ಬುಧವಾರ, ಜನವರಿ 22, 2020
24 °C
ಸುತ್ತಾಣ

ಬನ್ನೇರುಘಟ್ಟ: ಭಕ್ತಿ ಪುಳಕದ ಬೆಟ್ಟ

–ಸ್ವಾಮಿ ಕೆ.ವಿ. Updated:

ಅಕ್ಷರ ಗಾತ್ರ : | |

ಬನ್ನೇರುಘಟ್ಟ: ಭಕ್ತಿ ಪುಳಕದ ಬೆಟ್ಟ

ಣ್ಣಳತೆಗೆ ಸಿಗುವಷ್ಟು ಬಂಡೆ. ಬಂಡೆಯ ಮೇಲೆ ಒಡಮೂಡಿದ ಏಕಶಿಲಾಬೆಟ್ಟ, ಬೆಟ್ಟದ ಮೇಲೆ ಕಾಣುವುದೇ ಬನ್ನೇರುಘಟ್ಟ ರಾಷ್ಟೀಯ ಉದ್ಯಾನ–  ಇದು ಬನ್ನೇರುಘಟ್ಟದ ವಹಿನಿಗಿರಿ ಬೆಟ್ಟದ ವಿಹಂಗಮ ನೋಟ. ಏದುಸಿರು ಬಿಡುತ್ತ ನಡೆವವರು,  ಕೈ ಕೈ ಹಿಡಿದು ಸಾಗುವ ನವ ಜೋಡಿಗಳು, ಯುವ ಪ್ರೇಮಿಗಳು, ಉತ್ಸಾಹವನ್ನೇ ಬಂಡವಾಳವಾಗಿಸಿಕೊಂಡ ಹುಡುಗರ ದಂಡು, ಹರಟೆ ಹೊಡೆಯುವ ಸ್ನೇಹಿತರು, ಆಯಾಸಗೊಂಡು ಅರ್ಧದಲ್ಲೇ ಕೂತ ದಡೂತಿಗಳು, ಬೆಟ್ಟದಿಂದ ಇಳಿಯುವವರ ಅನುಭವ... ಇವೆಲ್ಲವೂ ಅಲ್ಲಿಗೆ ಹೋದವರಿಗೆ ಸಂತೋಷ ಕೊಡುವ ರಸನಿಮಿಷಗಳು.ಅರ್ಧಗಂಟೆಯಲ್ಲಿ ಹತ್ತಬಹುದಾದ ಬೆಟ್ಟ ಇದು. ಹತ್ತುವ ಮೊದಲು ಚಂಪಕಧಾಮ ಸ್ವಾಮಿ ದೇವರ ದರ್ಶನ ಮಾಡಬೇಕು.  ಚೋಳರು ಕಟ್ಟಿಸಿರುವ ಸಾವಿರ ವರ್ಷದ ಹಿಂದಿನ ದೇವಾಲಯ ಇದು. ವಿಜಯನಗರ ಅರಸರ ಕಾಲದಲ್ಲಿ ಪುನರ್‌ನಿರ್ಮಾಣ ಮಾಡಿರುವುದಕ್ಕೆ ದೇವಾಲಯದಲ್ಲಿ ಪುರಾವೆಗಳಿವೆ. ಅಲ್ಲದೆ ಈ ಸ್ಥಳಕ್ಕೆ ಪುರಂದರದಾಸರು ಭೇಟಿ ನೀಡಿ ಸ್ವಾಮಿಯ ಕುರಿತು ಎರಡು ಕೀರ್ತನೆಗಳನ್ನು ಹಾಡಿದ್ದಾರಂತೆ.ಸಂಪಂಗಿ ಎಂಬ ಹೂ ಇಲ್ಲಿ ಸಿಗುತ್ತಿದ್ದರಿಂದ ಈ ದೇವರಿಗೆ ಸಂಪಂಗಿರಾಮ ಎಂದು ಕರೆಯುತ್ತಿದ್ದರಂತೆ. 35 ಕಿ.ಮೀ. ದೂರದಲ್ಲಿ ತಮಿಳುನಾಡು ಇರುವುದರಿಂದ ತಮಿಳು ಸಂಸ್ಕೃತಿಯ ಪ್ರಭಾವದಿಂದ ಈ ಸ್ಥಳವನ್ನು ಹಿಂದೆ ವನ್ನಿಯರ್ ಘಟ್ಟಂ ಎಂದು ಕರೆಯುತ್ತಿದ್ದರು. ಕಾಲಕ್ರಮೇಣ ಅದು ಬನ್ನೇರುಘಟ್ಟವಾಯಿತು.

ಮದುವೆ ಭಾಗ್ಯಕ್ಕಾಗಿ ಕಲ್ಲು ಜೋಡಿಸುವ ಮೂಲಕ  ತಮ್ಮ ಕೋರಿಕೆಯನ್ನು  ಸಲ್ಲಿಸುತ್ತಾರೆ. ಮಕ್ಕಳಾಗದವರು ಮರಗಳಿಗೆ ತೊಟ್ಟಿಲುಗಳನ್ನು ಕಟ್ಟಿ ತಮ್ಮ ಇಷ್ಟಾರ್ಥ ಹೇಳಿಕೊಳ್ಳುತ್ತಾರೆ. ವಹಿನಗಿರಿ ಬೆಟ್ಟ ಉಬ್ಬು ತಗ್ಗಾಗಿದ್ದು, ಸುತ್ತಲೂ ಮೆಟ್ಟಿಲುಗಳಿರುವುದರಿಂದ ಹತ್ತುವುದು ಸುಲಭ.

ಸರಳುಗಳಿರುವುದರಿಂದ ಬೀಳುವ ಭಯವಿಲ್ಲ. ಬೆಟ್ಟದ ಮೇಲೆ ಲಕ್ಷ್ಮೀ ನರಸಿಂಹ ಸ್ವಾಮಿಯನ್ನು ನೋಡಿ, ಕಣ್ತುಂಬಿಕೊಳ್ಳಬಹುದು. ವಾಹನಗಳ ಹೊಗೆ, ಗುಂಯ್ ಗುಡುವ ಶಬ್ದ, ಟ್ರಾಫಿಕ್ ಸಂಕಟ, ಬದುಕಿನ ಜಂಜಾಟದಿಂದ ಬೇಸತ್ತ ಜನರಿಗೆ  ಒಂದು ದಿನದ ಪ್ರವಾಸಕ್ಕೆ ತೆರಳಲು ವಹಿನಗಿರಿ ಬೆಟ್ಟ ಪ್ರಶಸ್ತ ಸ್ಥಳ.

ಧಾರ್ಮಿಕ ಚಟುವಟಿಕೆಗಳ ಮೂಲಕ ಸೆಳೆಯುವ ದೇಗುಲಗಳೂ ಇಲ್ಲಿ ಉಂಟು. ಬೆಟ್ಟ ಹತ್ತಿದವರು ನೋಡಲೇಬೇಕಾದ ಮತ್ತೊಂದು ಸ್ಥಳ ಇಲ್ಲಿದೆ. ಅದೇ ಸುವರ್ಣಮುಖಿ ಕೊಳ. ಬೆಟ್ಟದ ತುದಿಯಿಂದ 2 ಕಿ.ಮಿ. ದಾರಿಯಲ್ಲಿ ಕಾಲ್ನಡಿಗೆಯಲ್ಲಿ ಹೋಗಬೇಕು.

ದಾರಿಯುದ್ದಕ್ಕೂ ನೆರಳು ಬಿಸಿಲಿನಾಟ, ಗುಬ್ಬಚ್ಚಿಗಳ ಹಾರಾಟ, ಹಕ್ಕಿ ಪಕ್ಷಿಗಳ ಕೂಗಾಟ, ಬಿದಿರಿನಿಂದ ಕಂಗೊಳಿಸುವ ಹಸಿರು ವನ, ನೀಲಗಿರಿ, ಬಿದಿರುಗಳ ಸಾಲು, ಶ್ರೀಗಂಧದ ಸುವಾಸನೆ, ಭಕ್ತರ ಕೋರಿಕೆಯ ಪ್ರತೀಕವಾಗಿ ಬಂಡೆಯುದ್ದಕ್ಕೂ ಕಾಣುವ ರಾಶಿ ರಾಶಿ  ಕಲ್ಲುಗಳ ಜೋಡಣೆ, ಬಿಸಿಲ ಬೇಗೆಯಲ್ಲೂ ಬೀಸುವ ತಂಗಾಳಿ.

ಸ್ವಚ್ಛಂದ ಪರಿಸರದ ಸ್ವಾದವನ್ನು ಸವಿಯುತ್ತ ಹೊರಟರೆ ಸಿಗುವುದು ಸುವರ್ಣಮುಖಿ ಕ್ಷೇತ್ರ. ಜನಮೇ ಜಯರಾಜರಾಜನಿಗೆ ಕುಷ್ಠ ಬಂದಿತ್ತು. ಒಂದು ದಿನ ಕಾಡು ಪ್ರಾಣಿಗಳ ಬೇಟೆಗಾಗಿ ಬೇಟೆನಾಯಿಯೊಂದಿಗೆ ಈ ಸ್ಥಳಕ್ಕೆ ಬಂದರು.

ಬೇಟೆನಾಯಿ ಬಿಸಿಲ ಬೇಗೆಯನ್ನು ತಾಳಲಾರದೇ ಒಂದು ಗುಂಡಿಯಲ್ಲಿ ಒದ್ದಾಡಿ ಬಂದು ರಾಜರ ಮುಂದೆ ಮೈ ಕೊದರಿದಾಗ ಆ ನೀರು ರಾಜನ ಮೈಮೇಲೆ ಬಿದ್ದ ತಕ್ಷಣ ಚರ್ಮ ಕಾಂತಿಯುತವಾಯಿತು. ಇದರಿಂದ ಆಶ್ಚರ್ಯಗೊಂಡ ರಾಜರು ಆ ಸ್ಥಳವನ್ನು ಪರಿಶೀಲಿಸಿ ಇಲ್ಲಿ ಸುವರ್ಣಮುಖಿ ಕೊಳವನ್ನು ನಿರ್ಮಿಸಿದ್ದಾರೆ ಎಂಬುದು ಪ್ರತೀತಿ.

ಚರ್ಮವ್ಯಾಧಿ ಇರುವವರು ಸುವರ್ಣಮುಖಿ ಕೊಳದಲ್ಲಿ ಸ್ನಾನ ಮಾಡಿದರೆ ಚರ್ಮವ್ಯಾದಿ ಕಾಯಿಲೆಗಳು ಹೋಗುತ್ತವೆ ಎಂಬ ಬಲವಾದ ನಂಬಿಕೆಯಿದೆ. ಬೆಟ್ಟದ ಮೇಲೆ ನಿಂತು ನೋಡಿದರೆ ಬೆಂಕಿಪೊಟ್ಟಣದಂತೆ ಕಾಣುವ ಉದ್ಯಾನ ನಗರಿಯ ಕಟ್ಟಡಗಳು, ಮರಗಳಲ್ಲಿ ತೂಗಾಡುವ ತೊಟ್ಟಿಲು, ಸುತ್ತಲೂ ಕಾಣುವ ಹಸಿರು ಬಿದಿರು, ಕಾಡಿನ ಹಸಿರು ಸೌಂದರ್ಯ ಮನಸ್ಸಿಗೆ ಮುದನೀಡುತ್ತವೆ.

ಪ್ರಯಾಣ ಮಾರ್ಗ

ಬನ್ನೇರುಘಟ್ಟಕ್ಕೆ ಬೆಂಗಳೂರಿನ ಮೆಜೆಸ್ಟಿಕ್‌ನಿಂದ 26 ಕಿ.ಮೀ. ಕಲಾಸಿಪಾಳ್ಯದಿಂದ 22 ಕಿ.ಮೀ ಕ್ರಮಿಸಬೇಕು. 60ರಿಂದ 90 ನಿಮಿಷದ ಅವಧಿಯ ಪ್ರಯಾಣ. ಮಜೆಸ್ಟಿಕ್‌ನಿಂದ ಬಿಎಂಟಿಸಿ ಬಸ್ 365, ಕಲಾಸಿಪಾಳ್ಯದಿಂದ 366, ಶಿವಾಜಿನಗರದಿಂದ 368, ಕೆಂಗೇರಿಯಿಂದ 372 ಮತ್ತು ಎಂ.ಜಿ. ರಸ್ತೆಯಿಂದ ಜಿ–4 ಬಸ್‌ಗಳು ಲಭ್ಯ.  ಬನ್ನೇರುಘಟ್ಟದಿಂದ ಒಂದು ಕಿ.ಮೀ. ದೂರದಲ್ಲೇ  ರಾಷ್ಟ್ರೀಯ ಉದ್ಯಾನವಿದೆ. ಅಲ್ಲಿಗೂ ಹೋಗಬಹುದು.

ದೇವಸ್ಥಾನದಲ್ಲಿ ಪ್ರತಿದಿನ ಬೆಳಿಗ್ಗೆ 5ರಿಂದ ರಾತ್ರಿ 8ರತನಕ ಪೂಜೆ ನಡೆಯುತ್ತದೆ. ಬೆಳಿಗ್ಗೆ 8ರಿಂದ ಸಂಜೆ 5ರವರೆವಿಗೂ ಬೆಟ್ಟ ಹತ್ತಬಹುದು. ವಾರಾಂತ್ಯ, ಸರ್ಕಾರಿ ರಜೆ, ಅಮಾವಾಸ್ಯೆ, ಹುಣ್ಣಿಮೆ ದಿನಗಳಲ್ಲಿ ಪ್ರವಾಸಿಗರು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಪ್ರವಾಸಿಗರು ಮತ್ತು ಭಕ್ತರಿಗೆ ಬೆಟ್ಟದ ಮೇಲೆ ಕುಡಿಯಲು ನೀರು, ತಂಪುಪಾನೀಯ, ತಿನ್ನಲು ಕಡ್ಲೆಪುರಿ, ಚುರ್ ಮುರಿ, ಬೊಂಡ, ಬಜ್ಜಿ, ಸಿಗುತ್ತವೆ.

ಆದರೆ ಯಾವುದೇ ಹೋಟೆಲ್ ಇಲ್ಲ. ತಂಗಲು ವಸತಿ ಗೃಹಗಳೂ ಇಲ್ಲ.  ಪ್ರತಿ ವರ್ಷ ಮಾರ್ಚ್ ತಿಂಗಳ ಕಾಮನ ಹುಣ್ಣಿಮೆ ನಂತರದ 5ನೇ ದಿನ, ಅನುರಾಧ ನಕ್ಷತ್ರದಲ್ಲಿ ಬ್ರಹ್ಮರಥೋತ್ಸವ ನಡೆಯುತ್ತದೆ. ಆ ದಿನ ಅನ್ಯ ರಾಜ್ಯಗಳಿಂದಲೂ ಸಾವಿರಾರು ಭಕ್ತರು ಆಗಮಿಸುತ್ತಾರೆ. ಮುಂದಿನ ದಿನಗಳಲ್ಲಿ ದಾಸೋಹ ಭವನ, ವಸತಿಗೃಹ, ಉದ್ಯಾನ ನಿರ್ಮಿಸುವ ಯೋಜನೆಯಿದೆಯಂತೆ.

ಪ್ರತಿಕ್ರಿಯಿಸಿ (+)