ಭಾನುವಾರ, ಸೆಪ್ಟೆಂಬರ್ 27, 2020
27 °C

ಬಿಬಿಎಂಪಿ ಕಾಮಗಾರಿ ಅವ್ಯವಹಾರ: ಮೂವರು ಶಾಸಕರ ವಿರುದ್ಧ ಸಿಎಜಿ ಚಾಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಿಬಿಎಂಪಿ ಕಾಮಗಾರಿ ಅವ್ಯವಹಾರ: ಮೂವರು ಶಾಸಕರ ವಿರುದ್ಧ ಸಿಎಜಿ ಚಾಟಿ

ಬೆಂಗಳೂರು: ತಮ್ಮ ತಮ್ಮ ಕ್ಷೇತ್ರಗಳಲ್ಲಿ ಗುತ್ತಿಗೆದಾರರಿಗೆ ಅನುಕೂಲವಾಗುವ ರೀತಿಯಲ್ಲಿ ಅಂದಾಜುಗಳನ್ನು ಅಕ್ರಮವಾಗಿ ತಯಾರಿಸಲು ನಗರದ ಮೂವರು ಶಾಸಕರು ಸಹಕರಿಸಿದ್ದಾರೆ ಎಂದು ಭಾರತದ ಲೆಕ್ಕನಿಯಂತ್ರಕರು ಹಾಗೂ ಮಹಾಲೆಕ್ಕ ಪರಿಶೋಧಕರ ವರದಿಯಲ್ಲಿ ಗಂಭೀರವಾಗಿ ಆರೋಪಿಸಲಾಗಿದೆ.2011ರ ಮಾರ್ಚ್ 31ಕ್ಕೆ ಕೊನೆಗೊಂಡ ಭಾರತದ ಲೆಕ್ಕ ನಿಯಂತ್ರಕರು ಹಾಗೂ ಮಹಾ ಲೆಕ್ಕಪರಿಶೋಧಕರ ವರದಿ (ಸ್ಥಳೀಯ ಸಂಸ್ಥೆಗಳು)ಯನ್ನು ಶುಕ್ರವಾರ ವಿಧಾನ ಪರಿಷತ್ತಿನಲ್ಲಿ ಮಂಡಿಸಲಾಯಿತು. ವಿಶೇಷವಾಗಿ ಬಿಬಿಎಂಪಿಯ ರಸ್ತೆ ಹಾಗೂ ಮಳೆ ನೀರಿನ ಚರಂಡಿ ಕಾಮಗಾರಿಗಳಲ್ಲಿ ಸಾಕಷ್ಟು ಅವ್ಯವಹಾರ ನಡೆದಿದೆ ಎಂದು ಸಿಎಜಿ ವರದಿ ಬಹಿರಂಗಪಡಿಸಿದೆ.ದಾಸರಹಳ್ಳಿ, ಸರ್ವಜ್ಞನಗರ ಹಾಗೂ ಶಾಂತಿನಗರ ವಿಧಾನಸಭಾ ಕ್ಷೇತ್ರಗಳಲ್ಲಿ ಶಾಸಕರ ಸೂಚನೆ ಮೇರೆಗೆ ಈ ರೀತಿ ಗುತ್ತಿಗೆದಾರರಿಗೆ ಅನುಕೂಲವಾಗುವ ರೀತಿಯಲ್ಲಿ ಅಂದಾಜುಗಳನ್ನು ಅಕ್ರಮವಾಗಿ ತಯಾರಿಸಲಾಗಿದೆ ಎಂದು ವರದಿ ಉಲ್ಲೇಖಿಸಿದೆ. ಆದರೆ, ಶಾಸಕರ ಹೆಸರನ್ನು ವರದಿಯಲ್ಲಿ ಪ್ರಸ್ತಾಪಿಸಿಲ್ಲ. ದಾಸರಹಳ್ಳಿ ಕ್ಷೇತ್ರವನ್ನು ಬಿಜೆಪಿ ಶಾಸಕ ಎಸ್. ಮುನಿರಾಜು ಪ್ರತಿನಿಧಿಸುತ್ತಿದ್ದರೆ, ಕಾಂಗ್ರೆಸ್‌ನ ಎನ್.ಎ. ಹ್ಯಾರಿಸ್ ಹಾಗೂ ಕೆ.ಜೆ. ಜಾರ್ಜ್ ಕ್ರಮವಾಗಿ ಶಾಂತಿನಗರ ಮತ್ತು ಸರ್ವಜ್ಞನಗರ  ಕ್ಷೇತ್ರಗಳನ್ನು ಪ್ರತಿನಿಧಿಸುತ್ತಿದ್ದಾರೆ.ಈ ಕ್ಷೇತ್ರಗಳಲ್ಲಿ ಶಾಸಕರು ಪ್ರತಿ ಕಾಮಗಾರಿಗೂ ತಾವು ಸೂಚಿಸಲ್ಪಟ್ಟ ಒಂದು ನಿರ್ದಿಷ್ಟ ಮೊತ್ತದಲ್ಲಿ ರಸ್ತೆ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವಂತೆ ಆಯುಕ್ತರನ್ನು ಅನೇಕ ಸಂದರ್ಭಗಳಲ್ಲಿ ಕೋರಿದ್ದರು. ಇದಕ್ಕೆ ಪೂರಕವಾಗಿ ಅಂದಾಜುಗಳನ್ನು ತಯಾರಿಸುವುದಕ್ಕೂ ಮೊದಲೇ ಪ್ರತಿನಿಧಿಗಳು ಸೂಚಿಸಿದ ಮೊತ್ತಕ್ಕೆ ಕಾರ್ಯನಿರ್ವಾಹಕ ಎಂಜಿನಿಯರ್‌ಗಳು ಟೆಂಡರ್ ಆಹ್ವಾನಿಸಿದ್ದರು.

 

ಇದರಲ್ಲಿ ಸ್ಪಷ್ಟವಾಗಿ ಸಮೀಕ್ಷೆ, ರಸ್ತೆಯ ಸ್ಥಿತಿಗತಿ, ಅಗತ್ಯವಿರುವ ಬಾಬ್ತುಗಳೂ ಸೇರಿದಂತೆ ಇತ್ಯಾದಿ ಅಂದಾಜುಗಳನ್ನು ತಯಾರಿಸುವುದಕ್ಕಾಗಿ ನಿಯಂತ್ರಣ ವ್ಯವಸ್ಥೆಯನ್ನು ಈ ವಿಭಾಗಗಳು ಕಡೆಗಣಿಸಿದ್ದವು. ಟೆಂಡರ್ ಆಹ್ವಾನಿಸುವ ನೋಟಿಸ್‌ನಲ್ಲಿ ಸೂಚಿಸಲಾಗಿದ್ದ ಮೊತ್ತಕ್ಕೆ ಸರಿಹೊಂದುವ ರೀತಿಯಲ್ಲಿ ಅಂದಾಜುಗಳನ್ನು ತಯಾರಿಸಲಾಗಿತ್ತು ಎಂಬುದನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ.ಆದರೆ, ಈ ಆರೋಪಗಳಿಗೆ ಸಂಬಂಧಿಸಿದಂತೆ ಸಿಎಜಿಗೆ ಉತ್ತರ ನೀಡುವ ಸಂದರ್ಭದಲ್ಲಿ ಅಂದಾಜುಗಳನ್ನು ತಯಾರಿಸಿದ ನಂತರವೇ ಕಾಮಗಾರಿಗಳಿಗೆ ಟೆಂಡರ್ ಕರೆಯಲಾಗಿದೆ ಎಂದು ಸರ್ಕಾರ ಸ್ಪಷ್ಟೀಕರಣ ನೀಡಿದೆ.2010ರ ಮಾರ್ಚ್ ವೇಳೆಗೆ ತ್ಯಾಜ್ಯ ಸಂಗ್ರಹಣೆ, ಆಸ್ಪತ್ರೆ ಹಾಗೂ ಶಾಲಾ ಕಾಮಗಾರಿ ಸೇರಿದಂತೆ ಇತರೆ ಕಾಮಗಾರಿಗಳಿಗೆ ಆದ್ಯತೆ ನೀಡುವಂತೆ ಆಡಳಿತಾಧಿಕಾರಿಗಳು ಸೂಚನೆ ನೀಡಿದ್ದರು.ಆ ವೇಳೆಗೆ ಆಯುಕ್ತರು 1,910 ಕೋಟಿ ರೂಪಾಯಿ ಮೌಲ್ಯದ ವಿವಿಧ ಕಾಮಗಾರಿಗಳಿಗೆ ಕಾಮಗಾರಿ ಪಟ್ಟಿ ಮೀರಿ ಅನುಮೋದನೆ ನೀಡಿದ್ದರು. ಮುಖ್ಯ ಲೆಕ್ಕಾಧಿಕಾರಿಗಳು ಆಡಳಿತಾಧಿಕಾರಿಗಳಿಂದ ಘಟನಾನಂತರ ಮಂಜೂರಾತಿ ಕೋರಿದರು. ಆದರೆ, ಅದಕ್ಕೆ ಆಡಳಿತಾಧಿಕಾರಿಗಳು ಮಂಜೂರಾತಿ ನೀಡಲಿಲ್ಲ. ಆಡಳಿತಾಧಿಕಾರಿಗಳ ಸೂಚನೆ ಹೊರತಾಗಿಯೂ ಆಯುಕ್ತರು 2010ರ ಮಾರ್ಚ್ ಅಂತ್ಯದಲ್ಲಿ ಮಂಜೂರಾತಿ ಇಲ್ಲದೆಯೇ 36.84 ಕೋಟಿ ರೂಪಾಯಿಗಳಷ್ಟು ಮೊತ್ತದ ಹೆಚ್ಚುವರಿ ಕಾಮಗಾರಿಗಳಿಗೆ ಮಂಜೂರಾತಿ ನೀಡಿದ್ದಾರೆ ಎಂದು ವರದಿ ತಿಳಿಸಿದೆ.

ಮಾಸಿಕ ಸಭೆಗಳಲ್ಲಿ ತಾವು ಹಣಕಾಸಿನ ಸ್ಥಿತಿಗತಿ ಬಗ್ಗೆ ಮಾಹಿತಿ ಬಯಸಿದರೂ ಮುಖ್ಯ ಲೆಕ್ಕಾಧಿಕಾರಿಗಳು ನೀಡಲಿಲ್ಲ. ಅಲ್ಲದೆ, ಅವರಿಗೆ ವಹಿಸಲಾಗಿದ್ದ ಕರ್ತವ್ಯ ನಿರ್ವಹಿಸುವಲ್ಲಿ ವಿಫಲರಾದರು ಎಂದು ಆಡಳಿತಾಧಿಕಾರಿಗಳು ದೂರಿರುವುದು ವರದಿಯಲ್ಲಿ ಉಲ್ಲೇಖಗೊಂಡಿದೆ.ಇದರಿಂದ ಆಯುಕ್ತರು ಹಾಗೂ ಮುಖ್ಯ ಲೆಕ್ಕಾಧಿಕಾರಿಗಳು ಪಾಲಿಕೆಯ ಹಣಕಾಸಿನ ಸ್ಥಿತಿಗತಿಯನ್ನು ಆಡಳಿತಾಧಿಕಾರಿಗಳಿಂದ ಮರೆಮಾಚಿದ್ದರು ಎಂಬ ಅಂಶವನ್ನು ಸಿಎಜಿ ವರದಿ ಬಹಿರಂಗಗೊಳಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.