ಸೋಮವಾರ, ಜೂನ್ 21, 2021
27 °C

ಬಿಜೆಪಿ ಕಚೇರಿಗೆ ಕಟ್ಟಡ ಬಾಡಿಗೆ ಸಿಗುತ್ತಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಳ್ಳಾರಿ: `ಆಡಳಿತಾರೂಢ ಬಿಜೆಪಿಗೆ ನಗರದಲ್ಲಿ ಕಚೇರಿ ತೆರೆಯಲು ಯಾರೂ ಕಟ್ಟಡ ಬಾಡಿಗೆ ನೀಡುತ್ತಿಲ್ಲ. ರಾತ್ರಿಯ ವೇಳೆ ಕಟ್ಟಡ ಬಾಡಿಗೆ ನೀಡುವುದಾಗಿ ತಿಳಿಸುವ ಮಾಲೀಕರು, ಬೆಳಿಗ್ಗೆ ನಿರಾಕರಿಸುತ್ತಿದ್ದಾರೆ~.

ಈ ಅಚ್ಚರಿಯ ಸಂಗತಿಯನ್ನು ತಿಳಿಸಿದವರು ಜಿಲ್ಲಾ ಉಸ್ತುವಾರಿ ಸಚಿವ  ಬಾಲಚಂದ್ರ ಜಾರಕಿಹೊಳಿ.ಸ್ಥಳೀಯ ಪಾರ್ವತಿ ನಗರದಲ್ಲಿರುವ ಕಲ್ಯಾಣ ಮಂಟಪದಲ್ಲಿ ಬುಧವಾರ ಮಧ್ಯಾಹ್ನ ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆಯ ಅಂಗವಾಗಿ ಚರ್ಚಿಸಲು ಏರ್ಪಡಿಸಲಾಗಿದ್ದ ಕಾರ್ಯರ್ತರ ಸಭೆಯಲ್ಲಿ ಅವರು ಈ ವಿಷಯ ಬಹಿರಂಗಪಡಿಸಿದರು.ಕಾರ್ಯಕರ್ತರು ಪಕ್ಷದ ಕಚೇರಿ ಸ್ಥಾಪಿಸುವಂತೆ ಬಗ್ಗೆ ಮನವಿ ಸಲ್ಲಿಸುತ್ತಲೇ ಇದ್ದಾರೆ. ಒಂದೆಡೆ ಕುಳಿತು ಚರ್ಚಿಸಲು ಸೂಕ್ತ ಸ್ಥಳ ನಿಗದಿಪಡಿಸಿ, ಕಚೇರಿ ಆರಂಭಿಸಿ ಎಂದು ಕೋರುತ್ತಲೇ ಇದ್ದಾರೆ. ಪಕ್ಷದ ಜಿಲ್ಲಾ ಘಟಕದ ಕಚೇರಿ ತೆರೆಯಲು ಅನೇಕ ದಿನಗಳಿಂದ ಯತ್ನಿಸಲಾಗುತ್ತಿದೆ. ಆದರೂ ಯಾರೊಬ್ಬರೂ ಕಟ್ಟಡ ಅಥವಾ ನಿವೇಶನ ಬಾಡಿಗೆ ನೀಡಿದ್ದರಿಂದ ಕಚೇರಿ ತೆರೆಯಲು ಸಾಧ್ಯವಾಗುತ್ತಿಲ್ಲ ಎಂದು ಅವರು ಹೇಳಿದರು.ಕೆಲವೇ ದಿನಗಳಲ್ಲಿ ಸೂಕ್ತ ಜಾಗೆಯನ್ನು ಬಾಡಿಗೆ ಪಡೆದು, ಕಚೇರಿ ಆರಂಭಿಸಿ, ಪಕ್ಷದ ಸಂಘಟನೆಗೆ ಶ್ರಮಿಸಲಾಗುವುದು. ಕಾರ್ಯಕರ್ತರು ಅಧೀರರಾಗುವ ಅಗತ್ಯವಿಲ್ಲ ಎಂದು ಅವರು ತಿಳಿಸಿದರು.4 ವರ್ಷಗಳ ಹಿಂದೆ ಬಿಜೆಪಿ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬರಲು ಕಾರ್ಯಕರ್ತರು ಹಗಲಿರುಳು ಶ್ರಮಿಸಿದ್ದಾರೆ. ಆದರೆ, ಅಧಿಕಾರ ಕೆಲವೇ ಕೆಲವರ ಕೈಯಲ್ಲಿ ಉಳಿದಿತ್ತು. ಇದೀಗ ಪರಿಸ್ಥಿತಿ ತಿಳಿಯಾಗಿದ್ದು, ಕಾರ್ಯಕರ್ತರಿಗೆ ಎಲ್ಲ ರೀತಿಯ ಅವಕಾಶ ಕಲ್ಪಿಸಲು ಪಕ್ಷದ ಮುಖಂಡರು ಮನಸು ಮಾಡಿದ್ದಾರೆ ಎಂದು ಅವರು ಹೇಳಿದರು.ಇತ್ತೀಚೆಗೆ ನಡೆದ ಉಪ ಚುನಾವಣೆಯ ನಂತರ ಬಳ್ಳಾರಿಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸುತ್ತಿರುವವರು ಅನೇಕರಿದ್ದಾರೆ. ಬಿಜೆಪಿಯಿಂದ ವಿವಿಧ ಸಂಘ- ಸಂಸ್ಥೆಗಳಿಗೆ ನಾಮ ನಿರ್ದೇಶನ ಹೊಂದಿ, ಪಕ್ಷವಿರೋಧಿ ಚಟುವಟಿಕೆ ನಡೆಸುತ್ತಿರುವವರನ್ನು ಉಚ್ಛಾಟನೆ ಮಾಡಿ, ನಿಷ್ಠಾವಂತ ಕಾರ್ಯಕರ್ತರನ್ನು ಆ ಸ್ಥಾನಕ್ಕೆ ನೇಮಿಸಲು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್. ಈಶ್ವರಪ್ಪ ತೀರ್ಮಾನಿಸಿದ್ದಾರೆ. ಕೆಲವೇ ದಿನಗಳಲ್ಲಿ ಈ ಕುರಿತ ಪ್ರಕಟಣೆ ಹೊರಬೀಳಲಿದೆ ಎಂದು ಜಾರಕಿಹೊಳಿ ತಿಳಿಸಿದರು.ಮುಂಬರುವ ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಕಾರ್ಯಕರ್ತರು ಪಕ್ಷದ ಅಭ್ಯರ್ಥಿಯ ಗೆಲುವಿಗೆ ಶ್ರಮಿಸಬೇಕು ಎಂದು ಅವರು ಕೋರಿದರು.ಅಭ್ಯರ್ಥಿ ಅಮರನಾಥ ಪಾಟೀಲ ಮಾತನಾಡಿ, ಕಳೆದ 15 ವರ್ಷಗಳಿಂದ ಪಕ್ಷದಲ್ಲಿದ್ದು ವಿಧಾನ ಪರಿಷತ್‌ಗೆ ಆಯ್ಕೆಗಾಗಿ ಸ್ಪರ್ಧಿಸಿದ್ದಾಗಿ ಹೇಳಿದರಲ್ಲದೆ, ಪದವೀಧರರ ಸಂಕಷ್ಟಗಳಿಗೆ ಶ್ರಮಿಸುವುದಾಗಿ ತಿಳಿಸಿದರು.ಶಾಸಕರಾದ ಎಂ.ಎಸ್. ಸೋಮಲಿಂಗಪ್ಪ, ಚಂದ್ರಾ ನಾಯ್ಕ, ವಿಧಾನ ಪರಿಷತ್ ಸದಸ್ಯ ಎನ್.ತಿಪ್ಪಣ್ಣ, ಮಾಜಿ ಸಂಸದ ಕೋಳೂರು ಬಸವನಗೌಡ, ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಗುತ್ತಿಗನೂರು ವಿರೂಪಾಕ್ಷಗೌಡ, ಕೇಂದ್ರ ಪರಿಹಾರ ಸಮಿತಿ ಅಧ್ಯಕ್ಷ ಕೆ.ಎ. ರಾಮಲಿಂಗಪ್ಪ, ಸತೀಶಬಾಬು, ರಾಮಚಂದ್ರಯ್ಯ, ಬುಡಾ ಅಧ್ಯಕ್ಷ ವಿನೋದ್‌ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.