ಶನಿವಾರ, ಮೇ 28, 2022
31 °C

ಬಿಜೆಪಿ ಕಾರ್ಯಕರ್ತರ ಬಂಧನ, ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ಕೇಂದ್ರ ಸರ್ಕಾರದ ಆರ್ಥಿಕ ನೀತಿಗಳು ಮತ್ತು ರಾಜಕೀಯ ನಿರ್ಧಾರಗಳನ್ನು ವಿರೋಧಿಸಿ ನಗರದ ಹೊಸ ಬಸ್ ನಿಲ್ದಾಣದ ಮುಂದೆ ಭಾರತೀಯ ಜನತಾ ಪಕ್ಷ ಶುಕ್ರವಾರ ಹಮ್ಮಿಕೊಂಡಿದ್ದ ಜನಸಂಘರ್ಷ ಅಭಿಯಾನ- ಜೈಲ್ ಭರೋ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ ನಂತರ ಬಿಡುಗಡೆ ಮಾಡಿದರು.ಬೆಳಿಗ್ಗೆ 11 ಗಂಟೆ ವೇಳೆಗೆ ನೆರೆದ ಕಾರ್ಯಕರ್ತರು ರಸ್ತೆಯಲ್ಲೆ ಕುಳಿತು ಧರಣಿ ಮಾಡಿ ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. ಕೇಂದ್ರ ಸರ್ಕಾರದ ಹೊಣೆಗೇಡಿ ಆರ್ಥಿಕ ನೀತಿಗಳು ಮತ್ತು ತಪ್ಪಾದ ರಾಜಕೀಯ ನಿರ್ಧಾರಗಳಿಂದ ದಿನಬಳಕೆ ವಸ್ತುಗಳ ಬೆಲೆ ಗಗನಕ್ಕೇರುತ್ತಿವೆ. ಆದರೆ ಸರ್ಕಾರ ಜನಸಾಮಾನ್ಯರ ಕಷ್ಟಗಳ ಬಗ್ಗೆ ನಿರ್ಲಕ್ಷ್ಯ ವಹಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

 

ಮೂರು ವ್ಯಾನ್‌ಗಳೊಡನೆ ಸ್ಥಳದಲ್ಲಿ ಹಾಜರಿದ್ದ ಪೊಲೀಸರು ಕಾರ್ಯಕರ್ತರನ್ನು ವಶಕ್ಕೆ ಪಡೆದು ವಾಹನದೊಳಕ್ಕೆ ತಳ್ಳಿದರು. ಹೆಚ್ಚು ಸಂಭ್ರಮೋತ್ಸಾಹಗಳಿಂದ ಪಾಲ್ಗೊಂಡ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸುತ್ತಲೇ ಪೊಲೀಸರ ವಾಹನ ಹತ್ತಿ ಕುಳಿತರು. ನಂತರವೂ ಅವರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.ಪ್ರಮುಖರಾದ ಓಂಶಕ್ತಿ ಚಲಪತಿ, ಸಿ.ವೆಂಕಟೇಶ್, ನೀಲಿ ಜಯಶಂಕರ್, ಮಮತಾ, ಕೆಂಬೋಡಿ ನಾರಾಯಣಸ್ವಾಮಿ, ಓಹಿಲೇಶ್ವರ, ರವಿಕುಮಾರ್, ಹೂವಳ್ಳಿ ಚಲಪತಿ, ಕೆಂಪಣ್ಣ, ಬೀರಪ್ಪ, ಅಪ್ಪಿ, ಸಿ.ಡಿ.ರಾಮಚಂದ್ರಗೌಡ ವಿಜಯಕುಮಾರ್ ಪಾಲ್ಗೊಂಡಿದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.