ಮಂಗಳವಾರ, ಮೇ 11, 2021
26 °C

ಬಿಜೆಪಿಯಲ್ಲಿ ತೀವ್ರ ವಿರೋಧ ಯಡಿಯೂರಪ್ಪ ರಥಯಾತ್ರೆ ರದ್ದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಂದಾಪುರ: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ರಾಜ್ಯದಲ್ಲಿ ಅ. 8ರಿಂದ ಕೈಗೊಳ್ಳಲಿದ್ದ ರಥಯಾತ್ರೆ ರದ್ದಾಗಿದೆ. ಸೋಮವಾರ ಸಂಜೆ ಕೊಲ್ಲೂರಿಗೆ ಆಗಮಿಸಿದ ಯಡಿಯೂರಪ್ಪ ಅವರು, ಉದ್ದೇಶಿತ ರಥಯಾತ್ರೆ ಕೈಬಿಟ್ಟಿರುವುದಾಗಿ ಮಾಧ್ಯಮ ಪ್ರತಿನಿಧಿಗಳಿಗೆ ಸ್ಪಷ್ಟಪಡಿಸಿದರು.`ನಾನೀಗ ಶಿಕಾರಿಪುರ ಶಾಸಕ. ಹಿಂದಿನಿಂದಲೂ ಜನರೊಂದಿಗೇ ಇದ್ದು ಹೋರಾಟ ಮಾರ್ಗದಲ್ಲಿ ಬೆಳೆದು ಬಂದ ತಮ್ಮದು ಮನೆಯಲ್ಲಿ ಕುಳಿತುಕೊಳ್ಳುವ ಜಾಯಮಾನವಲ್ಲ. ಪಕ್ಷದ ಸಂಘಟನೆಗಾಗಿ ರಾಜ್ಯಾದ್ಯಂತ ಪ್ರವಾಸ ಮಾಡುವ ಇಚ್ಛೆ ಇದೆ. ಈ ಕುರಿತು ಮುಖ್ಯಮಂತ್ರಿ, ಪಕ್ಷದ ರಾಜ್ಯ ಘಟಕ ಅಧ್ಯಕ್ಷರು ಹಾಗೂ ಮುಖಂಡರು ಜತೆ ಚರ್ಚಿಸಿ ತೀರ್ಮಾನ ಕೈಗೊಳ್ಳುವೆ~ ಎಂದರು.ಬೆಂಗಳೂರು ವರದಿ: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಉದ್ದೇಶಿತ ರಥಯಾತ್ರೆಗೆ ಪಕ್ಷದಲ್ಲೇ ವಿರೋಧ ವ್ಯಕ್ತವಾಗಿದೆ.ಈ ರೀತಿ ಹೇಳಿಕೆ ನೀಡುವುದಕ್ಕೂ ಮುನ್ನ ಪಕ್ಷದ ಯಾವೊಬ್ಬ ಮುಖಂಡರ ಜತೆಗೂ ಅವರು ಚರ್ಚೆ ನಡೆಸಿಲ್ಲ. ಹೀಗಾಗಿ ಪಕ್ಷದ ಮುಖಂಡರೇ ಅವರ ತೀರ್ಮಾನದ ವಿರುದ್ಧ ತಿರುಗಿಬಿದ್ದಿದ್ದಾರೆ ಎನ್ನಲಾಗಿದೆ.`ಪಕ್ಷ ಸಂಘಟನೆಗೆ ಒಬ್ಬರೇ ರಥಯಾತ್ರೆ ನಡೆಸಿದರೆ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚು. ಹಾಗೆ ಪಕ್ಷವನ್ನು ಹೈಜಾಕ್ ಮಾಡಲು ಯಾರಿಗೂ ಬಿಡುವುದಿಲ್ಲ~ ಎಂದು ಮುಖಂಡರೊಬ್ಬರು ಹೇಳಿದರು.ಪಕ್ಷ ಸಂಘಟನಾ ಸಭೆ: ಯಡಿಯೂರಪ್ಪ ಅವರು ಪಕ್ಷ ಸಂಘಟನೆಗೆ ರಥಯಾತ್ರೆ ತೆರಳುವುದಾಗಿ ಹೇಳುತ್ತಿದ್ದಂತೆ ಇತ್ತ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ಅವರು ಎಲ್ಲ ವಿಭಾಗಾವಾರು ಪ್ರಭಾರಿಗಳ ಸಭೆಯನ್ನು ಮಂಗಳವಾರ ಕರೆದಿದ್ದಾರೆ.ಬೆಳಿಗ್ಗೆ 11ಕ್ಕೆ ಬಿಜೆಪಿ ಕಚೇರಿಯಲ್ಲಿ ನಡೆಯುವ ಈ ಸಭೆಯಲ್ಲಿ ಹತ್ತು ಮಂದಿ ಪ್ರಭಾರಿಗಳು ಭಾಗವಹಿಸಲಿದ್ದಾರೆ. ಆ ಸಭೆಯಲ್ಲಿ ಪಕ್ಷ ಸಂಘಟನೆ ಕುರಿತು ಚರ್ಚೆಯಾಗಲಿದೆ ಎಂದು ತಿಳಿದುಬಂದಿದೆ.

ಇದೇ 29, 30 ಮತ್ತು ಅಕ್ಟೋಬರ್ 1ರಂದು ದೆಹಲಿಯಲ್ಲಿ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ನಡೆಯುತ್ತಿದ್ದು, ಅದರಲ್ಲಿ ಭಾಗವಹಿಸಲು 28ರಂದೇ ಈಶ್ವರಪ್ಪ ಅವರು ದೆಹಲಿಗೆ ತೆರಳಲಿದ್ದಾರೆ.ಸಿಎಂಗೆ ಗೊತ್ತಿಲ್ಲ

`ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಉದ್ದೇಶಿತ ರಥಯಾತ್ರೆ ಬಗ್ಗೆ ನನಗೆ ಗೊತ್ತಿಲ್ಲ. ಬಿಜೆಪಿಯ ಹಿರಿಯ ಮುಖಂಡ ಎಲ್.ಕೆ.ಅಡ್ವಾಣಿ ಅವರ ರಥಯಾತ್ರೆ ಬಗ್ಗೆ ಮಾತ್ರ ಗೊತ್ತಿದೆ~ ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರು ಪ್ರತಿಕ್ರಿಯಿಸಿದರು.ಗೃಹ ಕಚೇರಿ `ಕೃಷ್ಣಾ~ದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `ಯಡಿಯೂರಪ್ಪ ಮೂರು ವರ್ಷ ಕಾಲ ರಾಜ್ಯದ ಮುಖ್ಯಮಂತ್ರಿಯಾಗಿದ್ದವರು. ಹೀಗಾಗಿ ವಾರಕ್ಕೊಮ್ಮೆ ಅಥವಾ ಹತ್ತು ದಿನಕ್ಕೊಮ್ಮೆ ಅವರನ್ನು ಭೇಟಿ ಮಾಡುತ್ತೇನೆ. ಇದರಲ್ಲಿ ತಪ್ಪಿಲ್ಲ. ಆದರೆ ಅವರ ರಥಯಾತ್ರೆ ಬಗ್ಗೆ ನನಗೇನೂ ಗೊತ್ತಿಲ್ಲ~ ಎಂದರು.`ನನ್ನ ಕಚೇರಿಗೆ ಬರುವ ಎಲ್ಲ ಕಡತಗಳನ್ನು 15ರಿಂದ 18 ದಿನಗಳಲ್ಲಿ ವಿಲೇವಾರಿ ಮಾಡುತ್ತಿದ್ದೇನೆ. ಇದೇ ರೀತಿ ಸಚಿವರೂ ಮಾಡಬೇಕು ಎಂಬುದು ನನ್ನ ಆಶಯ. ಒಂದು ವೇಳೆ ಮಾಡದಿದ್ದರೆ ನಾನೇ ಅವರ ಕಚೇರಿಗಳಿಗೆ ಹೋಗಿ ಕಡತಗಳನ್ನು ಪರಿಶೀಲಿಸುತ್ತೇನೆ. ನನ್ನಿಂದ ಇತ್ಯರ್ಥವಾಗುವ ಕಡತಗಳು, ಸಚಿವರ ಕಚೇರಿಗಳಲ್ಲಿ ದೂಳು ತಿನ್ನುತ್ತಿದ್ದರೆ ಸರ್ಕಾರದ ಉದ್ದೇಶ ಈಡೇರುವುದಿಲ್ಲ~ ಎಂದು ನುಡಿದರು.`ಮುಂದಿನ ಬಜೆಟ್ ಅನ್ನು ನಾನೇ ಮಂಡಿಸುತ್ತೇನೆ. ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದ ಲೋಕಾಯುಕ್ತ ವರದಿಯಿಂದ ಸರ್ಕಾರದ ಅಸ್ತಿತ್ವಕ್ಕೆ ಧಕ್ಕೆ ಇಲ್ಲ. ಈ ಸರ್ಕಾರ ಅವಧಿಯನ್ನು ಪೂರ್ಣಗೊಳಿಸಲಿದೆ~ ಎಂದ ಅವರು, ಅಕ್ರಮ ಗಣಿಗಾರಿಕೆಯ ಹಣ ಆಪರೇಷನ್ ಕಮಲಕ್ಕೆ ಬಳಕೆಯಾಗಿಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.