ಶನಿವಾರ, ಮಾರ್ಚ್ 25, 2023
30 °C

ಬಾಯ್ತೆರೆದು ನಿಂತಿದೆ ಬಲಿಗಾಗಿ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಯ್ತೆರೆದು ನಿಂತಿದೆ ಬಲಿಗಾಗಿ...

ಚಿಕ್ಕೋಡಿ:  ತಾಲ್ಲೂಕಿನಲ್ಲಿ ಬಹುತೇಕ ಗ್ರಾಮೀಣ ರಸ್ತೆಗಳು ಹದಗೆಟ್ಟು ಸಂಚಾರಕ್ಕೆ ಅಯೋಗ್ಯವಾಗಿವೆ. ಇಂತಹ ರಸ್ತೆಗಳ ಪಕ್ಕದಲ್ಲೇ ಇರುವ ತೆರೆದ ಬಾವಿಗಳು ಬಲಿಗಾಗಿ ಬಾಯ್ತೆರೆದು ನಿಂತಿವೆ. ಶಿಥಿಲಗೊಂಡಿರುವ ಸೇತುವೆಗಳೂ ಬಲಿ ಬೇಡುತ್ತಿವೆ. ಇಂತಹ ಮೃತ್ಯುರೂಪಿ ರಸ್ತೆಗಳಲ್ಲೇ ಜೀವ ಕೈಯಲ್ಲಿ ಹಿಡಿದುಕೊಂಡು ಸಂಚರಿಸಬೇಕಾದ ಅನಿವಾರ್ಯತೆ ಜನರದ್ದು.



ತಾಲ್ಲೂಕಿನ ಯಕ್ಸಂಬಾ-ಸದಲಗಾ, ಚಿಕ್ಕೋಡಿ- ಯಕ್ಸಂಬಾ ರಸ್ತೆಗಳ ಮಧ್ಯೆ, ಹತ್ತರವಾಟ ಗೇಟ್ ಬಳಿ, ಸಂಕೇಶ್ವರ-ಜೇವರ್ಗಿ ರಸ್ತೆಯ ಪಕ್ಕ, ಎನ್-ಎಂ ಮುಖ್ಯ ರಸ್ತೆಯಿಂದ ಯಾದ್ಯಾನವಾಡಿಗೆ ಹೋಗುವ ರಸ್ತೆ ಮಧ್ಯೆ ಸೇರಿದಂತೆ ಅನೇಕ ಕಡೆಗಳಲ್ಲಿ ರಸ್ತೆಗಳಿಗೆ ಹೊಂದಿಕೊಂಡೇ ಇರುವ ತೆರೆದ ಬಾವಿಗಳು ರಕ್ಷಣಾ ಗೋಡೆಗಳಿಲ್ಲದೇ ಯಾವುದಾದರೊಂದು ಬಲಿ ಬೀಳಬಹುದೆಂಬ ನಿರೀಕ್ಷೆಯಲ್ಲಿವೆ. ಕೆಲವು ಬಾವಿಗಳು ನೀರಿನಿಂದ ತುಂಬಿ ತುಳುಕುತ್ತಿದ್ದರೆ, ಕೆಲವು ಹಾಳು ಬಿದ್ದಿವೆ.  ಹಾಳು ಬಿದ್ದಿರುವ ಬಾವಿಗಳನ್ನು ಮುಚ್ಚಿಲ್ಲ. ಸುತ್ತಮುತ್ತ ಗಿಡಕಂಟಿಗಳು-ಬೇಲಿ ಬೆಳೆದು ನಿಂತಿವೆ. ಅಪರಿಚಿತ ವಾಹನ ಚಾಲಕರಿಗೆ ಇಲ್ಲಿ ತೆರೆದ ಬಾವಿ ಇರುವುದು ಗೊತ್ತಾಗುವುದೇ ಇಲ್ಲ. ಮೊದಲೇ ಅಂತಹ ಬಾವಿಯ ಅಂಚುಗಳು ಕಳಚಿ ಬೀಳುತ್ತಿರುತ್ತವೆ. ಇಂತಹ ಬಾವಿಗಳ ಬಳಿ ವಾಹನ ಕೊಂಚ ವಾಲಿದರೂ ಅವಘಡ ಕಟ್ಟಿಟ್ಟ ಬುತ್ತಿ.



ತಾಲ್ಲೂಕಿನ ಬೆಳಕೂಡ ಗ್ರಾಮದ ಬಳಿ ದೊಡ್ಡಳ್ಳಕ್ಕೆ ಅಡ್ಡಲಾಗಿ ನಿರ್ಮಿಸಿರುವ ಚಿಕ್ಕ ಸೇತುವೆಯ ಭಾಗವೊಂದು ಕಳಚಿ ಬಿದ್ದು ವರ್ಷಗಳೇ ಗತಿಸಿವೆ. ಈ ಸೇತುವೆ ಮೂಲಕ ನಿತ್ಯವೂ ನೂರಾರು ವಾಹನಗಳು ಸಂಚರಿಸುತ್ತವೆ. ಸೇತುವೆ ದುರಸ್ತಿಗೆ ಒತ್ತಾಯಿಸಿ ಗ್ರಾಮಸ್ಥರು, ಚುನಾಯಿತ ಪ್ರತಿನಿಧಿಗಳಿಗೆ ಹಾಗೂ ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಮನವಿ ನೀಡಿದರೂ ಪ್ರಯೋಜನವಾಗಿಲ್ಲ. ಪ್ರಯಾಣಿಕರು ಈ ಸೇತುವೆ ಬಂದೊಡನೆ ಜೀವ ಕೈಯಲ್ಲಿ ಹಿಡಿದುಕೊಂಡು ದಾಟುವಂತಾಗಿದೆ. ಚಾಲಕ ಒಂಚೂರು ಮೈಮರೆತರೂ ವಾಹನ ಹಳ್ಳಕ್ಕೇ ಉರುಳುತ್ತದೆ.



ಚಿಕ್ಕೋಡಿ ಪಟ್ಟಣದ ಸುತ್ತಮುತ್ತ ಇರುವ ಚಿಂಚಣಿ, ಉಮರಾಣಿ, ಚನ್ಯಾನದಡ್ಡಿ ಹಾಗೂ ಘಟ್ಟಗಿ ಬಸವೇಶ್ವರ ಕಣಿವೆ ರಸ್ತೆಗಳಂತೂ ಸಾವಿನ ರಹದಾರಿಗಳಾಗಿವೆ. ಆಳವಾದ ಕಂದಕಗಳನ್ನು ಹೊಂದಿರುವ ಈ ರಸ್ತೆಗಳ ಪಕ್ಕದಲ್ಲಿ ಓಬಿರಾಯನ ಕಾಲದಲ್ಲಿ ನಿರ್ಮಿಸಿರುವ ತಡೆಗೋಡೆಗಳು ಕುಸಿದುಬಿದ್ದು ವರ್ಷಗಳೇ ಗತಿಸಿವೆ. ಕಳೆದ ವಾರವಷ್ಟೆ ಚನ್ಯಾನದಡ್ಡಿ ಕಣಿವೆಯಲ್ಲಿ ಡೀಸೆಲ್ ಟ್ಯಾಂಕರ್‌ವೊಂದು ಉರುಳಿಬಿದ್ದಿದ್ದನ್ನು ಸ್ಮರಿಸಬಹುದಾಗಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.