ಸೋಮವಾರ, ಏಪ್ರಿಲ್ 12, 2021
25 °C

ಬರಪೀಡಿತ ಜಿಲ್ಲೆ ಎಂದು ಘೋಷಿಸಲು ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಮೈಸೂರು ಜಿಲ್ಲೆಯನ್ನು ಬರಪೀಡಿತ ಜಿಲ್ಲೆ ಎಂದು ಘೋಷಿಸಬೇಕು. ಗ್ರಾಮೀಣ ಭಾಗದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವುದನ್ನು ತಡೆಗಟ್ಟಬೇಕು. ಮೋಡ ಬಿತ್ತನೆ ಮಾಡುವಂತೆ ಒತ್ತಾಯಿಸಬೇಕು. ಗೋ ಶಾಲೆ ತೆರೆಯಬೇಕು. ಸಮರ್ಪಕವಾಗಿ ಕುಡಿಯುವ ನೀರನ್ನು ಪೂರೈಕೆ ಮಾಡಬೇಕು.ಇವು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ನಡೆದ ಸಾಮಾನ್ಯ ಸಭೆಯಲ್ಲಿ ಕೇಳಿ ಬಂದ ಮಾತುಗಳು. ಸುನೀತಾ ವೀರಪ್ಪಗೌಡ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಿರೋಧ ಪಕ್ಷದ ನಾಯಕಿ ಮಂಜುಳಾರಾಜ್ ಅವರು `ಮೈಸೂರನ್ನು ಬರ ಪೀಡಿತ ಜಿಲ್ಲೆ~ ಎಂದು ಘೋಷಿಸುವಂತೆ ಸರ್ಕಾರವನ್ನು ಒತ್ತಾಯಿಸಬೇಕು ಎಂದು ನಿಲುವಳಿ ಮಂಡಿಸಿದರು.`ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ತೀವ್ರ ತತ್ವಾರ ಉಂಟಾಗಿದೆ. ದನ ಕರುಗಳಿಗೆ ಮೇವಿಲ್ಲ. ಆರು ತಿಂಗಳಿಂದ ಸಾಮಾನ್ಯ ಸಭೆ ನಡೆದಿಲ್ಲ. ಒಂದರ್ಥದಲ್ಲಿ ಜಿಲ್ಲಾ ಪಂಚಾಯಿತಿಗೇ ಬರ ಬಂದಿದೆ. ಕ್ಷೇತ್ರಗಳಿಗೆ ಭೇಟಿ ನೀಡಿ ಜನರಿಗೆ ಮುಖ ತೋರಿಸಲು ಆಗುತ್ತಿಲ್ಲ. ಆಡಳಿತ ವ್ಯವಸ್ಥೆ ಸಂಪೂರ್ಣ ಕುಸಿದು ಹೋಗಿದೆ~ ಎಂದು ಆಕ್ರೋಶ ವ್ಯಕ್ತಪಡಿಸಿದರು.ಇದಕ್ಕೆ ದನಿಗೂಡಿಸಿದ ಸದಸ್ಯ ರಾಜಣ್ಣ, `ಜಿಲ್ಲೆಯಲ್ಲಿ ಬರದ ಛಾಯೆ ಎದ್ದು ಕಾಣುತ್ತಿದೆ. ಮುಂಗಾರು ಮಳೆ ವಿಫಲವಾಗಿದ್ದು, ಶೇ 80ರಷ್ಟು ಬೆಳೆ ನಷ್ಟವಾಗಿದೆ. ರೈತರು ಗುಳೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಎಲ್ಲ ರೈತರಿಗೂ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ, ರಸಗೊಬ್ಬರ, ಕೃಷಿ ಪರಿಕರಗಳನ್ನು ವಿತರಿಸಬೇಕು~ ಎಂದರು.ಕೆ.ಮಾರುತಿ ಮಾತನಾಡಿ, `ಮುಂಗಾರು ಮಳೆ ಕೈ ಕೊಟ್ಟಿದ್ದರಿಂದ ಬರದ ಛಾಯೆ ಎದ್ದು ಕಾಣುತ್ತಿದೆ. ಆದ್ದರಿಂದ ಗೋಶಾಲೆ ಆರಂಭಿಸಬೇಕು. ಅಲ್ಪಾವಧಿ ಸಾಲಗಳನ್ನು ದೀರ್ಘಾವಧಿ ಸಾಲಗಳನ್ನಾಗಿ ಪರಿವರ್ತಿಸಬೇಕು. ರೈತರ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು. ಉದ್ಯೋಗ ಖಾತ್ರಿ ಹಣವನ್ನು ಬಳಸಿಕೊಂಡು ಬರ ಪರಿಹಾರ ಕಾಮಗಾರಿ ಕೈಗೊಳ್ಳಬೇಕು~ ಎಂದು ಸಲಹೆ ನೀಡಿದರು.ನಂದಿನಿ ಚಂದ್ರಶೇಖರ್, ತಮ್ಮಣ್ಣೇಗೌಡ, ಚಿಕ್ಕವೀರ ನಾಯಕ್, ಮಾದಪ್ಪ ಸಹಮತ ವ್ಯಕ್ತಪಡಿಸಿದರು. `ಸುವರ್ಣ ಭೂಮಿ~ ಯೋಜನೆಗೆ ಅರ್ಜಿ ಸಲ್ಲಿಸುವ ದಿನಾಂಕವನ್ನು ವಿಸ್ತರಿಸಬೇಕು. ಬೋರ್‌ವೆಲ್ ಕೊರೆಯಿಸಲು ಸದಸ್ಯರಿಗೂ ಅಧಿಕಾರ ನೀಡಬೇಕು~ ಎಂದು ಕೆಂಪಣ್ಣ ಒತ್ತಾಯಿಸಿದರು.ಮಾದಪ್ಪ ಮಾತನಾಡಿ, `ಚಿಲ್ಲರೆ ಅಂಗಡಿಗಳಲ್ಲಿ ಎಗ್ಗಿಲ್ಲದೆ ಮದ್ಯ ಮಾರಾಟ ಮಾಡಲಾಗುತ್ತಿದೆ. ನಗರ ಪ್ರದೇಶಕ್ಕಿಂತ ಹಳ್ಳಿಗಳಲ್ಲೇ ಮದ್ಯ ಮಾರಾಟ ಹೆಚ್ಚಾಗಿದೆ. ಇದರಿಂದಾಗಿ ಮಹಿಳೆಯರು, ಮಕ್ಕಳು ಮುಜುಗರ ಪಡುವಂತಾಗಿದೆ. ತಿಂಗಳಿಂದ ತಿಂಗಳಿಗೆ ಕುಡುಕರ ಸಂಖ್ಯೆ ಹೆಚ್ಚಾಗುತ್ತಿದೆ. ಕುಡುಕರ ಭಾಷೆ ಕುಡುಕರಿಗಲ್ಲದೆ ಬೇರೆಯವರಿಗೆ ಅರ್ಥವಾಗುವುದಿಲ್ಲ ಎಂಬಂತೆ, ಗಂಡಂದಿರ ಕುಡಿಯುವ ಚಟ ಬಿಡಿಸಲು ಹೆಂಡತಿಯರೂ ಕುಡಿಯುವಂತಾದರೆ ಆಶ್ಚರ್ಯವಿಲ್ಲ. ಆದ್ದರಿಂದ ಜಿಲ್ಲಾಡಳಿತ ಈ ಬಗ್ಗೆ ಎಚ್ಚೆತ್ತುಕೊಂಡು ಸೂಕ್ತ ಕ್ರಮಕೈಗೊಳ್ಳಬೇಕು~ ಎಂದರು.ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಮಹಿಳಾ ಸದಸ್ಯರು `ನಾವೇಕೆ ಕುಡಿಯಬೇಕು. ಕುಡಿಸುವ ಚಟ ಬಿಡಿಸುವುದು ನಮಗೆ ಗೊತ್ತು~ ಎಂದು ಹೇಳಿದರು.ಜಿಲ್ಲಾಧಿಕಾರಿ ಪಿ.ಎಸ್.ವಸ್ತ್ರದ್ ಮಾತನಾಡಿ, `ಇಲವಾಲ, ದೊಡ್ಡಕೌಲಂದೆ ಹಾಗೂ ಮಹದೇವಪುರದಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ಹುಣಸೂರು, ಎಚ್. ಡಿ.ಕೋಟೆಗಳನ್ನು ಹೊರತು ಪಡಿಸಿ ಉಳಿದ ಐದು ತಾಲ್ಲೂಕು ಗಳನ್ನು ಬರ ಪೀಡಿತ ತಾಲ್ಲೂಕು ಎಂದು ಈಗಾಗಲೇ ಘೋಷಿಸ ಲಾಗಿದೆ. ಈ ಬಗ್ಗೆ ಸರ್ಕಾರಕ್ಕೆ ಪತ್ರ ಬರೆಯಲಾಗುವುದು. ಮುಂಗಾರು ವಿಫಲವಾಗಿ ಸಂಭವಿಸಿರುವ ಬೆಳೆ ನಷ್ಟದ ವರದಿಯನ್ನೂ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಕೆರೆಗಳ ಹೂಳೆತ್ತುವುದು, ಒತ್ತುವರಿ ತೆರವುಗೊಳಿಸುವ ಬಗ್ಗೆ ಕ್ರಮಕೈಗೊಳ್ಳಲಾಗುವುದು~ ಎಂದು ಭರವಸೆ ನೀಡಿದರು.`ಗ್ರಾಮೀಣ ಪ್ರದೇಶ ಹಾಗೂ ಹಾಡಿಗಳಲ್ಲಿ ಕುಡಿತದ ಸಮಸ್ಯೆ ವಿಪರೀತವಾಗಿದೆ. ಸಂಜೆ ಏಳು ಗಂಟೆಯಾದರೆ ಅಧಿಕಾರಿಗಳೇ ಅಲ್ಲಿಗೆ ಹೋಗಲು ಹಿಂಜರಿಯುವಂತಹ ವಾತಾವರಣವಿದೆ. ಈ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗುವುದು. ಅಕ್ರಮ ಮದ್ಯ ಮಾರಾಟ ತಡೆಗಟ್ಟುವಂತೆ ಅಬಕಾರಿ ಅಧಿಕಾರಿಗಳಿಗೂ ಸೂಚಿಸಲಾಗುವುದು. ಮಹಿಳೆ ಯರು ಹಾಗೂ ಸ್ತ್ರೀಶಕ್ತಿ ಸಂಘಟೆನಗಳನ್ನು ಈ ಬಗ್ಗೆ ಜಾಗೃತಿ ವಹಿಸಬೇಕು~ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಡಾ.ಶಿವರಾಂ ಹಾಜರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.