ಬುಧವಾರ, ಮೇ 18, 2022
27 °C

ಬಾಲಿವುಡ್ ಕಂದಮ್ಮಗಳು...

ಪೂರ್ವಿ Updated:

ಅಕ್ಷರ ಗಾತ್ರ : | |

ಮೊನ್ನೆ ಮೊನ್ನೆ ಹೃತಿಕ್ ದೇಶಮುಖ್ ಕಾಮಿಡಿ ಮಾಡಿದ್ದರು- ‘ಚಿಲ್ಡ್ರನ್ ಆಫ್ ಬಾಲಿವುಡ್ ಅಂತ ಸಿನಿಮಾ ತೆಗೆದರೆ ಮಜವಾಗಿರುತ್ತಲ್ವೇ’- ಅಂತ. ಬಾಲಿವುಡ್ ತಾರೆಯರ ಮಕ್ಕಳ ಜಗತ್ತು ಕೂಡ ಸಿನಿಮೀಯವಾಗಿಯೇ ಇದೆ ಎಂಬುದಕ್ಕೆ ಅರ್ಧ ಡಜನ್ ಉದಾಹರಣೆಗಳಾದರೂ ಸಲೀಸಾಗಿ ಸಿಗುತ್ತವೆ.ಮತ್ತೆ ಸಿನಿಮಾ ನಿರ್ಮಿಸುವುದರಲ್ಲಿ, ನಟಿಸುವುದರಲ್ಲಿ ಬ್ಯುಸಿಯಾಗಿರುವ ಅಜಯ್ ದೇವಗನ್‌ಗೆ ಮಗಳು ನೈಸಾ ಜೊತೆ ಕಳೆಯಲು ಹೆಚ್ಚು ಸಮಯವೇ ಇಲ್ಲ. ಹೋದ ವರ್ಷದ ಆರಂಭದಲ್ಲೇ ದೂರ ದೇಶಕ್ಕೆ ಪ್ರವಾಸ ಕರೆದುಕೊಂಡು ಹೋಗುವುದಾಗಿ ಮಗಳಿಗೆ ಅವರು ಆಶ್ವಾಸನೆ ಕೊಟ್ಟಿದ್ದರು.

 

ಅಮ್ಮನ ಜೊತೆ ಮಾಲ್‌ಗೆ ಹೋಗಿ ಪ್ರವಾಸಕ್ಕೆ ಬೇಕಾದ್ದೆಲ್ಲವನ್ನೂ ಕೊಂಡುತಂದ ಮೇಲೆ ಕಾರ್ಯಕ್ರಮ ಕ್ಯಾನ್ಸಲ್ ಆಯಿತು. ಅಜಯ್ ಪ್ಲಾನ್ ಎಲ್ಲಾ ತಲೆಕೆಳಕಾಗಿ, ಶೂಟಿಂಗ್ ದಿನಾಂಕಗಳಲ್ಲಿ ವ್ಯತ್ಯಾಸವಾದದ್ದೇ ಇದಕ್ಕೆ ಕಾರಣ. ಕ್ರಿಸ್‌ಮಸ್ ಬಂತು. ಮಗಳು ಸೈನಾಗೆ ಅಪ್ಪನ ಮೇಲೆ ಕೋಪ. ಅದನ್ನು ಕರಗಿಸಲೆಂದು ಮಗಳಿಗಾಗಿಯೇ ಎರಡು ದಿನ ಮನೆಯಲ್ಲೇ ಅದ್ದೂರಿ ಪಾರ್ಟಿಯನ್ನು ಅಜಯ್ ಆಯೋಜಿಸಿದರು. ತನ್ನ ಸ್ನೇಹಿತರನ್ನೆಲ್ಲಾ ಸೈನಾ ಕರೆದದ್ದೂ ಆಯಿತು. ಮನೆ ಮುಂದಿನ ಹೂದೋಟವೆಲ್ಲಾ ಜಗಮಗ.ಅಲ್ಲಿದ್ದ ಚಿಟ್ಟೆಗಳು ದೀಪಾಲಂಕಾರದಲ್ಲಿ ಕಣ್ಣುಕೋರೈಸಿದವು. ಇನ್ನೇನು ಪಾರ್ಟಿ ಶುರುವಾಗಬೇಕು, ಸೈನಾ ಅಪ್ಪನನ್ನು ಹುಡುಕಿದಳು. ಎಲ್ಲೂ ಕಾಣಲಿಲ್ಲ.ಮೊಬೈಲ್‌ಗೆ ಫೋನ್ ಮಾಡಿದರೆ, ಅಪ್ಪ ಅಲ್ಲಿ ಇಲ್ಲವೆಂಬುದು ಖಾತರಿಯಾಯಿತು. ಸಿಟ್ಟಿಗೆದ್ದು ಫೋನ್ ಕಟ್ ಮಾಡಿಬಿಟ್ಟಳು. ಅವಳನ್ನು ಎಲ್ಲರೂ ಸಮಾಧಾನ ಪಡಿಸುವ ಹೊತ್ತಿಗೆ ಅಜಯ್ ಪ್ರತ್ಯಕ್ಷರಾದರು. ಪಾರ್ಟಿಯಲ್ಲಿ ಅವರೂ ಬೆರೆತರು.‘ಟೂನ್‌ಪುರ್ ಕಾ ಸೂಪರ್‌ಹೀರೋ’ ಚಿತ್ರಕ್ಕೆ ತಾರಾಬಳಗ ಗೊತ್ತುಮಾಡುವ ಕೆಲಸದಲ್ಲಿ ಆ ದಿನ ಅಜಯ್ ತೊಡಗಿಕೊಂಡಿದ್ದರು. ಎರಡು ದಿನ ಎಲ್ಲಾ ಮರೆತು ಮಗಳ ಜೊತೆ ಕಾಲ ಕಳೆದ ಮೇಲೆ ಅವರು ನಿರಾಳ. ಮಗಳು ಸೈನಾ ಮುಖದ ಮೇಲೆ ಸಂತೋಷದ ಚಿಟ್ಟೆ. ಇನ್ನೊಂದೆಡೆ ಶಾರುಖ್ ಖಾನ್ ಮಗ ಆರ್ಯನ್ ಗೆಳೆಯರ ಗುಂಪು ಈಗ ಜಾಗೃತವಾಗಿದೆ. ಅವರೆಲ್ಲಾ ‘ರಾ ಡಾಟ್ ಒನ್’ ಸಿನಿಮಾ ನೋಡುವ ದಿನಾಂಕ ಗೊತ್ತುಮಾಡುತ್ತಿದ್ದಾರೆ.ಬಿಡುಗಡೆಗೆ ಮುನ್ನವೇ ಸಿನಿಮಾ ನೋಡುವ ಭಾಗ್ಯ ತಮ್ಮದಾಗಿರುವ ಹೆಮ್ಮೆ ಅವರೆಲ್ಲರದ್ದು. ಹೇಳಿಕೇಳಿ ‘ರಾ ಡಾಟ್ ಒನ್’ ಮಕ್ಕಳ ಸಿನಿಮಾ.ಕಂಡಾಪಟ್ಟೆ ಹಣ ಖರ್ಚು ಮಾಡಿ ಶಾರುಖ್ ಅದನ್ನು ತೆಗೆದಿದ್ದಾರೆ. ಚಿತ್ರದ ಮೊದಲ ಪರಿಣಾಮವನ್ನು ಮಕ್ಕಳಿಂದಷ್ಟೇ ತಿಳಿಯಲು ಸಾಧ್ಯ. ಹಾಗಾಗಿ ಆರ್ಯನ್‌ಗೆ ಎಲ್ಲಾ ಗೆಳೆಯರನ್ನು ಮನೆಗೆ ಕರೆತರುವಂತೆ ಅವರು ಹೇಳಿದ್ದಾರೆ. ಪಿತೃವಾಕ್ಯವನ್ನು ಆರ್ಯನ್ ಪಾಲಿಸದೇ ಇರುತ್ತಾನೆಯೇ? ಗೆಳೆಯರೆಲ್ಲಾ ಬಂದದ್ದೇ ಮನೆಯಲ್ಲೇ ಸಣ್ಣ ಪಾರ್ಟಿ.‘ರಾ ಡಾಟ್ ಒನ್’ ನೋಡಿದ ಮೇಲೆ ಒಂದು ಫಾರ್ಮ್‌ನಲ್ಲಿ ಅದು ಹೇಗಿದೆ, ಏನು ಸುಧಾರಿಸಬೇಕು ಎಂಬಿತ್ಯಾದಿ ಅಭಿಪ್ರಾಯಗಳನ್ನು ನಮೂದಿಸುವಂತೆ ಆ ಮಕ್ಕಳಿಗೆಲ್ಲಾ ಶಾರುಖ್ ಖಾನ್ ಸೂಚಿಸಿದ್ದಾರೆ. ಚಿತ್ರ ತೋರಿಸುವ ದಿನಾಂಕ ಇನ್ನೂ ಪಕ್ಕಾ ಆಗಿಲ್ಲವಷ್ಟೇ. ಪರಭಾಷಾ ಚಿತ್ರಗಳ ಹಾವಳಿಯ ಕುರಿತು ಅನೇಕ ಸಲ ಮಾತನಾಡಿರುವ ಕನ್ನಡ ಚಿತ್ರರಂಗದ ಕಸುಬುದಾರಿಕೆಯ ನಿರ್ದೇಶಕ ಎಸ್.ವಿ.ರಾಜೇಂದ್ರ ಸಿಂಗ್ ಬಾಬು, ‘ರಾ ಡಾಟ್ ಒನ್’ ಬರುವುದರೊಳಗಾದರೂ ತಮ್ಮ ‘ಬೀಮೂಸ್ ಬ್ಯಾಂಗ್ ಬ್ಯಾಂಗ್ ಕಿಡ್ಸ್’ಗೆ ಬಿಡುಗಡೆ ಕಾಣಿಸುತ್ತಾರೋ? ನೋಡಬೇಕು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.