ಮಂಗಳವಾರ, ಮೇ 11, 2021
19 °C

ಬಾಳೆಹಣ್ಣು ಕಿತ್ತಳೆ ಬಳಸಿ ವೈನ್!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಳೆಹಣ್ಣು ಕಿತ್ತಳೆ ಬಳಸಿ ವೈನ್!

ಧಾರವಾಡ: ವೈನ್ ಪ್ರಿಯರಿಗೆ ಸಂತಸದ ಸುದ್ದಿ, ದ್ರಾಕ್ಷಿ ಸ್ವಾದದ ವೈನ್ ಕುಡಿದು ಬೇಸರಗೊಂಡಿದ್ದವರು ಇನ್ನು ಮುಂದೆ ತಮ್ಮ ಇಷ್ಟದ ಹಣ್ಣುಗಳ ವೈನ್ ಸೇವಿಸಬಹುದು. ಬೆಳಗಾವಿ ಜಿಲ್ಲೆ ಗೋಕಾಕ ತಾಲ್ಲೂಕು ಅರಬಾವಿಯ ಕಿತ್ತೂರು ರಾಣಿ ಚನ್ನಮ್ಮ ತೋಟಗಾರಿಕಾ ಮಹಾವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿಗಳು ಇಂತಹದೊಂದು ತಾಂತ್ರಿಕತೆ ಅಭಿವೃದ್ಧಿಪಡಿಸಿದ್ದು,ಬಾಳೆಹಣ್ಣು, ಕಿತ್ತಳೆ, ಹಲಸು ಮೋಸಂಬಿ, ಸಪೋಟಾ ಹಾಗೂ ಪೈನಾಪಲ್ ಬಳಸಿ ವೈನ್ ತಯಾರಿಸಿದ್ದಾರೆ.ಇಲ್ಲಿನ ಕೃಷಿ ಮೇಳದಲ್ಲಿ ಅರಬಾವಿ ಕಾಲೇಜಿನ ಕೊಯ್ಲು ನಂತರ ತಂತ್ರಜ್ಞಾನ ವಿಭಾಗದ ವಿದ್ಯಾರ್ಥಿಗಳು ತಯಾರಿಸಿದ ಬೇರೆ ಬೇರೆ ಹಣ್ಣುಗಳ ವೈನ್ ಬಾಟಲಿಗಳನ್ನು ಪ್ರದರ್ಶನಕ್ಕೆ ಇಡಲಾಗಿದ್ದು, ಮೇಳಕ್ಕೆ ಬರುವವರನ್ನು ಹೆಚ್ಚಿನ ಸಂಖ್ಯೆಯಲ್ಲಿ ಮಳಿಗೆ ಆಕರ್ಷಿಸುತ್ತಿದೆ. ಈಗಾಗಲೇ ವಿದೇಶಗಳಲ್ಲಿ ಬೇರೆ ಹಣ್ಣುಗಳ ವೈನ್ ತಯಾರಿಕೆಯ ಪ್ರಯೋಗಗಳು ಯಶಸ್ವಿಯಾಗಿ ನಡೆದಿವೆ ಎನ್ನುವ ಅರಬಾವಿ ಕಾಲೇಜಿನ ಪ್ರಾಧ್ಯಾಪಕ ಡಾ.ಲಕ್ಷ್ಮಣ ಕೊಕ್ಕನೂರು, ರಾಜ್ಯದಲ್ಲಿ ಬಾಗಲಕೋಟೆ ತೋಟಿಗಾರಿಕೆ ವಿವಿ ವ್ಯಾಪ್ತಿಯ ಅರಬಾವಿ ಕಾಲೇಜು ಹಾಗೂ ಬೆಂಗಳೂರಿನ ಹೆಬ್ಬಾಳದ ತೋಟಗಾರಿಕೆ ಸ್ನಾತಕೋತ್ತರ ಕೇಂದ್ರದಿಂದ ಈ ತಂತ್ರಜ್ಞಾನ ಅಭಿವೃದ್ಧಿಪಡಿಸುವಲ್ಲಿ ಯಶಸ್ಸು ಸಾಧಿಸಲಾಗಿದೆ ಎನ್ನುತ್ತಾರೆ.ಬೇರೆ ಬೇರೆ ಹಣ್ಣುಗಳ ಸ್ವಾದದ ವೈನ್ ತಯಾರಿಕೆಯಿಂದ ದ್ರಾಕ್ಷಿಯ ರೀತಿ ಇತರೆ ಹಣ್ಣುಗಳ ಮೌಲ್ಯವರ್ಧನೆಗೆ ಸಹಾಯವಾಗಲಿಗಿದೆ ಎನ್ನುವ ಅವರು, ದೊಡ್ಡ ಪ್ರಮಾಣದಲ್ಲಿ ಇಳುವರಿ ಬರುವ ಹಣ್ಣುಗಳನ್ನು ವೈನ್ ತಯಾರಿಕೆಗೆ ಬಳಸಿ ಬೆಲೆ ಕುಸಿತದ ಭೀತಿ ದೂರ ಮಾಡಬಹುದು ಎಂದು ಹೇಳುತ್ತಾರೆ.

ಕೃತಕ ಸಕ್ಕರೆ ಬಳಕೆ: ವೈನ್ ತಯಾರಿಕೆಗೆ ಯಾವುದೇ ಹಣ್ಣಿನಲ್ಲಿ ಶೇ 20ರಷ್ಟು ಸಕ್ಕರೆ ಅಂಶ ಅಗತ್ಯ.ದ್ರಾಕ್ಷಿಯಲ್ಲಿ ಈ ಪ್ರಮಾಣ ಶೇ 22ರಷ್ಟು ಇದ್ದು, ವೈನ್ ತಯಾರಿಕೆ ಸುಲಭ ಸಾಧ್ಯವಾಗಿಸಿದೆ. ಸಪೋಟಾ ಹೊರತಾಗಿ ಇತರೆ ಹಣ್ಣುಗಳಲ್ಲಿ ಸಕ್ಕರೆ ಅಂಶ ಶೇ 12ರಷ್ಟು ಇದ್ದು, ಉಳಿದ ಸಕ್ಕರೆ ಅಂಶದ ಕೊರತೆ ನೀಗಿಸಲು ಕೃತಕ ಸಕ್ಕರೆಯನ್ನು ಬಳಸಬಹುದಾಗಿದೆ. ಬೇರೆ ಹಣ್ಣಿನಲ್ಲಿ ಅಷ್ಟೊಂದು ಪ್ರಮಾಣದ ಸಕ್ಕರೆ ಅಂಶ ದೊರೆಯುವುದಿಲ್ಲ ಎಂಬ ಕಾರಣಕ್ಕೆ ವೈನ್ ತಯಾರಿಕೆಗೆ ಯಾರೂ ಮುಂದಾಗುತ್ತಿರಲಿಲ್ಲ. ಅದಕ್ಕೆ ಈಗ ಪರಿಹಾರ ಕಂಡುಕೊಳ್ಳಲಾಗಿದೆ. ದ್ರಾಕ್ಷಿಯಂತೆ ಇತರೆ ಹಣ್ಣುಗಳಿಂದ ತಯಾರಿಸಿದ ವೈನ್ 2ರಿಂದ 3 ವರ್ಷದ ನಂತರ ಸೇವಿಸಿದರೆ ಶೇ 20ರಿಂದ 25ರಷ್ಟು ಆಲ್ಕೋಹಾಲ್ ಪ್ರಮಾಣ ವೃದ್ಧಿಯಾಗಿರುವುದು ಕಂಡು ಬಂದಿದೆ.ಸರ್ಕಾರದ ಅನುಮತಿ ಇಲ್ಲ: ಬೇರೆ ಹಣ್ಣುಗಳ ಸ್ವಾದದ ವೈನ್ ಮಾರಾಟ ಮಾಡಲು ಸರ್ಕಾರ ಅನುಮತಿ ನೀಡದಿರುವ ಹಿನ್ನೆಲೆಯಲ್ಲಿ ಕೃಷಿ ಮೇಳದಲ್ಲಿ ಅರಬಾವಿ ಕಾಲೇಜಿನ ವಿದ್ಯಾರ್ಥಿಗಳು ರೂಪಿಸಿದ್ದ ಉತ್ಪನ್ನಗಳು ಕೇವಲ ಪ್ರದರ್ಶನಕ್ಕೆ ಇದ್ದವು ಹೊರತು ಮಾರಾಟಕ್ಕೆ ಇರಲಿಲ್ಲ. ವೈನ್ ಬಾಟಲಿ ಕೊಂಡು ರುಚಿ ನೋಡುವ ಎಂದು ಬಂದವರು ಅದಕ್ಕೆ ಅವಕಾಶ ಇಲ್ಲ ಎಂದು ತಿಳಿದು `ನರಿ-ಹುಳಿ ದ್ರಾಕ್ಷಿ~ಯ ಕಥೆಯಂತೆ ಅಬಕಾರಿ ಇಲಾಖೆಯನ್ನು ಶಪಿಸುತ್ತಾ ಮುನ್ನಡೆದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.