ಭಾನುವಾರ, ಮೇ 22, 2022
24 °C

ಬಿಡದಿ ಧ್ಯಾನಪೀಠ ಬೀಗಮುದ್ರೆ ತೆರವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮನಗರ: ಬಿಡದಿ ಬಳಿಯ ಧ್ಯಾನಪೀಠದ ನಿತ್ಯಾನಂದ ಸ್ವಾಮೀಜಿ ಆಶ್ರಮದ ಕೊಠಡಿಗಳಿಗೆ ಜೂನ್ 12ರಂದು ಹಾಕಲಾಗಿದ್ದ ಬೀಗವನ್ನು ತೆರವುಗೊಳಿಸಿದ ಜಿಲ್ಲಾಡಳಿತ ಆ ಬೀಗದ ಕೀಲಿಗಳನ್ನು ಮಂಗಳವಾರ ಆಶ್ರಮವಾಸಿಗಳಿಗೆ ಹಸ್ತಾಂತರಿಸಿದೆ.ಪ್ರಾದೇಶಿಕ ಆಯುಕ್ತ ಶಂಭು ದಯಾಳ್ ಮೀನಾ, ಜಿಲ್ಲಾಧಿಕಾರಿ ವಿ. ಶ್ರೀರಾಮರೆಡ್ಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗರ್‌ವಾಲ್, ತಹಸೀಲ್ದಾರ್ ಡಾ. ರವಿ ತಿರ್ಲಾಪುರ ಅವರ ನೇತೃತ್ವದಲ್ಲಿ ಮಂಗಳವಾರ ಕಂದಾಯ ಮತ್ತು ಪೊಲೀಸ್ ಇಲಾಖೆಯ ತಂಡ ಆಶ್ರಮದ ಪರಿಶೀಲನೆ ನಡೆಸಿತು.ವಾರದಿಂದ ಕೈಗೊಳ್ಳಲಾಗಿದ್ದ ಶೋಧನೆಯಲ್ಲಿ ಮಹಜರು ಮಾಡಿದ ದಾಖಲೆ, ಕಡತ ಮತ್ತಿತರೆ ವಸ್ತುಗಳನ್ನು ಪ್ರಾದೇಶಿಕ ಆಯುಕ್ತರು ಮತ್ತೊಮ್ಮೆ ಪರಿಶೀಲಿಸಿದರು. ನಂತರ ಆಶ್ರಮದ 35ಕ್ಕೂ ಹೆಚ್ಚು ಕೊಠಡಿಗಳ ಬೀಗದ ಕೀಲಿಗಳನ್ನು ಆಶ್ರಮದವರಿಗೆ ಹಿಂದಿರುಗಿಸಿದರು.ಜೂನ್ 7ರಿಂದ ಎರಡು-ಮೂರು ದಿನ ಧ್ಯಾನಪೀಠ ಆಶ್ರಮದ ಒಳಗೆ ಮತ್ತು ಹೊರಗೆ ನಡೆದ ವಿವಿಧ ರೀತಿಯ ವಿದ್ಯಮಾನಗಳನ್ನು ಗಮನಿಸಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಅವರು ಸ್ವಾಮೀಜಿಯನ್ನು ಬಂಧಿಸಿ, ಆಶ್ರಮಕ್ಕೆ ಬೀಗ ಜಡಿದು, ಕೂಲಂಕಷವಾಗಿ ಶೋಧಿಸುವಂತೆ ಆದೇಶಿಸಿದ್ದರು. ಪ್ರಾದೇಶಿಕ ಆಯುಕ್ತ ಶಂಭು ದಯಾಳ್ ಮೀನಾ ನೇತೃತ್ವದಲ್ಲಿ ಶೋಧನೆಗೆ ಆದೇಶ ಹೊರಡಿಸಲಾಗಿತ್ತು.ಈ ಆದೇಶದ ಅನುಸಾರ ಜಿಲ್ಲಾಡಳಿತ ಜೂನ್ 12ರಂದು ಆಶ್ರಮಕ್ಕೆ ಬೀಗ ಹಾಕಿತ್ತು. ಆಶ್ರಮದ ಸುತ್ತ ಪೊಲೀಸರ ಸರ್ಪಗಾವಲನ್ನೂ ಇರಿಸಲಾಯಿತು. ತಹಸೀಲ್ದಾರ್ ಅವರು ಎರಡು ತಿಂಗಳು ಆಶ್ರಮದ ಒಳಗೆ ಮತ್ತು ಹೊರಗಿನ 200 ಮೀಟರ್ ಸುತ್ತಳತೆ ಪ್ರದೇಶದಲ್ಲಿ ಕಲಂ 144ರ ಪ್ರಕಾರ ನಿಷೇಧಾಜ್ಞೆಯನ್ನೂ ಜಾರಿಗೊಳಿಸಿದ್ದರು.ಜಿಲ್ಲಾಧಿಕಾರಿ, ಹೆಚ್ಚುವರಿ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಉಪ ವಿಭಾಗಾಧಿಕಾರಿ ಅವರ ನೇತೃತ್ವದಲ್ಲಿ ಕಂದಾಯ ಮತ್ತು ಪೊಲೀಸ್ ಅಧಿಕಾರಿಗಳು ಒಂದು ವಾರ ನಿರಂತರ ಶೋಧನೆ ನಡೆಸಿ 35ಕ್ಕೂ ಹೆಚ್ಚು ಕೊಠಡಿಗಳಿಗೆ ಬೀಗ ಹಾಕಿದ್ದರು. ಅಲ್ಲದೆ ಹಲವು ದಾಖಲಾತಿಗಳ ಮಹಜರು ನಡೆಸಿದ್ದರು.ಅಲ್ಲಿ ಲಭ್ಯವಾಗಿದ್ದ ಕೆಲ ಹಾರ್ಡ್‌ಡಿಸ್ಕ್‌ಗಳನ್ನು ತಮ್ಮ ವಶಕ್ಕೆ ಪಡೆದಿದ್ದರು. ಈ ಸಮಯದಲ್ಲಿ ಹೊರಗಿನವರಿಗೆ ಆಶ್ರಮದ ಪ್ರವೇಶವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿತ್ತು. ಮಾಧ್ಯಮದವರು ಆಶ್ರಮ ಪ್ರವೇಶಿಸದಂತೆಯೂ ನಿರ್ಬಂಧಿಸಲಾಗಿತ್ತು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.