ಶನಿವಾರ, ಜನವರಿ 25, 2020
27 °C
ಜನರಿಗೆ ನೀರು ಪೂರೈಸಲು ಜಿಲ್ಲಾಡಳಿತ ಸತತ ಪ್ರಯತ್ನ

ಬರಡಾಗುತ್ತಿದೆ ಅಂತರ್ಜಲ ಪಾತ್ರೆ...!

ಪ್ರಜಾವಾಣಿ ವಾರ್ತೆ/ ಕೆ.ನರಸಿಂಹಮೂರ್ತಿ Updated:

ಅಕ್ಷರ ಗಾತ್ರ : | |

ಕೋಲಾರ: ಕೇಂದ್ರದ ಅಧಿಕಾರಿಗಳು ಜಿಲ್ಲೆಯ ಬರ ಪರಿಸ್ಥಿತಿ ಅಧ್ಯಯನ ಮಾಡಿ ವಾಪಸು ತೆರಳಿದ್ದಾರೆ. ಇದೇ ವೇಳೆ, ವರ್ಷದಿಂದ ವರ್ಷಕ್ಕೆ ಅಂತ­ರ್ಜಲದ ಮೇಲಿನ ಅವಲಂಬನೆ ಜಿಲ್ಲೆ­ಯಲ್ಲಿ ಮಿತಿ ಮೀರುತ್ತಿರುವ ಪರಿ­ಣಾಮ­ವಾಗಿ ವಿಫಲವಾಗುತ್ತಿರುವ ಕೊಳವೆ­ಬಾವಿಗಳ ಸಂಖ್ಯೆಯೂ ಹೆಚ್ಚು­ತ್ತಿದೆ. ಆದರೂ ಕೊಳವೆಬಾವಿಯನ್ನೇ ಅವಲಂಬಿಸಬೇಕಾದ ಸನ್ನಿವೇಶ ಮುಂದು­ವರಿದಿದೆ. ‘ಅಂತರ್ಜಲ ಬರ’ ಆತಂಕಕಾರಿ ಮಟ್ಟದಲ್ಲಿ ತೀವ್ರಗೊಳ್ಳು­ತ್ತಿದೆ.2013–14ನೇ ಸಾಲಿನಲ್ಲಿ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ವಿವಿಧ ಯೋಜನೆಗಳ ಅಡಿಯಲ್ಲಿ 13­18 ಕೊಳವೆ ಬಾವಿ ಕೊರೆಯ­ಲಾಗಿದೆ. ಆದರೆ ಅವುಗಳ ಪೈಕಿ 402 (ಸುಮಾ­ರು ಮೂರನೇ ಒಂದು ಭಾಗ­ದಷ್ಟು) ಕೊಳವೆಬಾವಿಗಳು ವಿಫಲ­ವಾಗಿವೆ.ಮುಂದಿನ ಜನವರಿಯಿಂದ ಮೇ ಕೊನೆವರೆಗೆ ಜಿಲ್ಲೆಯಲ್ಲಿ ನೀರಿನ ಸಮಸ್ಯೆ­ಯನ್ನು ನಿರ್ವಹಿಸುವ ಸಲು­ವಾಗಿ ಜಿಲ್ಲಾಡಳಿತ ಮತ್ತೆ 352 ಕೊಳವೆಬಾವಿ ಕೊರೆಯುವ ತುರ್ತು ಕ್ರಿಯಾ ಯೋಜನೆ ಸಿದ್ಧಪಡಿ­ಸಿದೆ. ಅವುಗಳ ಪೈಕಿ ಎಷ್ಟು ಸಫಲ­ವಾಗಲಿವೆ ಎಂಬ ಲೆಕ್ಕಾಚಾರವೂ ನಡೆದಿದೆ.ಕೋಲಾರ ತಾಲ್ಲೂಕಿನಲ್ಲಿ 81, ಮಾಲೂರು ತಾಲ್ಲೂಕಿನಲ್ಲಿ 60, ಬಂಗಾರಪೇಟೆ ತಾಲ್ಲೂಕಿನಲ್ಲಿ 86, ಮುಳ­ಬಾಗಲು ತಾಲ್ಲೂಕಿನಲ್ಲಿ 65 ಮತ್ತು ಶ್ರೀನಿವಾಸಪುರ ತಾಲ್ಲೂಕಿನಲ್ಲಿ 60 ಕೊಳವೆಬಾವಿ ಕೊರೆಯಲು ಜಿಲ್ಲಾ­­ಡಳಿತ ನಿರ್ಧರಿಸಿದೆ. ಅದಕ್ಕಾಗಿ ₨ 6.79 ಕೋಟಿ ಬೇಕಾಗಿದೆ. ಕೊರೆದ ಕೊಳ­ವೆ­ಬಾವಿಗಳಿಗೆ ಪಂಪ್, ಮೋಟರ್ ಅಳವಡಿಸಲು ₨ 18.64 ಕೋಟಿ ಬೇಕಾಗಿದೆ.ಟ್ಯಾಂಕರ್ ನೀರು: ಹೊಸ ಕೊಳವೆ­ಬಾವಿ ಕೊರೆಯುವ ಜೊತೆಗೆ ಜಿಲ್ಲೆಯ 1186 ಹಳ್ಳಿಗಳಿಗೆ ಟ್ಯಾಂಕರ್ ನೀರು ಪೂರೈಸುವ ಅಂದಾಜನ್ನು ಜಿಲ್ಲಾಡಳಿತ ಮಾಡಿದೆ. ಖಾಸಗಿ ಕೊಳವೆ­ಬಾವಿ­ಗಳಿಂದ ಪ್ರತಿ ಟ್ರಿಪ್‌ಗೆ ₨ 350ರಂತೆ ನೀರನ್ನು ಖರೀದಿಸಿ ಪೂರೈಸುವ ವ್ಯವಸ್ಥೆ ಇದು.

ಕೋಲಾರ ತಾಲ್ಲೂಕಿನ 227, ಮಾಲೂರು ತಾಲ್ಲೂಕಿನ 283, ಬಂಗಾರಪೇಟೆ ತಾಲ್ಲೂಕಿನ 270, ಮುಳಬಾಗಲು ತಾಲ್ಲೂಕಿನ 189 ಮತ್ತು ಶ್ರೀನಿವಾಸಪುರ ತಾಲ್ಲೂಕಿನ 217ಹಳ್ಳಿಗಳಲ್ಲಿ ಟ್ಯಾಂಕರ್ ಮೂಲ­ಕವೇ ನೀರನ್ನು ಪೂರೈಸಬೇಕಾಗಿದೆ.2412 ಟ್ರಿಪ್: ಐದು ತಿಂಗಳ ಅವಧಿಯಲ್ಲಿ ಪ್ರತಿ ದಿನವೂ ಈ ಎಲ್ಲ ಹಳ್ಳಿಗಳಿಗೆ ಒಟ್ಟಾರೆ 2421 ಟ್ರಿಪ್ ನೀರನ್ನು ಪೂರೈಸಬೇಕಾಗಬಹುದು. ಅದಕ್ಕಾಗಿ ₨ 12.71 ಕೋಟಿ ಬೇಕಾ­ಗುತ್ತದೆ. ಒಟ್ಟಾರೆ ಗ್ರಾಮೀಣ ಪ್ರದೇಶ­ದಲ್ಲಿ ಕುಡಿಯುವ ನೀರು ಪೂರೈಸಲು 38.14 ಕೋಟಿ ಬೇಕಾಗುತ್ತದೆ ಎಂಬು­ದು ಜಿಲ್ಲಾಡಳಿತದ ಸದ್ಯದ ಅಂದಾಜು.ಕೋಲಾರದಲ್ಲಿ ಸಮಸ್ಯೆ: ಜಿಲ್ಲೆಯ ಎರಡು ನಗರಸಭೆ ಮತ್ತು ಪುರಸಭೆಗಳ ಪೈಕಿ ಕೋಲಾರ ನಗರಸಭೆಯನ್ನು ಹೊರತುಪಡಿಸಿದರೆ ಮಿಕ್ಕೆಲ್ಲ ಪಟ್ಟಣ ಪ್ರದೇಶಗಳಲ್ಲಿ ಕೊಳವೆಬಾವಿ ಮೂಲಕವೇ ನೀರನ್ನು ಪೂರೈಸಲಾಗು­ತ್ತಿದೆ.  ಕೋಲಾರ ನಗರದಲ್ಲಿ ಮಾತ್ರ ಕೊಳವೆಬಾವಿಗಳ ಮೂಲಕವಷ್ಟೇ ಅಲ್ಲದೆ, ಖಾಸಗಿ ಟ್ಯಾಂಕರುಗಳ ಮೂಲಕವೂ ನೀರನ್ನು ಪೂರೈಸುವ ಸನ್ನಿವೇಶವೇ ಮುಂದುವರಿದಿದೆ. ನಗರ­ಸಭೆಯ 35 ವಾರ್ಡ್‌ಗಳ ಪೈಕಿ 32 ರಲ್ಲಿ 52 ಟ್ಯಾಂಕರ್ ನೀರನ್ನು ಪೂರೈಸ­ಲಾಗುತ್ತಿದೆ. ಪ್ರತಿ ದಿನವೂ 260 ಟ್ರಿಪ್‌ಗಳಲ್ಲಿ ನೀರು ಪೂರೈಕೆಯಾಗು­ತ್ತಿದ್ದರೂ ಜನರ ಬಾಯಾರಿಕೆ ಮಾತ್ರ ತಣಿದಿಲ್ಲ. ‘ನೀರು ಬರಲಿಲ್ಲ’ ಎಂಬುದು ನಿತ್ಯದ ದೂರಾಗಿದೆ.ಜಿಲ್ಲೆಯ ಪಟ್ಟಣ ಮತ್ತು ನಗರ ಪ್ರದೇಶಗಳ 166 ವಾರ್ಡ್‌ಗಳಲ್ಲಿ 1083 ಕೊಳವೆಬಾವಿಗಳಿವೆ. ಅವುಗಳ ಪೈಕಿ 771 ಮಾತ್ರ ನೀರು ಕೊಡುತ್ತಿವೆ. ಉಳಿದ 312 ಸ್ಥಗಿತಗೊಂಡಿವೆ.112 ಹೊಸ ಬಾವಿ: ನಗರ ಮತ್ತು ಪುರಸಭೆಗಳ ವ್ಯಾಪ್ತಿಯಲ್ಲಿ 11 ಹೊಸ ಕೊಳವೆಬಾವಿಗಳನ್ನು ಮುಂದಿನ ಐದು ತಿಂಗಳ ಅವಧಿಯಲ್ಲಿ ಕೊರೆಯಲು ಜಿಲ್ಲಾಡಳಿತ ನಿರ್ಧರಿಸಿದೆ. ಅಲ್ಲದೆ, ಟ್ಯಾಂಕರ್ ಮೂಲಕವೂ ನೀರು ಪೂರೈಸಲು ಸಜ್ಜಾಗುತ್ತಿದೆ. ಟ್ಯಾಂಕರ್ ನೀರಿಗೆಂದು ₨ 13.83 ಕೋಟಿ ಸೇರಿ ಒಟ್ಟಾರೆ ₨ 21.49 ಕೋಟಿ ಬೇಕಾಗ­ಬಹುದು ಎಂಬುದು ಅಂದಾಜು.ನೀರು ಸಿಗುತ್ತದೆಯೇ?: ಇಷ್ಟೆಲ್ಲ ಕೊಳವೆಬಾವಿ ಆಧಾರಿತ ಲೆಕ್ಕಾಚಾರ­ಗಳು ನಡೆಯುತ್ತಿರುವ ಹೊತ್ತಿನಲ್ಲೆ ಎರಡು ಪ್ರಮುಖ ಪ್ರಶ್ನೆಗಳು ಎದ್ದಿವೆ. ನಿರೀಕ್ಷಿಸಿದಷ್ಟು ನೀರು ಹೊಸ ಕೊಳವೆ­ಬಾವಿಗಳಲ್ಲಿ ದೊರಕುತ್ತದೆಯೇ ಎಂಬುದು ಜಿಲ್ಲಾಡಳಿತದ ಮುಂದಿ­ರುವ ಪ್ರಶ್ನೆ. ಕೊಳವೆಬಾವಿಯೋ ಟ್ಯಾಂಕರ್ ನೀರೋ ಏನಾದರೂ ಸರಿ, ಒಟ್ಟಿನಲ್ಲಿ ನಮ್ಮ ನೀರಿನ ಸಮಸ್ಯೆ ಬಗೆ ಹರಿಯುತ್ತದೆಯೇ ಎಂಬುದು ಜನರ ಮುಂದಿರುವ ಪ್ರಶ್ನೆ.

ಜಿಲ್ಲೆಯಲ್ಲಿ ಕೊಳವೆಬಾವಿ ಸ್ಥಿತಿ– ಗತಿ

ತಾಲ್ಲೂಕು                   ಸಫಲ     ವಿಫಲ    ಒಟ್ಟು

ಕೋಲಾರ                   277      116      393

ಮಾಲೂರು                 188        84      242

ಬಂಗಾರಪೇಟೆ             175        60      235

ಮುಳಬಾಗಲು               86        35      121

ಶ್ರೀನಿವಾಸಪುರ           220      107      327

ಒಟ್ಟು                       916       402   1318

 

ಪ್ರತಿಕ್ರಿಯಿಸಿ (+)