ಸೋಮವಾರ, ಆಗಸ್ಟ್ 2, 2021
28 °C

ಬಸವ ಕಲ್ಯಾಣದ ಮೇಲೊಂದು ಬೆಳಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |ಬಸವಣ್ಣನವರು ಅಸ್ಪೃಶ್ಯತೆ, ಶೋಷಣೆಯನ್ನು ವಿರೋಧಿಸಿದರು. ಅಸಹನೀಯ ಅಸಮಾನತೆ, ಜಾತಿ ಪದ್ಧತಿಯನ್ನು ಧಿಕ್ಕರಿಸುವುದರ ಜತೆಗೆ ಸ್ಥಾವರದ ಬಗ್ಗೆ ಕೆಂಗಣ್ಣು ಬೀರಿದರು. ‘ಉಳ್ಳವರು ಶಿವಾಲಯ ಮಾಡುವರು, ನಾನೇನ ಮಾಡಲಿ ಬಡವನಯ್ಯ, ಎನ್ನ ಕಾಲೇ ಕಂಬ, ದೇಹವೆ ದೇಗುಲ, ಶಿರವೇ ಹೊನ್ನ ಕಲಶವಯ್ಯಾ..’ ಎಂಬ ಅವರ ವಚನ ಉತ್ಕಟ ಭಕ್ತಿ ಪ್ರಕಟಪಡಿಸುತ್ತದೆ. ಅಲ್ಲದೆ ದೇವಾಲಯ ಸಂಸ್ಕೃತಿ ಬಗ್ಗೆ ಅವರಲ್ಲಿದ್ದ ತಿರಸ್ಕಾರದ ಭಾವನೆ ಎತ್ತಿ ತೋರಿಸುತ್ತದೆ.ಇದನ್ನು ಆಧಾರವಾಗಿಟ್ಟುಕೊಂಡು ಬಸವಣ್ಣನ ಕಾಲದಲ್ಲಿ ಕಲ್ಯಾಣ (ಇಂದಿನ ಬಸವಕಲ್ಯಾಣ) ದಲ್ಲಿ ಏನನ್ನೂ ನಿರ್ಮಿಸಲಾಗಿಲ್ಲ ಎಂದು ಕೆಲವರು ವಾದ ಮಂಡಿಸುತ್ತಾರೆ. ಆದರೂ ಬಸವಣ್ಣನ ತತ್ವದ ಪ್ರಭಾವಕ್ಕೆ ಒಳಗಾಗಿ ವಿವಿಧೆಡೆಯ ಅಸಂಖ್ಯಾತ ಶರಣ ಗಣ ಕಲ್ಯಾಣದಲ್ಲಿ ಜಮಾವಣೆ ಆಗಿರುವುದು ಸರ್ವವಿದಿತ. ಅವರೆಲ್ಲರೊಂದಿಗೆ ಕುಳಿತು ಚರ್ಚಿಸುವುದಕ್ಕಾಗಿ ಮಹಾಮನೆ, ಅನುಭವ ಮಂಟಪ ನಿರ್ಮಿಸ

ಲಾಯಿತು. ಮಠಗಳು, ದಾಸೋಹದ ಕೇಂದ್ರಗಳು ನಿರ್ಮಾಣವಾದವು ಎಂಬುದು ನಿಜ ಸಂಗತಿ ಎನ್ನುವುದು ಇನ್ನೂ ಕೆಲವರ ಅಭಿಪ್ರಾಯ.

ಹೀಗೆ ಭಿನ್ನಾಭಿಪ್ರಾಯಗಳು ವ್ಯಕ್ತವಾಗಲು ಹಲವು ಕಾರಣಗಳಿವೆ. ಸಮಸ್ಯೆಯ ಮೂಲ ಎಲ್ಲಿದೆಯೆಂದರೆ ಈ ಕುರಿತು ಇದುವರೆಗೆ ವ್ಯಕ್ತವಾದ ಅನಿಸಿಕೆ, ಅಭಿಪ್ರಾಯ, ತರ್ಕ ಏನಿದ್ದರೂ ತತ್ವದ ನೆಲೆಯಿಂದ ಅರ್ಥೈಸಿದವು. ಹೀಗೆ ಸೈದ್ಧಾಂತಿಕ ವಿಚಾರ ಮಂಡಿಸುವುದಕ್ಕಿಂತ ವಾಸ್ತವಿಕತೆ ಅರಿಯಲು ಹೆಚ್ಚಿನ ಪ್ರಯತ್ನ ನಡೆದಿಲ್ಲ. ಉನ್ನತ ಮಟ್ಟದ ಸಂಶೋಧನೆ ಅಥವಾ ಉತ್ಖನನ ಕೈಗೊಳ್ಳಲಾಗಿಲ್ಲ. ಬಸವಕಲ್ಯಾಣದಲ್ಲಿ 12 ನೇ ಶತಮಾನದ ಶರಣರಿಗೆ ಸಂಬಂಧಿಸಿದ ಯಾವುದೇ ಕುರುಹುಗಳು ದೊರೆಯದಿರುವುದಕ್ಕೆ ಇದೇ ಕಾರಣ ಇರಬಹುದು.ಹಾಗೆ ನೋಡಿದರೆ, ಕಲ್ಯಾಣವು 9-10ನೇ ಶತಮಾನದಿಂದ 12 ನೇ ಶತಮಾನದ ವರೆಗೆ ಚಾಲುಕ್ಯರ ರಾಜಧಾನಿಯಾಗಿತ್ತು. ಚಾಲುಕ್ಯರ ಆಸ್ಥಾನ ಪಂಡಿತನಾಗಿದ್ದ ವಿಜ್ಞಾನೇಶ್ವರನು ಕಲ್ಯಾಣದಂಥ ವೈಭವದ ಪಟ್ಟಣ ಎಲ್ಲಿಯೂ ಇರಲಿಲ್ಲ ಎಂದು ಬಣ್ಣಿಸಿದ್ದಾನೆ. ವಚನಗಳಲ್ಲಿಯೂ ಕಲ್ಯಾಣದ ವರ್ಣನೆ ಬರುತ್ತದೆ. ಇದಲ್ಲದೆ ಕಲ್ಯಾಣದಲ್ಲಿ 12ನೇ ಶತಮಾನದ ನಂತರ ದೇವಗಿರಿ ಯಾದವರು, ಕಾಕತೀಯರು ಆಳ್ವಿಕೆ ನಡೆಸುತ್ತಾರೆ. ನಂತರ ತುಘಲಕ್, ಬಹಮನಿ ಸುಲ್ತಾನರು, ಮೊಗಲ್ ದೊರೆಗಳು ಆಳಿದ್ದಾರೆ. ಕೆಲಕಾಲ ಮರಾಠರ ಶಿವಾಜಿ ಇಲ್ಲಿನ ಕೋಟೆಯನ್ನು ವಶಪಡಿಸಿಕೊಂಡ ಬಗ್ಗೆ ಇತಿಹಾಸ ಹೇಳುತ್ತದೆ. 1740 ರಿಂದ 1948 ರವರೆಗೆ ಇದು ಹೈದ್ರಾಬಾದ್‌ನ ನಿಜಾಮ ಅರಸರು ನೇಮಿಸಿದ ನವಾಬ್‌ರ ಅಧೀನದಲ್ಲಿತ್ತು.ಮುಖ್ಯವೆಂದರೆ, ಇಲ್ಲಿ ಆಳ್ವಿಕೆ ನಡೆಸಿದವರು ಕೋಟೆಯನ್ನು ಮಾತ್ರ ಸಂರಕ್ಷಿಸುತ್ತ ಬಂದಿದ್ದಾರೆ. 10-11 ನೇ ಶತಮಾನದಲ್ಲಿ ನಿರ್ಮಿಸಿದ ಕೋಟೆಯು ಅನೇಕ ಸಲ ದಾಳಿಗೆ ತುತ್ತಾಗಿ ಹಾನಿಗೊಂಡರೂ ಆಗಾಗ ದುರಸ್ತಿ ಮಾಡಿದ್ದರಿಂದ ಅದೊಂದೇ ಸುಸ್ಥಿತಿಯಲ್ಲಿ ಇದೆ.ಕಲ್ಯಾಣ ಮುಸ್ಲಿಂ ದೊರೆಗಳ ಅಧೀನದಲ್ಲಿ ಹೆಚ್ಚಿನ ಕಾಲ ಇದ್ದಿದ್ದರಿಂದ ಇಲ್ಲಿನ ಮಠ, ಮಂದಿರಗಳ ಜೀರ್ಣೋದ್ಧಾರ ಆಗಿರಲಿಕ್ಕಿಲ್ಲ. ಇಲ್ಲವೇ ಅವೂ ದಾಳಿಗೆ ತುತ್ತಾಗಿರಬಹುದು. ಹೀಗಾಗಿ ಯಾವುದೂ ಮೂಲ ರೂಪದಲ್ಲಿ ಇಲ್ಲ.ಆದರೂ ಪಟ್ಟಣದ ಸುತ್ತಲೂ ಸುಮಾರು 10 ಕಿ.ಮೀ. ವ್ಯಾಪ್ತಿಯಲ್ಲಿ ದೇವಾಲಯ ಹಾಗೂ ಇತರೆ ಕಟ್ಟಡಗಳ ಅವಶೇಷಗಳು ದೊರೆಯುತ್ತವೆ.ಕೆತ್ತನೆಯ ಕಲ್ಲುಗಳು ಮತ್ತು ವಿರೂಪಗೊಂಡ ಮೂರ್ತಿಗಳು ಸಿಕ್ಕಿವೆ. ಇವು ಇಲ್ಲಿನ ಗತವೈಭವಕ್ಕೆ ಪ್ರಮುಖ ಸಾಕ್ಷಿಯಾಗಿವೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.