ಭಾನುವಾರ, ಜನವರಿ 19, 2020
27 °C

ಬಸವನಗುಡಿಯ ಶ್ರೇಷ್ಠತೆ ಹೆಚ್ಚಿಸಿದ ನುಡಿ ಜಾತ್ರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು:  `ಬಸವನಗುಡಿಯು ಕಡಲೆಕಾಯಿ ಪರಿಷೆಯಿಂದ ರಾಜ್ಯದಲ್ಲೇ ಜನಪ್ರಿಯಗೊಂಡಿದೆ. ಅದರಂತೆ ಈಗ ನಡೆಯುತ್ತಿರುವ ಕನ್ನಡ ನುಡಿ ಜಾತ್ರೆಯು ಬಸವನಗುಡಿಯ ಶ್ರೇಷ್ಠತೆಯನ್ನು ಹೆಚ್ಚಿಸಿದೆ~ ಎಂದು ಜೆಡಿಎಸ್ ರಾಜ್ಯ ಘಟಕದ ಕಾರ್ಯಾಧ್ಯಕ್ಷ ಪಿ.ಜಿ.ಆರ್.ಸಿಂಧ್ಯ ಅಭಿಪ್ರಾಯಪಟ್ಟರು.ಬಸವನಗುಡಿ ವಿಧಾನಸಭಾ ಕ್ಷೇತ್ರ ಕನ್ನಡ ಸಾಹಿತ್ಯ ಪರಿಷತ್ತು ನಗರದಲ್ಲಿ ಭಾನುವಾರ ಆಯೋಜಿಸಿದ್ದ ನಾಲ್ಕನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.`ಕನ್ನಡತನವನ್ನು ಮನೆ-ಮನೆಗೂ ಹಂಚುವಲ್ಲಿ ಕನ್ನಡ ಪುಸ್ತಕಗಳು ಉತ್ತಮ ಮಾಧ್ಯಮ. ಒಳ್ಳೆಯ ಪುಸ್ತಕಗಳನ್ನು ಮುದ್ರಣಗೊಳಿಸುವ ಮೂಲಕ ಕನ್ನಡ ಸಾಹಿತ್ಯ ಕೃಷಿಯನ್ನು ಬಲಪಡಿಸಬೇಕು. ಮಹಾಕವಿ ಪಂಪನಿಂದ ಈಚಿನ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಚಂದ್ರಶೇಖರ ಕಂಬಾರರವರೆಗೆ ಕನ್ನಡ ಸಾಹಿತ್ಯವು ಶ್ರೀಮಂತಗೊಂಡಿದೆ. ಈ ಕುರಿತು ಯುವಪೀಳಿಗೆಗೆ ತಿಳಿ ಹೇಳುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ~ ಎಂದರು.`ಸಾಂಸ್ಕೃತಿಕ ಮತ್ತು ಸಾಹಿತ್ಯಕ ವಾತಾವರಣವನ್ನು ಮುಂದಿನ ಜನಾಂಗಕ್ಕೆ ಕೊಡಬೇಕಾಗಿರುವುದು ಸಮಾಜದ ಆದ್ಯ ಕರ್ತವ್ಯ. ಈ ನಿಟ್ಟಿನಲ್ಲಿ ಇಂತಹ ಸಮ್ಮೇಳನವು ಪ್ರಯೋಜನಕಾರಿ~ ಎಂದು ಹೇಳಿದರು.ಕನ್ನಡ ಸಾಹಿತ್ಯ ಪರಿಷತ್ತಿನ ಕೋಶಾಧ್ಯಕ್ಷ ಪುಂಡಲೀಕ ಹಾಲಂಬಿ, `ಪ್ರತಿ ತಾಲ್ಲೂಕಿನಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನಗಳು ಆಗುತ್ತಿರುವುದು ಸಂತೋಷದ ವಿಚಾರ. ಕನ್ನಡವನ್ನು ಕಟ್ಟಿ ಬೆಳೆಸುವಲ್ಲಿ ಪ್ರತಿಯೊಬ್ಬರು ಶ್ರಮವಹಿಸಿ ದುಡಿಯಬೇಕು. ಆಗ ಮಾತ್ರ ಭಾಷೆ ನಮ್ಮಂದಿಗೆ ಇರಲು ಸಾಧ್ಯ. ಕನ್ನಡದಲ್ಲಿ ಕೃಷಿ ಮಾಡಿದ ಬಹುತೇಕ ಸಾಹಿತಿಗಳ ಮಾತೃ ಭಾಷೆ ಬೇರೆಯಾಗಿರಬಹುದು. ಆದರೆ ಅವರು ಕನ್ನಡ ಭಾಷೆಯಲ್ಲಿ ಕೃಷಿ ಮಾಡಿ ಜನಪ್ರಿಯರಾಗಿರುವುದರಿಂದ ಅವರನ್ನು ಕನ್ನಡಿಗರೆಂದೇ ಭಾವಿಸೋಣ~ ಎಂದರು.ಸಮ್ಮೇಳನಾಧ್ಯಕ್ಷ ಪ್ರೊ.ಡಿ.ಲಿಂಗಯ್ಯ, `ಕನ್ನಡ ಸಂಸ್ಕೃತಿ ಪ್ರಾಚೀನ ಎಂಬುದರಲ್ಲಿ ಎರಡು ಮಾತಿಲ್ಲ. ಆರಂಭದ ಸಾವಿರ ವರ್ಷಗಳಲ್ಲಿ ರಚಿತವಾದ ಸಮೃದ್ಧ ಸಾಹಿತ್ಯವು, ಕಳೆದ ನೂರು ವರ್ಷದಲ್ಲಿ ರಚನೆಯಾಗಿರುವುದು ನಿಜಕ್ಕೂ ಉತ್ತಮ ಸಂಗತಿ. ಸಮ್ಮೇಳನಗಳು ಸಮಾಜಮುಖಿ ಚಿಂತನೆಯನ್ನು ಆಳವಡಿಸಿಕೊಂಡಾಗ ಮಾತ್ರ ಅದರ ಉದ್ದೇಶ ಈಡೇರುತ್ತದೆ~ ಎಂದು ಹೇಳಿದರು. ಶಾಸಕ ಎಲ್.ಎ.ರವಿಸುಬ್ರಹ್ಮಣ್ಯ, ಬಸವನಗುಡಿ ವಿಧಾನಸಭಾ ಕ್ಷೇತ್ರ ಕ.ಸಾ.ಪ  ಅಧ್ಯಕ್ಷ ರಂಗಪ್ಪ ಮಾದಲಗೆರೆ  ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)