ಶುಕ್ರವಾರ, ಮೇ 27, 2022
29 °C

ಬಹೂಪಯೋಗಿ ಗೊಬ್ಬರ ತೊಟ್ಟಿ

ಸಂಧ್ಯಾ ಹೆಗಡೆ ಆಲ್ಮನೆ Updated:

ಅಕ್ಷರ ಗಾತ್ರ : | |

ತೋಟದ ಬೆಳೆಗಳಿಗೆ ಬಳಸಲು ಕೃಷಿಕರು ಕೊಟ್ಟಿಗೆ ಸಮೀಪ ಗೊಬ್ಬರಗುಂಡಿ ನಿರ್ಮಿಸಿಕೊಂಡು ಗೊಬ್ಬರ ಸಿದ್ಧಪಡಿಸಿಕೊಳ್ಳುತ್ತಾರೆ. ಇನ್ನು ಕೆಲವರು ಎರೆಹುಳು ಗೊಬ್ಬರಕ್ಕೆ ಪ್ರತ್ಯೇಕ ತೊಟ್ಟಿ ತಯಾರಿಸಿ ಉತ್ತಮ ಎರೆಹುಳು ಗೊಬ್ಬರವನ್ನು ತೋಟಕ್ಕೆ ಹಾಕುತ್ತಾರೆ. ಇದಕ್ಕೆ ಭಿನ್ನವಾಗಿ ಕುಮಟಾ ತಾಲ್ಲೂಕು ಅಂತ್ರವಳ್ಳಿ ನಡಿಗದ್ದೆಯ ಕೃಷಿಕ ಎನ್.ಡಿ.ಹೆಗಡೆ ಅವರು ದೊಡ್ಡಿ ಗೊಬ್ಬರ, ಎರೆಹುಳು ಗೊಬ್ಬರ ಹಾಗೂ ಬಯೋಜೆಸ್ಟ್ (ಜೈವಿಕ ಗೊಬ್ಬರ) ಮಿಶ್ರಣವನ್ನು ಒಂದೇ ತೊಟ್ಟಿಯಿಂದ ಪಡೆಯುತ್ತಿದ್ದಾರೆ.



ಸಗಣಿ ಸಂಗ್ರಹಿಸಲು ಅವರು ಕೊಟ್ಟಿಗೆ ಎದುರು 15್ಡ 15 ಅಗಲ ಹಾಗೂ ಆರು ಅಡಿ ಆಳದ ಸಿಮೆಂಟ್ ತೊಟ್ಟಿ ನಿರ್ಮಿಸಿದ್ದಾರೆ. ಇದೇ ತೊಟ್ಟಿಯಲ್ಲಿ ಪ್ರಯೋಗವಾಗಿ ಅವರು ಒಂದು ಕೆ.ಜಿ.ಯಷ್ಟು ಎರೆಹುಳು ಬಿಟ್ಟರು. ಮೂರ್ನಾಲ್ಕು ತಿಂಗಳಲ್ಲಿ ಎರೆಹುಳು ಸಮೃದ್ಧವಾಗಿ ಬೆಳೆಯಿತು. ಕೊಟ್ಟಿಗೆಯಲ್ಲಿ ಮೂರು ಆಕಳ ಸಗಣಿ, ಸೊಪ್ಪು, ದರಕು, ಅಡಿಕೆ ಕೊನೆಜಂಗು, ಎಲ್ಲ ರೀತಿಯ ಸಾವಯವ ತ್ಯಾಜ್ಯಗಳನ್ನು ಇನ್ನೆಲ್ಲೋ ಎಸೆಯದೆ ಎಲ್ಲವನ್ನೂ ಈ ತೊಟ್ಟಿಯಲ್ಲಿ ತಂದು ಹಾಕಿದರು. ಈಗ ಈ ತೊಟ್ಟಿಯಿಂದ ಸಿದ್ಧವಾಗಿರುವ ಎರೆಹುಳು ಗೊಬ್ಬರ, ಬಯೋಜೆಸ್ಟ್ ದ್ರವ ಅವರ ತೋಟದ ಬೆಳೆಗಳಿಗೆ ಪೋಷಕಾಂಶಯುಕ್ತ ಆಹಾರವಾಗಿದೆ.



ನಾರಾಯಣ ಹೆಗಡೆ ಅವರು ಮಾಡಿದ್ದು ಇಷ್ಟೇ, ಗೊಬ್ಬರದ ತೊಟ್ಟಿಯ ಒಳ ಆವರಣದಲ್ಲಿ ಇನ್ನೊಂದು ಪುಟ್ಟ ತೊಟ್ಟಿ ನಿರ್ಮಿಸಿ, ಸಣ್ಣ ಫಿಲ್ಟರ್ ಅಳವಡಿಸಿದ್ದಾರೆ. ಕೊಟ್ಟಿಗೆ ತೊಳೆದ ನೀರು ಗೊಬ್ಬರಗುಂಡಿಯಲ್ಲಿರುವ ಎಲ್ಲ ಸತ್ವ ಹೀರಿಕೊಂಡು ಪುಟ್ಟ ತೊಟ್ಟಿಯಲ್ಲಿ ಸಂಗ್ರಹವಾಗುತ್ತದೆ. ಇದರ ಹೊರ ಭಾಗದಲ್ಲಿ ಇನ್ನೊಂದು ಫಿಲ್ಟರ್ ಹಾಕಿ ಕೇವಲ ದ್ರಾವಣ ಮಾತ್ರ ಹೊರ ಬರುವ ತಂತ್ರಗಾರಿಕೆ ಬಳಸಿದ್ದಾರೆ.



ಅಡಿಕೆ ಜೊತೆ ದೊಡ್ಡ ಪ್ರಮಾಣದಲ್ಲಿ ಕಾಳುಮೆಣಸು ಬೆಳೆದಿರುವ ಅವರು ತೋಟಕ್ಕೆ ನೀರು ಹಾಯಿಸುವಾಗ ಈ ಬಯೋಜೆಸ್ಟ್ ನೀರಿನ ತೊಟ್ಟಿಯ ಪೈಪ್ ಹಾಗೂ ತೋಟಕ್ಕೆ ಬಿಡುವ ನೀರಿನ ಪೈಪ್ ನಡುವೆ ಸಂಪರ್ಕ ಕಲ್ಪಿಸುತ್ತಾರೆ. ಇದರಿಂದ ಜೆಟ್ ಮೂಲಕ ತೋಟಕ್ಕೆ ಹೋಗುವ ನೀರಿನ ಜೊತೆ ಬಯೋಜೆಸ್ಟ್ ನೀರು ಮಿಶ್ರಣವಾಗಿ ಎಲ್ಲ ಅಡಿಕೆ ಮರ, ಕಾಳುಮೆಣಸು ಗಿಡಗಳಿಗೆ ದೊರೆಯುತ್ತದೆ. ಇದರಿಂದ ತೋಟಕ್ಕೆ ನಿರಂತರವಾಗಿ ಪೋಷಕಾಂಶ ಲಭ್ಯವಾಗಿ, ಬೆಳೆಗಳು ಸಮೃದ್ಧವಾಗಿ ಬೆಳೆಯುತ್ತವೆ.



`ಮಣ್ಣಿನ ಗೊಬ್ಬರಗುಂಡಿಯಲ್ಲಿ ಪೋಷಕಾಂಶಗಳು ಕೆಲ ಪ್ರಮಾಣದಲ್ಲಿ ಮಣ್ಣಿನಲ್ಲಿ ಸೇರಿ ನಷ್ಟವಾಗುತ್ತವೆ. ಆದರೆ ನಮ್ಮ ಮನೆಯ ಗೊಬ್ಬರಗುಂಡಿಯಲ್ಲಿ ತಯಾರಾದ ಪೋಷಕಾಂಶದಲ್ಲಿ ಒಂದು ಕಣವೂ ಹಾಳಾಗುವುದಿಲ್ಲ. ಹಂಚಿನ ಮಾಡು ಮಾಡಿದ್ದರಿಂದ ಮಳೆ ನೀರಿನಲ್ಲಿ ತೊಳೆದು ಹೋಗುವ ಭಯವೂ ಇಲ್ಲ. ಈ ಮಾದರಿ ತೊಟ್ಟಿಯಿಂದ ಅಗತ್ಯವಿದ್ದಲ್ಲಿ ಪ್ರತಿದಿನ ತೋಟಕ್ಕೆ ಪೋಷಕಾಂಶ ನೀಡಬಹುದು. ಪುಟ್ಟ ತೊಟ್ಟಿಯಲ್ಲಿ ಸಂಗ್ರಹವಾಗುವ ಬಯೋಜೆಸ್ಟ್ ನೀರನ್ನು ನರ್ಸರಿ ಗಿಡಗಳಿಗೂ ಬಳಸಬಹುದು' ಎನ್ನುತ್ತಾರೆ ನಾರಾಯಣ ಹೆಗಡೆ.



`ಅಡಿಕೆ ಕೊನೆಜಂಗು ಉತ್ತಮ ಗೊಬ್ಬರವಾಗುತ್ತದೆ. ಎಲ್ಲ ರೀತಿಯ ಸಾವಯವ ತ್ಯಾಜ್ಯ ತಿಂದು ಎರೆಹುಳುಗಳು ಶೀಘ್ರ ಬೆಳವಣಿಗೆ ಹೊಂದುತ್ತವೆ. ಸಹಸ್ರ ಸಂಖ್ಯೆಯಲ್ಲಿ ಎರೆಹುಳುಗಳು ತೊಟ್ಟಿಯಲ್ಲಿ ಬೆಳೆದಿವೆ. ವರ್ಷಕ್ಕೊಮ್ಮೆ ಗೊಬ್ಬರ ತೆಗೆದು ತೋಟಕ್ಕೆ ಹಾಕುತ್ತೇವೆ. ಎರೆಹುಳು ಗೊಬ್ಬರ ತೊಟ್ಟಿಗೆ ತೋಟಗಾರಿಕಾ ಇಲಾಖೆಯ ಸಹಾಯಧನವೂ ದೊರೆತಿದೆ' ಎಂದು ಅವರು ವಿವರಿಸಿದರು. ಎನ್.ಡಿ.ಹೆಗಡೆ ಬಳಸಿರುವ ಸರಳ ತಂತ್ರಜ್ಞಾನವನ್ನು ಎಲ್ಲ ರೈತರು ಅಳವಡಿಸಿಕೊಳ್ಳಬಹುದು. ಇದರಿಂದ ಬೆಳೆಗಳಿಗೆ ಸತ್ವಯುತ ಆಹಾರ ದೊರೆಯುತ್ತದೆ ಎನ್ನುತ್ತಾರೆ ತೋಟಗಾರಿಕಾ ಇಲಾಖೆಯ ಉಪನಿರ್ದೇಶಕ ಎಚ್.ಆರ್.ನಾಯ್ಕ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.