ಶನಿವಾರ, ಮೇ 15, 2021
25 °C

ಬರಕ್ಕೆ ಸವಾಲೊಡ್ಡಿದ ಪಳ್ಳಿಕೆರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಬರಕ್ಕೆ ಜಿಲ್ಲೆ ನಲುಗಿದೆ. ಬರಪೀಡಿತ ಪಟ್ಟಿಗೆ ಸೇರಿದ 123 ತಾಲ್ಲೂಕುಗಳಲ್ಲಿ ನಂಜನಗೂಡು ತಾಲ್ಲೂಕು ಸಹ ಒಂದು. ಹನಿ ನೀರೂ ಇಲ್ಲದ ಊರಿನ ದರ್ಶನ ಈಗಾಗಲೇ ಆಗಿದೆ. ಇನ್ನೂ ಕೆಲ ದಿನ ವರ್ಷ`ಧಾರೆ~ಯಾಗದಿದ್ದರೆ ಬದುಕು ಮೂರಾಬಟ್ಟೆಯಾಗುವುದರಲ್ಲಿ ಸಂಶಯವೇ ಇಲ್ಲ.ಆದರೆ, ಈ ಊರಲ್ಲಿ ಅಂತಹ ಸಮಸ್ಯೆ ಇಲ್ಲ. ಕೆರೆಯಲ್ಲಿ ನೀರಿದೆ. ಜನ-ಜಾನುವಾರುಗಳು ಕುಡಿದು ಜೀವಹಿಡಿದುಕೊಂಡಿವೆ. ಅದೊಂದೇ ಅಲ್ಲ. ಬಿರು ಬೇಸಿಗೆಯಲ್ಲೂ ಕೆರೆಯ ಅಂಗಳದೊಳಗೆ ಭರಪೂರ ತರಕಾರಿ ಬೆಳೆದುನಿಂತಿದೆ.ನಂಜನಗೂಡು ತಾಲ್ಲೂಕಿನ ಹೆಗ್ಗಡಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಹರತಲೆ ಗ್ರಾಮದ ಪಳ್ಳಿಕೆರೆ ಮತ್ತು ಕ್ಯಾತನಹಳ್ಳಿ ಕೆರೆ ಇಲ್ಲಿನ ಜನರಿಗೆ ಜೀವಕ್ಕೆ ಆಸರೆಯಾಗಿದೆ. ಕಬಿನಿ ಬಲದಂಡೆ ಕಾಲುವೆಯಿಂದ ಈ ಕೆರೆಗೆ ನೀರು ಹರಿದುಬರುತ್ತಿದೆ.ಮಳೆಯ ಅಭಾವ ಮತ್ತು ಕಾಲುವೆ ದುರಸ್ತಿ ಕಾರ್ಯ ನಡೆಯುತ್ತಿರುವುದರಿಂದ ಈ ಬಾರಿ ಕಾಲುವೆಗೆ ನೀರು ಬಿಟ್ಟಿಲ್ಲ. ಆದರೆ, ಕಳೆದ ಬಾರಿ ಬಂದ ನೀರು ಹಾಗೂ ಮಳೆಗಾಲದಲ್ಲಿ ತುಂಬಿದ ನೀರು ಇನ್ನೂ ಹಾಗೆಯೇ ಇದೆ.ಇದರಿಂದ ಹರತಲೆ ಗ್ರಾಮದ ಜನತೆ ಗ್ರಾಮದಲ್ಲಿನ ಪಳ್ಳಿಕೆರೆ, ಕ್ಯಾತನಹಳ್ಳಿ ಮತ್ತು ದೊಡ್ಡಕೆರೆಯ ಅಂಗಳವನ್ನು ತರಕಾರಿ ಬೆಳೆಯಲು ಬಳಸಿಕೊಳ್ಳುತ್ತಿದ್ದಾರೆ. ಮೆಂತೆ, ದಂಟು, ಕಿಲಕೀರೆ, ಪಾಲಕ್, ಮೂಲಂಗಿ, ಕೊತ್ತಂಬರಿ, ಮುಂತಾದ ಸೊಪ್ಪು ಬೆಳೆಯುತ್ತಿದ್ದಾರೆ. ಕಡಿಮೆ ಎಂದರೂ ವಾರಕ್ಕೊಮ್ಮೆ ತರಕಾರಿಗಳು ಮಾರುಕಟ್ಟೆ ಸೇರಿ ಬರದಲ್ಲೂ ಬಡವರ ಬದುಕು ಉಲ್ಲಸಿತಗೊಳಿಸಿದೆ.ಕಳೆದ ಬಾರಿ ಈ ಕೆರೆಯ ಅಂಗಳವನ್ನು ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಮಣ್ಣು ತೆಗೆದು ಸಮತಟ್ಟು ಮಾಡಲಾಗಿತ್ತು. ಆದರೆ, ಈ ಬಾರಿ ಖಾತ್ರಿ ಯೋಜನೆಯ ಕೆಲಸಕ್ಕೆ ಮುಂದಾಗದ ಜನತೆ ತರಕಾರಿ ಬೆಳೆಯಲು ಸಮಯ ಮೀಸಲಿಟ್ಟಿದ್ದಾರೆ. ಒಂದು ರೀತಿಯಲ್ಲಿ ಖಾತ್ರಿಗಿಂತ ತರಕಾರಿ ಕೃಷಿ ಜನರ ಆರ್ಥಿಕ ಮೂಲವಾಗಿ ಪರಿಣಮಿಸಿದೆ.ಈ ಗ್ರಾಮದಲ್ಲಿ ಮೂರು ಕೆರೆಗಳಿವೆ. ದೊಡ್ಡಕೆರೆಯನ್ನು ಮೀನುಗಾರಿಕೆ ಇಲಾಖೆಯು ಮೀನು ಸಾಕಾಣಿಕೆಗೆ ಅನುವು ಮಾಡಿಕೊಟ್ಟಿದೆ. ಗ್ರಾಮದ ಯುವ ಸಂಘಗಳಿಗೆ ಉದ್ಯೋಗ ಕಲ್ಪಿಸಿದೆ. ಅದೂ ಕೂಡ ಯುವಕರ ಬೇಸಿಗೆಯ `ಆರ್ಥಿಕ~ ಬರ ನೀಗಿದೆ.`ಮಳೆಗಾಲದಲ್ಲಿ ಕೃಷಿ, ಬೇಸಿಗೆ ಕಾಲದಲ್ಲಿ ತರಕಾರಿ ಬೆಳೆಯುತ್ತ ಒಂದಲ್ಲ ಒಂದು ಕೆಲಸವನ್ನು ಮಾಡುತ್ತಿರುತ್ತಾರೆ. ಹಾಗಾಗಿ ಕೂಲಿ ಹಾಗೂ ವಲಸೆ ಹೋಗುವ ಪ್ರಶ್ನೆಯೇ ಇಲ್ಲ~ ಎನ್ನುತ್ತಾರೆ ತಾಲ್ಲೂಕು ಭೀಮ ಸೇನಾ ಬಳಗದ ಅಧ್ಯಕ್ಷ ಕೆಂಪಣ್ಣ.ಹೆಚ್ಚುತ್ತಿರುವ ಬಿಸಿಲಿನ ತಾಪದಿಂದ ಕೆರೆಯಲ್ಲಿನ ನೀರು ಖಾಲಿಯಾಗುತ್ತಿದೆ. ಮಳೆ ಬಾರದಿದ್ದಲ್ಲಿ ಕೆರೆ ಸಂಪೂರ್ಣ ಬತ್ತಿ ಹೋಗಬಹುದು ಎಂಬ ಆತಂಕದಲ್ಲಿ ಇದ್ದಾರೆ ಗ್ರಾಮದ ಜನತೆ. 1500 ಜನಸಂಖ್ಯೆ ಇರುವ ಈ ಗ್ರಾಮದಲ್ಲಿನ ಕೆಲವು ಕುಟುಂಬಗಳು ಕೃಷಿಗೆ 3 ಕೆರೆಗಳ ನೀರನ್ನು ಬಳಸಿಕೊಂಡು ಜೀವನ ನಿರ್ವಹಣೆ ಮಾಡುತ್ತಿವೆ.`ಕಳೆದ ಹತ್ತಾರು ವರ್ಷ ತರಕಾರಿ ಸೊಪ್ಪು ಬೆಳೆಯಲು ಬಳಸಿಕೊಂಡು ಕೂಲಿ ಕಾರ್ಮಿಕರು ಆರ್ಥಿಕವಾಗಿ ಸಬಲರಾಗುವಲ್ಲಿ ಇಲ್ಲಿನ ಕೆರೆ ಮಹತ್ವದ ಪಾತ್ರ ವಹಿಸಿದೆ. ಪಳ್ಳಿಕೆರೆ ಹೂಳೆತ್ತಿದರೆ ಸಾಕಷ್ಟು ನೀರು ಸಂಗ್ರಹವಾಗುತ್ತದೆ. ಸ್ಥಳೀಯ ಪ್ರತಿನಿಧಿಗಳು ಇತ್ತ ಗಮನ ಹರಿಸಬೇಕೆಂಬುದು~ ಎಂಬುದು ನಂದಿನಿ ಬಸವರಾಜ್ ಅವರ ಆಗ್ರಹ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.