ಶುಕ್ರವಾರ, ಮೇ 27, 2022
28 °C
ವಿಧಾನಸಭಾ ಚುನಾವಣಾ ಕಾರ್ಯಕ್ಕೆ ಬಸ್ ವ್ಯವಸ್ಥೆ

ಬಿಎಂಟಿಸಿಗೆ ಪಾವತಿಯಾಗದ 33 ಲಕ್ಷ

ವಿಶೇಷ ವರದಿ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಮುಕ್ತಾಯಗೊಂಡು ಬರೋಬ್ಬರಿ ಎರಡು ತಿಂಗಳು ಕಳೆದಿದೆ. ಚುನಾವಣೆ ಕಾರ್ಯಕ್ಕಾಗಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಿಂದ (ಬಿಎಂಟಿಸಿ) ಒಪ್ಪಂದದ ಮೇರೆಗೆ ಪಡೆದ ಬಸ್‌ಗಳ ಬಾಡಿಗೆ ಮೊತ್ತ ರೂ33,26,906 ಇನ್ನೂ ಸಂಸ್ಥೆಗೆ ಪಾವತಿಯಾಗಿಲ್ಲ.ಮಾಹಿತಿ ಹಕ್ಕು ಕಾಯ್ದೆಯಡಿ ಮಹಾಲಕ್ಷ್ಮಿ ಬಡಾವಣೆಯ ಎಲ್. ಗುರುಪ್ರಸಾದ್ ಎಂಬವರು ಪಡೆದ ಮಾಹಿತಿಯಿಂದ ಈ ಅಂಶ ಬಹಿರಂಗಗೊಂಡಿದೆ. ಡೀಸೆಲ್ ಬೆಲೆ ಹೆಚ್ಚಳ ಹಾಗೂ ಸಿಬ್ಬಂದಿಯ ವೇತನ ಏರಿಕೆಯ ಕಾರಣ ನೀಡಿ ಸಂಸ್ಥೆ ಬಸ್ ಪ್ರಯಾಣ ದರವನ್ನು ಏರಿಸಿದೆ. ಈ ವರ್ಷ ಸಂಸ್ಥೆಯ ನಷ್ಟದ ಪ್ರಮಾಣ 147 ಕೋಟಿ ರೂಪಾಯಿ ದಾಟಿದೆ. ಇದೇ ಹೊತ್ತಿನಲ್ಲಿ ಬಾಡಿಗೆ ಬಾಕಿ ಸಹ ಸಂಸ್ಥೆಯ ನಷ್ಟಕ್ಕೆ ಕೊಡುಗೆ ನೀಡಿದೆ ಎಂಬ ಆರೋಪ ಕೇಳಿ ಬಂದಿದೆ.ಮೇ 5ರಂದು ನಡೆದ ಚುನಾವಣೆಗೆ ಮತಗಟ್ಟೆ ಕೇಂದ್ರಗಳಿಗೆ ಮತಗಟ್ಟೆ ಸಿಬ್ಬಂದಿಯನ್ನು ಕರೆದುಕೊಂಡು ಹೋಗಲು ಹಾಗೂ ಮತದಾನದ ಸಾಮಗ್ರಿಗಳನ್ನು ಸಾಗಿಸಲು ಒಪ್ಪಂದದ ಆಧಾರದಲ್ಲಿ ಬಸ್ ವ್ಯವಸ್ಥೆ ಕಲ್ಪಿಸುವಂತೆ ನಗರ ಹಾಗೂ ಗ್ರಾಮಾಂತರ ವ್ಯಾಪ್ತಿಯ ಚುನಾವಣಾಧಿಕಾರಿಗಳು ಕೋರಿಕೆ ಸಲ್ಲಿಸಿದ್ದರು. ನಗರ ಹಾಗೂ ಗ್ರಾಮಾಂತರ ವಿಧಾನಸಭಾ ಕ್ಷೇತ್ರಗಳಿಗೆ ಬಸ್ ವ್ಯವಸ್ಥೆ ಮಾಡುವಂತೆ ವಿನಂತಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಬಿಎಂಟಿಸಿಯು ಮೇ 4 ಹಾಗೂ 5 ರಂದು 1,040 ಬಸ್‌ಗಳ ವ್ಯವಸ್ಥೆ ಮಾಡಿತ್ತು. ಈ ಪೈಕಿ 73 ಬಸ್‌ಗಳನ್ನು ಚುನಾವಣಾ ಕಾರ್ಯಕ್ಕೆ ಉಪಯೋಗಿಸದೆ ಸಂಸ್ಥೆಗೆ ವಾಪಸ್ ಕಳುಹಿಸಲಾಗಿತ್ತು.ಚುನಾವಣಾ ಆಯೋಗವು ಬಸ್‌ಗಳ ಬಾಡಿಗೆ ಮೊತ್ತ ರೂಪದಲ್ಲಿ ಈ ವರೆಗೆ ಒಟ್ಟು 1,43,46,612 ರೂಪಾಯಿ ಪಾವತಿಸಿದೆ ಎಂದು ಸಂಸ್ಥೆಯ ಮುಖ್ಯ ಸಂಚಾರ ವ್ಯವಸ್ಥಾಪಕ (ವಾಣಿಜ್ಯ)ರು ಮಾಹಿತಿ ಒದಗಿಸಿದ್ದಾರೆ.`ಚುನಾವಣಾ ಪ್ರಕ್ರಿಯೆ ಮುಕ್ತಾಯಗೊಂಡು ಎರಡು ತಿಂಗಳು ಮೇಲಾಗಿದೆ. ದೊಡ್ಡ ಮೊತ್ತದ ಬಾಡಿಗೆ ವಸೂಲಿಯಾಗದೆ ಇರುವುದು ಸಂಶಯ ಮೂಡಿಸುತ್ತಿದೆ. ಬಿಎಂಟಿಸಿ ಅಧಿಕಾರಿಗಳು ಸಂಸ್ಥೆಯ ನಷ್ಟಕ್ಕೆ ನಾನಾ ಕಾರಣಗಳನ್ನು ನೀಡುತ್ತಿದ್ದಾರೆ. ಸಂಸ್ಥೆಯ ಸಿಬ್ಬಂದಿಗೆ ವೇತನ ಹೆಚ್ಚಳದಿಂದ ಸಂಸ್ಥೆ ಭಾರಿ ನಷ್ಟ ಹೊಂದಿದೆ ಎಂದು ಬಿಂಬಿಸಲಾಗುತ್ತಿದೆ. ಆಡಳಿತದಲ್ಲಿ ಬಿಗಿ ಹಾಗೂ ಸೋರಿಕೆ ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿಲ್ಲ. ಬಾಡಿಗೆ ಬಾಕಿ ಸೋರಿಕೆಯ ಮತ್ತೊಂದು ರೂಪ. ಬಾಡಿಗೆ ವಸೂಲಿಗೆ ಕೂಡಲೇ ಕ್ರಮ ಕೈಗೊಳ್ಳಬೇಕು' ಎಂದು ಎಲ್. ಗುರುಪ್ರಸಾದ್ ಆಗ್ರಹಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.