ಮಂಗಳವಾರ, ಏಪ್ರಿಲ್ 20, 2021
26 °C

ಬಿಐಎಸ್ ಪ್ರಮಾಣಪತ್ರ ಪಡೆಯದ ಘಟಕ ನಿಷೇಧಕ್ಕೆ ಹೈಕೋರ್ಟ್ ಆದೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಭಾರತೀಯ ಮಾಪನ ಸಂಸ್ಥೆಯಿಂದ (ಬಿಐಎಸ್) ಪ್ರಮಾಣ ಪತ್ರ ಪಡೆಯದೆ, ಬಾಟಲಿಯಲ್ಲಿ ಕುಡಿಯುವ ನೀರು ಪೂರೈಸುತ್ತಿರುವ ಘಟಕಗಳನ್ನು ನಿಷೇಧಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಹೈಕೋರ್ಟ್, ಸರ್ಕಾರಕ್ಕೆ ಶುಕ್ರವಾರ ಆದೇಶಿಸಿದೆ.ಕುಡಿಯುವ ನೀರನ್ನು ಬಾಟಲಿಯಲ್ಲಿ ಮಾರಾಟ ಮಾಡುವ ಕಂಪೆನಿಗಳು, ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಕಾಯ್ದೆಯ ಅನುಸಾರ, ಪ್ರಮಾಣ ಪತ್ರ ಕೋರಿ ಇನ್ನು (ಶುಕ್ರವಾರದಿಂದ ಅನ್ವಯ ಆಗುವಂತೆ) ಹದಿನೈದು ದಿನಗಳಲ್ಲಿ ಅರ್ಜಿ ಸಲ್ಲಿಸಬೇಕು ಎಂದೂ ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಹಾಗೂ ನ್ಯಾಯಮೂರ್ತಿ ಅರವಿಂದ ಕುಮಾರ್ ಅವರನ್ನು ಒಳಗೊಂಡ ಹೈಕೋರ್ಟ್ ವಿಭಾಗೀಯ ಪೀಠ ಶುಕ್ರವಾರ ತಾಕೀತು ಮಾಡಿದೆ.ಲೋಚನೇಶ ಹೂಗಾರ ಎಂಬುವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ವಿಭಾಗೀಯ ಪೀಠ, `ಪ್ರಮಾಣಪತ್ರ ನೀಡುವಂತೆ ಕೋರಿ ಸಲ್ಲಿಸುವ ಅರ್ಜಿಯನ್ನು ಸಂಬಂಧಪಟ್ಟವರು ಮೂರು ತಿಂಗಳಲ್ಲಿ (ಅರ್ಜಿ ಪಡೆದುಕೊಂಡ ದಿನದಿಂದ) ಇತ್ಯರ್ಥಗೊಳಿಸಬೇಕು. ಪ್ರಮಾಣಪತ್ರ ನೀಡಲು ಸಾಧ್ಯವಿಲ್ಲ ಎಂದಾದರೆ, ಅದನ್ನು ಘಟಕಗಳಿಗೆ ತಿಳಿಸಬೇಕು. ನಾಲ್ಕು ತಿಂಗಳೊಳಗೆ ಘಟಕಗಳು ತಮ್ಮಲ್ಲಿನ ನ್ಯೂನತೆಗಳನ್ನು ಸರಿಪಡಿಸಿಕೊಳ್ಳಬೇಕು~ ಎಂದು ಆದೇಶದಲ್ಲಿ ಹೇಳಿದೆ.ಆದೇಶದ ಅನ್ವಯ ಮಾನ್ಯತೆ ಪಡೆಯದ ಘಟಕಗಳ ವಿರುದ್ಧ ಸಂಬಂಧಪಟ್ಟ ಅಧಿಕಾರಿಗಳು ಕಾನೂನು ಕ್ರಮ ಜರುಗಿಸಬಹುದು ಎಂದು ನಿರ್ದೇಶನ ನೀಡಿದೆ.ಪದ್ಮರಾಜ ಆಯೋಗ- ಸರ್ಕಾರಕ್ಕೆ ನೋಟಿಸ್


ಮುಖ್ಯಮಂತ್ರಿಗಳ ವಿವೇಚನಾ ಕೋಟಾದ ಅಡಿ ಹಂಚಿಕೆಯಾದ ನಿವೇಶನಗಳೂ ಸೇರಿದಂತೆ ವಿವಿಧ ನಿವೇಶನ ಹಂಚಿಕೆ ಪ್ರಕರಣಗಳ ಕುರಿತ ತನಿಖೆಗೆ ರಚಿಸಿದ್ದ ನ್ಯಾಯಮೂರ್ತಿ ಬಿ. ಪದ್ಮರಾಜ ಆಯೋಗದ ಅವಧಿಯನ್ನು ವಿಸ್ತರಿಸದೆ ಇರುವುದಕ್ಕೆ ಕಾರಣ ಕೇಳಿ ಸರ್ಕಾರಕ್ಕೆ ನೋಟಿಸ್ ಜಾರಿಗೆ ಹೈಕೋರ್ಟ್ ಶುಕ್ರವಾರ ಆದೇಶಿಸಿದೆ.ವಕೀಲ ಎನ್.ಪಿ. ಅಮೃತೇಶ್ ಅವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಹಾಗೂ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರನ್ನು ಒಳಗೊಂಡ ವಿಭಾಗೀಯ ಪೀಠ, `ಇದೇ ಪ್ರಕರಣಗಳ ವಿಚಾರಣೆಗೆ ನ್ಯಾ. ಪದ್ಮರಾಜ ಅವರ ನೇತೃತ್ವದಲ್ಲೇ ವಿಶೇಷ ತನಿಖಾ ತಂಡವನ್ನು ಏಕೆ ನೇಮಕ ಮಾಡಬಾರದು~ ಎಂದು ಸರ್ಕಾರದ ಪರ ವಕೀಲರನ್ನು ಮೌಖಿಕವಾಗಿ ಪ್ರಶ್ನಿಸಿತು.ನ್ಯಾ. ಪದ್ಮರಾಜ ಆಯೋಗದ ಅವಧಿ ವಿಸ್ತರಣೆ ಮಾಡಬೇಕು. ನಿವೇಶನ ಹಂಚಿಕೆ ಪ್ರಕರಣಗಳ ಕುರಿತು ಆಯೋಗದಿಂದಲೇ ತನಿಖೆ ನಡೆಸಬೇಕು ಎಂದು ಅಮೃತೇಶ್ ಅವರು ಅರ್ಜಿಯಲ್ಲಿ ಕೋರಿದ್ದಾರೆ. ಡಿ.ವಿ. ಸದಾನಂದ ಗೌಡ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಆಯೋಗದ ಅವಧಿ ಪೂರ್ಣಗೊಂಡಿತು. ಹೈಕೋರ್ಟ್‌ನಿಂದ ತಡೆಯಾಜ್ಞೆ ಇದ್ದ ಕಾರಣ, ತನಗೆ ವಹಿಸಿದ ಪ್ರಕರಣಗಳ ವಿಚಾರಣೆ ನಡೆಸಲು ಆಯೋಗಕ್ಕೆ ಸಾಧ್ಯವಾಗಲಿಲ್ಲ. ವಿಚಾರಣೆಯನ್ನು ಜನವರಿ 4ಕ್ಕೆ ಮುಂದೂಡಲಾಗಿದೆ.ಮೇಯರ್ ವಿರುದ್ಧ ಅರ್ಜಿ


ಬೆಂಗಳೂರಿನ ತ್ಯಾಜ್ಯ ವಿಲೇವಾರಿ ಸಮಸ್ಯೆ ಕುರಿತು ನಡೆದ ಚರ್ಚೆಯೊಂದರ ವೇಳೆ ನಗರದ ಮೇಯರ್ ಡಿ. ವೆಂಕಟೇಶಮೂರ್ತಿ ಅವರು `ವಕೀಲರು ಸುಳ್ಳುಗಾರರು~ ಎಂದು ಹೇಳಿದ್ದಾರೆ. ಅವರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಬೇಕು ಎಂದು ಕೋರಿ ವಕೀಲ ಜಿ.ಆರ್. ಮೋಹನ್ ಹೈಕೋರ್ಟ್‌ನಲ್ಲಿ ಮಧ್ಯಂತರ ಅರ್ಜಿ ಸಲ್ಲಿಸಿದ್ದಾರೆ.ಹೇಬಿಯಸ್ ಕಾರ್ಪಸ್ ಅರ್ಜಿ ಇತ್ಯರ್ಥ

ನಟಿ ಹೇಮಶ್ರೀ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿರುವ ಸುರೇಂದ್ರ ಬಾಬು ಅವರ ತಂದೆ ರಾಮಯ್ಯ ಅವರು ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಹೈಕೋರ್ಟ್ ಶುಕ್ರವಾರ ಇತ್ಯರ್ಥಗೊಳಿಸಿದೆ.`ನನ್ನ ಇನ್ನೊಬ್ಬ ಮಗ ಜಯಗೋಪಾಲ್, ಸುರೇಂದ್ರ ಬಾಬು ಬಂಧನದ ನಂತರ ಕಾಣೆಯಾಗಿದ್ದಾನೆ~ ಎಂದು ದೂರಿ ರಾಮಯ್ಯ ಅರ್ಜಿ ಸಲ್ಲಿಸಿದ್ದರು. ಜಯಗೋಪಾಲ್ ಹಾಗೂ ರಾಮಯ್ಯ ಅವರನ್ನು ಹಾಜರುಪಡಿಸಲು ಹೈಕೋರ್ಟ್ ಈ ಹಿಂದೆ ಪೊಲೀಸರಿಗೆ ಆದೇಶ ನೀಡಿತ್ತು.ಅದರಂತೆ, ರಾಮಯ್ಯ ಹಾಗೂ ಜಯಗೋಪಾಲ್ ಅವರನ್ನು ಪೊಲೀಸರು ಶುಕ್ರವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದರು. `ನನ್ನನ್ನು ಪೊಲೀಸರು ಬಂಧನದಲ್ಲಿ ಇಟ್ಟಿರಲಿಲ್ಲ. ಕೆಲಸದ ನಿಮಿತ್ತ ನಾನೇ ಬೇರೆಡೆ ತೆರಳಿದ್ದೆ~ ಎಂದು ಜಯಗೋಪಾಲ್ ಹೇಳಿಕೆ ನೀಡಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.