ಶನಿವಾರ, ಜೂನ್ 12, 2021
28 °C

ಬದುಕು ಕಸಿದ ಸುನಾಮಿಗೆ ವರ್ಷ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಟೋಕಿಯೊ (ಪಿಟಿಐ): ಹೊತ್ತುರಿದು ಕತ್ತಲು ತುಂಬಿದ ಮನೆ ಮಠಗಳೀಗ ತೆರವುಗೊಳ್ಳುತ್ತಿವೆ. ಕತ್ತಲ ದಾರಿಯಲ್ಲಿ ಬೆಳಕಿನ ಸೊಡರು ಮೂಡುತ್ತಿದೆ.. ಸೋತು ಮೂಕವಾದ ಬದುಕಿಲ್ಲಿ ನಾಳೆಗಾಗಿ ನಿಟ್ಟುಸಿರು ಚೆಲ್ಲಿ ಮೈದಡವಿ ಎದ್ದು ನಿಂತಿವೆ... ಓ ಧೂರ್ತ ಸುನಾಮಿ ಕರುಣೆ ಇದ್ದರೆ ನಿನಗೆ ಮತ್ತೆಂದೂ ಮರಳಿ ಬಾರದಿರು.ಇದು ಜಪಾನ್‌ನ ಈಶಾನ್ಯ ಭಾಗದ ಕಡಲಾಳದಲ್ಲಿ ಸಂಭವಿಸಿದ ಭಾರಿ ಭೂಕಂಪದಿಂದಾಗಿ ಎದ್ದ ಅಲೆಗಳು ಸುನಾಮಿ ರೂಪದ ಪ್ರಳಯಾಂತಕನಾಗಿ ರುದ್ರನರ್ತನ ಗೈದು  ಜಪಾನಿಯರು ಹಿಂದೆಂದೂ ಕಂಡರಿಯದ ಘೋರ ದುರಂತ ಸೃಷ್ಟಿಸಿ, ಪರಮಾಣು ವಿದ್ಯುತ್ ಸ್ಥಾವರಗಳು ಸ್ಪೋಟಿಸಿ  19,000ಕ್ಕೂ ಅಧಿಕ ಜನರು ಮನೆಮಠಗಳನ್ನು ಕಳೆದುಕೊಂಡು ಸಾವು, ಕಣ್ಮರೆ ಮಧ್ಯೆ ನಲಗುವಂತೆ ಮಾಡಿದ ಸುನಾಮಿಗೆ ಭಾನುವಾರಕ್ಕೆ ಭರ್ತಿ ವರ್ಷದ ಸಮಯದಲ್ಲಿ ಪ್ರತಿಯೊಬ್ಬ ಜಪಾನಿಯರಲ್ಲಿ ಮಿಡಿಯುವ ತುಡಿತ.ಈ ಹಿನ್ನೆಲೆಯಲ್ಲಿ ಜಪಾನಿನಾದ್ಯಂತ ಅಲ್ಲಲ್ಲಿ ಸುನಾಮಿ ವಾರ್ಷಿಕೋತ್ಸವ ಆಚರಿಸುವ ಸಿದ್ದತೆಗಳು ನಡೆದಿದ್ದು, ಸುನಾಮಿ ಸಂಭವಿಸಿ ಭಾನುವಾರಕ್ಕೆ ಸರಿಯಾಗಿ ವರ್ಷ ತುಂಬಲಿದ್ದು, ಆ ದಿನ ಸ್ಥಳೀಯ ಕಾಲಮಾನ ಮಧ್ಯಾಹ್ನ 2.46ಕ್ಕೆ ದೇಶದಾದ್ಯಂತ ಸುನಾಮಿಗೆ ಬಲಿಯಾದವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಕಾರ್ಯಕ್ರಮಗಳು ನಡೆಯಲಿವೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.ಇನ್ನೊಂದೆಡೆ ಟೋಕಿಯೊ ಕೇಂದ್ರ ಸ್ಥಳದಲ್ಲಿರುವ ನ್ಯಾಶನಲ್ ಥೆಟರ್‌ನಲ್ಲಿ ಸರ್ಕಾರ ಆಯೋಜಿಸಿರುವ ಶ್ರದ್ಧಾಂಜಲಿ ಸಮಾರಂಭದಲ್ಲಿ ಹೃದಯದ ಶಸ್ತ್ರಚಿಕಿತ್ಸೆಗೆ ಒಳಗಾಗಿ ಚೇತರಿಸಿಕೊಳ್ಳುತ್ತಿರುವ ದೊರೆ ಅಕಿಹಿಟೋ ಹಾಗೂ ಪ್ರಧಾನ ಮಂತ್ರಿ ಯೋಶಿಹಿಕೊ ನೊಡಾ ಅವರು ಭಾಗವಹಿಸಿ ಮೃತರಿಗೆ ಶ್ರದ್ಧಾಂಜಲಿ ಸಲ್ಲಿಸಲಿದ್ದಾರೆ.ಬಹುತೇಕ ಎಲೆಕ್ಟ್ರಾನಿಕ್ಸ್ ಉಪಕರಣಗಳ ತಯಾರಿಕೆಯ ಬಹುರಾಷ್ಟ್ರೀಯ ಕಂಪೆನಿಗಳು ನೆಲೆಸಿರುವ ಜಪಾನ್ ವಿಶ್ವದ ಮೂರನೆ ಅತಿದೊಡ್ಡ ಆರ್ಥಿಕ ಶಕ್ತಿಯಾಗಿತ್ತು. ಸುನಾಮಿಯ ಪರಿಣಾಮ ಅದಕ್ಕಾದ ಆರ್ಥಿಕ ನಷ್ಟದ ಪ್ರಮಾಣ ಸುಮಾರು 200ಶತಕೋಟಿ ಡಾಲರ್‌ಗೂ (9,00,000 ಕೋಟಿ) ಅಧಿಕ. ಇದೀಗ ಮೂಲ ಸೌಕರ್ಯಗಳ ಜತೆಗೆ ಮುರಿದು ಬಿದ್ದ ಅರ್ಥವ್ಯವಸ್ಥೆಯನ್ನು ಮರಳಿ ಕಟ್ಟುವಲ್ಲಿ ಜಪಾನಿಯರು ನಿರತರಾಗಿದ್ದಾರೆ.ಈ ಮಧ್ಯೆ ಚೆಲ್ಲಾಪಿಲ್ಲಿಯಾಗಿ ಚೆದುರಿ ವಿರೂಪಗೊಂಡಿರುವ ನಗರಗಳಲ್ಲಿ ತೆರವು ಕಾರ್ಯಾಚರಣೆ ಜತೆಗೆ ಭವಿಷ್ಯದಲ್ಲಿ ಇಂತಹ ದುರಂತಕ್ಕೆ ಸವಾಲೊಡ್ಡುವ ತಂತ್ರಜ್ಞಾನ ಬಳಸಿ ನೂತನ ಕಟ್ಟಡಗಳನ್ನು ನಿರ್ಮಿಸುವಲ್ಲಿ ವಿಜ್ಞಾನಿಗಳು, ತಂತ್ರಜ್ಞರು ತೊಡಗಿಕೊಂಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.