ಗುರುವಾರ , ಮೇ 13, 2021
18 °C

ಬಯಲು ಸೀಮೆಯಲ್ಲಿ ಕಾಫಿ

ಗಣಂಗೂರು ನಂಜೇಗೌಡ Updated:

ಅಕ್ಷರ ಗಾತ್ರ : | |

ಬಯಲು ಸೀಮೆಯಲ್ಲಿ ಕಾಫಿ

ವಾರ್ಷಿಕ 2000 ಮಿ.ಮೀ. ಮಳೆ ಹಾಗೂ ಶೇ.80ಕ್ಕಿಂತ ಹೆಚ್ಚು ಆದ್ರತೆ ಇರುವ ಪ್ರದೇಶಗಳಲ್ಲಿ ಬೆಳೆಯುವ ಕಾಫಿ, ಸಾಂಬಾರ್ ಬೆಳೆಗಳನ್ನು ವಾರ್ಷಿಕ 800 ಮಿ.ಮೀ. ಮಳೆ ಬೀಳುವ, ಶೇ.30ರಿಂದ 40ರಷ್ಟು ಆರ್ದ್ರತೆ ಇರುವ ಬಯಲು ಸೀಮೆಯಲ್ಲಿ ಬೆಳೆಯುವ ವಿಶಿಷ್ಟ ಪ್ರಯತ್ನವನ್ನು ಶ್ರೀರಂಗಪಟ್ಟಣ ತಾಲ್ಲೂಕಿನ ಪಾಲಹಳ್ಳಿಯ ರೈತರೊಬ್ಬರು ಮಾಡಿದ್ದಾರೆ.ಇವರ ಹೆಸರು ಶ್ರೀನಿವಾಸ್. ಅವರು ಏಲಕ್ಕಿ, ಕಾಳು ಮೆಣಸು, ಚಕ್ಕೆ, ಲವಂಗ, ಅರಿಸಿನ, ಜಾಯಿಕಾಯಿ ಮತ್ತಿತರ ಹಲವು  ಅಪರೂಪದ ಬೆಳೆಗಳನ್ನು ಸಾವಯವ ಪದ್ದತಿಯಲ್ಲಿ ಬೆಳೆಯುತ್ತಿದ್ದಾರೆ. ಎರಡು ವರ್ಷಗಳಿಂದ ಈ ವಿಶಿಷ್ಟ ಪ್ರಯೋಗ  ಮಾಡುತ್ತಿರುವ ಅವರು ನೆಟ್ಟಿರುವ ಎಲ್ಲ ಬಗೆಯ ಗಿಡಗಳು ಹುಲುಸಾಗಿ ಬೆಳೆಯುತ್ತವೆ. ಸಾಂಬಾರ್ ಬೆಳೆಗಳ ಜತೆಗೆ ಕಾಫಿ, ಅಡಿಕೆ, ತೆಂಗು, ಪನ್ನೇರಳೆ ಹಾಗೂ ಇತರ ವಾಣಿಜ್ಯ ಬೆಳೆ ಬೆಳೆಯುತ್ತಿದ್ದಾರೆ. ಅವರ ಎರಡೂವರೆ ಎಕರೆ ತೋಟದಲ್ಲಿ ಕಿತ್ತಳೆ, ಮೂಸಂಬಿ, ಚೆರ‌್ರಿ, ಲಿಚಿ, ಬಟರ್ ಫ್ರೂಟ್ ಮತ್ತಿತರ ಹಣ್ಣಿನ ಗಿಡಗಳೂ ಇವೆ. ಕಾಫಿ  ಅವರ ತೋಟದ ಪ್ರಧಾನ ಬೆಳೆ. ಸಪೋಟ, ಮಾವು, ದಾಳಿಂಬೆ, ಹಲಸು, ಕಾಡು ಹಲಸು, ನಿಂಬೆ, ಲಕ್ನೊ ಸೀಬೆ, ಬೆಟ್ಟದ ನೆಲ್ಲಿ, ಕರಿಬೇವು, ವೀಳ್ಯದೆಲೆ ಬೆಳೆಗಳೂ ಇವೆ.ಶೇ.90ಕ್ಕಿಂತ ಹೆಚ್ಚು ಆರ್ದ್ರತೆಯಲ್ಲಿ ಹಾಗೂ ತಂಪು ವಾತಾವರಣದಲ್ಲಿ ಮಾತ್ರ ಬೆಳೆಯುವ ಸೇಬು, ಮರಸೇಬಿನ ಗಿಡಗಳೂ ಶ್ರೀನಿವಾಸ್ ಅವರ ತೋಟದಲ್ಲಿವೆ.    ತೋಟದಲ್ಲಿ 2700 ಕಾಫಿ (ರೊಬಸ್ಟಾ, ಕಟವಾಯಿ, ಕಾವೇರಿ), 40 ಏಲಕ್ಕಿ, 20 ಕಿತ್ತಳೆ ಹಾಗೂ ಅಂಗಾಂಶ ಬಾಳೆ ಗಿಡಗಳಿವೆ. ಎರಡೂವರೆ ಎಕರೆ ಪ್ರದೇಶದಲ್ಲಿ ಇಷ್ಟೆಲ್ಲಾ ಬೆಳೆಗಳಿವೆ.ರಸಗೊಬ್ಬರ, ಕ್ರಿಮಿನಾಶಕ ಬಳಸದೆ ಜೀವಾಣು (ಜೀವಾಮೃತ) ಗೊಬ್ಬರವನ್ನು ಗಿಡಗಳಿಗೆ ಹಾಕುತ್ತಾರೆ. ತೇವಾಂಶ ಮತ್ತು ಫಲವತ್ತತೆ ರಕ್ಷಣೆಗೆ ತೋಟದಲ್ಲಿ ಬೆಳೆದ ಕಳೆ ಗಿಡಗಳನ್ನು ಕಿತ್ತು ಹೊದಿಕೆ ಹಾಕುತ್ತಾರೆ. ಇಡೀ ತೋಟ ರೋಗ ಮುಕ್ತವಾಗಿದೆ. ಶೌಚಾಲಯಗಳ ತ್ಯಾಜ್ಯವನ್ನೂ ಶ್ರೀನಿವಾಸ್ ಕಳೆದೆರಡು ವರ್ಷಗಳಿಂದ ಗೊಬ್ಬರವಾಗಿ ಬಳಸುತ್ತಿದ್ದಾರೆ. ಮಾವು, ತೆಂಗು, ಸೀಬೆ, ಸ್ಟಾರ್ ಫ್ರೂಟ್, ಅಂಜೂರ, ಕಾಳು ಮೆಣಸು ಫಲಕ್ಕೆ ಬಂದಿವೆ.`ಐದು ವರ್ಷಗಳ ಹಿಂದೆ ಇಲ್ಲಿ ಬತ್ತ, ಕಬ್ಬು ಬೆಳೆಯುತ್ತಿದ್ದೆ. ಕಬ್ಬಿನ ದರ ಕುಸಿದು ನಷ್ಟವಾದ ಮೇಲೆ ಕಾಫಿ ಬೆಳೆಯಲು ನಿರ್ಧರಿಸಿದೆ. ಅಂತರ ಬೆಳೆಯಾಗಿ ಅಡಿಕೆ, ಕಾಳು ಮೆಣಸು ಹಾಕಿದೆ. ಎರಡು ವರ್ಷಗಳಿಂದ ಹಣ್ಣಿನ ಗಿಡಗಳು, ಸಾಂಬಾರ್ ಸಸಿಗಳನ್ನು ಬೆಳೆಸುತ್ತಿದ್ದೇನೆ. ಸ್ಪ್ರಿಂಕ್ಲರ್ ಮೂಲಕ ನೀರು ಹಾಯಿಸುತ್ತೇನೆ. ಮೆಣಸು, ಅಡಿಕೆ, ತೆಂಗು, ಮಾವು, ನಿಂಬೆ, ಹಲಸುಗಳು ಫಲ ಕೊಡುತ್ತಿವೆ. ಬಾಳೆ ಹಾಗೂ ತೋಟದ ಸುತ್ತ ಹಾಕಿದ್ದ ಸಿಲ್ವರ್ ಮರಗಳಿಂದ ಸಾಕಷ್ಟು ಹಣ ಗಳಿಸಿದ್ದೆಎನ್ನುತ್ತಾರೆ ಶ್ರೀನಿವಾಸ್. ಅವರ ಫೋನ್ ನಂಬರ್:99454 19236.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.