ಸೋಮವಾರ, ಏಪ್ರಿಲ್ 12, 2021
29 °C

ಬಡ್ಡಿ ದರ ಹೆಚ್ಚಿಸಲು ಆರ್‌ಬಿಐ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಉಳಿತಾಯ ಪ್ರವೃತ್ತಿ ಉತ್ತೇಜಿಸಲು ಬ್ಯಾಂಕ್‌ಗಳು ಠೇವಣಿ ಗಳ ಮೇಲಿನ ಬಡ್ಡಿ ದರಗಳನ್ನು ಹೆಚ್ಚಿಸಬೇಕು ಮತ್ತು ಎರಡಂಕಿ ಆರ್ಥಿಕ ವೃದ್ಧಿ ದರ ಸಾಧಿಸಲು ಸಾಲಗಳ ಮೇಲಿನ ಬಡ್ಡಿ ದರಗಳನ್ನು ತಗ್ಗಿಸಬೇಕು ಎಂದು ಭಾರತೀಯ ರಿಸರ್ವ್ ಬ್ಯಾಂಕ್, ವಾಣಿಜ್ಯ ಬ್ಯಾಂಕ್‌ಗಳಿಗೆ ಸಲಹೆ ನೀಡಿದೆ.‘ನಾವು ಬಯಸಿರುವ ಎರಡಂಕಿ ಆರ್ಥಿಕ ವೃದ್ಧಿ ದರ ಸಾಧಿಸಲು ಬಂಡವಾಳ ಹೂಡಿಕೆಗೆ ನೆರವಾಗುವ ಉಳಿತಾಯ ಹೆಚ್ಚಳಗೊಳ್ಳಬೇಕಾಗಿದೆ. ಬ್ಯಾಂಕ್‌ಗಳಲ್ಲಿ ಉಳಿತಾಯ ಪ್ರಮಾಣ ಏರಿಕೆಯಾಗಲು ಹೆಚ್ಚು ಬಡ್ಡಿ ನೀಡಬೇಕಾಗುತ್ತದೆ. ಇದರ ಜೊತೆಗೆ ಸಾಲಗಾರರಿಗೆ ವಿಧಿಸುವ ಬಡ್ಡಿ ದರಗಳನ್ನು ಇಳಿಸಬೇಕಾಗುತ್ತದೆ’ ಎಂದು ‘ಆರ್‌ಬಿಐ’ ಗವರ್ನರ್ ಡಿ. ಸುಬ್ಬರಾವ್, ಅಭಿಪ್ರಾಯಪಟ್ಟಿದ್ದಾರೆ.ಬ್ಯಾಂಕಿಂಗ್ ವಹಿವಾಟಿನ ತಾಂತ್ರಿಕ ಶಬ್ದಗಳಲ್ಲಿ ಹೇಳಬೇಕಾದರೆ, ಬ್ಯಾಂಕ್‌ಗಳು ನಿವ್ವಳ ಬಡ್ಡಿ ಲಾಭ  ತಗ್ಗಿಸಲು ಮುಂದಾಬೇಕು ಎಂದರು. ಅಂತರ್‌ರಾಷ್ಟ್ರೀಯ ಹಣಕಾಸು ಸಂಸ್ಥೆ (ಐಐಎಫ್) ಇಲ್ಲಿ ಏರ್ಪಡಿಸಿದ್ದ ಸಭೆಯಲ್ಲಿ ಭಾಗವಹಿಸಿದ್ದ ನಂತರ ಅವರು ಸುದ್ದಿಗಾರರ ಜತೆ ಮಾತನಾಡುತ್ತಿದ್ದರು.ಸದ್ಯಕ್ಕೆ ವಾಣಿಜ್ಯ ಬ್ಯಾಂಕ್‌ಗಳು ಸ್ಥಿರ ಠೇವಣಿಗಳ ಮೇಲೆ ಗರಿಷ್ಠ ಶೇ 9.5ರಷ್ಟು ಬಡ್ಡಿ ವಿಧಿಸುತ್ತಿವೆ.ವಿದೇಶಗಳಲ್ಲಿನ ಬ್ಯಾಂಕ್‌ಗಳ ದಕ್ಷತೆ ಮಟ್ಟಕ್ಕೆ ಏರಲು ದೇಶಿ ಬ್ಯಾಂಕ್‌ಗಳು ತಮ್ಮ ಕಾರ್ಯದಕ್ಷತೆ ಹೆಚ್ಚಿಸಬೇಕಾಗಿದೆ. ಬಡ್ಡಿಯೇತರ ವೆಚ್ಚಗಳಾದ ವೇತನ, ಭತ್ಯೆ, ವಹಿವಾಟು ವೆಚ್ಚ ಮತ್ತು ಭವಿಷ್ಯದ ವೆಚ್ಚಗಳನ್ನು ತಗ್ಗಿಸಬೇಕಾಗಿದೆ. ಜೊತೆಗೆ ಉತ್ಪಾದನೆ ಹೆಚ್ಚಿಸಿ, ವಸೂಲಾಗದ ಸಾಲದ ಪ್ರಮಾಣ ವೃದ್ಧಿಸಿ, ತಂತ್ರಜ್ಞಾನವನ್ನು ಮೇಲ್ದರ್ಜೆಗೆ ಹೆಚ್ಚಿಸಬೇಕಾಗಿದೆ ಎಂದರು.ಬ್ಯಾಂಕ್ ಲೈಸೆನ್ಸ್: ಹೊಸ  ಬ್ಯಾಂಕಿಂಗ್ ಲೈಸೆನ್ಸ್ ನೀಡಲು ಪರಿಗಣಿಸುವ ಇತರ ಮಾನದಂಡಗಳ ಜೊತೆ, ಬ್ಯಾಂಕ್ ವಹಿವಾಟು ನಡೆಸಲು ಮುಂದೆ ಬರುವವರು ಅಳವಡಿಸಿಕೊಳ್ಳಬಹುದಾದ ಆರ್ಥಿಕ ಸೇರ್ಪಡೆ ಕಾರ್ಯಕ್ರಮವನ್ನೂ ‘ಆರ್‌ಬಿಐ’ ಗಣನೆಗೆ ತೆಗೆದುಕೊಳ್ಳಲಿದೆ ಎಂದು ಸುಬ್ಬರಾವ್ ನುಡಿದರು.ಈ ತಿಂಗಳಾಂತ್ಯಕ್ಕೆ ‘ಆರ್‌ಬಿಐ’ ಹೊಸ ಬ್ಯಾಂಕ್ ಲೈಸೆನ್ಸ್‌ಗಳ ಮಾರ್ಗದರ್ಶಿ ಸೂತ್ರಗಳನ್ನು ಪ್ರಕಟಿಸಲಿದೆ. ಕೈಗಾರಿಕೆ ಮತ್ತು ಉದ್ದಿಮೆ ಸಮೂಹಗಳು ಬ್ಯಾಂಕಿಂಗ್ ರಂಗ ಪ್ರವೇಶಿಸಲು ಅವಕಾಶ ನೀಡಬೇಕೆ ಎನ್ನುವುದರ ಬಗ್ಗೆಯೂ ಅಭಿಪ್ರಾಯಗಳನ್ನು ಆಹ್ವಾನಿಸಲಿದೆ.ಸದ್ಯಕ್ಕೆ ದೇಶದಲ್ಲಿ 26 ರಾಷ್ಟ್ರೀಕೃತ , 7 ಹೊಸ ಖಾಸಗಿ, 15 ಹಳೆಯ ಖಾಸಗಿ, 31 ವಿದೇಶಿ, 86 ಪ್ರಾದೇಶಿಕ ಗ್ರಾಮೀಣ, 4 ಸ್ಥಳೀಯ ಪ್ರದೇಶ, 1,721 ಪಟ್ಟಣ ಸಹಕಾರಿ, 31 ರಾಜ್ಯ ಸಹಕಾರಿ  ಮತ್ತು 371 ಜಿಲ್ಲಾ ಕೇಂದ್ರೀಯ ಸಹಕಾರಿ ಬ್ಯಾಂಕ್‌ಗಳು ಕಾರ್ಯನಿರ್ವಹಿಸುತ್ತಿವೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.