ಮಂಗಳವಾರ, ಮೇ 24, 2022
30 °C

ಬಾಲಿವುಡ್ ಹುಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಲಿವುಡ್ ಹುಳಿ

ದಕ್ಷಿಣ ಭಾರತದ ಚಿತ್ರಗಳನ್ನು ಹಿಂದಿಗೆ ಕೊಂಡೊಯ್ಯುತ್ತಿರುವ ಬಾಲಿವುಡ್ ಮಂದಿ ದಕ್ಷಿಣದ ಭಾಷೆಗಳಲ್ಲೂ ಚಿತ್ರ ನಿರ್ಮಾಣಕ್ಕೆ ಮುಂದಾಗುತ್ತಿದ್ದಾರೆ. ಬಾಲಿವುಡ್‌ನ ಖ್ಯಾತ ನಿರ್ದೇಶಕ, ನಿರ್ಮಾಪಕ ಸುಭಾಷ್ ಘಾಯ್ ಅವರ ಮಾಲೀಕತ್ವದ `ಮುಕ್ತಾ ಆರ್ಟ್ಸ್~ ಮೊದಲ ಬಾರಿಗೆ ಕನ್ನಡದಲ್ಲಿ ಚಿತ್ರ ನಿರ್ಮಿಸುತ್ತಿದೆ.ಮೆವರಿಕ್ ಪ್ರೊಡಕ್ಷನ್ ಜೊತೆಗೂಡಿ `ಹೌಸ್‌ಫುಲ್~ ಎಂಬ ಚಿತ್ರ ನೀಡಿದ್ದ ಹೇಮಂತ್ ಹೆಗಡೆ ಮುಕ್ತಾ ಆರ್ಟ್ಸ್ ಬ್ಯಾನರ್‌ನಡಿ `ನಿಂಬೆಹುಳಿ~ ಚಿತ್ರ ನಿರ್ದೇಶನಕ್ಕೆ ಕೈ ಹಾಕಿದ್ದಾರೆ. ಈ ಹಿಂದೆ ಮುಕ್ತಾ ಆರ್ಟ್ಸ್ ನಿರ್ಮಾಣದಲ್ಲಿ `ಖನ್ನಾ ಆಂಡ್ ಅಯ್ಯರ್~ ಎಂಬ ಚಿತ್ರವನ್ನು ಹೇಮಂತ್ ನಿರ್ದೇಶಿಸಿದ್ದರು. ಅವರ ನಿರ್ದೇಶನವನ್ನು ಮೆಚ್ಚಿದ್ದ ಸಂಸ್ಥೆ ಕನ್ನಡದಲ್ಲಿ ಈ ಚಿತ್ರ ನಿರ್ಮಿಸಲು ಮುಂದಾಗಿದೆ.`ನಿಂಬೆಹುಳಿ~ಯ ಕಥೆ ಮತ್ತು ಚಿತ್ರಕಥೆ ಕೂಡ ಹೇಮಂತ್ ಹೆಗಡೆ ಅವರದ್ದು. ಚಿತ್ರದ ಮುಹೂರ್ತ ಇತ್ತೀಚೆಗೆ ನಡೆಯಿತು. ಕ್ಯಾಮೆರಾಕ್ಕೆ ಚಾಲನೆ ನೀಡಿದವರು ದಾದಾ ಸಾಹೇಬ್ ಪ್ರಶಸ್ತಿ ಪುರಸ್ಕೃತ ಹಿರಿಯ ಛಾಯಾಗ್ರಾಹಕ ವಿ.ಕೆ. ಮೂರ್ತಿ. ನಿರ್ಮಾಪಕ ಕೃಷ್ಣಪ್ರಜ್ವಲ್ ಕ್ಲಾಪ್ ಮಾಡಿದರು.ಕನ್ನಡದ ಹುಳಿ ಹಿಂಡಿದರೂ ಬಾಲಿವುಡ್ ರುಚಿಯನ್ನೇ ಹೆಚ್ಚಾಗಿ ಬೆರೆಸಲು ಹೇಮಂತ್ ಮುಂದಾಗಿದ್ದಾರೆ. ಹಿಂದಿಯ ಹಿರಿಯ ನಟ ಅನುಪಮ್ ಖೇರ್ ಮೊದಲ ಬಾರಿಗೆ ಕನ್ನಡಕ್ಕೆ ಪ್ರವೇಶ ಕೊಡಲು ಸಿದ್ಧತೆ ನಡೆಸಿದ್ದಾರೆ. ಚಿತ್ರದಲ್ಲಿ ಅವರದು ಡಾಕ್ಟರ್ ಪಾತ್ರ. ಚಿತ್ರದ ಮೂವರು ನಾಯಕಿಯರಲ್ಲಿ ಕೋಮಲ್ ಝಾ ಮತ್ತು ಮಧುರಿಮಾ ಕೂಡ ಬಾಲಿವುಡ್‌ನಿಂದ ಆಮದಾಗಲಿದ್ದಾರೆ. ಕನ್ನಡತಿಯೊಬ್ಬಳು ಇರಲಿ ಎಂದು ಮತ್ತೊಬ್ಬ ನಾಯಕಿಗಾಗಿ ಇಲ್ಲಿಯೇ ಹುಡುಕಾಟ ಆರಂಭಿಸಿರುವುದಾಗಿ ಹೇಮಂತ್ ತಿಳಿಸಿದರು.ದತ್ತಣ್ಣ, ಜೈದೇವ್ ಚಿತ್ರದಲ್ಲಿ ನಟಿಸಲಿದ್ದಾರೆ. `ಹೌಸ್‌ಫುಲ್~ನಂತೆ ಇದು ಕೂಡ ಹಾಸ್ಯ ಪ್ರಧಾನ ಚಿತ್ರವಂತೆ.ಬೆಂಗಳೂರು ಸುತ್ತಮುತ್ತ 35 ದಿನಗಳ ಕಾಲ ಚಿತ್ರೀಕರಣ ನಡೆಯಲಿದ್ದು, ಎರಡು ಹಾಡುಗಳ ಚಿತ್ರೀಕರಣಕ್ಕಾಗಿ ಸಿಂಹಳೀಯರ ನಾಡಿಗೆ ಚಿತ್ರತಂಡ ತೆರಳಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.