ಬುಧವಾರ, ಜೂಲೈ 8, 2020
21 °C

ಬಲು ಅಪಾಯಕಾರಿ ಶ್ರವಣಗೆರೆ ಕೆರೆ ರಸ್ತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

 ಧರ್ಮಪುರದಿಂದ ಹಿರಿಯೂರಿಗೆ ಹೋಗಬೇಕೆಂದರೆ ರಾಜ್ಯ ಹೆದ್ದಾರಿ-24ರಲ್ಲಿ ಬರುವ ಶ್ರವಣಗೆರೆ ಕೆರೆ ಪಕ್ಕದಲ್ಲಿರುವ ರಸ್ತೆ ಮೇಲೆ ಹೋಗಲೇಬೇಕು.

ಒಂದೆಡೆ ಆಳವಾದ ಕೆರೆ, ಇನ್ನೊಂದೆಡೆ ಆಳವಾದ ಗುಂಡಿ ಇವರೆಡರ ಮಧ್ಯೆ ಹಾದು ಹೋಗಿರುವ ರಸ್ತೆ ಆಯ ತಪ್ಪಿದರೆ ಅಪಾಯ ನಿಶ್ಚಿತ. ಧರ್ಮಪುರದ ಅವಳಿ ಗ್ರಾಮವೆಂದೇ ಕರೆಯುವ ಶ್ರವಣಗೆರೆಕೆರೆ ಸುಮಾರು ನೂರು ಎಕರೆ ಪ್ರದೇಶದಲ್ಲಿದೆ. ಈ ಕೆರೆ ದಿನಲೂ ಅಪಾಯವನ್ನು ಆಹ್ವಾನಿಸುತ್ತಲೇ ಇದೆ.ಈ ಕೆರೆಯಲ್ಲಿ ಇಟ್ಟಿಗೆ ಕಾರ್ಖಾನೆಗೋಸ್ಕರ ಸಾಕಷ್ಟು ಮಣ್ಣು ತೆಗೆದಿದ್ದು, ಕೆಲವು ಕಡೆ 30-40 ಅಡಿಗಳಷ್ಟು ಆಳವಾದ ಗುಂಡಿಗಳಿವೆ. ಧರ್ಮಪುರದಿಂದಲೂ ರಸ್ತೆಯಲ್ಲಿ ತಗ್ಗು-ಗುಂಡಿಗಳು ಇದ್ದು, ಕೆರೆ ಪಕ್ಕದಲ್ಲಿನ ರಸ್ತೆ ಕಿರಿದಾಗಿದ್ದು, ವಾಹನ ಚಾಲಕರಿಗೆ ನರಕಯಾತನೆ. ಎದುರಿಗೆ ಬೈಸಿಕಲ್ ಬಂದರೂ ಸಹ ಜಾಗವಿಲ್ಲ.  ಆಂಧ್ರಪ್ರದೇಶದ ಅನಂತಪುರ, ಹಿಂದುಪುರ ಹಾಗೂ ಹೈದರಾಬಾದ್‌ನಿಂದ ಈ ರಾಜ್ಯ ಹೆದ್ದಾರಿ-24ರ ಮೂಲಕವೇ ಕಾರವಾರ, ಚಿಕ್ಕಮಗಳೂರು ಹಾಗೂ ಧರ್ಮಸ್ಥಳಕ್ಕೆ ಪ್ರತಿನಿತ್ಯ ನೂರಾರು ವಾಹನಗಳು ಇಲ್ಲಿ ಸಂಚರಿಸುತ್ತವೆ.ಕೆರೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರು ಸಂಗ್ರಹವಾಗಿದ್ದು ಸಾರ್ವಜನಿಕರು ಇಲ್ಲಿಯೇ ಬಟ್ಟೆ ತೊಳೆಯಲು ಕುಳಿತುಕೊಳ್ಳುತ್ತಾರೆ.  ಕಳೆದ ವರ್ಷ ಮಗುವೊಂದು ಇದೇ ಜಾಗದಲ್ಲಿ ಬಿದ್ದು ಸತ್ತ ಘಟನೆ ಇನ್ನೂ ಮಾಸಿಲ್ಲ. ಇಲ್ಲಿ ತಡೆಗೋಡೆ ಇಲ್ಲದಿರುವುದರಿಂದ ಚಾಲಕರು ಸ್ವಲ್ಪ ಆಯ ತಪ್ಪಿದರೂ ಅಪಾಯ ಖಂಡಿತ. ಕಳೆದ ವರ್ಷ ಸಾಬೂನು ಬಾಕ್ಸ್‌ಗಳನ್ನು ಹೊತ್ತೊಯ್ಯುತ್ತಿದ್ದ ಲಾರಿಯೊಂದು ಮುಗುಚಿ ಬಿದ್ದಿತ್ತು. ಆದರೆ, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿರಲಿಲ್ಲ.ಈಗಾಗಲೇ ಇಲ್ಲಿ ಹಲವು ಬಾರಿ ಇಂತಹ ಅಪಘಾತಗಳು ಸಂಭವಿಸಿದ್ದು ಸಾರ್ವಜನಿಕರು ಸಂಬಂಧಪಟ್ಟ ಅಧಿಕಾರಿಗಳಿಗೆ  ಮನವಿ ಮಾಡಿದ್ದರೂ ತಡೆಗೋಡೆ  ನಿರ್ಮಾಣ ಮಾತ್ರ ಮರೀಚಿಕೆಯಾಗಿಯೇ ಉಳಿದಿದೆ.ತಾಲ್ಲೂಕಿನ ಕಡೆಯ ಗ್ರಾಮಗಳಾದ ಹಲಗಲದ್ದಿ, ಮದ್ದಿಹಳ್ಳಿ, ಖಂಡೇನಹಳ್ಳಿ, ಹೊಸಕೆರೆ, ಪಿ.ಡಿ.ಕೋಟೆಪರಶುರಾಂಪುರ ಹೋಬಳಿಯ ಚೆಲ್ಲೂರು, ಟಿ.ಎನ್. ಕೋಟೆ, ಓಬನಹಳ್ಳಿ ಮತ್ತಿತರ ಗ್ರಾಮಗಳ ನಾಗರಿಕರು ಪ್ರತಿನಿತ್ಯ ಕಾರ್ಯನಿಮಿತ್ತ ಹಿರಿಯೂರಿಗೆ ಬರಬೇಕೆಂದರೆ ಈ ರಸ್ತೆಯನ್ನೇ ಅವಲಂಬಿಸಿದ್ದಾರೆ.ಮಳೆಗಾಲದಲ್ಲಂತೂ ಚಾಲಕರು ತಮ್ಮ ಜೀವ ಹಿಡಿದು ವಾಹನ ಓಡಿಸುತ್ತಾರೆ. ಕಳೆದ ವರ್ಷ ಜನಪ್ರತಿನಿಧಿಗಳು ನೀಡಿದ್ದ ಆಶ್ವಾಸನೇ ನೆರೆವೇರಿಲ್ಲ. ಈಗಲಾದರೂ ಜಿಲ್ಲಾಡಳಿತ ಕ್ರಮ ಕೈಗೊಳ್ಳುವುದೇ? ಎಂಬುದು ನಾಗರಿಕರ ಪ್ರಶ್ನೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.