ಸೋಮವಾರ, ಮೇ 17, 2021
23 °C

ಬಿಎಸ್‌ವೈ ಜಾಮೀನು ಕೋರಿಕೆ ಅರ್ಜಿ : ಅಕ್ಟೋಬರ್ 3ರಂದು ತೀರ್ಮಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವಕೀಲ ಸಿರಾಜಿನ್ ಬಾಷಾ ಸಲ್ಲಿಸಿರುವ ಖಾಸಗಿ ದೂರುಗಳಿಗೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಭವಿಷ್ಯ ಅಕ್ಟೋಬರ್ 3ಕ್ಕೆ ನಿರ್ಧಾರವಾಗಲಿದೆ. ಜಾಮೀನು ಕೋರಿ ಸಲ್ಲಿಸಿರುವ ಎರಡು ಅರ್ಜಿಗಳ ಪೈಕಿ ಮೊದಲನೇ ಅರ್ಜಿಯ ವಿಚಾರಣೆ ಬುಧವಾರ ಪೂರ್ಣಗೊಂಡಿದೆ. ಎರಡನೇ ಅರ್ಜಿಯ ವಿಚಾರಣೆಯನ್ನೂ ಪೂರ್ಣಗೊಳಿಸಿ ಏಕಕಾಲಕ್ಕೆ ಆದೇಶ ಹೊರಡಿಸುವುದಾಗಿ ವಿಶೇಷ ನ್ಯಾಯಾಲಯ ಪ್ರಕಟಿಸಿದೆ.ಎರಡು ಮತ್ತು ಮೂರನೇ ಖಾಸಗಿ ದೂರುಗಳಿಗೆ ಸಂಬಂಧಿಸಿದಂತೆ ಜಾಮೀನು ಕೋರಿ ಯಡಿಯೂರಪ್ಪ ಹಾಗೂ ಇತರೆ ಆರೋಪಿಗಳು ಎರಡು ಪ್ರತ್ಯೇಕ ಅರ್ಜಿ ಸಲ್ಲಿಸಿದ್ದಾರೆ. ದೂರುಗಳ ವಿಚಾರಣೆ ನಡೆಸುತ್ತಿರುವ `ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ~ (ಲೋಕಾಯುಕ್ತ) ವಿಶೇಷ ನ್ಯಾಯಾಲಯ ಬುಧವಾರ ಮೊದಲನೇ ಜಾಮೀನು ಅರ್ಜಿಯ ವಿಚಾರಣೆಯನ್ನು ಪೂರ್ಣಗೊಳಿಸಿತು. ಸಂಜೆ ವಿಚಾರಣೆ ಅಂತ್ಯಗೊಂಡ ಬಳಿಕ ಆದೇಶ ಪ್ರಕಟಣೆಯನ್ನು ಅಕ್ಟೋಬರ್ 3ಕ್ಕೆ ಕಾಯ್ದಿರಿಸಿದ ನ್ಯಾಯಾಧೀಶ ಎನ್. ಕೆ.ಸುಧೀಂದ್ರ ರಾವ್, ಎರಡನೇ ಅರ್ಜಿಯ ವಿಚಾರಣೆಯನ್ನೂ ಪೂರ್ಣಗೊಳಿಸಿ ಅದೇ ದಿನ ಆದೇಶ ಹೊರಡಿಸುವುದಾಗಿ ಪ್ರಕಟಿಸಿದರು.ಜಾಮೀನಿಗೆ ವಿರೋಧ: ಬುಧವಾರವೂ ವಾದ ಮುಂದುವರೆಸಿದ ಸಿರಾಜಿನ್ ಪರ ವಕೀಲ ಸಿ.ಎಚ್.ಹನುಮಂತರಾಯ, ಪ್ರಕರಣದ ಮೊದಲ ಆರೋಪಿ ಅತ್ಯಂತ ಪ್ರಭಾವಿ ಆಗಿದ್ದಾರೆ. ಅವರು ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದ್ದರೂ ಈಗ ಅವರೇ ತೆರೆಮರೆಯಲ್ಲಿ ಆ ಸ್ಥಾನವನ್ನು ನಿರ್ವಹಿಸುತ್ತಿದ್ದಾರೆ. ಹಾಲಿ ಹುದ್ದೆಯಲ್ಲಿರುವವರು ನೆಪಮಾತ್ರಕ್ಕೆ ಮುಖ್ಯಮಂತ್ರಿ ಆಗಿದ್ದಾರೆ. ಯಡಿಯೂರಪ್ಪ ತಮ್ಮ ಪ್ರಭಾವ ಬಳಸಿಕೊಂಡು ಸಾಕ್ಷ್ಯ ನಾಶ ಮತ್ತು ಸಾಕ್ಷಿಗಳಿಗೆ ಬೆದರಿಕೆ ಹಾಕಲು ಪ್ರಯತ್ನಿಸುವ ಅಪಾಯವಿದೆ ಎಂದರು.`ಲೋಕಾಯುಕ್ತರ ದೂರವಾಣಿ ಕದ್ದಾಲಿಕೆ ನಡೆದ ಬಗ್ಗೆ ಹಿಂದೆ ಕೇಳಿದ್ದೇವೆ. ಅದಕ್ಕೆ ಪೂರಕವೆಂಬಂತೆ ಒಂದು ಘಟನೆ ನಡೆದಿದೆ. ಮಂಗಳವಾರ ಯಡಿಯೂರಪ್ಪ ಅಳಿಯನ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ. ಈ ಸಂದರ್ಭದಲ್ಲಿ ಹೇಳಿಕೆ ನೀಡಿರುವ ಮೊದಲನೇ ಆರೋಪಿ, ದಾಳಿಯ ಬಗ್ಗೆ ತಮಗೆ ಮೊದಲೇ ತಿಳಿದಿತ್ತು ಎಂದಿದ್ದಾರೆ. ಹೀಗೆಯೇ ಮುಂದುವರಿದರೆ ಪ್ರಕರಣದ ವಿಚಾರಣೆ ನಿರ್ಣಾಯಕ ಹಂತಕ್ಕೆ ಬರುವಾಗ ಯಾವ ಸಾಕ್ಷ್ಯವೂ ಉಳಿಯುವುದಿಲ್ಲ. ಈ ಎಲ್ಲ ಅಂಶಗಳನ್ನೂ ಗಣನೆಗೆ ತೆಗೆದುಕೊಂಡು ಆರೋಪಿಗೆ ಜಾಮೀನು ನೀಡಬಾರದು~ ಎಂದು ವಾದಿಸಿದರು.ಕಟ್ಟಾ ಪ್ರಕರಣ ಪ್ರಸ್ತಾಪ: ಯಡಿಯೂರಪ್ಪ ಅವರ ಜಾಮೀನು ಅರ್ಜಿಯನ್ನು ವಿರೋಧಿಸಲು ಹನುಮಂತರಾಯ, ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರಿಗೆ ಜಾಮೀನು ನಿರಾಕರಿಸಿ ಇದೇ ವಿಶೇಷ ನ್ಯಾಯಾಲಯ ಹೊರಡಿಸಿದ ಆದೇಶವನ್ನು ಪ್ರಸ್ತಾಪಿಸಿದರು. ಹೈಕೋರ್ಟ್ ಈ ಆದೇಶವನ್ನು ಎತ್ತಿ ಹಿಡಿದಿರುವುದನ್ನೂ ಸ್ಮರಿಸಿ, ಅದೇ ರೀತಿ ಈ ಪ್ರಕರಣವನ್ನೂ ಪರಿಗಣಿಸುವಂತೆ ಕೋರಿದರು.2ಜಿ ತರಂಗಾಂತರ ಹಂಚಿಕೆ ಹಗರಣದಲ್ಲಿ ರಾಜ್ಯಸಭಾ ಸದಸ್ಯೆ ಕನಿಮೊಳಿ ಅವರ ಜಾಮೀನು ಅರ್ಜಿ ತಿರಸ್ಕರಿಸುವ ಸಂಬಂಧ ವಿವಿಧ ನ್ಯಾಯಾಲಯಗಳು ನೀಡಿರುವ ಆದೇಶ ಮತ್ತು ತೀರ್ಪುಗಳನ್ನೂ ಪ್ರಸ್ತಾಪಿಸಿದರು.ಈ ಪ್ರಕರಣದಲ್ಲಿ ಆರೋಪಿಗಳ ಪಟ್ಟಿಯಲ್ಲಿರುವ ಐವರು ಮಹಿಳೆಯರಿಗೆ ಜಾಮೀನು ನೀಡುವ ಬಗ್ಗೆ ನ್ಯಾಯಾಲಯ ನಿರ್ಧರಿಸಿದರೆ ತಮ್ಮ ಅಭ್ಯಂತರವೇನೂ ಇಲ್ಲ ಎಂಬ ರೀತಿಯಲ್ಲಿ ವಾದಿಸಿದರು.ಆದರೆ, ಯಡಿಯೂರಪ್ಪ ಅವರಿಗೆ ಜಾಮೀನು ನೀಡಿದ್ದೇ ಆದರೆ, ಕಠಿಣ ಷರತ್ತುಗಳನ್ನು ವಿಧಿಸಬೇಕು. ದೇಶ ತೊರೆಯದಂತೆ ತಡೆಯಲು ಪಾಸ್‌ಪೋರ್ಟ್ ವಶಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.ದಾಖಲೆ ಸಲ್ಲಿಕೆ: ತಮ್ಮ ಕಕ್ಷಿದಾರ ಜಾಮೀನು ಪಡೆಯಲು ಅರ್ಹ ಎಂದು ವಾದಿಸಿದ ಯಡಿಯೂರಪ್ಪ ಪರ ವಕೀಲ ರವಿ ಬಿ.ನಾಯಕ್, `ಹಿಂದೆ ಅಧಿಕಾರದಲ್ಲಿ ಇದ್ದವರು ಸಾವಿರಾರು ಎಕರೆ ಡಿನೋಟಿಫಿಕೇಷನ್ ಮಾಡಿದ್ದಾರೆ. ಅರ್ಕಾವತಿ ಬಡಾವಣೆಗಾಗಿ ಸ್ವಾಧೀನಪಡಿಸಿಕೊಂಡಿದ್ದ ಭೂಮಿ ಕಾನೂನುಬಾಹಿರವಾಗಿ ಡಿನೋಟಿಫೈ ಮಾಡಿ ಮಾನ್ಯತಾ ಟೆಕ್‌ಪಾರ್ಕ್‌ಗೆ ಲಾಭ ಮಾಡಿಕೊಡಲಾಗಿತ್ತು~ ಎಂದು ಆರೋಪಿಸಿ, ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದರು.ಯಡಿಯೂರಪ್ಪ ಕಾನೂನುಬಾಹಿರವಾಗಿ ಯಾವುದೇ ಭೂಮಿಡಿನೋಟಿಫೈ ಮಾಡಿಲ್ಲ. ಭೂಮಿಯ ಮೂಲ ಮಾಲೀಕರ ಮನವಿ ಮೇರೆಗೆ ನಿರ್ಧಾರ ಕೈಗೊಂಡಿದ್ದು, ಇದರಿಂದ ಅವರಿಗೆ ಯಾವುದೇ ಲಾಭವೂ ಆಗಿಲ್ಲ ಎಂದು ವಾದಿಸಿದರು. 

ಹಾಲು ತಣ್ಣಗಾಗುವವರೆಗೆ ಕಾಯಬೇಕಿತ್ತಲ್ಲವೇ...
ಡಿನೋಟಿಫಿಕೇಷನ್ ಸಂಬಂಧ ವಾದ-ಪ್ರತಿವಾದ ನಡೆಯುತ್ತಿರುವಾಗಲೇ ಮಧ್ಯ ಪ್ರವೇಶಿಸಿದ ನ್ಯಾಯಾಧೀಶ ಎನ್.ಕೆ.ಸುಧೀಂದ್ರ ರಾವ್, `ಹಾಲು ಬಿಸಿ ಇತ್ತು. ಮಗು ಅಳುತ್ತಿತ್ತು. ಹಾಲು ತಣ್ಣಗಾಗುವವರೆಗೆ ಕಾಯಬೇಕಿತ್ತಲ್ಲವೇ. ಬಿಸಿ ಹಾಲನ್ನೇ ಮಗುವಿನ ಬಾಯಿಗೆ ಸುರಿಯುವಂತಹ ತುರ್ತು ಏನಿತ್ತು~ ಎಂದು ಯಡಿಯೂರಪ್ಪ ಪರ ವಕೀಲರನ್ನು ಪ್ರಶ್ನಿಸಿದರು.ಇದೇ ವೇಳೆ ನ್ಯಾಯಾಲಯಕ್ಕೆ ವಿವರಣೆಯೊಂದನ್ನು ಸಲ್ಲಿಸಿದ ಲೋಕಾಯುಕ್ತ ಪರ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಐ.ಎಸ್.ಪ್ರಮೋದ್‌ಚಂದ್ರ, ಲೋಕಾಯುಕ್ತ ಪೊಲೀಸರು ಯಡಿಯೂರಪ್ಪ ವಿರುದ್ಧ ತನಿಖೆ ನಡೆಸಲು ನಿರಾಕರಿಸಿದ್ದರು ಎಂಬ ಆರೋಪವನ್ನು ಅಲ್ಲಗಳೆದರು. ಸಿರಾಜಿನ್ ಬಾಷಾ ಅವರು ಲೋಕಾಯುಕ್ತ ಎಸ್‌ಪಿಯನ್ನು ಭೇಟಿಯಾಗಿ ತನಿಖೆಗೆ ಮನವಿ ಮಾಡಿದ್ದರು. ಕಾರ್ಯದ ಒತ್ತಡದಿಂದ ತಕ್ಷಣಕ್ಕೆ ತನಿಖೆ ಆರಂಭಿಸಲು ಸಾಧ್ಯವಾಗಿರಲಿಲ್ಲ. ನಂತರ ಬಾಷಾ ಅವರು ಖಾಸಗಿ ದೂರು ಸಲ್ಲಿಸಿದರು ಎಂದು ವಿವರಿಸಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.