್‌ಎನ್‌ಪಿಕ್ ಹೋಟೆಲ್, ನಂ.115, ಪೈಪ್‌ಲೈನ್ ರಸ್ತೆ, ಬಿಇಎಲ್ ವೃತ್ತದ ಸಮೀಪ, ಗೋಕುಲ. ಮಾಹಿತಿ ಹಾಗೂ ಟೇಬಲ್ ಕಾಯ್ದಿರಿಸಲು: 4300 1000.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.