ಗುರುವಾರ , ಜೂಲೈ 2, 2020
23 °C

ಬಿಕೋ ಎನ್ನುತ್ತಿರುವ ಬತ್ತ ಖರೀದಿ ಕೇಂದ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಿಕೋ ಎನ್ನುತ್ತಿರುವ ಬತ್ತ ಖರೀದಿ ಕೇಂದ್ರ

ಯಾದಗಿರಿ: ಬೆಲೆ ಕುಸಿತದಿಂದ ಕಂಗಾಲಾಗಿದ್ದ ರೈತರ ನೆರವಿಗೆ ಧಾವಿಸಿರುವ ಸರ್ಕಾರ, ಜಿಲ್ಲೆಯಲ್ಲಿ ಆರಂಭಿಸಿರುವ ಬತ್ತ ಖರೀದಿ ಕೇಂದ್ರಗಳು ಕಳೆದ ನಾಲ್ಕು ದಿನಗಳಿಂದ ಬಿಕೋ ಎನ್ನುತ್ತಿವೆ. ಖರೀದಿ ಪ್ರಕ್ರಿಯೆಯ ಬಗ್ಗೆ ಮಾಹಿತಿ ಕೇಳಿ ಹೋಗುವ ರೈತರು, ಬತ್ತವನ್ನು ಮಾತ್ರ ಮಾರಾಟಕ್ಕೆ ತರದೇ ಇರುವುದರಿಂದ ಜಿಲ್ಲೆಯಲ್ಲಿ ಆರಂಭಿಸಿರುವ ಮೂರು ಬತ್ತ ಖರೀದಿ ಕೇಂದ್ರಗಳಲ್ಲಿ ಇದುವರೆಗೂ ಒಂದೇ ಒಂದು ಕ್ವಿಂಟಲ್ ಬತ್ತ ಖರೀದಿಯಾಗಿಲ್ಲ!ಶಹಾಪುರ, ಸುರಪುರ ಹಾಗೂ ಯಾದಗಿರಿಯಲ್ಲಿ ಜೂನ್ 17 ರಿಂದಲೇ ಬತ್ತ ಖರೀದಿ ಕೇಂದ್ರಗಳನ್ನು ಆರಂಭಿಸಲಾಗಿದೆ. ರೈತರಿಂದ ನೇರವಾಗಿ ಬತ್ತ ಖರೀದಿ ಮಾಡಲಾಗುತ್ತಿದ್ದು, ಎ ಗ್ರೇಡ್ ಬತ್ತಕ್ಕೆ ಕ್ವಿಂಟಲ್‌ಗೆ ರೂ. 1,030 ಹಾಗೂ ಸಾಮಾನ್ಯ ಬತ್ತಕ್ಕೆ ರೂ. 1,000 ದರ ನಿಗದಿಪಡಿಸಲಾಗಿದೆ.ಬತ್ತ ಖರೀದಿ ಕೇಂದ್ರಗಳಿಗೆ ಬರುವ ರೈತರು, ಪಹಣಿ ಹಾಗೂ ಸಂಬಂಧಿಸಿದ ಗ್ರಾಮ ಲೆಕ್ಕಾಧಿಕಾರಿಯಿಂದ ದೃಢಿ ೀಕರಣ ಪತ್ರವನ್ನು ತರಬೇಕು. 50 ಕಿ.ಗ್ರಾಂ. ಸಾಮರ್ಥ್ಯದ ಚೀಲಗಳಲ್ಲಿಯೇ ಬತ್ತವನ್ನು ಖರೀದಿಸಲಾಗುವುದು. ಎಫ್‌ಎಕ್ಯೂ ಗುಣಮಟ್ಟದ ಬತ್ತವನ್ನು ಮಾತ್ರ ಖರೀದಿಸಲು ಸರ್ಕಾರ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಅಂತಹ ಬತ್ತವನ್ನು ಮಾತ್ರ ಖರೀದಿ ಮಾಡಲಾಗುತ್ತಿದೆ.ಬೆಲೆ ಕುಸಿತದಿಂದ ಕಂಗಾಲಾಗಿದ್ದ ರೈತರಿಗೆ ಬತ್ತ ಖರೀದಿ ಕೇಂದ್ರಗಳು ಆಶಾಕಿರಣವಾಗಿದ್ದವು. ರೈತರು, ಜನಪ್ರತಿನಿಧಿಗಳ ಒತ್ತಾಯದ ನಂತರ ಖರೀದಿ ಕೇಂದ್ರಗಳನ್ನೇನೋ ಆರಂಭಿಸಲಾಯಿತು. ಆದರೆ ಖರೀದಿಗೆ ಹಾಕಿರುವ ಶರತ್ತುಗಳು ಇದೀಗ ರೈತರನ್ನು ತೊಂದರೆಗೆ ಸಿಲುಕಿಸಿವೆ. ಅತ್ತ ಬತ್ತ ಖರೀದಿಯೂ ಆಗದೇ, ಇತ್ತ ಸಂಗ್ರಹ ಮಾಡಿ ಇಟ್ಟುಕೊಳ್ಳಲೂ ಆಗದಂತಹ ಸ್ಥಿತಿಯಲ್ಲಿ ರೈತರಿದ್ದಾರೆ.ತೊಡಕಾದ ನಿಯಮಗಳು

ಕ್ವಿಂಟಲ್‌ಗೆ ರೂ.600-650 ರಷ್ಟು ಬೆಲೆ ಕುಸಿದಿದ್ದರಿಂದ ರೈತರು ಬತ್ತವನ್ನು ಮಾರಾಟ ಮಾಡದೇ ರಸ್ತೆ ಬದಿಗಳಲ್ಲಿ, ಶಾಲಾ ಆವರಣಗಳಲ್ಲಿ ಶೇಖರಣೆ ಮಾಡಿಟ್ಟಿದ್ದಾರೆ. ಇದೀಗ ಸರ್ಕಾರ ಆರಂಭಿಸಿರುವ ಖರೀದಿ ಕೇಂದ್ರಗಳಲ್ಲಿಯೂ ರೈತರಿಗೆ ಬತ್ತವನ್ನು ಮಾರಾಟ ಮಾಡಲು ಆಗುತ್ತಿಲ್ಲ. ಸರ್ಕಾರದ ನಿಯಮಾವಳಿಗಳೇ ಇದಕ್ಕೆ ಪ್ರಮುಖ ತೊಡಕಾಗಿ ಪರಿಣಮಿಸಿದೆ.ಪ್ರಮುಖವಾಗಿ 50 ಕಿ.ಗ್ರಾಂ. ಚೀಲಗಳಲ್ಲಿಯೇ ಬತ್ತವನ್ನು ಖರೀದಿಗೆ ತರಬೇಕು ಎಂಬ ಶರತ್ತು ವಿಧಿಸಲಾಗಿದ್ದು, ಜಿಲ್ಲೆಯಲ್ಲಿ 50 ಕಿ.ಗ್ರಾಂ ಚೀಲಗಳು ಸಿಗದೇ ಇರುವುದರಿಂದ ಬತ್ತವನ್ನು ಖರೀದಿ ಕೇಂದ್ರಕ್ಕೆ ತರಲು ಆಗುತ್ತಿಲ್ಲ.

ಜಿಲ್ಲೆಯಾದ್ಯಂತ 75 ಕಿ.ಗ್ರಾಂ. ಸಾಮರ್ಥ್ಯದ ಗೋಣಿ ಚೀಲಗಳು ಲಭ್ಯವಾಗಿವೆ. ಆದರೆ ಖರೀದಿ ಕೇಂದ್ರಕ್ಕೆ ತರುವುದಾದಲ್ಲಿ 50 ಕಿ.ಗ್ರಾಂ ಚೀಲಗಳನ್ನು ಹುಡುಕಿಕೊಂಡು ಹೋಗುವುದು ಅನಿವಾರ್ಯ. ಹೀಗಾಗಿ ರೈತರು ದಿಕ್ಕು ತೋಚದಂತಾಗಿದ್ದು, ಬತ್ತ ಖರೀದಿ ಕೇಂದ್ರಗಳತ್ತ ಸುಳಿಯುತ್ತಲೇ ಇಲ್ಲ ಎಂದು ಹೇಳಲಾಗುತ್ತಿದೆ.ಪಹಣಿ, ಗ್ರಾಮ ಲೆಕ್ಕಾಧಿಕಾರಿಯಿಂದ ದೃಢಿ ಕರಣ ಪತ್ರ ಸೇರಿದಂತೆ ಅಗತ್ಯ ದಾಖಲೆಗಳನ್ನು ತರುವುದು ಕಡ್ಡಾಯ. ಬತ್ತ ಖರೀದಿ ಕೇಂದ್ರಕ್ಕೆ ಬರಬೇಕಾದರೆ, ಸರ್ಕಾರ ನಿಗದಿಪಡಿಸಿರುವ ಗುಣಮಟ್ಟವನ್ನು ಹೊಂದಿರಬೇಕು. ಇಷ್ಟೆಲ್ಲ ಶರತ್ತುಗಳು ಪೂರೈಸುವುದರಲ್ಲಿಯೇ ರೈತರಿಗೆ ಸಾಕು ಬೇಕಾಗುತ್ತಿದೆ. ಹೀಗಾಗಿ ಎಲ್ಲಿಯ ರಗಳೆ ಕಡಿಮೆ ದರ ಬಂದರೂ ಖಾಸಗಿಯವರಿಗೆ ಮಾರಾಟ ಮಾಡಿದರಾಯಿತು ಎಂಬ ನಿರ್ಧಾರಕ್ಕೆ ರೈತರು ಬರುತ್ತಿದ್ದಾರೆ.ಇನ್ನೊಂದೆಡೆ ಬತ್ತ ಖರೀದಿ ಕೇಂದ್ರ ಆರಂಭವಾಗುತ್ತಿದ್ದಂತೆಯೇ ಖಾಸಗಿ ವ್ಯಾಪಾರಿಗಳು ಬತ್ತದ ಬೆಲೆಯನ್ನು ರೂ.1 ಸಾವಿರದವರೆಗೆ ಏರಿಸಿದ್ದಾರೆ. ಹೀಗಾಗಿ ರೈತರು, ಖಾಸಗಿ ವ್ಯಾಪಾರಿಗಳಿಗೆ ಮಾರಾಟ ಮಾಡಲು ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ.“ಅಲ್ರಿ ನಮ್ಮೂ 5-10 ಕ್ವಿಂಟಲ್ ಬತ್ತ ಐತಿ. ಇಷ್ಟಕ್ಕನ ವಿಎನ ಕಡೆ ಹೋಗಿ ಪತ್ರ ತರಬೇಕು. ನೆಮ್ಮದಿ ಕೇಂದ್ರಕ್ಕೆ ಹೋಗಿ ಪಹಣಿ ತರಬೇಕು. 50 ಕೆ.ಜಿ. ಚೀಲಾ ಹುಡುಕಿಕೊಂಡ ಹೋಗಬೇಕು. ಮ್ಯಾಲ ನಾವ ಬತ್ತ ತಗೊಂಡ ಬರಬೇಕು. ಇಷ್ಟೆಲ್ಲ ಮಾಡೋ ಬದ್ಲು, ವ್ಯಾಪಾರಿಗಳಿಗೆ ಕೊಟ್ರ, 100-150 ಕಡಿಮಿ ಆದ್ರು, ಇಷ್ಟೆಲ್ಲ ರಗಳಿ ಇಲ್ಲ ನೋಡ್ರಿ. ಅವ್ರ ಗಾಡಿ ತಗೊಂಡ ಬಂದ ಬತ್ತ ಒಯ್ತಾರಿ” ಎಂದು ಬತ್ತದ ಮಾದರಿಯೊಂದಿಗೆ ಇಲ್ಲಿನ ಬತ್ತ ಖರೀದಿ ಕೇಂದ್ರಕ್ಕೆ ಬಂದಿದ್ದ ರೈತ ಸೂಗಪ್ಪ ಹೇಳುತ್ತಾರೆ.34 ಸಾವಿರ ಕ್ವಿಂಟಲ್ ಖರೀದಿ

ಕಳೆದ ವರ್ಷ ಆರಂಭಿಸಲಾಗಿದ್ದ ಬತ್ತ ಖರೀದಿ ಕೇಂದ್ರಗಳ ಮೂಲಕ 34,600 ಕ್ವಿಂಟಲ್ ಬತ್ತ ಖರೀದಿ ಮಾಡಲಾಗಿತ್ತು. ಏಪ್ರಿಲ್‌ನಿಂದ ಜುಲೈವರೆಗೆ ಬತ್ತ ಖರೀದಿ ಕೇಂದ್ರಗಳನ್ನು ಆರಂಭಿಸಿದ್ದರಿಂದ ರೈತರು, ಹೆಚ್ಚಿನ ಪ್ರಮಾಣದಲ್ಲಿ ಬತ್ತ ಮಾರಾಟ ಮಾಡಿದ್ದರು.ಈ ವರ್ಷ ಒಂದೂವರೆ ತಿಂಗಳು ತಡವಾಗಿ ಖರೀದಿ ಕೇಂದ್ರಗಳು ಆರಂಭವಾಗಿದ್ದು, ಬಹಳಷ್ಟು ರೈತರು ಈಗಾಗಲೇ ಬತ್ತವನ್ನು ಖಾಸಗಿ ವ್ಯಾಪಾರಿಗಳಿಗೆ ಮಾರಾಟ ಮಾಡಿದ್ದಾರೆ. ಹೀಗಾಗಿ ಖರೀದಿ ಕೇಂದ್ರಗಳಿಗೆ ಬರುವ ರೈತರ ಸಂಖ್ಯೆಯೂ ಕಡಿಮೆ ಆಗಿದೆ ಎಂದು ಕೆಲ ರೈತರು ಹೇಳುತ್ತಿದ್ದಾರೆ.ಒಂದೆಡೆ ಸರ್ಕಾರದ ನಿಯಮಗಳು, ಇನ್ನೊಂದೆಡೆ ಮುಂಗಾರು ಮಳೆ ಆರಂಭವಾಗುವ ಸಮಯ. ಹೀಗಾಗಿ ಬತ್ತವನ್ನು ಸಂಗ್ರಹಿಸಿ ಇಟ್ಟುಕೊಳ್ಳಲೂ ಆಗದೇ, ಮಾರಾಟ ಮಾಡಲೂ ಆಗದೇ ತೊಂದರೆ ಅನುಭವಿಸುವುದು ಮಾತ್ರ ರೈತರಿಗೆ ತಪ್ಪುತ್ತಿಲ್ಲ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.