ಸೋಮವಾರ, ಮೇ 17, 2021
24 °C

ಬರವಿದ್ದರೂ ನವದೆಹಲಿಗೆ ನಿರಾತಂಕ ಪ್ರವಾಸ

ರಾಹುಲ ಬೆಳಗಲಿ/ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಬಳ್ಳಾಪುರ: ಬರ ಅಧ್ಯಯನಕ್ಕಾಗಿ ಇತ್ತೀಚೆಗೆ ಜಿಲ್ಲೆಗೆ ಭೇಟಿ ನೀಡಿದ್ದ ಕೆಪಿಸಿಸಿ ಅಧ್ಯಕ್ಷ ಡಾ. ಜಿ.ಪರಮೇಶ್ವರ ಅವರಿಗೆ ಕಾಂಗ್ರೆಸ್ ಶಾಸಕ ಎನ್.ಸಂಪಂಗಿ ವಿದೇಶಕ್ಕೆ ಹೋಗಿರುವ ಬಗ್ಗೆ ಪ್ರತಿಕ್ರಿಯೆ ಕೇಳಿದಾಗ, `ಶಾಸಕರು ಬೇಕಾದರೆ ವಿದೇಶಕ್ಕೆ ಹೋಗಲಿ, ಮುಖ್ಯಮಂತ್ರಿ ಹೋಗಬಾರದು~ ಎಂದು ಹೇಳಿದ್ದರು.ಬರ ಸಂದರ್ಭದಲ್ಲಿ ವಿದೇಶಕ್ಕೆ ಹೋಗುವುದು ಬೇಡವೆಂದು ನಿರ್ಧರಿಸಿದ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ, ತಮ್ಮ ಪ್ರವಾಸ ರದ್ದುಪಡಿಸಿದ್ದರು. ವಿದೇಶ ಪ್ರವಾಸದಲ್ಲಿದ್ದ ಜಿಲ್ಲಾ ಉಸ್ತುವಾರಿ ಸಚಿವ ಎ.ನಾರಾಯಣಸ್ವಾಮಿ ಅವರನ್ನು ವಾಪಸು ಕರೆಸಿಕೊಂಡರು.ರಾಜ್ಯಮಟ್ಟದಲ್ಲಿ ಶಾಸಕರು ಮತ್ತು ಅಧಿಕಾರಿಗಳ ವಿದೇಶ ಪ್ರವಾಸವು ರದ್ದಾಗಿದೆ. ಆದರೆ ಕೆಪಿಸಿಸಿ ಅಧ್ಯಕ್ಷ ಡಾ. ಜಿ.ಪರಮೇಶ್ವರ ಮತ್ತು ಶಾಸಕ ಎನ್.ಎಚ್.ಶಿವಶಂಕರ ರೆಡ್ಡಿ ಅವರ ಬೆಂಬಲವಿದೆ ಎಂದು ಹೇಳಿಕೊಂಡು ಗೌರಿಬಿದನೂರು ಪುರಸಭೆಯ ಆಡಳಿತಾರೂಢ ಕಾಂಗ್ರೆಸ್‌ನ ಕೆಲ ಸದಸ್ಯರು ಒಂದು ವಾರ ಕಾಲ ನವದೆಹಲಿ ಪ್ರವಾಸ ಕೈಗೊಳ್ಳುತ್ತಿದ್ದಾರೆ.ವಿರೋಧಪಕ್ಷದ ಸದಸ್ಯರು ಮತ್ತು ಸಾರ್ವಜನಿಕರಿಂದ ಕಟು ಟೀಕೆ ವ್ಯಕ್ತವಾಗುತ್ತಿದ್ದರೂ ಕಾಂಗ್ರೆಸ್‌ನ ಸದಸ್ಯರು ಮಾತ್ರ ಪ್ರವಾಸಕ್ಕೆ ಸಿದ್ಧತೆಯಲ್ಲಿ ಮಗ್ನರಾಗಿದ್ದಾರೆ.ಪುರಸಭೆ ಅಧ್ಯಕ್ಷರು, ಉಪಾಧ್ಯಕ್ಷರು ಸೇರಿದಂತೆ ಇತರ ಸದಸ್ಯರು ಮೇ 6ರಂದು ರೈಲು ಮೂಲಕ ನವದೆಹಲಿಗೆ ಪ್ರಯಾಣ ಕೈಗೊಂಡು, ಮೇ 13ರಂದು ವಿಮಾನ ಮೂಲಕ ಗೌರಿಬಿದನೂರಿಗೆ ಹಿಂತಿರುಗಲಿದ್ದಾರೆ.ಒಳಚರಂಡಿ ಕಾಮಗಾರಿಗಾಗಿ ಅನುದಾನ ಬಿಡುಗಡೆಗೊಳಿಸುವಂತೆ ಕೋರಿ ಮನವಿಪತ್ರ ಸಲ್ಲಿಸಲು 12ಕ್ಕೂ ಹೆಚ್ಚು ಸದಸ್ಯರು ಪ್ರಯಾಣಿಸಲಿದ್ದು, ನವದೆಹಲಿ ಸೇರಿದಂತೆ ಇತರ ಪ್ರವಾಸಿ ಸ್ಥಳಗಳನ್ನು ವೀಕ್ಷಿಸಲಿದ್ದಾರೆ. ಮನವಿಪತ್ರ ಸಲ್ಲಿಕೆ ಕಾರ್ಯ ಕೆಲವೇ ನಿಮಿಷದ್ದಾಗಿದ್ದರೂ ಸದಸ್ಯರು ಒಂದು ವಾರದ ಪ್ರವಾಸಕ್ಕೆ ತೀರ್ಮಾನಿಸಿದ್ದಾರೆ.`ಗೌರಿಬಿದನೂರಿನಲ್ಲಿ ಒಳಚರಂಡಿ ಕಾಮಗಾರಿ ಕೈಗೊಳ್ಳಬೇಕಿದ್ದು, ಇದರ ಹಿನ್ನೆಲೆಯಲ್ಲಿ ಕೇಂದ್ರ ಸಚಿವರನ್ನು ಭೇಟಿಯಾಗಲು ನವದೆಹಲಿಗೆ ಪ್ರಯಾಣಿಸುತ್ತಿದ್ದೇವೆ. ಪ್ರವಾಸಕ್ಕೆ ಸುಮಾರು ಮೂರು ಲಕ್ಷ ರೂಪಾಯಿ ವೆಚ್ಚವಾಗಲಿದ್ದು, ಪೌರಾಡಳಿತ ಇಲಾಖೆಯಿಂದ ಅನುಮತಿ ಪಡೆದಿದ್ದೇವೆ. ಕೇಂದ್ರ ಸರ್ಕಾರದ ಯುಐಡಿ ಮತ್ತು ಎಸ್‌ಎಸ್‌ಎಂಟಿ ಯೋಜನೆಯಡಿ 35 ಕೋಟಿ ರೂಪಾಯಿ ಅನುದಾನ ಲಭ್ಯವಾದರೆ, ಒಳಚರಂಡಿ ಕಾಮಗಾರಿಗೆ ಅನುಕೂಲವಾಗುತ್ತದೆ.ಅಭಿವೃದ್ಧಿ ಕಾರ್ಯಕ್ಕಾಗಿ ನವದೆಹಲಿಗೆ ಪ್ರಯಾಣಿಸಿದರೆ, ತಪ್ಪೇನು?~ ಎಂದು ಪುರಸಭೆಯ ಕಾಂಗ್ರೆಸ್ ಸದಸ್ಯರು ಪ್ರಶ್ನಿಸುತ್ತಾರೆ. ನವದೆಹಲಿ ಪ್ರವಾಸ ವಿರೋಧಿಸಿ ಜೆಡಿಎಸ್ ಮತ್ತು ಬಿಜೆಪಿ ಸದಸ್ಯರು ಪ್ರತಿಭಟನೆ ನಡೆಸಿದರೂ ತಮ್ಮ ನಿರ್ಧಾರದಲ್ಲಿ ಅಚಲವಾಗಿರುವ ಕಾಂಗ್ರೆಸ್‌ನ ಸದಸ್ಯರು, `ಚಿಕ್ಕಬಳ್ಳಾಪುರ, ಬಾಗೇಪಲ್ಲಿ ಮತ್ತು ಇತರೆ ತಾಲ್ಲೂಕುಗಳಲ್ಲಿ ಬರಗಾಲದ ಸಮಸ್ಯೆ ಗಂಭೀರ ಸ್ವರೂಪದಲ್ಲಿದೆ. ಆದರೆ ಗೌರಿಬಿದನೂರಿನಲ್ಲಿ ನೀರಿನ ಸಮಸ್ಯೆಯಿಲ್ಲ. ಯಾವುದೇ ರೀತಿ ಸಮಸ್ಯೆಯಿಲ್ಲದ್ದರಿಂದ ಪ್ರವಾಸ ಕೈಗೊಳ್ಳುತ್ತಿದ್ದೇವೆ~ ಎನ್ನುತ್ತಾರೆ.ಪ್ರವಾಸಕ್ಕೆ ಹೋಗುವುದು ಅಚಲ

ಗೌರಿಬಿದನೂರಿನಲ್ಲಿ ಹೇಳಿಕೊಳ್ಳುವಂತಹ ಬರ ಸಮಸ್ಯೆಯಿಲ್ಲ. ನೀರಿನ ಸಮಸ್ಯೆ ಬಗೆಹರಿಸಿದ್ದೇವೆ. ಪಟ್ಟಣದ ಎಲ್ಲ ವಾರ್ಡ್‌ಗಳ ಅಭಿವೃದ್ಧಿಗೆ ಶ್ರಮಿಸಿದ್ದೇವೆ. ಅಭಿವೃದ್ಧಿ ಕಾರ್ಯಗಳನ್ನು ನಿರ್ಲಕ್ಷಿಸುತ್ತಿರುವ ಬಿಜೆಪಿ ಮತ್ತು ಜೆಡಿಎಸ್‌ನವರು ಪ್ರವಾಸದ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ಪೂರ್ವಗ್ರಹ ಪೀಡಿತರಾಗಿ ಯೋಚಿಸುತ್ತಿರುವ ಕೆಲವರು ಪ್ರವಾಸಕ್ಕೆ ಅಡ್ಡಿಮಾಡಲು ಪ್ರಯತ್ನಿಸುತ್ತಿದ್ದಾರೆ. ಎಷ್ಟೇ ಅಡತಡೆಗಳಿದ್ದರೂ ನಾವು ಪ್ರವಾಸ ಪೂರ್ಣಗೊಳಿಸುತ್ತೇವೆ.

-ವಿ.ರಮೇಶ್, ಉಪಾಧ್ಯಕ್ಷ, ಪುರಸಭೆಅಭಿವೃದ್ಧಿ ನೆಪ; ದುಂದುವೆಚ್ಚ

ಒಂದು ಮನವಿಪತ್ರ ಸಲ್ಲಿಕೆಗಾಗಿ 12ಕ್ಕೂ ಹೆಚ್ಚು ಮಂದಿ ನವದೆಹಲಿ ಪ್ರವಾಸ ಕೈಗೊಳ್ಳುವ ಅಗತ್ಯವೇನಿದೆ? ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುವ ಕೇಂದ್ರ ಸಚಿವ ವೀರಪ್ಪ ಮೊಯಿಲಿ ಅವರಿಗೆ ದೂರವಾಣಿ ಮೂಲಕ ಮನವಿ ಮಾಡಿಕೊಳ್ಳಬಹುದು. ಅವರು ಗೌರಿಬಿದನೂರಿಗೆ ಭೇಟಿ ನೀಡಿದಾಗಲೂ ಮನವಿಪತ್ರ ಸಲ್ಲಿಸಬಹುದು. ನವದೆಹಲಿ ಪ್ರವಾಸದ ನೆಪದಲ್ಲಿ ದುಂದುವೆಚ್ಚ ಮಾಡಲಾಗುತ್ತಿದೆ.

  -ಅನಂತರಾಜ್, ಜೆಡಿಎಸ್ ಸದಸ್ಯ, ಪುರಸಭೆಕಾರ್ಯಕ್ರಮ ರದ್ದುಗೊಳಿಸುವುದು ಸೂಕ್ತ


ಬರ ಸಂದರ್ಭದಲ್ಲಿ ಜನಪ್ರತಿನಿಧಿಗಳು ಪ್ರವಾಸ ಕೈಗೊಳ್ಳದಂತೆ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಸೂಚಿಸಿದ್ದಾರೆ. ತಮ್ಮ ಪ್ರವಾಸ ರದ್ದುಗೊಳಿಸಿದ್ದಾರೆ. ಅಷ್ಟೇ ಅಲ್ಲ, ಜಿಲ್ಲಾ ಉಸ್ತುವಾರಿ ಸಚಿವ ಎ.ನಾರಾಯಣಸ್ವಾಮಿ ಅವರನ್ನು ಸಹ ವಾಪಸು ಕರೆಸಿಕೊಂಡಿದ್ದಾರೆ. ಇದರಿಂದಲೂ ಪಾಠ ಕಲಿಯದ ಪುರಸಭೆಯ ಕೆಲ ಸದಸ್ಯರು ನವದೆಹಲಿ ಪ್ರವಾಸ ಹೋಗುತ್ತಿರುವುದು ಸರಿಯಲ್ಲ. ಈ ಕೂಡಲೇ ನಿರ್ಧಾರ ಹಿಂಪಡೆಯುವುದು ಸೂಕ್ತ.

  -ರಮೇಶ್‌ರಾವ್, ಪ್ರಧಾನ ಕಾರ್ಯದರ್ಶಿ, ಬಿಜೆಪಿ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.