ಭಾನುವಾರ, ಮೇ 16, 2021
26 °C

ಬದುಕಬೇಕು, ಅದಕ್ಕಾಗಿ ವಲಸೆ ಬೇಕು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ಇಲ್ಲಿ ಒಬ್ಬೊಬ್ಬರದೂ ಒಂದೊಂದು ಕಥೆ. ಅಂತೂ ಬದುಕಿದ್ದೇವೆ ಅಷ್ಟೆ ಎಂಬ ನಿಟ್ಟುಸಿರು.

-ಹರಪನಹಳ್ಳಿ ತಾಲ್ಲೂಕು ಬೇವಿನಹಳ್ಳಿ ದೊಡ್ಡತಾಂಡಾದ ಜನರ ವಲಸೆ ಬದುಕಿನ ಮಗ್ಗುಲು ಹೀಗಿದೆ.

ಇಲ್ಲಿನ ಭೀಮಾನಾಯ್ಕ ಅವರಿಗೆ ಎರಡೂ ಕಣ್ಣುಗಳ ದೃಷ್ಟಿ ಇದ್ದಕ್ಕಿದ್ದಂತೆಯೇ ಹೋಯಿತು.ಸುಮಾರು ಒಂದೂವರೆ ವರ್ಷಗಳ ಕಾಲ ಅಕ್ಷರಶಃ ಕುರುಡನಾಗಿದ್ದ. ಕೊನೆಗೂ ಯಾರ‌್ಯಾರಿಗೋ ಕೈಚಾಚಿ ದೃಷ್ಟಿ ಚಿಕಿತ್ಸೆ ಪಡೆದುಕೊಂಡ. ಅಂತೂ ದುಡಿದು ತಿನ್ನುವ ಮಟ್ಟಕ್ಕೆ ದೃಷ್ಟಿ ಬಂದಿದೆ. ಆದರೆ, ಚಿಕಿತ್ಸೆಗಾಗಿ ಮಾಡಿದ ರೂ 50 ಸಾವಿರದವರೆಗಿನ ಸಾಲದ ಮೊತ್ತ ತಲೆಗೆ ಸುತ್ತಿಕೊಂಡಿದೆ. ಅದನ್ನು ತೀರಿಸಲು ಮತ್ತೆ ವಲಸೆ ಹೋಗಿ ದುಡಿಯಲೇಬೇಕು. ಜತೆಗೆ ಪತ್ನಿಯೂ ಇದ್ದಾರೆ.ಶಾಂತಿಬಾಯಿಯದ್ದು ಪತಿ, ನಾಲ್ಕು ಮಕ್ಕಳು ಇದ್ದ ತುಂಬು ಕುಟುಂಬ. ಕೊನೆಗೂ ಕುಟುಂಬ ಯೋಜನೆಯ ಶಸ್ತ್ರಚಿಕಿತ್ಸೆ ಮಾಡಿಕೊಂಡರು. ಅದೇನಾಯಿತೋ ಗೊತ್ತಿಲ್ಲ. ಒಬ್ಬ ಮಗಳು ಕಡಿಮೆ ರಕ್ತದ ಒತ್ತಡ(ಲೋ ಬಿಪಿ)ದಿಂದ ಮೃತಪಟ್ಟಳು. ಮಗ ಅಪಘಾತದಲ್ಲಿ ತೀರಿಕೊಂಡ, ಉಳಿದ ಇಬ್ಬರು ಮಕ್ಕಳು ಅದೇ ಹಾದಿ ಹಿಡಿದರು. ಎದೆಯಮಟ್ಟಕ್ಕೆ ಬೆಳೆದ ಮಕ್ಕಳು ಹೀಗೆ ವಿಧಿವಶರಾಗುತ್ತಿದ್ದುದನ್ನು ಶಾಂತಿಬಾಯಿ ಅರಗಿಸಿಕೊಳ್ಳಬೇಕಾದರೆ ಸುಮಾರು 25 ದಿನಗಳ ಹಿಂದೆ ಅವರ ಪತಿಯೂ ಇದೇ ಲೋ ಬಿಪಿಗೆ ಒಳಗಾಗಿ ಇಹಲೋಕ ತ್ಯಜಿಸಿದರು.

ಶಾಂತಿಬಾಯಿಗೂ ಅದೇ ಕಾಯಿಲೆ.ದುಡಿದು ತಿನ್ನಲಾಗದು. ಒಂದು ಪುಟ್ಟ ಮನೆಯಿದೆ. ಅದೂ ಪ್ರತಿ ಕಲ್ಲುಗಣಿ ಸ್ಫೋಟಕ್ಕೆ ಚರಚರ ಅಲುಗಾಡುತ್ತಿದೆ. ಅಸಹನೀಯ ಪರಿಸ್ಥಿತಿಯಲ್ಲಿ ಅವರು `ಬದುಕಿದ್ದಾರೆ~ ಅಷ್ಟೆ. ಒಂದೇ ಸಮುದಾಯದ ಮಂದಿಯಾದರೂ ಗ್ರಾಮದ ಕೆಳ ರಾಜಕೀಯ ಊರ ಮನಸ್ಸುಗಳನ್ನು ಒಡೆದಿದೆ ಎನ್ನುತ್ತಾರೆ ಮಂಜುನಾಥ.ಕೆಲವೆಡೆ ಸ್ಥಗಿತಗೊಂಡ ಕ್ವಾರಿಯ ಬೃಹತ್ ಕುಣಿಗಳು ಊರವರನ್ನೇ ನುಂಗಲು ಬಾಯ್ದೆರೆದು ನಿಂತಿವೆ.

ಇಲ್ಲಿಂದ ಸ್ವಲ್ಪ ಮುಂದೆ ಹೋದರೆ, ಗೌಳೇರಹಟ್ಟಿ ಸಿಗುತ್ತದೆ. ಅಲ್ಲಿ ಕಲ್ಲುಗಣಿಗಾರಿಕೆಯಂತೂ ಊರಿನ ಮಧ್ಯೆಯೇ ಇದೆ. ಈಗಂತೂ ಪರಿಸ್ಥಿತಿ ಸರಿಪಡಿಸಲಾಗದಷ್ಟು ಹದಗೆಟ್ಟಿದೆ. ಹಗಲು ವೇಳೆಯಲ್ಲಿಯೂ ಪ್ರಖರ ಬೆಳಕು ಹಾಕದೇ ವಾಹನ ಚಾಲನೆ ಮಾಡುವಂತಿಲ್ಲ.ಕಾರಣ ಎದುರಾಗುವ ವ್ಯಕ್ತಿ, ವಾಹನಗಳನ್ನು ಗುರುತಿಸಲಾರದಷ್ಟು ದಟ್ಟ ಕಲ್ಲು ಗಣಿ, ಕ್ರಷರ್ ದೂಳಿನ ಮುಸುಕು ಮುಖ್ಯರಸ್ತೆಯಲ್ಲೇ ಹರಡಿದೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆಯವರ ಪ್ರಕಾರ ಗಣಿಗಾರಿಕೆ ಘಟಕಗಳು ಊರಿನಿಂದ 150 ಮೀಟರ್ ದೂರವಿದೆ. ಆದರೆ, ಊರನ್ನೇ ನುಂಗಿಹಾಕಿ, ಜನರನ್ನೆಲ್ಲಾ ಅಸ್ವಸ್ಥರನ್ನಾಗಿಸಿದ ಬಗ್ಗೆ ಯಾರಲ್ಲೂ ಹೇಳಲಾಗದ ಹಟ್ಟಿಯ ಮಂದಿಯ ಧ್ವನಿ ಗಣಿ ಮಾಲೀಕರ ಘರ್ಜನೆಯ ಮಧ್ಯೆ ಉಡುಗಿ ಹೋಗಿದೆ. ಹೈನುಗಾರಿಕೆ ನಂಬಿ ಬದುಕುವ ಇಲ್ಲಿನ ಮಂದಿಗೆ ಎಮ್ಮೆಗಳಲ್ಲಿ ಹಾಲಿನ ಪ್ರಮಾಣ ಇಳಿಮುಖವಾಗಿರುವುದು ಮತ್ತೊಂದು ಹೊಡೆತ ನೀಡಿದೆ ( ಈ ಬಗ್ಗೆ ಜ. 7ರಂದು `ಪ್ರಜಾವಾಣಿ~ ಸವಿಸ್ತಾರವಾದ ವರದಿ ಪ್ರಕಟಿಸಿತ್ತು).ವಡ್ನಳ್ಳಿ ಮಾರ್ಗವಾಗಿ ಉಚ್ಚಂಗಿದುರ್ಗಕ್ಕೆ ಹೋಗುವಾಗ ರಸ್ತೆಯ ಎರಡೂ ಬದಿ ಒಂದೆಡೆ ಡಾಂಬರು ಘಟಕ, ಮತ್ತೊಂದೆಡೆ ಜಲ್ಲಿ ಕ್ರಷರ್ ಇದೆ. ಕನಿಷ್ಠ ಹೊದಿಕೆಯೂ ಇಲ್ಲ. ದೂಳು, ಜಲ್ಲಿಪುಡಿ, ಡಾಂಬರು ಘಟಕದ ಇಂಗಾಲ ನೇರವಾಗಿ ವಾತಾವರಣ ಸೇರುತ್ತಿದೆ. ಪರಿಸರ ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಬಸ್, ವಾಹನ ಚಾಲಕರು ಒಂದು ಕೈಯಲ್ಲಿ ಮೂಗಿಗೆ ಕರವಸ್ತ್ರ ಹಿಡಿದು ವಾಹನ ಚಾಲನೆ ಮಾಡುತ್ತಾರೆ. ನಾಗರಿಕರದ್ದೂ ಇದೇ ಸ್ಥಿತಿ ಎಂದು ಸ್ಥಳೀಯರು ಅಸಹಾಯಕತೆ ವ್ಯಕ್ತಪಡಿಸುತ್ತಾರೆ.ಊರಿನಲ್ಲಿ ಏನೂ ಉಳಿದಿಲ್ಲ. ಕೊನೇ ಪಕ್ಷ ಬದುಕಬೇಕು ಎಂಬ ಒಂದೇ ಆಸೆಯಿಂದ ಜೀವ ಹಿಡಿದುಕೊಂಡು ವಲಸೆಗೆ ಶರಣಾಗಿದ್ದಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.