ಸೋಮವಾರ, ಮೇ 23, 2022
24 °C

ಬರಿದಾದ ಕೆರೆ ಕಟ್ಟೆಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅರಕಲಗೂಡು: ತಾಲ್ಲೂಕಿನಲ್ಲಿ ಹಿಂಗಾರು ಮಳೆ ಕೈಕೊಟ್ಟ ಪರಿಣಾಮ ಒಂದೆಡೆ ಬೆಳೆ ಒಣಗುತ್ತಿದ್ದರೆ ಕೆರೆ ಕಟ್ಟೆಗಳಲ್ಲಿ ನೀರು ಬಾರದೆ ಮುಂದಿನ ದಿನಗಳಲ್ಲಿ ಭೀಕರ ಪರಿಸ್ಥಿತಿ ತಲೆದೋರುವ ಅಪಾಯ ಎದುರಾಗಿದೆ.

ಮುಂಗಾರಿನಲ್ಲಿ ಬಿದ್ದ ಮಳೆ ವ್ಯವಸಾಯಕ್ಕೆ ಹದವಾಗಿದ್ದ ಕಾರಣ ಕೃಷಿ ಕಾರ್ಯಗಳು ಚುರುಕಿನಿಂದ ಸಾಗಿದ್ದವು.ಆದರೆ ಕೆರೆ ಕಟ್ಟೆಗಳು ತುಂಬುವಷ್ಟು ಮಳೆ ಬೀಳಲಿಲ್ಲ. ಅಲ್ಲದೆ ಅಂತರ್ಜಲದ ಮಟ್ಟವು ಹೆಚ್ಚಲಿಲ್ಲ. ಹೀಗಾಗಿ ಮುಂಬರುವ ದಿನಗಳಲ್ಲಿ ಕುಡಿಯುವ ನೀರು ಹಾಗೂ ಮೇವಿಗೆ ಪರದಾಡಬೇಕಾದ ಸ್ಥಿತಿ ಉಂಟಾಗಬಹುದು ಎಂಬ ಆತಂಕ ರೈತರನ್ನು ಕಾಡುತ್ತಿದೆ.ತಾಲ್ಲೂಕಿನ ಬರ ಸ್ಥಿತಿ ಕುರಿತು ರೈತರನ್ನು ಮಾತನಾಡಿಸಿದರೆ, `ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತಾಗಿದೆ ನಮ್ಮ ಸ್ಥಿತಿ~ ಎಂದು ಅಳಲು ತೋಡಿಕೊಳ್ಳುತ್ತಾರೆ.ಕೃಷಿ ಕಾರ್ಯ ಪೂರ್ಣಗೊಂಡು ಬೆಳೆ ಕೈಗೆ ಬರುವ ಹಂತದಲ್ಲಿ ಮಳೆಯಾಗದೆ ಉಂಟಾಗಿರುವ ನಷ್ಟ ರೈತನ ಬೆನ್ನು ಮೂಳೆ ಮುರಿದಂತಾಗಿದೆ ಎನ್ನುತ್ತಾರೆ ಕೃಷಿಕ ನೈಗೆರೆ ಚನ್ನಕೇಶವೇಗೌಡ. ಸಾಲ ಮಾಡಿ ಹಣ ತಂದು ಭೂಮಿಗೆ ಸುರಿದಿದ್ದೇವೆ. ಈಗ ಬೆಳೆ ಇಲ್ಲದ ಕಾರಣ ಸಾಲ ಹೊರೆಯಾಗಿ ಉಳಿದಿದೆ. ಸರ್ಕಾರ ರೈತರ ಬೆಳೆ ನಷ್ಟದ ಬಗ್ಗೆ ಪರಿಶೀಲನೆ ನಡೆಸಿ ಸೂಕ್ತ ಪರಿಹಾರ ನೀಡಿದರೆ ಮಾತ್ರ ರೈತರ ಪರಿಸ್ಥಿತಿ ಸ್ವಲ್ಪವಾದರೂ ಸುಧಾರಿಸಬಲ್ಲದು.ತಾಲ್ಲೂಕಿನಲ್ಲಿ ಕುಡಿಯುವ ನೀರು ಹಾಗೂ ಮೇವಿನ ಕೊರತೆ ತೀವ್ರವಾಗಲಿದೆ ಎಂದು ಆತಂಕ ವ್ಯಕ್ತಪಡಿಸುತ್ತಾರೆ ಟಿಎಪಿಸಿಎಂಎಸ್ ಅಧ್ಯಕ್ಷ ಬೊಮ್ಮೇಗೌಡ.ಮೇವಿನ ಬೆಳೆ ಬೆಳೆಯುವುದನ್ನು ರೈತರು ಕೈ ಬಿಟ್ಟಿದ್ದಾರೆ. ಅಲ್ಪಸ್ವಲ್ಪ ಜನ ಬೆಳೆದ ರಾಗಿ ಹಾಗೂ ಭತ್ತದ ಬೆಳೆ ಹಾಳಾಗಿರುವ ಕಾರಣ ದೊರೆಯುತ್ತಿದ್ದ ಅಲ್ಪ ಪ್ರಮಾಣದ ಮೇವು ಇಲ್ಲದಂತಾಗಿದೆ. ಪಂಪ್‌ಸೆಟ್ ಹೊಂದಿದ ರೈತರು ನೀರು ಹಾಯಿಸಿ ಇರುವ ಬೆಳೆ ರಕ್ಷಿಸಿಕೊಳ್ಳಲು ವಿದ್ಯುತ್ ಕೊರತೆ ಅಡ್ಡಿ ಯಾಗಿದ್ದು ರೈತರ ಸ್ಥಿತಿ ಗಂಭೀರವಾಗಿದೆ ಎನ್ನುತ್ತಾರೆ. ಬರ ಪರಿಹಾರದ ಹೆಸರಿನಲ್ಲಿ ರಸ್ತೆಗೆ ಮಣ್ಣು ಸುರಿಯುವ, ಕೆರೆಯ ಹೂಳೆತ್ತುವ ಕಾರ್ಯ ಕೈಗೊಂಡರೆ ಇದರಿಂದ ರೈತರಿಗೆ ಏನು ಪರಿಹಾರ  ದೊರಕುವುದಿಲ್ಲ. ಯಾರೊ ಒಬ್ಬ ಗುತ್ತಿಗೆದಾರ ಯಂತ್ರದ ಸಹಾಯದಿಂದ ಈ ಕೆಲಸ ನಿರ್ವಹಿಸಿ ಹಣ ಪಡೆಯುತ್ತಾನೆ. ರೈತರಿಗೆ ಬೆಳೆ ನಷ್ಟ ಪರಿಹಾರ ನೀಡುವುದಿಂದ ಮಾತ್ರ ಅಲ್ಪಸ್ವಲ್ಪ ನಷ್ಟ ಸರಿದೂಗಿಸುವ ಪ್ರಯತ್ನವಾಗಬಹುದು ಎನ್ನುತ್ತಾರೆ.

ರಾಮನಾಥಪುರ ವರದಿ: ಕಾವೇರಿ ನದಿ ತೀರದ್ಲ್ಲಲೇ ಇರುವ ಕೊಣನೂರು ಮತ್ತು ರಾಮನಾಥಪುರ ಭಾಗದ ರೈತರು ಅಕ್ಷರಶಃ ಈಗ ಬರ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಒಂದೆಡೆ ಮುನಿಸಿಕೊಂಡಿರುವ ವರುಣ, ಇನ್ನೊಂದೆಡೆ ಹೆಚ್ಚುತ್ತಿ ರುವ ಬಿಸಿಲ ಧಗೆ ನಡುವೆ ಬರದ ದವಡೆಗೆ ಸಿಲುಕಿ ತತ್ತರಿಸಿ ಮಳೆ- ಬೆಳೆಯಿಲ್ಲದೇ ಹೈರಾಣಾಗಿ ಹೋಗಿದ್ದಾರೆ.ಪ್ರಾರಂಭದಲ್ಲಿ ಉತ್ತಮ ಮಳೆಯಾಗುವ ಮುನ್ಸೂಚನೆ ಸಿಕ್ಕಿದ ಹಿನ್ನೆಲೆಯಲ್ಲಿ ಖುಷಿಯಾಗಿದ್ದ ಈ ಭಾಗದ ರೈತರು ಇದೇ ಸಂತಸದಲ್ಲಿ ಜಮೀನು ಉಳುಮೆ ಮಾಡಿ ಕೃಷಿ ಚಟುವಟಿಕೆ ಕೈಗೊಂಡಿದ್ದರು. ನಂತರ ಮಳೆ ಕೈಕೊಟ್ಟ ಪರಿಣಾಮ ತೇವಾಂಶ ಕೊರತೆಯಿಂದ ಬಿತ್ತಿದ ಹಲವು ಬೆಳೆಗಳು ನೆಲ ಕಚ್ಚಿವೆ. ಪರಿಣಾಮವಾಗಿ ರೈತರು ಈಗ ಬೆಳೆಯಿಲ್ಲದೇ ಕೈಚೆಲ್ಲಿ ಕುಳಿತುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ.ಕಟ್ಟೇಪುರ ಕೃಷ್ಣರಾಜ ಎಡದಂಡೆ ಮತ್ತು ಬಲದಂಡೆ ನಾಲೆ ಹಾಗೂ ಹಾರಂಗಿ ನಾಲಾ ವ್ಯಾಪ್ತಿಯ ನೂರಾರು ಎಕರೆ ಪ್ರದೇಶದಲ್ಲಿ ನಾಟಿ ಮಾಡಿರುವ ಬತ್ತದ ಬೆಳೆಗೆ ಸಕಾಲದಲ್ಲಿ ಮಳೆ ಬೀಳದೆ ಹಲವು ರೋಗಗಳಿಗೆ ತುತ್ತಾಗಿ ನಷ್ಟ ಅನುಭವಿಸುವ ಆತಂಕ ಸೃಷ್ಟಿಯಾಗಿದೆ. ಬತ್ತದ ಪೈರುಗಳಿಗೆ ಜೋರು ಮಳೆಯಾಗದೇ ಹಲವೆಡೆ ಬೆಂಕಿ ರೋಗ ಕಾಣಿಸಿಕೊಂಡಿದೆ. ಗರಿಯ ಅಂಚುಗಳು ಕಂದು ಬಣ್ಣಕ್ಕೆ ತಿರುಗಿ ಬೆಂಕಿ ರೋಗ ಹರಡಿ ಸುಟ್ಟ ರೀತಿಯಲ್ಲಿ ಗೋಚರಿಸುತ್ತಿದೆ. ಇನ್ನು ಕೆಲವೆಡೆ ಕೀಟಗಳ ಹಾವಳಿ ಹೆಚ್ಚಿದ್ದು, ಔಷಧಿ ಸಿಂಪಡಣೆ ಮಾಡಿದರೂ ಹತೋಟಿಗೆ ಬರುತ್ತಿಲ್ಲ.ರಭಸವಾಗಿ ಮಳೆ ಬಿದ್ದರೆ ಮಾತ್ರ ಬತ್ತದ ಪೈರುಗಳು ರೋಗ- ರುಜಿನಗಳಿಂದ ಮುಕ್ತಿ ಪಡೆದು ಆರೋಗ್ಯಕರವಾಗಿ ಬೆಳವಣಿಗೆಯಾಗಿ ಉತ್ತಮ ಇಳುವರಿ  ಸಾಧ್ಯ ಎನ್ನುತ್ತಾರೆ ರೈತರು. ತಂಬಾಕು ಮಾರುಕಟ್ಟೆಯಲ್ಲಿ ಬೆಲೆಯೂ ಕುಸಿತ ಕಂಡಿದೆ. ಬರ ಪರಿಸ್ಥಿತಿಯಿಂದಈ ಭಾಗದ ರೈತರ ಬದುಕು ಮುರಾಬಟ್ಟೆಯಾಗಿದೆ.

-ಚಂದ್ರಶೇಖರ್ (ಅರಕಲಗೂಡು).- ರವಿ ಬೆಟ್ಟಸೋಗೆ (ರಾಮನಾಥಪುರ)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.