ಬುಧವಾರ, ಮಾರ್ಚ್ 3, 2021
31 °C
ಕುಡಿಯುವ ನೀರಿನ ಸಮಸ್ಯೆಯಿಂದ ಆತಂಕ, ಕೊಂಗಳಿ ಬ್ಯಾರೇಜ್‌ ಕೂಡ ಖಾಲಿ

ಬತ್ತುತ್ತಿದೆ ಚುಳಕಿ ನಾಲಾ ಜಲಾಶಯದ ನೀರು

ಪ್ರಜಾವಾಣಿ ವಾರ್ತೆ/ಮಾಣಿಕ ಆರ್.ಭುರೆ Updated:

ಅಕ್ಷರ ಗಾತ್ರ : | |

ಬತ್ತುತ್ತಿದೆ ಚುಳಕಿ ನಾಲಾ ಜಲಾಶಯದ ನೀರು

ಬಸವಕಲ್ಯಾಣ: ಪಟ್ಟಣಕ್ಕೆ ನೀರು ಪೂರೈಸುವ ತಾಲ್ಲೂಕಿನ ಮುಸ್ತಾಪುರದ ಚುಳಕಿನಾಲಾ ಜಲಾಶಯದಲ್ಲಿ  ನೀರು ತಳ ಕಂಡಿದ್ದು, ಕುಡಿಯುವ ನೀರಿನ ಸಮಸ್ಯೆ  ಉಂಟಾಗಲಿದೆ ಎಂದು ಜನರು ಆತಂಕ ವ್ಯಕ್ತಪಡಿಸಿದ್ದಾರೆ.ಪ್ರಸಕ್ತ ಸಾಲಿನಲ್ಲಿ ಅತಿ ಕಡಿಮೆ ಪ್ರಮಾಣದಲ್ಲಿ ಮಳೆ ಸುರಿದಿದೆ. ಆಗ ಜಲಾಶಯದಲ್ಲಿನ ನೀರು ಒಂದೆರಡು ಅಡಿಗಳಷ್ಟು ಮಾತ್ರ ಹೆಚ್ಚಿತ್ತು. ನೀರಿನ ಸಂಗ್ರಹ ಈಗಾಗಲೇ ಮುಗಿಯುವ ಹಂತಕ್ಕೆ ತಲುಪಿದೆ. ಇನ್ನು ಕೆಲ ಹುಲಸೂರ ಸಮೀಪದ ಮಾಂಜರಾ ನದಿಯ ಕೊಂಗಳಿ ಬ್ಯಾರೇಜ್ ನಿಂದ  ಚುಳಕಿನಾಲಾ ಜಲಾಶಯಕ್ಕೆ ನೀರು ಭರ್ತಿ ಮಾಡುವ  ಉದ್ದೇಶದ ಯೋಜನೆ ಪೂರ್ಣಗೊಂಡಿದೆ. ಜಲಾಶಯಕ್ಕೆ ನೀರು ಭರ್ತಿ ಮಾಡಿದರೆ ಕುಡಿಯುವುದಕ್ಕೆ ಅಷ್ಟೇ ಅಲ್ಲ ,ಸುಮಾರು 11 ಗ್ರಾಮಗಳ ಜಮೀನುಗಳ ಕೃಷಿಗೂ ನೀರು ಲಭ್ಯವಾಗುತ್ತದೆ. ಆದರೆ  ಈ ಬಾರಿ ಕೊಂಗಳಿ ಬ್ಯಾರೇಜ್‌ನಲ್ಲೂ ನೀರಿಲ್ಲ ಎಂಬುದು ಸಮಸ್ಯೆಯನ್ನು ಇನ್ನಷ್ಟು ಹೆಚ್ಚಿದೆ.ಈ ವರ್ಷ ಜಲಾಶಯ ಬೇಸಿಗೆ ಪೂರ್ವದಲ್ಲಿಯೇ ಒಣಗುವ ಸಾಧ್ಯತೆ ಇದೆ ಎಂಬುದು ಗೊತ್ತಿದ್ದರೂ ನಗರಸಭೆಯವರು ಕುಡಿಯುವ ನೀರಿನ ಪೂರೈಕೆಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಇದುವರೆಗೆ ಕ್ರಮ ಕೈಗೊಂಡಿಲ್ಲ. ಜಲಾಶಯದಿಂದ ನೀರು ಸರಬರಾಜು ಸ್ಥಗಿತಗೊಂಡರೆ ಸುಮಾರು ಒಂದು ಲಕ್ಷದಷ್ಟಿರುವ ಜನಸಂಖ್ಯೆಗೆ ಎಲ್ಲಿಂದ ನೀರು ಒದಗಿಸಲಾಗುತ್ತದೆ ಎಂದು ನಿವಾಸಿಗಳು ಪ್ರಶ್ನಿಸಿದ್ದಾರೆ. ಎಲ್ಲೆಡೆ ಹಾಹಾಕಾರ ಉಂಟಾದಾಗ ಎಚ್ಚೆತ್ತುಕೊಳ್ಳುವುದಕ್ಕಿಂತ ಮೊದಲೇ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ.ನೀರು ಸರಬರಾಜು ಯೋಜನೆಯ ಪೈಪ್ ಲೈನ್ ಅಲ್ಲಲ್ಲಿ ಒಡೆದಿದೆ. ಅನೇಕ ತಿಂಗಳುಗಳಿಂದ ನೀರು ಸೋರಿಕೆ ಆಗುತ್ತಿದೆ. ಜಲಾಶಯದಿಂದ 12 ಕಿ.ಮೀ ದೂರದ ಪಟ್ಟಣಕ್ಕೆ ಬರುವಷ್ಟರಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರು ಪೋಲಾಗುತ್ತಿದೆ. ಈ ಬಗ್ಗೆ ನಿರ್ಲಕ್ಷ್ಯ ತಾಳಲಾಗಿದೆ ಎಂದು ಜನರು ದೂರಿದ್ದಾರೆ.ಇದಲ್ಲದೆ ನೀರು ಸರಿಯಾಗಿ ಶುದ್ಧಗೊಳ್ಳದೆ ನಳಗಳಿಗೆ ಬರುತ್ತಿದೆ. ಹಸಿರು ಬಣ್ಣದ ಕಲ್ಮಶಯುಕ್ತ ನೀರಿನ ಸೇವನೆಯಿಂದ ರೋಗಗಳು ಹರಡುತ್ತಿವೆ. ಆದ್ದರಿಂದ ಶುದ್ಧ ನೀರು ಸರಬರಾಜು ಮಾಡಲು ಜನರು ಅನೇಕ ಸಲ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರಾದ ದೀಪಕ ಮಾಲಗಾರ ಹಾಗೂ ನಿಜಾಮೊದ್ದೀನ್ ಒತ್ತಾಯಿಸಿದ್ದಾರೆ.ಪ್ರತೀ ವರ್ಷ ಮಳೆ ಕಡಿಮೆ ಪ್ರಮಾಣದಲ್ಲಿ ಆಗುತ್ತಿರುವುದರಿಂದ ಜಲಾಶಯದಲ್ಲಿ  ಸಾಕಷ್ಟು ಪ್ರಮಾಣದಲ್ಲಿ ನೀರು ಸಂಗ್ರಹ ಆಗುತ್ತಿಲ್ಲ. ಆದ್ದರಿಂದ ಹುಲಸೂರ ಸಮೀಪದ ಮಾಂಜರಾ ನದಿಯ ಕೊಂಗಳಿ ಬ್ಯಾರೇಜ್ ನಿಂದ ಏತ ನೀರಾವರಿ ಮೂಲಕ ಜಲಾಶಯಕ್ಕೆ ನೀರು ಭರ್ತಿ ಮಾಡುವ ₹ 24 ಕೋಟಿ ವೆಚ್ಚದ ಯೋಜನೆ ಕಾರ್ಯಗತಗೊಳಿಸಲಾಗಿದೆ.ಕಾಮಗಾರಿ ಈ ವರ್ಷವೇ ಮುಗಿದಿದೆ. ಆದರೆ, ಮಳೆ ಕೊರತೆಯ ಕಾರಣ ಕೊಂಗಳಿ ಬ್ಯಾರೇಜ್ ಕೂಡ ಈ ಸಲ ಬರಿದಾಗಿದೆ. ಹೀಗಾಗಿ ಅಲ್ಲಿಂದ ನೀರು ಸಾಗಿಸಲಾಗಿಲ್ಲ. ಒಂದುವೇಳೆ ಜಲಾಶಯಕ್ಕೆ ನೀರು ಭರ್ತಿ ಮಾಡಿದರೆ ಕುಡಿಯುವುದಕ್ಕೆ ನೀರು ಪೂರೈಕೆಗೆ ಅಷ್ಟೇ ಅಲ್ಲ ಸುಮಾರು 11 ಗ್ರಾಮಗಳ ಜಮೀನುಗಳ ನೀರಾವರಿಗೂ ನೀರು ದೊರಕಲಿದೆ ಎಂದು ಕರ್ನಾಟಕ ಮೂಲಸೌಕರ್ಯ ಅಭಿವೃದ್ಧಿ ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.ನಳಗಳ ನೀರು ಸರಿಯಾಗಿ ಶುದ್ಧಗೊಳಿಸುವಂತೆ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಪೌರಾಯುಕ್ತ ಮಹಮ್ಮದ ಯುಸೂಫ್ ಹೇಳಿದ್ದಾರೆ. ಮುಂಬರುವ ದಿನಗಳಲ್ಲಿ ಉಂಟಾಗುವ ನೀರಿನ ಸಮಸ್ಯೆ ಬಗೆಹರಿಸಲು ಪಟ್ಟಣದಲ್ಲಿನ ತೆರೆದ ಬಾವಿಗಳ ನೀರು ಉಪಯೋಗಿಸಲು ಮತ್ತು ಕೊಳವೆ ಬಾವಿ ಕೊರೆಯಲು ಸಿದ್ಧತೆ  ನಡೆದಿದೆ ಎಂದಿದ್ದಾರೆ.ಪಟ್ಟಣದಲ್ಲಿನ ಹಳೆಯ ತೆರೆದ ಬಾವಿಗಳಿಗೆ ಪಂಪ್ ಸೆಟ್ ಅಳವಡಿಸಿ ಆ ನೀರು ಪೈಪ್ ಲೈನ್ ನಲ್ಲಿ ಹರಿಸಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಲಾಗುವುದು.

– ಮಹಮ್ಮದ್ ಯುಸೂಫ್, 

ಪೌರಾಯುಕ್ತರು

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.