ಶನಿವಾರ, ಜೂನ್ 19, 2021
22 °C

ಬದುಕು ಹೆಣೆವ ನೇಯ್ಗೆ

ಚಂದ್ರಕಾಂತ ಬಾರಕೇರ Updated:

ಅಕ್ಷರ ಗಾತ್ರ : | |

ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಗಜೇಂದ್ರಗಡದ ಪ್ರತಿಯೊಂದು ಗಲ್ಲಿಯಲ್ಲೂ ಅಂದು ಕೈಮಗ್ಗಗಳ ‘ಚಟ್‌- ಪಟ್‌’ ಸದ್ದು.  ಅಸಂಖ್ಯ  ಕುಟುಂಬಗಳ ತುತ್ತಿನ ಚೀಲ ತುಂಬಿಸಿದ್ದ ಹಿರಿಮೆಯಿಂದ ಬೀಗುತ್ತಿದ್ದವು ಈ ಮಗ್ಗಗಳು. ರಾಷ್ಟ್ರಾದ್ಯಂತ ಪ್ರಸಿದ್ಧಿ ಪಡೆದು ಕೈಮಗ್ಗ ನೇಕಾರಿಕೆ ಕ್ಷೇತ್ರವೇ ಹುಬ್ಬೇರಿಸುವಂತಹ ಗುಣಮಟ್ಟದ ಸೀರೆ ನೀಡಿ ಹೆಮ್ಮೆ ಪಡುತ್ತಿದ್ದವು.ಆದರೆ ಈಗ ಪರಿಸ್ಥಿತಿ ಹಿಂದಿನಂತಿಲ್ಲ. 2000ನೇ ಇಸವಿಯವರೆಗೆ 5,968 ಸಂಖ್ಯೆಯಲ್ಲಿದ್ದ ಕೈಮಗ್ಗಗಳು ಈಗ 489ಕ್ಕೆ ಇಳಿದಿವೆ. ದಿನವಿಡೀ ಬೆವರು ಸುರಿಸಿ ನೇಯ್ದರೂ ತುತ್ತಿನ ಚೀಲ ತುಂಬುತ್ತಿಲ್ಲ ಎಂಬ ಕಾರಣಕ್ಕಾಗಿ ಸ್ವಾತಂತ್ರ್ಯ ಪೂರ್ವ ಕಾಲದಿಂದಲೂ ಕೈಮಗ್ಗ ನೇಕಾರಿಕೆಯನ್ನೇ ಬದುಕಿಗೆ ಆಸರೆಯಾಗಿಸಿಕೊಂಡ ಕುಟುಂಬಗಳು ನೇಕಾರಿಕೆಯಿಂದ ಹೊರ ಬಂದು ಪರ್ಯಾಯ ಉದ್ಯೋಗಗಳತ್ತ ಮುಖ ಮಾಡುತ್ತಿವೆ.ಆದರೆ ಏನಂತೆ? ಸೀರೆಯ ಸೊಬಗನ್ನು ಮೀರಿಸುವ ದಿರಿಸು ಮತ್ತೊಂದುಂಟೆ? ಆದ್ದರಿಂದ ಕೈಮಗ್ಗಗಳ ಸಂಖ್ಯೆ ಕ್ಷೀಣಿಸುತ್ತಿದ್ದರೂ ನೀರೆಯರ ಈ ಅಚ್ಚುಮೆಚ್ಚಿನ ಸೀರೆ ಮಾತ್ರ ತನ್ನತನವನ್ನು ಕಾಪಾಡಿಕೊಂಡು ಬಂದಿದೆ. ಇದರ ಫಲವೇ ಗಜೇಂದ್ರಗಡದ ಕೈಮಗ್ಗಗಳು ಇಂದಿಗೂ ಅಲ್ಲಲ್ಲಿ ಸದ್ದು ಮಾಡುತ್ತಿವೆ. ಮಹಿಳೆಯರೇ ಹೆಚ್ಚಾಗಿ ಕಾರ್ಯ ನಿರ್ವಹಿಸುತ್ತಿರುವುದು ಈ ಕೈಮಗ್ಗದ ವಿಶೇಷ. ತೋಪಸೆರಗು, ಮಡಿ, ರೇಷ್ಮೆ , ತೋಡಾಪರಾಸ್‌ ಚಕ್ಸ್‌, ಗೋಮಿ ದಡಿ, ತೋಡಾಪರಾಸ್‌ ಪ್ಲೇನ್‌, ಪರಾಸ್‌ ದಡಿ, ಮೂರಗಾಡಿ ದಡಿ, ಪರಾಸ್‌ ಪ್ಲೇನ್‌, ಗೋಮಿ ಪ್ಲೇನ್‌, ಗೋಮಿ ಚಕ್ಸ್‌... ಹೀಗೆ ಬಗೆಬಗೆ ಸೀರೆಗಳು ಇಲ್ಲಿನ ಮಹಿಳೆಯರ ಕರಕೌಶಲ್ಯಕ್ಕೆ ಸಾಕ್ಷಿಯಾಗಿವೆ.ನೈಸರ್ಗಿಕ ಸಂಚಾರ

ಆಧುನಿಕ ಅಭಿರುಚಿಗೆ ತಕ್ಕಂತೆ ರಾಸಾಯನಿಕ ಬಣ್ಣಗಳ ಬಟ್ಟೆಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿದ್ದರೂ, ಇವುಗಳ ಅಬ್ಬರದ ಮಧ್ಯೆಯೂ ಇಲ್ಲಿನ ನೈಸರ್ಗಿಕ ಬಣ್ಣಗಳ ಸೀರೆಗಳು ಇಲ್ಲಿನ ವಿಶೇಷ.ಇತ್ತೀಚಿನ ವರ್ಷಗಳಲ್ಲಿ ಗ್ರಾಹಕರ ಬೇಡಿಕೆಗಳಿಗೆ ತಕ್ಕಂತೆ ನೈಸರ್ಗಿಕ ಬಣ್ಣ ಬಳಕೆಯ ಶುದ್ಧ ಖಾದಿ ಸೀರೆ, ಬಟ್ಟೆಗಳನ್ನು ತಯಾರಿಸಲಾಗುತ್ತಿದೆ. ಇಲ್ಲಿ ಸಿದ್ಧಗೊಳ್ಳುವ ಸೀರೆ ಹಾಗೂ ಬಟ್ಟೆಗಳಿಗೆ ಕೇವಲ ರಾಜ್ಯ ಮಾತ್ರವಲ್ಲದೆ ದೆಹಲಿ, ಮಹಾರಾಷ್ಟ್ರ, ಕೇರಳ, ಆಂಧ್ರ, ತಮಿಳುನಾಡು ರಾಜ್ಯಗಳಲ್ಲಿ ಭಾರಿ ಜನಮನ್ನಣೆ ಗಳಿಸಿವೆ.‘ತಮಗೆ ಇಂಥದ್ದೇ ಸೀರೆ ಬೇಕೆಂದು ಬೇಡಿಕೆ ಇಟ್ಟು ಹಲವು ತಿಂಗಳ ಮುಂಚೆಯೇ ಇಲ್ಲಿ ಬುಕಿಂಗ್‌ ಮಾಡುವ ಗ್ರಾಹಕರ ಸಂಖ್ಯೆ ಹೆಚ್ಚುತ್ತಿದೆ’ ಎನ್ನುತ್ತಾರೆ ನೇಕಾರರಾದ ವಿಶ್ವನಾಥ ಕೆಂಚಿ. ಸುಧಾ ಸಂಕನೂರ.  ‘ಇಲ್ಲಿನ ಕೈಮಗ್ಗಗಳು ಮಂಕಾಗಿದ್ದರೂ ಸಿದ್ಧಗೊಳ್ಳುವ ಬಟ್ಟೆ, ಸೀರೆಗಳಿಗಿನ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ’ ಎನ್ನುತ್ತಾರೆ ರೇಷ್ಮೆ ಸೀರೆ ತಯಾರಿಕೆ ನೇಕಾರರಾದ ರವೀಂದ್ರ ಕರಾಬದಿನ್ನಿ, ಕಮಲವ್ವ ಕರಬದಿನ್ನಿ.ಸೀರೆ ಮತ್ತು ಬಟ್ಟೆ ತಯಾರಿಸುವ ಕೈಮಗ್ಗಗಳಲ್ಲಿ ಖಣ ತಯಾರಿಸಲು ಸಾಧ್ಯವಿಲ್ಲ. ಸೀರೆ ತಯಾರಿಸುವ ಮಗ್ಗಗಳಿಗೆ ಹೋಲಿಸಿದರೆ ಖಣ ತಯಾರಿಸುವ ಮಗ್ಗಗಳ ಸಂಖ್ಯೆ ವಿರಳ. ಸದ್ಯ ಗಜೇಂದ್ರಗಡದಲ್ಲಿ ಬೆರಳೆಣಿಕೆಯಷ್ಟು ಖಣ ತಯಾರಿಕೆ ಕೈಮಗ್ಗಗಳಿವೆ. ಇಲ್ಲಿಯೂ ಸೀರೆಗಳ ಹಾಗೆಯೇ ವಿವಿಧ ಬಗೆಯ ಖಣಗಳನ್ನು ತಯಾರಿಸಲಾಗುತ್ತದೆ. ರೇಷ್ಮೆ ಹಾಗೂ ತಾಗೆ ಖಣಗಳನ್ನು ತಯಾರಿಸಲಾಗುತ್ತದೆ.

ಸಮಸ್ಯೆ ಏನು?ಇಳಕಲ್‌ ಮಾದರಿಯ ಸೀರೆಯನ್ನು ನಾಚಿಸುವ ಮಟ್ಟದಲ್ಲಿ ಸಿದ್ಧಗೊಳ್ಳುವ ಇಲ್ಲಿನ ಸೀರೆ ಹಾಗೂ ಖಣಗಳಿಗೆ ನೇಕಾರರು ನಿಖರ ಮುದ್ರೆ (ಲೇಬಲ್‌ ಮತ್ತು ಬ್ರ್ಯಾಂಡ್‌) ನೀಡಲು ಮುಂದಾಗದಿರುವುದರಿಂದ ಇದು ತನ್ನತನವನ್ನು ಗುರುತಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅದೇ ರೀತಿ ರೈತ ಹಾಗೂ ನೇಕಾರರ ಸರ್ವಾಂಗೀಣ ಅಭಿವೃದ್ಧಿ ಹೆಸರಿನಲ್ಲಿ ಪ್ರಚಾರ ಪಡೆದುಕೊಳ್ಳುವ ಸರ್ಕಾರಗಳು ನೇಕಾರಿಕೆ ಉಳಿವಿಗೆ ಪೂರಕವಾದ ಯೋಜನೆಗಳನ್ನು ಜಾರಿಗೊಳಿಸಿಲ್ಲ. ಜಾರಿಗೊಳಿಸಿದ್ದರೂ ಅವುಗಳ ಅನುಷ್ಠಾನ ಅಷ್ಟಕಷ್ಟೇ.‘2013ರಲ್ಲಿ ಸರ್ಕಾರ ಜಾರಿಗೊಳಿಸಿರುವ ಕೈಮಗ್ಗ ನೇಕಾರರ ಸಾಲಮನ್ನಾ ಯೋಜನೆ ಇಲ್ಲಿನ ಕೈಮಗ್ಗ ನೇಕಾರರಿಗೆ ಅನ್ವಯವಾಗಿಲ್ಲ. ಹೀಗಾಗಿ ನೇಕಾರರು ಸಾಲದ ಸುಳಿಗೆ ಸಿಲುಕಿ ತತ್ತರಿಸಿ ಹೋಗಿದ್ದಾರೆ’ ಎನ್ನುತ್ತಾರೆ ಹಿರಿಯ ನೇಕಾರರಾದ ಕೇಮಣ್ಣ ಮಿಟಗಲ್‌. ಶಿವಪ್ಪ ಗಂಟಿ.ಶತಮಾನಗಳ ಹಿರಿಮೆಯ ಗಜೇಂದ್ರಗಡ ಕೈಮಗ್ಗ ನೇಕಾರಿಕೆ ಕ್ಷೇತ್ರ ಸದೃಢವಾಗಿ ನಿಲ್ಲದಿರಲು ಇಲ್ಲಿನ ನೇಕಾರರಲ್ಲಿನ ಸಂಘಟನೆಯ ಕೊರತೆಯೂ ಇನ್ನೊಂದು ಕಾರಣ. ತಲೆಮಾರುಗಳಿಂದಲೂ ನೇಕಾರಿಕೆ ನಡೆಸುತ್ತಿರುವ ನೇಕಾರರು ಇಂದಿಗೂ ಅಸಂಘಟಿತರೇ. ಸಂಘಟಿತ ಹೋರಾಟಗಳು ನಡೆಯದಿರುವುದರಿಂದ ಕೈಮಗ್ಗ ನೇಕಾರಿಕೆ ಸಮಸ್ಯೆಗಳು ಹೊರ ಜಗತ್ತಿಗೆ ತಿಳಿಯದೆ ಗೌಣವಾಗಿ ಉಳಿದಿವೆ.ಸರ್ಕಾರಗಳ ಗಮನ ಸೆಳೆಯಲು ಸಾಧ್ಯವಾಗಿಲ್ಲ. ಕೈಮಗ್ಗ ನೇಕಾರ ಸಮೂಹವನ್ನೇ ಗುರಿಯಾಗಿಸಿಕೊಂಡ ಕೆಲ ಆರ್ಥಿಕ ಪ್ರಬಲರು ಕೈಮಗ್ಗಗಳನ್ನು ಸ್ಥಾಪಿಸಿ ನೇಕಾರ ಕಾರ್ಮಿಕರನ್ನು ಬಳಸಿಕೊಂಡು ಬಟ್ಟೆ, ಸೀರೆ, ಖಣ ತಯಾರಿಸಿ ರಾಷ್ಟ್ರ ಮಟ್ಟದ ಮಾರುಕಟ್ಟೆಗಳಲ್ಲಿ ಮಾರಾಟ ಮಾಡಿ ಶ್ರೀಮಂತರಾಗುತ್ತಿದ್ದಾರೆ. ಅಲ್ಪ ಸಂಭಾವನೆಗೆ ಹಗಲಿರುಳು ಶ್ರಮವಹಿಸಿ ದುಡಿಯುವ ನೇಕಾರ ಕಾರ್ಮಿಕರು ಮಾತ್ರ ಕಾರ್ಮಿಕರಾಗಿಯೇ ಉಳಿದಿದ್ದಾರೆ.ಕ್ಷೀಣಿಸಿದ ಸಂಖ್ಯೆ

ಈ ಹಿಂದೆ ಶೇ 96ರಷ್ಟು ಕುಟುಂಬಗಳು ನೇಕಾರಿಕೆಯನ್ನು ಪ್ರಮುಖ ಕಸುಬನ್ನಾಗಿ ಆಯ್ಕೆ ಮಾಡಿಕೊಂಡಿದ್ದರು. ಸದ್ಯ ಶೇ 65 ಕುಟುಂಬಗಳು ನೇಕಾರಿಕೆ ಕೊಂಡಿಯಿಂದ ಕಳಚಿಕೊಂಡಿವೆ. ಮತ್ತೆ ಕೆಲ ಕುಟುಂಬಗಳು ಪ್ರಮುಖ ಕಸುಬಿನ ಬದಲಾಗಿ ಉಪ ಕಸಬನ್ನಾಗಿ ಪರಿವರ್ತಿಸಿಕೊಂಡಿವೆ. ಈ ಎಲ್ಲ ಏರಿಳಿತಗಳ ಮಧ್ಯೆಯೂ ತಲೆಮಾರುಗಳ ಹಿಂದಿನ ಗುಣಮಟ್ಟವನ್ನೇ ಇಲ್ಲಿನ ನೇಕಾರಿಕೆ ಕ್ಷೇತ್ರ ಉಳಿಸಿಕೊಂಡಿರುವುದು ನೇಕಾರಿಕೆಯ ಬಗ್ಗೆ ನೇಕಾರರಿಗೆ ಇರುವ ಗೌರವ, ಮಮತೆ, ಕಳಕಳಿ, ಕಾಳಜಿಯನ್ನು ಸಾಕ್ಷೀಕರಿಸುತ್ತಿದೆ.‘ವಿದ್ಯುತ್‌ ಮಗ್ಗಗಳಲ್ಲಿ ಸಿದ್ಧಗೊಳ್ಳುವ ಕಲಬೆರಕೆ ಬಟ್ಟೆಗಳ ತಯಾರಿಕೆ ಸ್ಥಗಿತಗೊಂಡರೆ ಕೈಮಗ್ಗ ನೇಕಾರಿಕೆಗೆ ಬೆಲೆ ಬರುತ್ತದೆ. ವಿದ್ಯುತ್‌ ಮಗ್ಗಗಳಲ್ಲಿನ ಯಾಂತ್ರೀಕರಣದಿಂದಾಗಿ ಕೈಮಗ್ಗ ಕ್ಷೇತ್ರ ಬಡವಾಗುತ್ತಿದೆ. ಕೈಮಗ್ಗಗಳಲ್ಲಿ ಸಿದ್ಧಗೊಳ್ಳುವ ನೇಕಾರಿಕೆ ಉತ್ಪನ್ನಗಳು ಕೈಮಗ್ಗಗಳಲ್ಲಿಯೇ ತಯಾರಾಗಬೇಕು. ಕೈಮಗ್ಗ ನೇಕಾರಿಕೆ ಉಳಿಯಬೇಕು, ಬೆಳೆಯಬೇಕು ಎಂಬ ಕಾರಣಕ್ಕಾಗಿ ಕೈಮಗ್ಗ ನೇಕಾರಿಕೆ ಜೀವಂತವಿರುವ ಕ್ಷೇತ್ರಗಳಲ್ಲಿ ಸತ್ಯಾಗ್ರಹ ಯಾತ್ರೆಯನ್ನೂ ಕೈಗೊಳ್ಳಲಾಗಿದೆ’ ಎನ್ನುತ್ತಾರೆ ಕೈಮಗ್ಗ ಮತ್ತು ಚರಕ ದೇಶಿ ಸಂಸ್ಥೆಯ ಸಂಸ್ಥಾಪಕ  ಪ್ರಸನ್ನ ಹೆಗ್ಗೋಡು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.