ಭಾನುವಾರ, ಜೂನ್ 13, 2021
22 °C

ಬಾಗಲೂರು: ಇಂದು ಕೃಷಿ ಯುಗಾದಿ ಉತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಲಹಂಕ: ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯವು ವಿವಿಧ ಅಭಿವೃದ್ಧಿ ಇಲಾಖೆಗಳ ಸಹಯೋಗದೊಂದಿಗೆ ಬುಧವಾರ (ಮಾ. 21) ಬೆಂಗಳೂರು ಉತ್ತರ ತಾಲ್ಲೂಕಿನ ಜಾಲಾ ಹೋಬಳಿ ಬಾಗಲೂರು ಗ್ರಾಮದಲ್ಲಿ `ಕೃಷಿ ಯುಗಾದಿ ಉತ್ಸವ~ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.ಬೆಳಿಗ್ಗೆ 8ಕ್ಕೆ ಪಶು ವೈದ್ಯಕೀಯ ಆಸ್ಪತ್ರೆ ಆವರಣದಲ್ಲಿ ಪಶು ಚಿಕಿತ್ಸಾ ಮೇಳದ ಉದ್ಘಾಟನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದೆ. ಮೇಳದಲ್ಲಿ ತಜ್ಞರ ಸಲಹೆ, ಬರಡು ರಾಸುಗಳ ತಪಾಸಣೆ, ಸಾಮಾನ್ಯ ಕಾಯಿ ಲೆಗಳ ಚಿಕಿತ್ಸೆ, ಜಂತು ನಿರೋಧಕ ಔಷಧಿ ನೀಡಿಕೆ, ರಕ್ಷವಾಕ್ ಲಸಿಕೆ, ಮಿಶ್ರತಳಿ ಕರುಗಳ ಪ್ರದರ್ಶನ ನಡೆಯಲಿದೆ.ಬೆಳಿಗ್ಗೆ 10ಕ್ಕೆ ಗ್ರಾಮ ಪಂಚಾಯಿತಿ ಕಚೇರಿ ಆವರಣದಲ್ಲಿ `ರೈತರೊಡನೆ ಸಂವಾದ~ ಆಯೋಜಿಸಲಾಗಿದೆ. ಇದರಲ್ಲಿ ರೈತರ ಪ್ರಶ್ನೆಗಳಿಗೆ ತಜ್ಞರಿಂದ ಉತ್ತರ, ವಿವಿಧ ಇಲಾಖೆಗಳಿಂದ ರೈತರಿಗೆ ದೊರೆಯುವ ಸೌಲಭ್ಯಗಳ ಬಗ್ಗೆ ಮಾಹಿತಿ ದೊರೆಯಲಿದೆ.ಸರ್ಕಾರಿ ಶಾಲಾ ಆವರಣದಲ್ಲಿ ರೈತ ಮಹಿಳೆಯರ ಕೌಶಲ್ಯ ತರಬೇತಿ ಕಾರ್ಯ ಕ್ರಮದಡಿಯಲ್ಲಿ ಬೇಕರಿ ಉತ್ಪನ್ನಗಳ ತಯಾರಿಕೆ, ಆಹಾರ ಸಂಸ್ಕರಣೆ ಮತ್ತು ಮೌಲ್ಯವರ್ಧನೆ, ಪ್ಯಾಕಿಂಗ್ ಮತ್ತು ಮಾರಾಟದ ವ್ಯವಸ್ಥೆ ಹಾಗೂ ಗೃಹ ವಿಜ್ಞಾನ ವಿಷಯಗಳ ಬಗ್ಗೆ ತರಬೇತಿ ಹಾಗೂ ಮಹಿಳೆಯರಿಗಾಗಿ ಕಡಿಮೆ ಖರ್ಚಿನ ಪೌಷ್ಟಿಕ ಆಹಾರ ತಯಾರಿಕಾ ಸ್ಪರ್ಧೆಯನ್ನು ಆಯೋಜಿಸಲಾಗಿದೆ.ಹಳೇ ಸಂತೆ ಮೈದಾನದಲ್ಲಿ ಕೃಷಿ ವಸ್ತು ಪ್ರದರ್ಶನ ಏರ್ಪಡಿಸಲಾಗಿದ್ದು, ಇದರಲ್ಲಿ ಇಲಾಖಾ ಚಟುವಟಿಕೆಗಳ ಹಾಗೂ ಆಧುನಿಕ ಕೃಷಿ ತಂತ್ರಜ್ಞಾನ ಪ್ರದರ್ಶನ, ಸಾವಯವ ಕೃಷಿ, ಏರೋಬಿಕ್ ಭತ್ತ, ಸ್ವಸಹಾಯ ಗುಂಪುಗಳು ಸಿದ್ಧಪಡಿಸಿದ ವಸ್ತುಗಳ ಪ್ರದರ್ಶನ, ಮೀನು ಸಾಕಣೆ, ಕೃಷಿ ಅರಣ್ಯ ಹಾಗೂ ರಾಶಿ ಪೂಜೆ ಪ್ರಮುಖ ಆಕರ್ಷಣೆಗಳಾಗಿರುತ್ತವೆ.ಸಮಗ್ರ ಬೇಸಾಯ ಪದ್ಧತಿಗಳ ಮೂಲಕ ಪರಿಶಿಷ್ಟ ಜಾತಿ ಮತ್ತು ಪಂಗಡದ ರೈತರ ಅಭಿವೃದ್ಧಿ ಯೋಜನೆಯನ್ನು ಕರ್ನಾಟಕ ಸರ್ಕಾರದ ವಿಶೇಷ ಘಟಕ ಯೋಜನೆಯಡಿಯಲ್ಲಿ ಅನುಷ್ಠಾನಗೊಳಿಸಲಾಗುತ್ತಿದ್ದು, ರಾಜ್ಯದಲ್ಲಿ ಸರಾಸರಿ 28 ರಿಂದ 30 ಭಾಗದಷ್ಟು ಪರಿಶಿಷ್ಟ ಜಾತಿ-ಪಂಗಡದ ರೈತರಿದ್ದು, ಇದರಲ್ಲಿ ಶೇ. 90ರಷ್ಟು ಅತಿಸಣ್ಣ ರೈತರಾಗಿದ್ದಾರೆ.

 

ಇವರು ತಮ್ಮ ಜೀವನೋಪಾಯಕ್ಕಾಗಿ ಕೃಷಿಯನ್ನೆ ಅವಲಂಬಿಸ್ದ್ದಿದು, ಇತ್ತೀಚಿನ ದಿನಗಳಲ್ಲಿ ಜಮೀನು ವಿಭಾಗಗಳಾಗಿ ಮತ್ತು ಆರ್ಥಿಕ ತೊಂದರೆಯಿಂದ ಕೃಷಿ ಉತ್ಪಾದನೆ ಕಡಿಮೆಯಾಗುತ್ತಿದೆ ಎಂದು ವಿವಿ ಸಹ ವಿಸ್ತರಣಾ ನಿರ್ದೇಶಕ ಡಾ.ಕೆ.ಜಗದೀಶ್ವರ ಅವರು ತಿಳಿಸಿದರು.ಸಂದಿಗ್ಧ ಪರಿಸ್ಥಿತಿಯಲ್ಲಿ ಸಿಲುಕಿರುವ ರೈತರು ದಿಕ್ಕು ತೋಚದೆ ಕೃಷಿಯನ್ನು ಬಿಟ್ಟು ತಮ್ಮ ಜೀವನೋಪಾಯಕ್ಕಾಗಿ ಕೃಷಿಯೇತರ ಚಟುವಟಿಕೆಗಳನ್ನು ಅವಲಂಬಿಸಿ ವಲಸೆ ಹೋಗುತ್ತಿದ್ದಾರೆ. ಇವರಿಗೆ ಕೃಷಿ ಬಿಟ್ಟರೆ ಬೇರೇನೂ ತಿಳಿದಿಲ್ಲವಾದ್ದರಿಂದ ಈ ಒಂದು ಸಮಸ್ಯೆಯನ್ನು ಸರ್ಕಾರ ಮನಗಂಡು ಮರಳಿ ಕೃಷಿಗೆ ವಾಪಸ್ ತರಲು ವಿನೂತನ ಕಾರ್ಯಕ್ರಮ ಆಯೋಜಿಸಿದ್ದು, ಕೃಷಿ ವಿವಿ ವಿಜ್ಞಾನಿಗಳು ಈ ಯೋಜನೆಯನ್ನು ಪ್ರಾಯೋಗಿಕವಾಗಿ ಗೊಂಚಲು ಗ್ರಾಮಗಳ ಆಧಾರದ ಮೇಲೆ ಪರಿಶಿಷ್ಟ ಜಾತಿ- ಪಂಗಡದ ಜನರಿರುವ ಗ್ರಾಮಗಳಿಗೆ ಅನುಷ್ಠಾನಗೊಳಿಸುತ್ತಿದ್ದಾರೆ ಎಂದರು.ಮಧ್ಯಾಹ್ನ 2ಕ್ಕೆ ನಡೆಯಲಿರುವ ರೈತರ ಸಮ್ಮೇಳನದ ಉದ್ಘಾಟನೆಯನ್ನು ಗೃಹ ಸಚಿವ ಆರ್.ಅಶೋಕ ಅವರು ನೆರವೇರಿಸಲಿದ್ದಾರೆ. ಕಾರ್ಮಿಕ ಸಚಿವ ಬಿ.ಎನ್.ಬಚ್ಚೇಗೌಡ ಅವರು, ರೈತರಿಗೆ ಕೃಷಿ ಪರಿಕರಗಳನ್ನು ವಿತರಿಸಲ್ದ್ದಿದು, ಕೃಷಿ ವಿಶ್ವವಿದ್ಯಾನಿಲಯದ ಕುಲಪತಿ ಡಾ.ಕೆ.ನಾರಾಯಣಗೌಡ ಪ್ರಾಸ್ತಾವಿಕ ಭಾಷಣ ಮಾಡಲಿದ್ದಾರೆ. ಶಾಸಕ ಕೃಷ್ಣ ಬೈರೇಗೌಡ ಅವರು ಅಧ್ಯಕ್ಷತೆ ವಹಿಸುವರು. ಲೋಕಸಭಾ ಸದಸ್ಯ ಡಿ.ಬಿ.ಚಂದ್ರೇಗೌಡ, ವಿಧಾನ ಪರಿಷತ್ ಸದಸ್ಯ ದಯಾನಂದರೆಡ್ದಿ ಇತರರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.