ಗುರುವಾರ , ಮೇ 6, 2021
33 °C

ಬಾರ್‌ಗಳಲ್ಲಿ ಅಕ್ರಮ: ಪೊಲೀಸರೇ ಹೊಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾರ್‌ಗಳಲ್ಲಿ ಅಕ್ರಮ: ಪೊಲೀಸರೇ ಹೊಣೆ

ಬೆಂಗಳೂರು: ರಾಜಧಾನಿಯ ವ್ಯಾಪ್ತಿಯಲ್ಲಿ ಇನ್ನು ಮುಂದೆ ಡಿಸ್ಕೊಥೆಕ್ ಮತ್ತು ಮಹಿಳೆಯರು ಪರಿಚಾರಕರಾಗಿರುವ ಬಾರ್‌ಗಳಲ್ಲಿ ಅಕ್ರಮ ಚಟುವಟಿಕೆಗಳು ನಡೆದರೆ ಸಂಬಂಧಿಸಿದ ಠಾಣಾಧಿಕಾರಿ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಲು ಸರ್ಕಾರ ಚಿಂತನೆ ನಡೆಸಿದೆ.ನಗರದಲ್ಲಿನ ಡಿಸ್ಕೊಥೆಕ್‌ಗಳು ಮತ್ತು ಮಹಿಳೆಯರು ಪರಿಚಾರಕರಾಗಿರುವ ಬಾರ್‌ಗಳಲ್ಲಿ ಅಕ್ರಮ ನಡೆಯುತ್ತಿರುವುದು ಸುದ್ದಿ ವಾಹಿನಿಗಳು ನಡೆಸಿದ ರಹಸ್ಯ ಕಾರ್ಯಾಚರಣೆಯಲ್ಲಿ ಬಯಲಾಗಿತ್ತು. ಬಳಿಕ ಅಂತಹ ಕೇಂದ್ರಗಳ ಮೇಲೆ ದಾಳಿ ನಡೆಸಿದ್ದ ಪೊಲೀಸರು, ಅವುಗಳನ್ನು ಮುಚ್ಚಿಸಿದ್ದರು.ಇವುಗಳ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಕೆ.ಜೆ.ಜಾರ್ಜ್ ಅವರು ಶುಕ್ರವಾರ ಸಮಾಲೋಚನಾ ಸಭೆ ನಡೆಸಿದರು. ಇದರಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು, ಹೋಟೆಲ್ ಉದ್ಯಮದ ಪ್ರತಿನಿಧಿಗಳು, ವಕೀಲರು, ಸ್ವಯಂಸೇವಾ ಸಂಸ್ಥೆಗಳ ಪ್ರತಿನಿಧಿಗಳು, ಮಾಧ್ಯಮ ಪ್ರತಿನಿಧಿಗಳು, ಬಾರ್‌ಗಳಲ್ಲಿ ಪರಿಚಾರಕರಾಗಿ ಕೆಲಸ ಮಾಡುತ್ತಿದ್ದ ಯುವತಿಯರು ಸೇರಿದಂತೆ ಹಲವರು ಪಾಲ್ಗೊಂಡಿದ್ದರು. ಹೊಸ ನಿಯಮಾವಳಿ ರೂಪಿಸುವ ಸಂಬಂಧ ಸಚಿವರು ವಿವಿಧ ವಲಯದ ಜನರಿಂದ ಅಭಿಪ್ರಾಯ ಪಡೆದರು.ಸಭೆಯಲ್ಲಿ ವ್ಯಕ್ತವಾದ ಅಭಿಪ್ರಾಯಗಳಿಗೆ ಪ್ರತಿಕ್ರಿಯಿಸಿದ ಸಚಿವರು, `ಆಯಾ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿನ ಡಿಸ್ಕೊಥೆಕ್ ಮತ್ತು ಮಹಿಳೆಯರು ಪರಿಚಾರಕರಾಗಿರುವ ಬಾರ್‌ಗಳಲ್ಲಿ ಅಕ್ರಮ ಚಟುವಟಿಕೆ ನಡೆದರೆ ಸಂಬಂಧಿಸಿದ ಠಾಣಾಧಿಕಾರಿಯನ್ನೇ ಹೊಣೆ ಮಾಡಲಾಗುವುದು. ಸಂಬಂಧಿಸಿದ ಹಿರಿಯ ಅಧಿಕಾರಿಗಳ ವಿರುದ್ಧವೂ ಕ್ರಮ ಜರುಗಿಸಲಾಗುವುದು. ಹೊಸ ನಿಯಮಾವಳಿಯಲ್ಲಿ ಈ ಅಂಶವನ್ನು ಸೇರಿಸಲಾಗುವುದು' ಎಂದರು.ಬದಲಾದ ಜೀವನ ಶೈಲಿಗೆ ತಕ್ಕಂತೆ ನಗರದಲ್ಲಿ ರಾತ್ರಿ ಜೀವನಕ್ಕೆ ಅವಕಾಶ ಕಲ್ಪಿಸುವ ವಿಷಯದಲ್ಲಿ ಸರ್ಕಾರದ ತಕರಾರು ಇಲ್ಲ. ಆದರೆ, ಜನರನ್ನು ತಪ್ಪು ದಾರಿಗೆ ಎಳೆಯುವ ಚಟುವಟಿಕೆಗಳು ನಡೆದರೆ ಸಹಿಸಲು ಸಾಧ್ಯವಿಲ್ಲ. ನಗರದ ಗೌರವಕ್ಕೆ ಧಕ್ಕೆ ತರುವಂತಹ ಚಟುವಟಿಕೆಗಳಿಗೆ ಸರ್ಕಾರ ಆಸ್ಪದ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.ಮೊದಲು ಎಲ್ಲ ವಲಯಗಳಿಂದ ಸ್ವೀಕರಿಸಿದ ಸಲಹೆ ಆಧರಿಸಿ ನಿಯಮ ರೂಪಿಸಲಾಗುವುದು. ಈ ಕುರಿತು ಇತರ ಸಚಿವರು ಹಾಗೂ ಮುಖ್ಯಮಂತ್ರಿಯವರ ಜೊತೆ ಚರ್ಚಿಸಲಾಗುವುದು. ಬಳಿಕ ಸಾರ್ವಜನಿಕವಾಗಿ ಪ್ರಕಟಿಸಲಾಗುವುದು. ನಂತರವೇ ಹೊಸ ನಿಯಮಾವಳಿ ಜಾರಿಗೆ ಬರುತ್ತದೆ ಎಂದರು.`ಸಿ.ಸಿಟಿವಿ ಅಳವಡಿಸಿ': `ಡಿಸ್ಕೊಥೆಕ್‌ಗಳು ಹಾಗೂ ಮಹಿಳೆಯರು ಪರಿಚಾರಕರಾಗಿರುವ ಬಾರ್‌ಗಳಲ್ಲಿ ಏನು ಮಾಡಬೇಕು? ಏನು ಮಾಡಬಾರದು? ಎಂಬುದರ ಕುರಿತು ನಿಯಮಾವಳಿಯಲ್ಲಿ ಸ್ಪಷ್ಟತೆ ಇಲ್ಲ. ಉದ್ಯಮದಲ್ಲೂ ಕೆಲವು ಸಮಸ್ಯೆಗಳಿವೆ. ಎಲ್ಲರೂ ಸೇರಿ ಅದನ್ನು ಪರಿಹರಿಸಿಕೊಳ್ಳಬೇಕಿದೆ.ಕಾನೂನಿನ ಪರಿಮಿತಿಯಲ್ಲಿ ವ್ಯವಹಾರ ನಡೆಸುವವರಿಗೆ ಸರ್ಕಾರ ತೊಂದರೆ ನೀಡಬಾರದು' ಎಂದು ಬೆಂಗಳೂರು ಬಾರ್ ಮತ್ತು ರೆಸ್ಟೋರೆಂಟ್, ಪಬ್ ಹಾಗೂ ಹೋಟೆಲ್‌ಗಳ ಸಂಘದ ಅಧ್ಯಕ್ಷ ಆಶೀಶ್ ಕೊಠಾರಿ ಮನವಿ ಮಾಡಿದರು.ಮಹಿಳೆಯರು ಪರಿಚಾರಕರಾಗಿರುವ ಬಾರ್‌ಗಳ ಮಾಲೀಕರ ಸಂಘದ ಅಧ್ಯಕ್ಷ ಟಿ.ಸಿ. ಗೋಪಾಲಕೃಷ್ಣ ಮಾತನಾಡಿ, `ನಮ್ಮ ಸಂಘದಲ್ಲಿ ನೋಂದಣಿಯಾಗಿರುವ ಬಾರ್‌ಗಳಲ್ಲಿ ಯಾವುದೇ ರೀತಿಯ ಅಕ್ರಮ ಚಟುವಟಿಕೆ ನಡೆಯುತ್ತಿಲ್ಲ. ಮಹಿಳಾ ಪರಿಚಾರಕರಿಗೆ ವಸ್ತ್ರಸಂಹಿತೆ ಇದೆ. ಕೆಲಸದ ವೇಳೆ ಜೀನ್ಸ್ ಪ್ಯಾಂಟ್, ಟೀ ಶರ್ಟ್ ಅಥವಾ ಚೂಡಿದಾರ್ ಮಾತ್ರ ಧರಿಸಬೇಕು. ಕೆಲವು ಕಡೆಗಳಲ್ಲಿ ಅಕ್ರಮ ನಡೆದಿದೆ ಎಂದು ಎಲ್ಲವನ್ನೂ ಬಂದ್ ಮಾಡುವುದು ಸರಿಯಲ್ಲ' ಎಂದು ವಾದಿಸಿದರು.ನಿಯಂತ್ರಣಕ್ಕೆ ಸಲಹೆ: ಸಭೆಯಲ್ಲಿ ಮಾತನಾಡಿದ ಹಲವರು ವಿಭಿನ್ನ ಸಲಹೆಗಳನ್ನು ಮುಂದಿಟ್ಟರು. ಮನರಂಜನೆಯ ಹೆಸರಿನಲ್ಲಿ ಅನೈತಿಕ ಚಟುವಟಿಕೆಗಳಿಗೆ ಅವಕಾಶ ನೀಡಕೂಡದು ಎಂಬ ಅಭಿಪ್ರಾಯವನ್ನು ಬಹುತೇಕರು ವ್ಯಕ್ತಪಡಿಸಿದರು. ಕೆಲಸದ ಸ್ಥಳದಲ್ಲಿ ಲೈಂಗಿಕ ಶೋಷಣೆ ನಿಷೇಧ ಕಾಯ್ದೆ ಜಾರಿ, ಡಿಸೊಥೆಕ್ ಹಾಗೂ ಬಾರ್‌ಗಳಲ್ಲಿ ನಡೆಯುವ ಅಕ್ರಮ ತಡೆಗೆ ಪ್ರತ್ಯೇಕ ಪೊಲೀಸ್ ವಿಭಾಗ ಸ್ಥಾಪನೆ, ಅಬಕಾರಿ, ಕಾರ್ಮಿಕ ಇಲಾಖೆ ಅಧಿಕಾರಿಗಳಿಗೂ ಹೊಣೆಗಾರಿಕೆ ನಿಗದಿ ಮಾಡುವುದು, ಮಾನವ ಕಳ್ಳಸಾಗಣೆ ಮೇಲೆ ನಿಗಾ ಇಡುವುದು ಸೇರಿದಂತೆ ಹಲವು ಸಲಹೆಗಳು ಕೇಳಿಬಂದವು.ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಅಜಿತ್ ಗುಂಜಾಳ್, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ವಿ.ಉಮೇಶ್, ಡಿಜಿಪಿ ಲಾಲ್ ರೋಕುಮಾ ಪಚಾವೊ, ಬೆಂಗಳೂರು ನಗರ ಪೊಲೀಸ್ ಕಮಿಷನರ್ ಕೆ.ಜ್ಯೋತಿಪ್ರಕಾಶ್ ಮಿರ್ಜಿ, ನಿವೃತ್ತ ಡಿಜಿಪಿ ಡಾ.ಅಜಯಕುಮಾರ್ ಸಿಂಗ್ ಮತ್ತಿತರರು ಸಭೆಯಲ್ಲಿ ಹಾಜರಿದ್ದರು.

ಅವಧಿ ವಿಸ್ತರಣೆಗೆ ಮನವಿ

ನಗರದಲ್ಲಿ ರಾತ್ರಿ ವೇಳೆ ದುಡಿಯುವವರ ಸಂಖ್ಯೆ ಹೆಚ್ಚುತ್ತಿರುವುದರಿಂದ ಬಾರ್‌ಗಳು ಹಾಗೂ ಹೋಟೆಲ್‌ಗಳನ್ನು ರಾತ್ರಿ ಒಂದು ಗಂಟೆಯವರೆಗೂ ತೆರೆಯಲು ಅವಕಾಶ ನೀಡಬೇಕೆಂಬ ಮನವಿಯನ್ನು ಹೋಟೆಲ್ ಉದ್ಯಮದ ಪ್ರತಿನಿಧಿಗಳು ಗೃಹ ಸಚಿವರ ಮುಂದಿಟ್ಟರು.ವಿವಿಧ ತಾರಾ ಹೋಟೆಲ್‌ಗಳ ಮುಖ್ಯಸ್ಥರು ಹಾಗೂ ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಚಂದ್ರಶೇಖರ ಹೆಬ್ಬಾರ್ ಈ ಬೇಡಿಕೆ ಇಟ್ಟರು. ಚರ್ಚಿಸಿದ ಬಳಿಕವೇ ನಿರ್ಧಾರಕ್ಕೆ ಬರುವುದಾಗಿ ಸಚಿವರು ತಿಳಿಸಿದರು.ಪ್ರಮುಖ ಸಲಹೆಗಳು

`2005ರಲ್ಲಿ ಜಾರಿಗೆ ತಂದ ಮನರಂಜನಾ ಸ್ಥಳಗಳ ಆದೇಶದಲ್ಲೇ ಗೊಂದಲವಿದೆ. ಈ ಆದೇಶಕ್ಕೆ ತಿದ್ದುಪಡಿ ತರದಿದ್ದರೆ ಅಕ್ರಮ ತಡೆಗೆ ಅವಕಾಶವೇ ಇರುವುದಿಲ್ಲ'.

-ಹೇಮಂತ್, ವಕೀಲರು

`ನಗರ ದೊಡ್ಡದಾಗಿ ಬೆಳೆದಿದೆ. ಪೊಲೀಸ್ ಸಿಬ್ಬಂದಿಯ ಸಂಖ್ಯೆಯಲ್ಲಿ ಹೆಚ್ಚೇನೂ ಏರಿಕೆ ಆಗಿಲ್ಲ. ಮೊದಲು ಸಿಬ್ಬಂದಿ ಸಂಖ್ಯೆ ಹೆಚ್ಚಿಸಿ'.

-ಶಿವಕುಮಾರ್, ಎಫ್‌ಕೆಸಿಸಿಐ ನಿಯೋಜಿತ ಅಧ್ಯಕ್ಷ

`ಡಿಸ್ಕೊಥೆಕ್ ಹಾಗೂ ಮಹಿಳಾ ಪರಿಚಾರಕರಿರುವ ಬಾರ್‌ಗಳ ಹೆಸರಿನಲ್ಲಿ ಯುವತಿಯರ ಶೋಷಣೆ ನಡೆಯುತ್ತಿದೆ. ಶೇಕಡ 50ರಷ್ಟು ಯುವತಿಯರನ್ನು ಅಕ್ರಮ ಚಟುವಟಿಕೆಗಳಿಗೆ ಬಳಸಲಾಗುತ್ತಿದೆ. ಇದಕ್ಕಾಗಿ ಹೊರ ರಾಜ್ಯಗಳು ಹಾಗೂ ಬಾಂಗ್ಲಾದೇಶದಿಂದ ಮಾನವ ಕಳ್ಳಸಾಗಣೆಯೂ ನಡೆಯುತ್ತಿದೆ. ಮಹಿಳೆಯರು ಕೆಲಸ ಮಾಡುವ ಡಿಸ್ಕೊಥೆಕ್ ಮತ್ತು ಬಾರ್‌ಗಳ ಪರಿಶೀಲನೆಗೆ ಸ್ವಯಂ ಸೇವಾ ಸಂಸ್ಥೆಗಳಿಗೂ ಅವಕಾಶ ನೀಡಬೇಕು'.

-ಅನಿತಾ, ಸ್ವಯಂಸೇವಾ ಸಂಸ್ಥೆ ಪ್ರತಿನಿಧಿ .`ನಾನು ಬಾರ್‌ನಲ್ಲಿ ಕೆಲಸ ಮಾಡುತ್ತಿದ್ದೆ. ಅಲ್ಲಿ ಯಾವುದೇ ರೀತಿಯ ಅಕ್ರಮ ನಡೆಯುತ್ತಿರಲಿಲ್ಲ. ಆದರೂ ಅದನ್ನು ಬಂದ್ ಮಾಡಲಾಗಿದೆ. ತಿಂಗಳಿಗೆ 8,500 ರೂಪಾಯಿ ಸಂಬಳ ಸಿಗುತ್ತಿತ್ತು. ಈಗ ಕೆಲಸವೇ ಇಲ್ಲ. ಆದಷ್ಟು ಬೇಗ ಬಾರ್ ತೆರೆಯಲು ಅನುಮತಿ ನೀಡಿ. ಇಲ್ಲವಾದರೆ ನಾವು ಸಾವಿಗೆ ಶರಣಾಗಬೇಕಾಗುತ್ತದೆ'.

-ಮೀನಾ, ಬಾರ್ ಪರಿಚಾರಕಿ .

`ಅಕ್ರಮ ತಡೆಯಲು ಪೊಲೀಸರು ಮುಂದಾದರೆ ಹಫ್ತಾ ವಸೂಲಿಯ ಆರೋಪ ಹೊರಿಸಲಾಗುತ್ತದೆ.

ಮಾಮೂಲಿ ಕೊಡಬೇಡಿ

ಪೊಲೀಸರಿಗೆ ಯಾರೊಬ್ಬರೂ ಮಾಮೂಲಿ ಕೊಡಬೇಕಿಲ್ಲ. ಕಾನೂನಿನ ಪ್ರಕಾರ ವ್ಯವಹಾರ ನಡೆಸಿ. ಮಾಮೂಲಿ ಕೇಳಿದರೆ ನೇರವಾಗಿ ದೂರು ಕೊಡಿ. ಹಣ ಕೇಳಿದವರ ವಿರುದ್ಧ ಕಠಿಣ ಕ್ರಮ ಜರುಗಿಸುತ್ತೇವೆ'.

ಗೃಹ ಸಚಿವ ಕೆ.ಜೆ. ಜಾರ್ಜ್

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.