ಶುಕ್ರವಾರ, ಜೂಲೈ 10, 2020
27 °C

ಬಸವಣ್ಣನ ಮೂಲ ಯಾವುದು?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪ್ರೊ. ಸಿ. ಪಿ. ಹೇಮಗಿರಿಮಠ ಅವರು (ವಾ. ವಾ. ಜ. 21) ‘ಶೈವ ಬ್ರಾಹ್ಮಣರಾಗಿದ್ದ ಬಸವಣ್ಣನವರು ವೀರಶೈವವನ್ನು ಒಪ್ಪಿಕೊಂಡು ವೀರಶೈವರಾದರು ಎಂಬುದು ಒಂದು ಐತಿಹಾಸಿಕ ಸತ್ಯ’ ಎಂದು ಆಧಾರರಹಿತ ಹೇಳಿಕೆ ನೀಡಿದ್ದಾರೆ. ಅದು ಐತಿಹಾಸಿಕ ಸತ್ಯವೊ? ಅಥವಾ ಐತಿಹಾಸಿಕ ಮಿಥ್ಯವೊ? ಎಂಬುದನ್ನು ಜರಡಿ ಹಿಡಿದು ನಿರ್ಧರಿಸಿಲ್ಲ.ಪ್ರಾಚೀನ ಸಾಹಿತ್ಯದಲ್ಲಿ ವೀರಶೈವ ಎಂಬ ಪದ ಬಳಕೆಯಾಗಿಲ್ಲ ಎಂಬ ಟಿ.ಎನ್. ಮಲ್ಲಪ್ಪನವರ ಮಾತನ್ನಾಗಲೀ (ಪಂಚಾಚಾರ್ಯ ಚರಿತೆ, ಸಂಪುಟ ಒಂದು: ರೇವಣ ಸಿದ್ಧ) ಅಥವಾ ಬಸವಣ್ಣ ತನ್ನ ವಚನಗಳಲ್ಲಿ ಶಿವಾಚಾರದವರು, ಶಿವಭಕ್ತರು, ಲಿಂಗವಂತರು, ಲಿಂಗಭಕ್ತರು ಎಂದು ಹೇಳಿದ್ದಾನೆಯೇ ವಿನಾ ಎಲ್ಲಿಯೂ ಅಪ್ಪಿತಪ್ಪಿಯೂ ವೀರಶೈವರು ಎಂದು ಹೇಳಿಲ್ಲ ಎಂಬ ಸತ್ಯವನ್ನಾಗಲೀ ಮೆಲುಕು ಹಾಕುವ ಗೊಡವೆಗೇ ಹೋಗಿಲ್ಲ ಎನ್ನಿಸುತ್ತದೆ.ಬಾಳೆ ಸುಳಿಯಂಥ ಎಳೆಯ ವಯಸ್ಸಿನ ವೈದಿಕ ಹೆಣ್ಣು ವಿಧವೆಯಾದಾಗ ಬ್ರಾಹ್ಮಣರು ಅವಳ ತಲೆ ಬೋಳಿಸಲು ಮುಂದಾದರು. ಆಕೆಯ ಪ್ರತಿಭಟನೆ ರೋದನಗಳನ್ನು ಕೇಳಿ ಬಾಗೇವಾಡಿಯ ಗೌಡನಾಗಿದ್ದ ಹಾಲುಮತದ ಅರಸು ಕುಲಕ್ಕೆ (Clan= ಬೆಡಗು) ಸೇರಿದ ಮಾದರಸ ಓಡಿ ಬಂದು, ತಲೆ ಬೋಳಿಸಲು ಅವಕಾಶ ಕೊಡದೆ ಆಕೆಗೆ ಮರು ಬಾಳುವೆ ನೀಡುತ್ತಾನೆ. ಅವರಿಬ್ಬರ ಹೊಟ್ಟೆಯಲ್ಲಿ ಹುಟ್ಟಿದವರು ಅಕ್ಕನಾಗಮ್ಮ ಮತ್ತು ಬಸವಣ್ಣ.‘ಕ್ಷೇತ್ರ’ ವೈದಿಕ ಮತ ಮೂಲದ್ದಾದರೂ ‘ಬೀಜ’ ಹಾಲುಮತ ಮೂಲದ್ದು ಎಂಬ ಸತ್ಯವನ್ನು ಬಸವಣ್ಣ ತನ್ನೊಂದು ವಚನದಲ್ಲಿ (718 ಕಲ್ಬುರ್ಗಿ ಸಂವಾದಿತ ಬಸವ ಸಂಪುಟ) ‘ಕುಲವನರಸುವನೆ ಶರಣರಲ್ಲಿ ಜಾತಿಸಂಕರನಾದ ಬಳಿಕ’ ಎಂದು ತನ್ನ ಮಿಶ್ರ ತಳಿಯನ್ನು ಸೂಚಿಸಿದ್ದಾನೆ. ಇನ್ನೊಂದು ವಚನದಲ್ಲಿ (348) ‘ಕಷ್ಟಜಾತಿ ಜನುಮದಲಿ ಜನಿಯಿಸಿದೆ ಎನ್ನ’ ಎಂದು ಹೇಳುವ ಮೂಲಕ ತಾನು ಶೂದ್ರ (ಕಷ್ಟ ಜಾತಿ) ಎಂಬುದನ್ನು ಬಹಿರಂಗಗೊಳಿಸಿದ್ದಾನೆ.ಅಷ್ಟೇ ಅಲ್ಲ ಬಸವಣ್ಣನ ಯಶಸ್ಸನ್ನು ಕಂಡು ಹಾರುವರು, ಇವನು ಹಾರವರವನು ಎಂಬುದನ್ನು ನಾಡಿನಾದ್ಯಂತ ಪ್ರಚಾರ ಮಾಡಿದರೆ, ನಮ್ಮ ಜಾತಿಗೆ ಕೋಡು ಮೂಡಿದಂತಾಗುತ್ತದೆ ಎಂದು ಕಾರ್ಯೋನ್ಮುಖರಾಗುತ್ತಾರೆ.ಹೆಣ್ಣಿನ ಕಡೆಯವರು ‘ನಮ್ಮ ಮಗಳ ಮಗ’ ಎಂದೂ, ಗಂಡಿನ ಕಡೆಯವರು ‘ನಮ್ಮ ಸೊಸೆಯ ಮಗ’ ಎಂದೂ ಕಥೆಯನ್ನು ಹಬ್ಬಸಿಬಿಟ್ಟರು.ಆಗ ಬಸವಣ್ಣ ವಾಸ್ತವ ಸತ್ಯ ಸಾಯಬಾರದೆಂದು ತನ್ನೊಂದು ವಚನದಲ್ಲಿ (345) ‘ಆನು ಹಾರುವನೆಂದರೆ ಕೂಡಲ ಸಂಗಯ್ಯ ನಗುವನಯ್ಯ’ ಎಂದು ಹೇಳುವ ಮೂಲಕ ನಾನು ಹಾರುವನಲ್ಲ ಎಂಬುದನ್ನು ಖಚಿತಪಡಿಸಿದ್ದಾನೆ.ಇಷ್ಟೆಲ್ಲ ಆಧಾರಗಳಿದ್ದೂ ಸಹ ಪ್ರೊ.ಹೇಮಗಿರಿಮಠ ಅವರು ‘ಶೈವ ಬ್ರಾಹ್ಮಣನಾದ ಬಸವಣ್ಣ ಪ್ರಾಚೀನ ವೀರಶೈವನನ್ನು ಅನ್ವಯಿಕ ಲಿಂಗಾಯಿತವನ್ನಾಗಿ ಪರಿವರ್ತಿಸಿದನು ಎಂಬುದನ್ನು ಹರ ಗುರು ಚರಮೂರ್ತಿಗಳು ಪುಷ್ಟೀಕರಿಸಿದ್ದಾರೆ’ ಎಂಬ ಚರ್ವಿತ ಚರ್ವಣವನ್ನೆ ಎಡೆಯಿಕ್ಕಿ,ಎಲ್ಲರೂ ನೋಡಲೆಂದು ‘ನಡೆಮಡಿ’ಯ ಮೇಲೆ ನಡೆದಿರುವುದು ನಿಜಕ್ಕೂ ಸೋಜಿಗ!

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.