ಸೋಮವಾರ, ಜೂನ್ 21, 2021
21 °C

ಬಿಎಸ್‌ವೈ ತಂತ್ರ : ಬಜೆಟ್ ಅತಂತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವಿಧಾನ ಮಂಡಲದ ಬಜೆಟ್ ಅಧಿವೇಶನಕ್ಕೆ ಕ್ಷಣಗಣನೆ ಆರಂಭವಾಗಿರುವ ಸಂದರ್ಭದಲ್ಲಿಯೇ ನಾಯಕತ್ವ ಬದಲಾವಣೆಗೆ ಪಟ್ಟು ಹಿಡಿದಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರೆಸಾರ್ಟ್ ರಾಜಕೀಯದ ದಾಳ ಉರುಳಿಸಿದ್ದಾರೆ. ಯಡಿಯೂರಪ್ಪ ಬಣದ 55 ಶಾಸಕರು ನಗರ ಹೊರವಲಯದ ರೆಸಾರ್ಟ್‌ನಲ್ಲಿ ಬೀಡುಬಿಟ್ಟಿದ್ದು, ರಾಜ್ಯ ರಾಜಕೀಯ ಮತ್ತೊಮ್ಮೆ ಕುತೂಹಲದ ಘಟ್ಟ ತಲುಪಿದೆ.ಕೆಲ ದಿನಗಳಿಂದ ಶಾಸಕರನ್ನು ಸೆಳೆಯುವ ಕಸರತ್ತಿಗೆ ಕೈಹಾಕಿದ್ದ ಯಡಿಯೂರಪ್ಪ, ಭಾನುವಾರ ರಾತ್ರಿಯೇ ಬೆಂಬಲಿಗ ಶಾಸಕರನ್ನು ದೆಹಲಿಗೆ ಕರೆದೊಯ್ದು ಹೈಕಮಾಂಡ್ ಎದುರು ಶಕ್ತಿ ಪ್ರದರ್ಶಿಸುವ ಕಾರ್ಯತಂತ್ರ ರೂಪಿಸಿಕೊಂಡಿದ್ದರು. ಆದರೆ, ಭಾನುವಾರ ಸಂಜೆಯ ವೇಳೆಗೆ ದಿಢೀರನೆ ಕಾರ್ಯತಂತ್ರ ಬದಲಿಸಿ ಶಾಸಕರೊಂದಿಗೆ ರೆಸಾರ್ಟ್‌ಗೆ ತೆರಳಿದರು. ತಮ್ಮ ಮುಂದಿನ ನಡೆಯನ್ನು 48 ಗಂಟೆಗಳಲ್ಲಿ ಪ್ರಕಟಿಸುವುದಾಗಿ ತಿಳಿಸಿರುವ ಅವರು, ಬಿಜೆಪಿ ಕೇಂದ್ರ ನಾಯಕರಿಗೆ ಮತ್ತೊಮ್ಮೆ ಸೆಡ್ಡು ಹೊಡೆದಿದ್ದಾರೆ.ಮೂಲಗಳ ಪ್ರಕಾರ, ಬಜೆಟ್‌ಗೂ ಮುನ್ನವೇ ತಮ್ಮನ್ನು ಮುಖ್ಯಮಂತ್ರಿ ಮಾಡುವಂತೆ ಯಡಿಯೂರಪ್ಪ ಹೈಕಮಾಂಡ್‌ಗೆ ಬೇಡಿಕೆ ರವಾನಿಸಿದ್ದಾರೆ. ಬೇಡಿಕೆ ಈಡೇರದೇ ಇದ್ದಲ್ಲಿ ಬೆಂಬಲಿಗ ಶಾಸಕರೊಂದಿಗೆ ರೆಸಾರ್ಟ್‌ನಲ್ಲೇ ಠಿಕಾಣಿ ಹೂಡುವ ಮೂಲಕ ಬಜೆಟ್ ಅಧಿವೇಶನದಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ. ತಮ್ಮ ಮುಂದಿನ ಕಾರ್ಯತಂತ್ರ ಕುರಿತು ಬಹುತೇಕ ಶಾಸಕರಿಗೆ ಯಡಿಯೂರಪ್ಪ ಗುಟ್ಟು ಬಿಟ್ಟುಕೊಟ್ಟಿಲ್ಲ. ಕೆಲ ಪ್ರಮುಖರ ಜೊತೆ ಅಸ್ಪಷ್ಟವಾಗಿ ಈ ವಿಷಯವನ್ನು ಹಂಚಿಕೊಂಡಿದ್ದಾರೆ.ನಗರದ ರೇಸ್‌ಕೋರ್ಸ್ ರಸ್ತೆಯಲ್ಲಿರುವ ಯಡಿಯೂರಪ್ಪ ನಿವಾಸದಲ್ಲಿ ಮಧ್ಯಾಹ್ನ 2.30ಕ್ಕೆ ಶಾಸಕರ ಸಭೆ ನಿಗದಿಯಾಗಿತ್ತು. ಯಡಿಯೂರಪ್ಪ ಬಣದಲ್ಲಿ ಗುರುತಿಸಿಕೊಂಡಿರುವ ಶಾಸಕರು ಶನಿವಾರ ರಾತ್ರಿಯೇ ಬೆಂಗಳೂರಿನತ್ತ ಮುಖ ಮಾಡಿದ್ದರು. ಆದರೆ, ನಿಗದಿತ ವೇಳೆಗೆ ಯಡಿಯೂರಪ್ಪ ನಿವಾಸ ತಲುಪಲು ಬಹುತೇಕರಿಗೆ ಸಾಧ್ಯವಾಗಲಿಲ್ಲ. ಹೀಗಾಗಿ ಮೂರು ಬಾರಿ ಸಭೆ ಮುಂದೂಡಿದ ಯಡಿಯೂರಪ್ಪ, ಸಂಜೆ ಆರು ಗಂಟೆಗೆ ಶಾಸಕರೊಂದಿಗೆ ಸಮಾಲೋಚನೆ ನಡೆಸಿದರು.ಸಚಿವರಾದ ಜಗದೀಶ ಶೆಟ್ಟರ್, ಸಿ.ಎಂ.ಉದಾಸಿ, ಬಸವರಾಜ ಬೊಮ್ಮಾಯಿ, ಶೋಭಾ ಕರಂದ್ಲಾಜೆ, ಉಮೇಶ್ ಕತ್ತಿ, ಮುರುಗೇಶ ನಿರಾಣಿ, ರೇವುನಾಯಕ ಬೆಳಮಗಿ, ವಿ.ಸೋಮಣ್ಣ, ಎಂ.ಪಿ.ರೇಣುಕಾಚಾರ್ಯ ಸೇರಿದಂತೆ 50ಕ್ಕೂ ಹೆಚ್ಚು ಶಾಸಕರು ಸಭೆಯಲ್ಲಿ ಪಾಲ್ಗೊಂಡಿದ್ದರು.

 

ತಮ್ಮ ಮುಂದಿನ ಕಾರ್ಯತಂತ್ರ ಕುರಿತು ಅರ್ಧ ಗಂಟೆಗೂ ಹೆಚ್ಚುಕಾಲ ಸಮಾಲೋಚನೆ ನಡೆಸಿದ ಯಡಿಯೂರಪ್ಪ, ನಂತರ ತುರ್ತು ಪತ್ರಿಕಾಗೋಷ್ಠಿ ನಡೆಸಿ ಶಾಸಕರ ಜೊತೆ ರೆಸಾರ್ಟ್‌ಗೆ ತೆರಳುತ್ತಿರುವ ವಿಷಯವನ್ನು ಅಧಿಕೃತವಾಗಿಯೇ ಪ್ರಕಟಿಸಿದರು. ನಂತರ ಎರಡು ಬಸ್‌ಗಳಲ್ಲಿ ಶಾಸಕರೊಂದಿಗೆ ತುಮಕೂರು ರಸ್ತೆಯಲ್ಲಿರುವ `ಗೋಲ್ಡನ್ ಪಾಮ್~ ರೆಸಾರ್ಟ್‌ನತ್ತ ಪ್ರಯಾಣಿಸಿದರು.`ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದಾಗ ಒಂದು ವಿಶೇಷ ಸಂದರ್ಭ ಸೃಷ್ಟಿಯಾಗಿತ್ತು. ಆಗ, ಶಾಸಕಾಂಗ ಪಕ್ಷದ ನಾಯಕನ ಸ್ಥಾನಕ್ಕೆ ಚುನಾವಣೆಗೆ ಸ್ಪರ್ಧಿಸಿದ್ದ ಜಗದೀಶ ಶೆಟ್ಟರ್ ನಮ್ಮ ಜೊತೆ ಇರಲಿಲ್ಲ. ಈಗ ಅವರೂ ನಮ್ಮಂದಿಗೆ ಇದ್ದಾರೆ. ಬಿಜೆಪಿಯಲ್ಲಿ ಎಲ್ಲರೂ ಒಟ್ಟಾಗಿದ್ದಾರೆ ಎಂಬುದಕ್ಕೆ ಇದು ಸಾಕ್ಷಿ~ ಎಂದರು.

ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗಾಗಿ ಕೆಲಸ ಮಾಡಬೇಕಿದೆ. ಕೆಲ ಅಡತಡೆಗಳು ಇಲ್ಲದಿದ್ದರೆ, ರಾಜ್ಯವು ಅಭಿವೃದ್ಧಿಯಲ್ಲಿ ಮೊದಲ ಸ್ಥಾನದಲ್ಲಿರುತ್ತಿತ್ತು. ವಿಧಾನಸಭಾ ಚುನಾವಣೆಗೂ ಮುನ್ನ ರಾಜ್ಯವನ್ನು ಮೊದಲ ಸ್ಥಾನಕ್ಕೆ ಕೊಂಡೊಯ್ಯಬೇಕು ಎಂಬುದು ತಮ್ಮ ಆಶಯ.ಈ ನಿಟ್ಟಿನಲ್ಲಿ ಪಕ್ಷದ ರಾಷ್ಟ್ರೀಯ ನಾಯಕರು ಸೂಕ್ತ ತೀರ್ಮಾನ ಕೈಗೊಳ್ಳುತ್ತಾರೆ ಎಂಬ ವಿಶ್ವಾಸ ತಮಗಿದೆ ಎಂದು ಹೇಳಿದರು.ದೆಹಲಿ ಭೇಟಿ ಸಾಧ್ಯತೆ ಕುರಿತ ಪ್ರಶ್ನೆಗೆ, `ಈಗ ರಾಜ್ಯಸಭೆ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ಎಲ್ಲ ನಾಯಕರೂ ದೆಹಲಿಯಲ್ಲಿ ಇಲ್ಲ. ಆದ್ದರಿಂದ ದೆಹಲಿಗೆ ಹೋಗಿಲ್ಲ. ನಮ್ಮ ಮುಂದಿನ ನಡೆ ಏನು ಎಂಬುದಕ್ಕೆ 48 ಗಂಟೆ ಕಾದು ನೋಡಿ~ ಎಂದು ಉತ್ತರಿಸಿದರು.`ಈ ಬಾರಿಯ ಬಜೆಟ್ ಮಂಡಿಸುವವರು ಯಾರು~ ಎಂದು ಪ್ರಶ್ನಿಸಿದಾಗ, `ಈಗ ಅವರು (ಸದಾನಂದ ಗೌಡ) ಮುಖ್ಯಮಂತ್ರಿ ಆಗಿದ್ದಾರೆ. ಅವರೇ ಬಜೆಟ್ ಮಂಡಿಸುತ್ತಾರೆ~ ಎಂದರು.ಶಾಸಕಾಂಗ ಪಕ್ಷ ಸಭೆಗೆ ಆಗ್ರಹ: `ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಲೋಕಾಯುಕ್ತರು ಸಲ್ಲಿಸಿದ್ದ ವರದಿಯ ಕಾರಣದಿಂದ ಯಡಿಯೂರಪ್ಪ ಅವರಿಂದ ರಾಜೀನಾಮೆ ಪಡೆಯಲಾಗಿತ್ತು. ಈಗ ಹೈಕೋರ್ಟ್ ಲೋಕಾಯುಕ್ತರ ವರದಿ ಮತ್ತು ಅದರ ಆಧಾರದಲ್ಲಿ ದಾಖಲಿಸಿದ್ದ ಮೊಕದ್ದಮೆಯನ್ನು ರದ್ದುಮಾಡಿದೆ. ಪಕ್ಷದ ಹೈಕಮಾಂಡ್ ಜೊತೆ ನಾವು ನಿರಂತರ ಸಂಪರ್ಕದಲ್ಲಿದ್ದೇವೆ. ನಮ್ಮ ಬೇಡಿಕೆಯನ್ನು ಈಡೇರಿಸುವ ತೀರ್ಮಾನ ಹೈಕಮಾಂಡ್‌ನಿಂದ ಹೊರಬೀಳುತ್ತದೆ ಎಂಬ ಸಂಪೂರ್ಣ ವಿಶ್ವಾಸವಿದೆ~ ಎಂದು ಬೊಮ್ಮಾಯಿ ಮತ್ತು ಉದಾಸಿ ತಿಳಿಸಿದರು.`ತಕ್ಷಣವೇ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಸಬೇಕು. ನಾವು 70 ಶಾಸಕರು ಒಟ್ಟಿಗೆ ಇದ್ದೇವೆ. ಪ್ರಜಾತಂತ್ರ ಮಾರ್ಗದ ಮೂಲಕವೇ ಶಾಸಕಾಂಗ ಪಕ್ಷದ ನಾಯಕನನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡಬೇಕು. ಬಿಜೆಪಿಯ ಕೆಲವು ಶಾಸಕರನ್ನು ಹೊರತುಪಡಿಸಿ ಉಳಿದವರೆಲ್ಲರೂ ಯಡಿಯೂರಪ್ಪ ಅವರ ಜೊತೆಗಿದ್ದಾರೆ. ಇದನ್ನು ಗಮನಿಸಿ ಹೈಕಮಾಂಡ್ ತಕ್ಷಣವೇ ಸೂಕ್ತ ನಿರ್ಧಾರ ಕೈಗೊಳ್ಳಬೇಕು~ ಎಂದು ಆಗ್ರಹಿಸಿದರು.`ಹೈಕೋರ್ಟ್ ನೀಡಿರುವ ತೀರ್ಪಿನ ಹಿನ್ನೆಲೆಯಲ್ಲಿ ಎಲ್ಲರೂ ಒಟ್ಟಿಗೆ ಸೇರಿದ್ದೇವೆ. ದೆಹಲಿಗೆ ಹೋಗುವ ಬಗ್ಗೆ ಯಾವುದೇ ತೀರ್ಮಾನ ಆಗಿಲ್ಲ. ಇಲ್ಲಿಯೇ ಎಲ್ಲ ಶಾಸಕರೂ ಒಟ್ಟಾಗಿ ಇದ್ದು, ಸೋಮವಾರ ಸಂಜೆ ಸಭೆ ಸೇರಿ ಮುಂದಿನ ಹೆಜ್ಜೆ ಕುರಿತು ನಿರ್ಧಾರ ಕೈಗೊಳ್ಳುತ್ತೇವೆ~ ಎಂದು ಶೆಟ್ಟರ್ ಹೇಳಿದರು.ಸಂಸದರ ಮೂಲಕ ಒತ್ತಡ?

ಶಾಸಕರನ್ನು ಕರೆದೊಯ್ದು ಹೈಕಮಾಂಡ್ ಎದುರು ಬಲ ಪ್ರದರ್ಶನ ನಡೆಸುವ ನಿರ್ಧಾರ ಬದಲಿಸಿರುವ ಯಡಿಯೂರಪ್ಪ ಈಗ ಪಕ್ಷದ ಸಂಸದರ ಮೂಲಕ ಬಿಜೆಪಿ ವರಿಷ್ಠರ ಮೇಲೆ ಒತ್ತಡ ತರಲು ಮುಂದಾಗಿದ್ದಾರೆ.ಈ ಕಾರ್ಯತಂತ್ರದ ಭಾಗವಾಗಿ ಸೋಮವಾರ ಬೆಳಿಗ್ಗೆ ಬಿಜೆಪಿ ವರಿಷ್ಠರನ್ನು ಭೇಟಿಮಾಡಿ ಯಡಿಯೂರಪ್ಪ ಅವರನ್ನು ಮತ್ತೆ ಮುಖ್ಯಮಂತ್ರಿ ಸ್ಥಾನಕ್ಕೆ ನೇಮಿಸುವಂತೆ ಒತ್ತಡ ಹೇರಲು ಕೆಲ ಸಂಸದರು ಸಿದ್ಧತೆ ನಡೆಸಿದ್ದಾರೆ. ಹತ್ತು ಸಂಸದರ ನಿಯೋಗ ಕರೆದೊಯ್ದು ಒತ್ತಡ ಹೇರುವುದಾಗಿ ತುಮಕೂರು ಸಂಸದ  ಜಿ.ಎಸ್.ಬಸವರಾಜ್  ತಿಳಿಸಿದರು.

 

`48 ಗಂಟೆ ಕಾದು ನೋಡಿ~

 `ನಾನು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ದಿನ ಇದೇ ಸ್ಥಳದಲ್ಲಿ 70 ಶಾಸಕರು ನನ್ನ ಜೊತೆಗಿದ್ದರು. ಇಲ್ಲಿಂದ ಕಾಲ್ನಡಿಗೆಯಲ್ಲಿ ರಾಜಭವನಕ್ಕೆ ರಾಜೀನಾಮೆ ಸಲ್ಲಿಸಲು ಹೋದಾಗಲೂ 70 ಶಾಸಕರು ಇದ್ದರು. ಈಗ 55 ಶಾಸಕರು ಇಲ್ಲಿದ್ದಾರೆ.ಇನ್ನೂ 15 ಜನ ನಮ್ಮನ್ನು ಸೇರಿಕೊಳ್ಳುತ್ತಾರೆ. 70 ಶಾಸಕರು ನಮ್ಮ ಜೊತೆ ಇದ್ದಾರೆ. 70ರ ಸಂಖ್ಯೆಗೆ ವಿಶೇಷ ಗುಣವಿದೆ~ ಎಂದು ಯಡಿಯೂರಪ್ಪ ರೆಸಾರ್ಟ್‌ಗೆ ತೆರಳುವ ಮುನ್ನ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.