ಶುಕ್ರವಾರ, ಜನವರಿ 24, 2020
28 °C
ಉಪ ಕಾನ್ಸಲ್‌ ಜನರಲ್‌ ದೇವಯಾನಿ ಖೋಬ್ರಾಗಡೆ ಬಂಧನ

ಬಾಂಧವ್ಯಕ್ಕೆ ಧಕ್ಕೆಯಿಲ್ಲ: ಅಮೆರಿಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್‌(ಪಿಟಿಐ): ಮನೆಕೆಲಸ­ದವಳ ವೀಸಾ ಅರ್ಜಿ­ಯಲ್ಲಿ ಸುಳ್ಳು ಮಾಹಿತಿ ನೀಡಿದ ಆರೋಪ­ಕ್ಕಾಗಿ ನ್ಯೂ­ಯಾರ್ಕ್‌­ನಲ್ಲಿನ ಭಾರತದ ಉಪ ಕಾನ್ಸಲ್‌ ಜನರಲ್‌ ದೇವಯಾನಿ ಖೋಬ್ರಾ­ಗಡೆ ಅವ­ರನ್ನು ಅಮೆರಿಕ ಅಧಿ­ಕಾರಿ­ಗಳು ಬಂಧಿಸಿ ಕೋಳ ತೊಡಿ­ಸಿದ ಪ್ರಕರಣದಿಂದ ಉಂಟಾಗಿರುವ ರಾಜ­ತಾಂತ್ರಿಕ ಬಿಕ್ಕಟ್ಟು ಉಭಯ ದೇಶ­ಗಳ ನಡುವಿನ ದ್ವಿಪಕ್ಷೀಯ ಬಾಂಧ­ವ್ಯಕ್ಕೆ ಧಕ್ಕೆಯಾಗಲಾರದು ಎಂಬ ವಿಶ್ವಾ­ಸವನ್ನು ಅಮೆರಿಕ ವ್ಯಕ್ತಪಡಿಸಿದೆ.

‘ಭಾರತದೊಂದಿಗೆ ನಾವು ಹಲವು ವರ್ಷ­ಗಳಿಂದ ಸಹಭಾಗಿತ್ವ ಹೊಂದಿ­ದ್ದೇವೆ. ಇದು ಭವಿಷ್ಯದಲ್ಲೂ ಮುಂದುವ­ರಿಯಲಿದೆ’ ಎಂದು ಅಮೆರಿಕದ ವಿದೇ­ಶಾಂಗ ವಕ್ತಾರರು ತಿಳಿಸಿದ್ದಾರೆ.ದೇವಯಾನಿ ಬಂಧನ ಪ್ರಕರಣ ಕುರಿತು ನ್ಯಾಯಾ­ಲಯದಲ್ಲಿ ವಿಚಾರಣೆ ನಡೆಯುತ್ತಿರುವ ಕಾರಣ ಕೆಲವು ವಿಷಯಗಳ ಬಗ್ಗೆ ವಿವರ ನೀಡಲು ಅಧಿಕಾರಿಗಳು ನಿರಾಕರಿಸಿದ್ದಾರೆ.ಭಾರತದ ವಿದೇ­ಶಾಂಗ ಕಾರ್ಯ­ದರ್ಶಿ ಸುಜಾತಾ ಸಿಂಗ್‌ ಅವರು ಅಮೆ­ರಿಕ ಪ್ರವಾಸದಿಂದ ವಾಪ­ಸಾದ ಮಾರನೇ ದಿನವೇ ದೇವಯಾನಿ ಅವರ ಬಂಧನ ನಡೆದಿ­ರು­ವುದು ಭಾರತ ಹಾಗೂ ಅಮೆರಿಕ ನಡು­ವಿನ ರಾಜ­ತಾಂತ್ರಿಕ ಸಂಬಂಧದ ಮೇಲೆ ಪರಿಣಾಮ ಬೀರಿದೆ.‘ಭಾರತದ ರಾಜತಾಂತ್ರಿಕ ಅಧಿಕಾರಿಗೆ ಕೈಕೋಳ ತೊಡಿಸಿ ಅವಮಾನ ಮಾಡಿರು­ವುದನ್ನು ಒಪ್ಪಿಕೊಳ್ಳ­ಲಾ­ಗದು’ ಎಂದು ವಾಷಿಂ­ಗ್ಟನ್‌ನ ಭಾರ­ತೀಯ ರಾಯ­ಭಾರ ಕಚೇರಿಯ  ಹಿರಿಯ  ರಾಜ­ತಾಂತ್ರಿಕ ತರಣ್‌­ಜಿತ್‌ ಸಿಂಗ್‌ ಸಂಧು ಅಮೆ­ರಿಕದ ಹಿರಿಯ ಅಧಿಕಾರಿ­ಗಳನ್ನು ಭೇಟಿ ಮಾಡಿದ ನಂತರ ಹೇಳಿದ್ದಾರೆ.ಇದೇ ವೇಳೆ ದೇವಯಾನಿ ಅವರ ಬಂಧನ ಪ್ರಕರಣವನ್ನು ಆದಷ್ಟು ಶೀಘ್ರ ಬಗೆಹರಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

‘ದೇವಯಾನಿ ರಾಜತಾಂತ್ರಿಕ ಅಧಿ­ಕಾರಿ. ತಮ್ಮ ಕರ್ತವ್ಯ ನಿರ್ವಹಣೆ­ಗಾಗಿ ಅವರು ಅಮೆರಿಕ­ದಲ್ಲಿದ್ದರು. ಆದ್ದರಿಂದ ಅವರಿಗೆ ವಿನಾಯಿತಿ ನೀಡಬೇಕಿತ್ತು’ ಎಂದು ರಾಯಭಾರ ಕಚೇರಿ ಹೇಳಿಕೆ ತಿಳಿಸಿದೆ.‘ದೇವಯಾನಿ ಅವರು ಇಬ್ಬರು ಮಕ್ಕಳ ತಾಯಿ. ಅವರ ಬಂಧನ ಪ್ರಕರಣ­ದಿಂದ ಭಾರತ ಸರ್ಕಾರ ಆಘಾತ­ಕ್ಕೊಳಗಾಗಿದೆ ಹಾಗೂ ಅಮೆರಿಕದ ಅಧಿ­ಕಾರಿ­ಗಳ ಕ್ರಮದಿಂದ ಗಾಬರಿಗೊಂಡಿದೆ’ ಎಂದೂ ಹೇಳಲಾಗಿದೆ.ದೇವಯಾನಿ ರಾಜತಾಂತ್ರಿಕ ವಿನಾ­ಯಿತಿಗೆ ಅರ್ಹತೆ ಹೊಂದಿದ್ದರು ಎಂದು ಅವರ ವಕೀಲ ಪ್ರೀತ್‌ ಭರಾರ್‌ ಹೇಳಿದ್ದಾರೆ.

ರಾಜತಾಂತ್ರಿಕರಿಗೆ ವಿಯೆನ್ನಾ ಒಪ್ಪಂದದಂತೆ ವಿನಾಯಿತಿ ನೀಡಬೇಕು ಎಂದು ಭಾರತ ಮೂಲದ ಅಮೆರಿಕ ವಕೀಲ ರವಿ ಬಾತ್ರಾ ಹೇಳಿದ್ದಾರೆ.ವಿಯೆನ್ನಾ ಒಪ್ಪಂದದನ್ವಯ ವಿದೇಶಿ ರಾಜ­ತಾಂತ್ರಿಕರಿಗೆ ರಾಜತಾಂತ್ರಿಕ ವ್ಯವ­ಹಾ­ರಗಳಿಗೆ ಸಂಬಂ­ಧಿ­ಸಿದಂತೆ ಮಾತ್ರ  ಅಮೆ­ರಿಕದ ನ್ಯಾಯಾಂಗ ಪ್ರಕ್ರಿಯೆ­ಯಿಂದ   ವಿನಾಯಿತಿ ಇರುತ್ತದೆ. ವೀಸಾ ನಿಯಮ ಉಲ್ಲಂಘಿಸಿದಲ್ಲಿ ಕಾನೂನಿನ ರಕ್ಷಣೆ ನೀಡಲಾಗದು ಎಂದು ಅಮೆರಿಕದ ಅಧಿಕಾರಿಗಳು ಹೇಳಿದ್ದಾರೆ.ಅಧಿಕಾರಿಗಳ ಜತೆ ಚರ್ಚೆ: ದೇವ­ಯಾನಿ ಪ್ರಕರಣದ ಕುರಿತು ಅಮೆರಿಕದ ವಿದೇ­ಶಾಂಗ ಕಾರ್ಯದರ್ಶಿ ಜಾನ್‌ ಕೆರಿ, ರಾಷ್ಟ್ರೀಯ ಭದ್ರತಾ ಉಪ­ಸಲಹೆಗಾರ ಟೋನಿ ಬ್ಲಿಂಕೆನ್‌ ಸೇರಿದಂತೆ  ಪ್ರಮು­ಖರ ಜತೆ ವಿದೇಶಾಂಗ ಕಾರ್ಯದರ್ಶಿ ಸುಜಾತಾ ಸಿಂಗ್‌ ಮಾತನಾಡಿದ್ದಾರೆ.ಅಲ್ಲದೇ ಅಮೆರಿಕದ ವಿದೇ­ಶಾಂಗ ಇಲಾಖೆ­ಯಲ್ಲಿ  ದಕ್ಷಿಣ ಮತ್ತು ಮಧ್ಯ ಏಷ್ಯಾ ವ್ಯವಹಾರಗಳ ಸಹಾಯಕ ಕಾರ್ಯದರ್ಶಿಯಾಗಿರುವ ನಿಶಾ ದೇಸಾಯಿ ಬಿಸ್ವಾಲ್‌‌ ಅವರು ವಿದೇ­ಶಾಂಗ ಇಲಾಖೆ ಮತ್ತು ಭಾರತದ ರಾಜತಾಂತ್ರಿಕರ ಜತೆ ಚರ್ಚೆ ನಡೆಸಿದ್ದಾರೆ.

ಪ್ರತಿಕ್ರಿಯಿಸಿ (+)