ಭಾನುವಾರ, ಏಪ್ರಿಲ್ 11, 2021
32 °C

ಬಾಗೇಪಲ್ಲಿಯಲ್ಲಿ ಬದುಕು ತ್ರಾಸದಾಯಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಗೇಪಲ್ಲಿ: ನೋಟ ಹರಿಸಿದಷ್ಟು ಹಸಿರು ಕಾಣಿಸದ ಬೋಳು ಬೆಟ್ಟಗಳು, ಮರುಭೂಮಿಯಂತೆ ಕಾಣಸಿಗುವ ಬಯಲು, ಗುಟುಕು ನೀರಿಗಾಗಿ ಪರಿತಪಿಸುವ ಜಾನುವಾರುಗಳು, ಕಾದ ಕಬ್ಬಿಣದಂತಿರುವ ರಸ್ತೆಗಳು, ಒಂದೇ....  ಎರಡೇ.......? ಹೀಗೆ ಬಾಗೇಪಲ್ಲಿ ಜನತೆ ಬದುಕು ಬವಣೆಯಾಗಿದೆ. ಬಾಗೇಪಲ್ಲಿ ಇದೀಗ ಬಿರುಬಿಸಿಲು. ಬಿಸಿಲು ಬಂದಿತೆಂದರೆ ನೆರೆಯ ಆಂಧ್ರಪ್ರದೇಶದ ರಾಯಲಸೀಮೆ ನೆನಪಿಸುತ್ತದೆ. ಮನೆಯಿಂದ ಹೊರಗೆ ಕಣ್ಣು ಇಣುಕಿ ನೋಡಲೂ ಸಾಧ್ಯವಾಗದಷ್ಟು ಬಿಸಿಲಿನ ಪ್ರಖರತೆ. ಬೀಸುವ ಗಾಳಿಗೆ ಎಂತಹವರ ಮೊಗವಾದರೂ ಬಾಡಲೇಬೇಕು. ಇದೇ ಸುಡು ಬಿಸಿಲಿಗೆ ಎಲ್ಲವೂ ಬರಡಾಗುತ್ತಿದೆ. ನದಿಗಳು ಮೊದಲೇ ಇಲ್ಲವಾಗಿದೆ.ಕೆರೆಗಳು ಹಾಗೂ ಕುಂಟೆಗಳಿದ್ದರೂ ನೀರಿನ ಆಸರೆಯಿಲ್ಲ.ತಾಲ್ಲೂಕಿನ ಪ್ರದೇಶ ಭೌಗೋಳಿಕ ಪ್ರದೇಶದಲ್ಲಿ ದೊಡ್ಡದಾಗಿದೆ. ಬೋಳು ಬೆಟ್ಟಗುಡ್ಡಗಳದೇ ಕಾರುಬಾರು. ಸುಮಾರು 32 ಸಾವಿರ ಹೆಕ್ಟೇರ್ ಅರಣ್ಯ ಪ್ರದೇಶ ಹೊಂದಿದೆ. ಆದರೆ ಬೆಟ್ಟಗುಡ್ಡ, ಅರಣ್ಯ ಹಾಗೂ ರಸ್ತೆಯ ಪಕ್ಕದಲ್ಲಿರುವ ಮರ ಸಸಿಗಳು ಕಾಣಸಿಗದಾಗಿದೆ. ಒಂದೆರಡು ಚೀಲದ ಇದ್ದಿಲಿನ ಆಸೆಗಾಗಿ ಬೆಟ್ಟಗಳನ್ನೇ ಸುಡಲಾಗುತ್ತಿದೆ. ಇದರಿಂದ ಜೀವರಾಶಿಗಳು ಸುಟ್ಟು ಭಸ್ಮವಾಗಿದೆ. ಹಚ್ಚ ಹಸಿರಿನ ಹೊದಿಕೆಯಂತಿರಬೇಕಾದ ಬೆಟ್ಟಗಳು ಹೆಣಗಳನ್ನು ಸುಡುವ ಸುಡುಗಾಡಿನಂತಿದೆ. ಅಮಾನುಷವಾಗಿ ಕಡಿದ ಮರಗಳನ್ನು ಇಟ್ಟಿಗೆ ಗೂಡಿಗಾಗಿ ಬಳಸಲಾಗುತ್ತಿದೆ. ಹತ್ತಾರು ಕಿ.ಮೀ  ಸಂಚರಿಸಿದರೂ ಒಂದು ಮರವೂ ಕಾಣಸಿಗದ ಪರಿಸ್ಥಿತಿ ಎದುರಾಗಿದೆ.ಅಂತರ್ಜಲದ ನೆಲದಲ್ಲಿ ಫ್ಲೋರೈಡ್ ತುಂಬಿಕೊಂಡು ಜನಜೀವನ ನಿತ್ಯ ನರಕಯಾತನೆಯಾಗಿರಿಸಿಕೊಂಡಿದೆ. 800-1000 ಅಡಿ ಆಳ  ಕೊರೆದರೂ ನೀರಿನ ಕೊರತೆಯಿದೆ. ಶಾಶ್ವತ ನೀರಾವರಿ ಇಲ್ಲಿನ ಜನತೆಗೆ ಕೇವಲ ಕನಸಿನ ಮಾತಾಗಿದೆ. ಅರಣ್ಯಕ್ಕೆ ಹಾಕುವ ಬೆಂಕಿ ನಿಲ್ಲುವುದಿಲ್ಲ. ಮಣ್ಣು-ಕಲ್ಲು ಮಾರಾಟ ನಿಲ್ಲುವುದಿಲ್ಲ. ಇಲ್ಲಿ ಆಳುವವರು ಹಾಗೆ ಇದ್ದಾರೆ. ಆಳಿಸಿಕೊಳ್ಳುವರರು ಹಾಗೇ ಮೌನದ ಮೊರೆ ಹೊಕ್ಕಿದ್ದಾರೆ. ಯಾರಿಗೆಷ್ಟಿದೆ ಸಾಮಾಜಿಕ ಕಳಿಕಳಿ ಎಂಬ ಪ್ರಶ್ನೆಯಲ್ಲಿಯೇ ಅಮೂಲ್ಯ ಸಂಪತ್ತು ಕಣ್ಮರೆಯಾಗುತ್ತಿದೆ. ಈಗಲೇ ಇಂತಹ ಸ್ಥಿತಿಯಲ್ಲಿ ಜನಸಾಮಾನ್ಯರ ಬದಕಿನ ಬಂಡಿ ನಡೆಯುತ್ತಿದ್ದು, ಮುಂದೇನು ಎಂಬ ಪ್ರಶ್ನೆ ಎದೆಯೊಡೆಯುತ್ತಿದೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.