ಸೋಮವಾರ, ಜನವರಿ 27, 2020
22 °C

ಬಿಕ್ಕಟ್ಟು: ರಫ್ತು ಅಲ್ಪ ಪ್ರಗತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ದೇಶದ ಒಟ್ಟು ರಫ್ತು ವಹಿವಾಟು 2011ನೇ ಸಾಲಿನ ನವೆಂಬರ್ ತಿಂಗಳಲ್ಲಿ ಶೇ 3.8ರಷ್ಟು ಹೆಚ್ಚಿದ್ದು, 22 ಶತಕೋಟಿ ಡಾಲರ್ (ರೂ1,10,000ಕೋಟಿ) ವಹಿವಾಟು ದಾಖಲಾಗಿದೆ.ಜಾಗತಿಕ ಆರ್ಥಿಕ ಬಿಕ್ಕಟ್ಟಿನಿಂದ ಅಮೆರಿಕ ಮತ್ತು ಯೂರೋಪ್ ಮಾರುಕಟ್ಟೆಗಳಿಂದ ಸರಕುಗಳಿಗೆ ಬೇಡಿಕೆ ಕುಸಿದಿದೆ. ಈ ಹಿನ್ನೆಲೆಯಲ್ಲಿ ನವೆಂಬರ್ ತಿಂಗಳಲ್ಲಿ ರಫ್ತು ಅಲ್ಪ ಪ್ರಗತಿ ದಾಖಲಿಸಿದೆ ಎಂದು ವಾಣಿಜ್ಯ ಸಚಿವಾಲಯ ಹೇಳಿದೆ.ಈ ಅವಧಿಯಲ್ಲಿ ಆಮದು ಶೇ 24ರಷ್ಟು ಹೆಚ್ಚಿದ್ದು, 35 ಶತಕೋಟಿ ಡಾಲರ್ (ರೂ 1,75,000 ಕೋಟಿ)  ವಹಿವಾಟು ದಾಖಲಾಗಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ 21 ಶತಕೋಟಿ ಡಾಲರ್ (ರೂ1,05,000 ಕೋಟಿ) ಮತ್ತು 28 ಶತಕೋಟಿ ಡಾಲರ್ (ರೂ1,40,000 ಕೋಟಿ) ಮೊತ್ತದ ರಫ್ತು ಮತ್ತು ಆಮದು ವಹಿವಾಟು ದಾಖಲಾಗಿದ್ದವು.ಪ್ರತಿಕೂಲ ವಾತಾವರಣ ಇದ್ದರೂ, ವರ್ಷಾಂತ್ಯಕ್ಕೆ 275 ಶತಕೋಟಿ ಡಾಲರ್ ( ರೂ13,75,000 ಕೋಟಿ) ರಫ್ತು ವಹಿವಾಟು ದಾಖಲಾಗುವ ನಿರೀಕ್ಷೆ ಇದೆ ಎಂದು ಭಾರತೀಯ ರಫ್ತು ಒಕ್ಕೂಟದ (ಎಫ್‌ಐಇಒ) ಅಧ್ಯಕ್ಷ ರಾಮು ಎಸ್. ದೇವುರಾ ಅಭಿಪ್ರಾಯಪಟ್ಟಿದ್ದಾರೆ. `ಜಾಗತಿಕ ಆರ್ಥಿಕ ಅಸ್ಥಿರತೆ ಮತ್ತು ಯೂರೋಪ್ ಒಕ್ಕೂಟದ ಸಾಲದ ಬಿಕ್ಕಟ್ಟಿನಿಂದ ರಫ್ತು ವಹಿವಾಟು ಅಂದಾಜಿಸಲಾಗಿರುವ 300 ಶತಕೋಟಿ ಡಾಲರ್‌ನಿಂದ (ರೂ15,00,000 ಕೋಟಿ) 280 ಶತಕೋಟಿ ಡಾಲರ್‌ಗಳಿಗೆ (ರೂ14,00,000 ಕೋಟಿ)  ಇಳಿಕೆಯಾಗಲಿದೆ ಎಂದು ವಾಣಿಜ್ಯ ಕಾರ್ಯದರ್ಶಿ ರಾಹುಲ್ ಖುಲ್ಲರ್ ಹೇಳಿದ್ದಾರೆ.ಕಳೆದ ಏಪ್ರಿಲ್-ನವೆಂಬರ್ ಅವಧಿಯಲ್ಲಿ ದೇಶದ ರಫ್ತು ವಹಿವಾಟು ಶೇ 33ರಷ್ಟು ಪ್ರಗತಿ ಕಂಡಿದ್ದು, 192 ಶತಕೋಟಿ ಡಾಲರ್ (ರೂ9,60,000 ಕೋಟಿ) ವಹಿವಾಟು ದಾಖಲಾಗಿದೆ. ಪ್ರಸಕ್ತ ಹಣಕಾಸು ವರ್ಷದ ಮೊದಲ ಎಂಟು ತಿಂಗಳಲ್ಲಿ ಆಮದು ವಹಿವಾಟು ಶೇ 30ರಷ್ಟು ಹೆಚ್ಚಿದ್ದು, 309 ಶತಕೋಟಿ ಡಾಲರ್ (ರೂ15,45,000 ಕೋಟಿ ) ವಹಿವಾಟು ದಾಖಲಾಗಿದೆ. ಈ ಅವಧಿಯಲ್ಲಿ ವ್ಯಾಪಾರ ಕೊರತೆಯು 116 ಶತಕೋಟಿ ಡಾಲರ್ ( ರೂ5,80,000 ಕೋಟಿ) ಗಳಷ್ಟಾಗಿದೆ.ನವೆಂಬರ್ ತಿಂಗಳಲ್ಲಿ ತೈಲ ಮತ್ತು ತೈಲೇತರ  ಸರಕುಗಳ ಆಮದು ಕ್ರಮವಾಗಿ ಶೇ 32 ಮತ್ತು ಶೇ 21ರಷ್ಟು ಹೆಚ್ಚಿದ್ದು, 32 ಶತಕೋಟಿ ಡಾಲರ್ ( ರೂ1,60,000 ಕೋಟಿ) ಮತ್ತು 25 ಶತಕೋಟಿ (ರೂ1,25,000 ಕೋಟಿ) ಗಳಷ್ಟಾಗಿದೆ. ಏಪ್ರಿಲ್-ನವೆಂಬರ್ ಅವಧಿಯಲ್ಲಿ ತೈಲ ಆಮದು ಶೇ 42 ರಷ್ಟು ಹೆಚ್ಚಿದ್ದು, 94 ಶತಕೋಟಿ ಡಾಲರ್‌ಗಳಿಗೆ             (ರೂ4,70,000 ಕೋಟಿ) ಏರಿಕೆ ಕಂಡಿದೆ.

ಪ್ರತಿಕ್ರಿಯಿಸಿ (+)