ಶುಕ್ರವಾರ, ಮೇ 27, 2022
30 °C

ಬಿಎಂಟಿಸಿ ಪ್ರಯಾಣಿಕರ ಅಸಮಾಧಾನ: ಸಂಚಾರ ನಿಯಂತ್ರಕರ ಕೊಠಡಿಗೆ ಬೀಗ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೃಷ್ಣರಾಜಪುರ: ಇಲ್ಲಿನ ಬಿಎಂಟಿಸಿ ನಿಲ್ದಾಣದಿಂದ 150ಕ್ಕೂ ಹೆಚ್ಚು ಬಸ್ಸುಗಳು ಕೇಂದ್ರ ನಿಲ್ದಾಣಗಳ ಕಡೆಗೆ ಹೊರಡುತ್ತವೆ. ಆದರೆ, ನಿಲ್ದಾಣದ ಆವರಣದಲ್ಲಿ ಯಾವುದೇ ಮೂಲಸೌಕರ್ಯ ಇಲ್ಲ. ಜತೆಗೆ ಸಂಚಾರ ನಿಯಂತ್ರಕರ ಕೊಠಡಿಗೂ ಹತ್ತು ದಿನಗಳಿಂದ ಬೀಗ ಜಡಿದಿರುವುದು ಪ್ರಯಾಣಿಕರ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.`ಯಾವ ಬಸ್ಸು ಯಾವ ಮಾರ್ಗದಲ್ಲಿ ಸಂಚರಿಸುತ್ತದೆ ಎನ್ನುವುದರ ಬಗ್ಗೆ ನಮಗೆ ಅರಿವಿಲ್ಲ. ಓದು ಬರಹವೂ ಗೊತ್ತಿಲ್ಲ. ಮಾಹಿತಿ ನೀಡುವವರೂ ಇಲ್ಲ. ಹೀಗಾಗಿ ಬೀಗ ಜಡಿದಿರುವ ಕೊಠಡಿ ಕಾಯುವ ಪರಿಸ್ಥಿತಿ ಎದುರಾಗಿದೆ~ ಎಂದು ತರಕಾರಿ ಮಾರುವ ಸುವರ್ಣಮ್ಮ ದೂರಿದರು.`ಆವರಣದಲ್ಲಿ ಶೌಚಾಲಯದ ಕೊರತೆ ಇದೆ. ಕುಡಿಯುವ ನೀರಿನ ಸೌಲಭ್ಯವೂ ಇಲ್ಲ. ಬಿಸಿಲು ಮಳೆಯಲ್ಲೂ ಆವರಣದಲ್ಲಿಯೇ ಬಸ್ಸಿಗಾಗಿ ಎದುರು ನೋಡುವ ದಾರುಣ ಪರಿಸ್ಥಿತಿ ಒದಗಿದೆ. ಈಗ ಬಸ್ ಸಂಚಾರದ ಬಗ್ಗೆ ನಮಗೆ ಮಾಹಿತಿ ನೀಡುವವರೂ ಇಲ್ಲದೆ ತ್ರಿಶಂಕು ಸ್ಥಿತಿಯಾಗಿದೆ~ ಎಂದು ಪ್ರಯಾಣಿಕ ವೇಣುಗೋಪಾಲ್ ದೂರಿದರು.`ಸ್ಥಳೀಯ ಬಸ್ ನಿಲ್ದಾಣಕ್ಕೆ ಹೋಲಿಸಿದರೆ ನಮ್ಮ ಗ್ರಾಮಾಂತರ ಪ್ರದೇಶದ ಬಸ್ ನಿಲ್ದಾಣ ಎಷ್ಟೋ ಮೇಲು. ಸುಸಜ್ಜಿತವಾದ ಕೊಠಡಿ ಇದ್ದು ನಮಗೆ ಅಧಿಕಾರಿಗಳು ಮಾಹಿತಿ ನೀಡುತ್ತಾರೆ. ಆದರೆ ಇಲ್ಲಿ ಪ್ರಯಾಣಿಕರ ಸಮಸ್ಯೆ ಕೇಳುವವರೇ ಇಲ್ಲದಂತಾಗಿದೆ~ ಎಂದು ರಾಮನಗರದ ಅನಂತಯ್ಯ ಅವರು ನುಡಿದರು.ಅವ್ಯವಸ್ಥೆಯ ಬಗ್ಗೆ ಹೆಸರು ಬಹಿರಂಗಪಡಿಸಲು ಬಯಸದ ನಿರ್ವಾಹಕರೊಬ್ಬರು, `ವಿದ್ಯಾರ್ಥಿಗಳಿಗೆ ಪಾಸ್ ನೀಡುವ ಕೌಂಟರುಗಳಿಗೆ ಇಲ್ಲಿ ಕೆಲಸ ಮಾಡುವ ಇಬ್ಬರು ಸಂಚಾರ ನಿಯಂತ್ರಕರನ್ನು ವರ್ಗಾಯಿಸಲಾಗಿದೆ. ಇದರಿಂದ ನಿಯಂತ್ರಕರ ಕೊಠಡಿಗೆ ಬೀಗ ಜಡಿಯಲಾಗಿದೆ. ಈ ಅವ್ಯವಸ್ಥೆ ಎಷ್ಟು ದಿನಗಳವರೆಗೆ ಮುಂದುವರೆಯುತ್ತದೆ ಎಂಬುದರ ಬಗ್ಗೆ ಮಾಹಿತಿ ಇಲ್ಲ~ ಎಂದು ಪ್ರತಿಕ್ರಿಯಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.