ಬುಧವಾರ, ಏಪ್ರಿಲ್ 21, 2021
27 °C

ಬದುಕಲೂ ಆಗದ, ಸಾಯಲೂ ಆಗದ ಜೀವ ಏನು ಮಾಡಬೇಕು?

ಸುಚೇತನಾ ನಾಯ್ಕ Updated:

ಅಕ್ಷರ ಗಾತ್ರ : | |

- ಪ್ರಮಿಳಾ ನೇಸರ್ಗಿ- ಹಿರಿಯ ವಕೀಲರು

ದಯಾಮರಣ ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿರುವ ದಾವಣಗೆರೆ ಕರಿಬಸಮ್ಮ ಪರ ವಕೀಲೆ

* ದಯಾಮರಣದ ಬಗ್ಗೆ ನಿಮ್ಮ ಅನಿಸಿಕೆ..?

-ಎಲ್ಲರಿಗೂ ಬದುಕುವ ಹಕ್ಕನ್ನು ಸಂವಿಧಾನದ 21ನೇ ವಿಧಿ ನೀಡಿದೆ. ಆದರೆ ಸತ್ತು ಸತ್ತು ಬದುಕಿ ಎಂದು ಅದು ಎಲ್ಲಿಯೂ ಹೇಳಲಿಲ್ಲ. ಸಂವಿಧಾನದ ಪ್ರಕಾರ ‘ಬದುಕು’ ಎಂದರೆ ಗೌರವಯುತ, ಆರೋಗ್ಯಪೂರ್ಣ ಬದುಕು ಎಂದರ್ಥ.ಕಾನೂನು ಆತ್ಮಹತ್ಯೆಗೂ ಅವಕಾಶ ಕೊಡುವುದಿಲ್ಲ. ದಯಾಮರಣಕ್ಕೂ ಕೊಡುವುದಿಲ್ಲ. ಬದುಕಲೂ ಆಗದೇ. ಸಾಯಲೂ ಆಗದ ಜೀವ ಇನ್ನೇನು ಮಾಡಬೇಕು ಹೇಳಿ?ದಾವಣಗೆರೆಯ ಕರಿಬಸಮ್ಮ ಪ್ರಕರಣವನ್ನೇ ತೆಗೆದುಕೊಳ್ಳಿ. ಅವರನ್ನು ಹತ್ತಿರದಿಂದ ನೋಡಿದ್ದೇನೆ. ಆ ನೋವು, ಆ ತೊಳಲಾಟ ಯಾರಿಗೂ ಬೇಡ. ಅಂತಹ ನೋವನ್ನು ಕಣ್ಣಾರೆ ಕಂಡೂ ‘ನೀನು ಇನ್ನೂ ಬದುಕಮ್ಮಾ’ ಎನ್ನುವ ಮಾತು ಯಾರ ಬಾಯಿಯಿಂದಲೂ ಬರಲು ಸಾಧ್ಯವಿಲ್ಲ. ‘ಹೇಡಿಯ ಆತ್ಮಹತ್ಯೆ ಬೇಡ. ಗೌರವಯುತ ಸಾವು ಬೇಕು’ ಎಂದರೆ ಅದನ್ನು ತಡೆಯುವುದು ಸರಿಯಲ್ಲ.* ಹಾಗಿದ್ದರೆ ದಯಾಮರಣ ನೀಡುವುದು ಸರಿ ಎನ್ನುವುದು ನಿಮ್ಮ ಅಭಿಮತವೇ..?

-ಎಲ್ಲ ಸನ್ನಿವೇಶಗಳಲ್ಲಿ ಕೊಡಿ ಎಂದು ನಾನು ಹೇಳುವುದಿಲ್ಲ. ಆದರೆ ಸುಮ್ಮಸುಮ್ಮನೆ ಸಾಯಲು ಯಾವ ಜೀವವೂ ಬಯಸುವುದಿಲ್ಲ ತಾನೆ? ದಿನಂಪ್ರತಿ ಸಾಯುತ್ತ ಬದುಕುವ ಬದಲು ಒಮ್ಮೆಲೇ ಸಾಯುವುದೇ ಮೇಲು. ಅಸಹನೀಯ ನೋವು ಸಹಿಸಿಕೊಳ್ಳದೆ ವಿಲವಿಲ ಒದ್ದಾಡುತ್ತಿರುವಾಗ, ನೋಡಿಕೊಳ್ಳಲು ತನ್ನವರು ಎಂದು ಒಬ್ಬರೂ ಇಲ್ಲದಾಗ, ಇದ್ದವರೂ ದೂರ ಸರಿದಾಗ,  ತನ್ನ ಕನಿಷ್ಠ ಕೆಲಸವನ್ನೂ ಮಾಡಿಕೊಳ್ಳಲು ಅಸಮರ್ಥರಾದಾಗ, ಆರ್ಥಿಕ ನೆರವು ಇಲ್ಲದಾಗ ಅಂಥವರಿಗೆ ದಯಾಮರಣ ಕರುಣಿಸಬೇಕಾದುದು ಅಗತ್ಯ. ಇದಕ್ಕೆ ಕಾನೂನು ಅವಕಾಶ ಕಲ್ಪಿಸಬೇಕಾಗಿದೆ.* ಹೀಗೆ ಕೋರ್ಟ್ ದಯಾಮರಣಕ್ಕೆ ಅವಕಾಶ ನೀಡಿದರೆ ಅದರ ದುರುಪಯೋಗ ಆಗಬಹುದಲ್ಲವೇ..?

-ಎಲ್ಲಿ ಉಪಯೋಗ ಇದೆಯೋ, ಅಲ್ಲಿ ದುರುಪಯೋಗ ಇದ್ದೇ ಇದೆ. ಅದಕ್ಕಾಗಿಯೇ ಅರುಣಾ ಶಾನುಭಾಗ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ದುರುಪಯೋಗ ತಡೆಗಟ್ಟುವ ಸಂಬಂಧ ಸಮಿತಿ ರಚನೆಗೆ ನಿರ್ದೇಶಿಸಿದೆ. ಯಾವ ಹೈಕೋರ್ಟ್‌ನಲ್ಲಿ ಇಂತಹ ಪ್ರಕರಣಗಳು ದಾಖಲಾಗುತ್ತವೆಯೋ, ಅಂತಹ ಕೋರ್ಟ್‌ಗಳು ನರರೋಗ ತಜ್ಞ, ಮಾನಸಿಕ ತಜ್ಞ, ಫಿಜಿಷಿಯನ್ ನೇತೃತ್ವದಲ್ಲಿ ಸಮಿತಿ ರಚಿಸಿ ರೋಗಿಯ ತಪಾಸಣೆ ನಡೆಸಿ ವರದಿ ನೀಡಬೇಕು. ಆ ವರದಿಯ ಆಧಾರದ ಮೇಲೆ ದಯಾಮರಣ ನೀಡಬಹುದೇ, ಬೇಡವೇ ಎಂಬ ಬಗ್ಗೆ ಆಯಾ ಕೋರ್ಟ್ ನಿರ್ಧರಿಸಬೇಕು ಎಂದು ಇದೆ. ಅಂತಹ ಸಂದರ್ಭದಲ್ಲಿ ದುರುಪಯೋಗದ ಪ್ರಶ್ನೆ ಇರುವುದಿಲ್ಲ.* ದಯಾಮರಣದ ಯಾವುದಾದರೂ ದೃಷ್ಟಾಂತ ಹಿಂದೆ ಇದೆಯೇ..?

-ಮನುಷ್ಯ ದೃಷ್ಟಾಂತದ ಬಗ್ಗೆ ಗೊತ್ತಿಲ್ಲ. ಆದರೆ ಸಾಬರಮತಿ ಆಶ್ರಮದಲ್ಲಿ ಮಹಾತ್ಮ ಗಾಂಧೀಜಿ ಒಂದು ಕರುವಿಗೆ ‘ದಯಾಮರಣ’ ನೀಡಿದ್ದರು. ಅಪಘಾತದಲ್ಲಿ ತೀವ್ರ ಸ್ವರೂಪದ ಗಾಯದಿಂದ ಜೀವನ್ಮರಣದ ಮಧ್ಯೆ ತೊಳಲಾಡುತ್ತಿದ್ದ ಕರುವಿಗೆ ವೈದ್ಯರನ್ನು ಕರೆಯಿಸಿ ಚುಚ್ಚುಮದ್ದು ನೀಡಿ ದಯಾಮರಣ ಕರುಣಿಸಿದ್ದರು.ಆಗ ಅದು ಆಶ್ರಮ ವಾಸಿಗಳಲ್ಲಿ ಬಹಳ ಚರ್ಚೆಗೆ ಒಳಗಾಗಿತ್ತು. ಕೆಲವರು ಗಾಂಧೀಜಿಯ ಈ ಕ್ರಮವನ್ನು ಖಂಡಿಸಿದ್ದರು. ‘ಮನುಷ್ಯರಿಗಾದರೆ ಅಥವಾ ನೀವೇ ಇಂತಹ ಸನ್ನಿವೇಶಕ್ಕೆ ಸಿಲುಕಿದ್ದರೆ ಇದೇ ರೀತಿ ಮಾಡುತ್ತಿದ್ದೀರಾ’ ಎಂದು ಪ್ರಶ್ನಿಸಿದ್ದರು. ಆಗ ಗಾಂಧೀಜಿ, ‘ಬದುಕುವುದು ಎಲ್ಲರ ಧರ್ಮ. ಅಂತೆಯೇ ಸಾವು ಎಲ್ಲರಿಗೂ ಸಹಜ. ಆದರೆ ಹೀಗೆ ಸತ್ತು ಬದುಕುವ ಬದಲು ಒಮ್ಮೆಲೆ ಸಾಯಿಸುವುದು ಒಳಿತು. ನಾನೇ ಕರುವಿನ ಜಾಗದಲ್ಲಿ ಇದ್ದರೂ ಹಾಗೆಯೇ ಮಾಡುತ್ತಿದ್ದೆ’ ಎಂದರು. ಜೈನ ಧರ್ಮದಲ್ಲಿ ನಿರಾಹಾರ ಸ್ಥಿತಿಗೆ (ಸಲ್ಲೇಖನ ) ಹೋಗಿ ಜೀವವನ್ನು ತ್ಯಜಿಸುತ್ತಾರೆ. ಇದಕ್ಕೆ ಅನುಮತಿ ನೀಡಿರುವಾಗ ದಯಾಮರಣಕ್ಕೆ ಅವಕಾಶ ಕಲ್ಪಿಸದೇ ಇರುವುದು ಸರಿಯಲ್ಲ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.