ಶನಿವಾರ, ಮೇ 15, 2021
24 °C

ಬಿಬಿಎಂಪಿ ಚುನಾವಣೆ- ಭವಿಷ್ಯ ಹೈಕೋರ್ಟ್ ಕೈಯಲ್ಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮೇಯರ್ ಹಾಗೂ ಉಪಮೇಯರ್ ಸ್ಥಾನಕ್ಕೆ ಗುರುವಾರ (ಮೇ 26) ನಡೆಯಲಿರುವ ಚುನಾವಣೆಯ ಭವಿಷ್ಯ ಹೈಕೋರ್ಟ್ ಕೈಯಲ್ಲಿದೆ.

-ಕಾರಣ, ಚುನಾವಣೆ ನಡೆಸಲು ಅನುಮತಿ ನೀಡಿರುವ ಕೋರ್ಟ್, ಚುನಾವಣಾ ಫಲಿತಾಂಶ ಮಾತ್ರ ತನ್ನ ಅಂತಿಮ ತೀರ್ಪಿಗೆ ಬದ್ಧವಾಗಲಿದೆ ಎಂದಿದೆ.

ಈ ಸ್ಥಾನಗಳಿಗೆ ಇದುವರೆಗೆ ಪರಿಶಿಷ್ಟ ಪಂಗಡಗಳಿಗೆ ಮೀಸಲಾತಿ ನೀಡಿಲ್ಲ ಎಂದು ದೂರಿ ಲೋಕೇಶ ವಿ.ನಾಯ್ಕ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಹುಲುವಾಡಿ ಜಿ.ರಮೇಶ್ ನೇತೃತ್ವದ ಪೀಠ ನಡೆಸಿತು.

ಇಲ್ಲಿಯವರೆಗೆ ಯಾವ ವರ್ಗಕ್ಕೆ ಮೀಸಲಾತಿ ನೀಡಲಾಗಿದೆ ಎಂಬ ಬಗ್ಗೆ ಪಟ್ಟಿ ತಯಾರಿಸುವಂತೆ ಪಾಲಿಕೆಗೆ ನ್ಯಾಯಮೂರ್ತಿಗಳು ನಿರ್ದೇಶಿಸಿದ್ದಾರೆ. ಒಂದು ವೇಳೆ ಇದುವರೆಗೆ ಪರಿಶಿಷ್ಟ ಪಂಗಡಕ್ಕೆ ಕಾನೂನಿನ ಅನ್ವಯ ದೊರಕಬೇಕಿದ್ದ ಮೀಸಲಾತಿ ಸಿಕ್ಕಿಲ್ಲ ಎಂದು ಕೋರ್ಟ್ ಗಮನಕ್ಕೆ ಬಂದರೆ, ಈ ಆದೇಶದಿಂದಾಗಿ ಚುನಾವಣೆಯು ಅನೂರ್ಜಿತಗೊಳ್ಳಲಿದೆ. ಒಂದು ವೇಳೆ  ಪರಿಶಿಷ್ಟ ಪಂಗಡಕ್ಕೆ ಮೀಸಲಾತಿ ನೀಡದೇ ಇರುವುದು ನಿಯಮಾನುಸಾರವಾಗಿದೆ ಎಂದು ಅದರ ಗಮನಕ್ಕೆ ಬಂದರೆ, ಚುನಾವಣೆ ಊರ್ಜಿತಗೊಳ್ಳಲಿದೆ.

ಅರ್ಜಿದಾರರ ಆರೋಪವೇನು? ಈ ಎರಡು ಸ್ಥಾನಗಳಿಗೆ ಮೀಸಲಾತಿ ನೀಡಿ ಫೆ.25ರಂದು ಹೊರಡಿಸಿರುವ ಅಧಿಸೂಚನೆಯನ್ನು ಅರ್ಜಿದಾರರು ಪ್ರಶ್ನಿಸಿದ್ದಾರೆ. `ಇಲ್ಲಿಯವರೆಗೆ 15 ಅವಧಿಯ ಚುನಾವಣೆ ನಡೆದಿದೆ. ಆದರೆ ಒಂದೇ ಒಂದು ಬಾರಿಯೂ ಪರಿಶಿಷ್ಟ ಪಂಗಡಕ್ಕೆ ಮೀಸಲಾತಿ ನೀಡಿಲ್ಲ. ಕರ್ನಾಟಕ ನಗರಾಡಳಿತ ಕಾಯ್ದೆಯ 10ನೇ ಕಲಮಿನ ಅನ್ವಯ ಈ ಎರಡು ಹುದ್ದೆಗಳಿಗೆ ಜನಸಂಖ್ಯೆಯ ಆಧಾರದ ಮೇಲೆ ಮೀಸಲಾತಿ ನೀಡಬೇಕು. ಆದರೆ ಈ ಎಲ್ಲ ನಿಯಮಗಳನ್ನು ಗಾಳಿಗೆ ತೂರಲಾಗಿದೆ~ ಎಂದು ಅರ್ಜಿದಾರರು ಆರೋಪಿಸಿದ್ದಾರೆ.  ಪ್ರತಿವಾದಿಗಳಾಗಿರುವ ಸರ್ಕಾರ, ಬಿಬಿಎಂಪಿ ಸೇರಿದಂತೆ ಇತರರಿಗೆ ನೋಟಿಸ್ ಜಾರಿಗೆ ಆದೇಶಿಸಿದ ನ್ಯಾಯಮೂರ್ತಿಗಳು ವಿಚಾರಣೆಯನ್ನು ಮುಂದೂಡಿದರು.

ಉಪಲೋಕಾಯುಕ್ತ ನೇಮಕ: ನೋಟಿಸ್

ಉಪಲೋಕಾಯುಕ್ತರಾಗಿರುವ ನ್ಯಾಯಮೂರ್ತಿ ಎಸ್.ಬಿ.ಮಜಗೆ ಅವರ ನೇಮಕವನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ.

ಚಿಕ್ಕಬಳ್ಳಾಪುರದ ನಿವಾಸಿ ಪಿ. ಸುಬ್ರಹ್ಮಣ್ಯ ಎನ್ನುವವರು ಈ ಅರ್ಜಿಗೆ ಸಂಬಂಧಿಸಿದಂತೆ ಸರ್ಕಾರ, ನ್ಯಾ.ಮಜಗೆ ಅವರಿಗೆ ನ್ಯಾಯಮೂರ್ತಿ ಹುಲುವಾಡಿ ಜಿ.ರಮೇಶ್ ನೇತೃತ್ವದ ವಿಭಾಗೀಯ ಪೀಠ ನೋಟಿಸ್ ಜಾರಿಗೆ ಆದೇಶಿಸಿದೆ.

ಹೈಕೋರ್ಟ್ ಮಾರ್ಗಸೂಚಿಗೆ ಅನುಗುಣವಾಗಿ ನೇಮಕ ನಡೆದಿಲ್ಲ ಎನ್ನುವುದು ಅರ್ಜಿದಾರರ ದೂರು. ಉಪಲೋಕಾಯುಕ್ತರಾಗಿದ್ದ ನ್ಯಾ.ಚಂದ್ರಶೇಖರಯ್ಯ ಅವರ ನೇಮಕವನ್ನು ರದ್ದು ಮಾಡಿದ ಸಂದರ್ಭದಲ್ಲಿ ಲೋಕಾಯುಕ್ತ ಹಾಗೂ ಉಪಲೋಕಾಯುಕ್ತರ ನೇಮಕವನ್ನು ಹೇಗೆ ಮಾಡಬೇಕು ಎಂಬ ಬಗ್ಗೆ ಹೈಕೋರ್ಟ್ ಮಾರ್ಗಸೂಚಿ ರೂಪಿಸಿದೆ. ಆದರೆ ನ್ಯಾ.ಮಜಗೆ ಅವರ ನೇಮಕ ಈ ರೀತಿ ನಡೆದಿಲ್ಲ ಎನ್ನುವುದು ಅರ್ಜಿದಾರರ ದೂರು. ವಿಚಾರಣೆ ಮುಂದೂಡಲಾಗಿದೆ.

ನಿವೇಶನ ನೋಂದಣಿ: ಆದೇಶಕ್ಕೆ ತಡೆ

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆಗಳಲ್ಲಿನ ಗ್ರಾಮಠಾಣಾ ನಿವೇಶನಗಳನ್ನು ನೋಂದಣಿ ಮಾಡಬಾರದು ಎಂದು ಇದೇ 3ರಂದು ಸರ್ಕಾರ ಹೊರಡಿಸಿರುವ ಆದೇಶಕ್ಕೆ ಹೈಕೋರ್ಟ್ ಬುಧವಾರ ತಡೆ ನೀಡಿದೆ.

ನಕಲಿ ದಾಖಲೆಗಳನ್ನು ಸೃಷ್ಟಿಸಿ ಕೃಷಿ ಕಂದಾಯ ನಿವೇಶನಗಳನ್ನು ಉಪ ನೋಂದಣಾಧಿಕಾರಿಗಳ ಕಚೇರಿಗಳಲ್ಲಿ ನೋಂದಣಿ ಮಾಡುತ್ತಿರುವುದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಸರ್ಕಾರ ಈ ಆದೇಶ ಹೊರಡಿಸಿತ್ತು. ಒಂದು ವೇಳೆ ಈ ಆದೇಶ ಉಲ್ಲಂಘಿಸಿ ಕಂದಾಯ ನಿವೇಶನಗಳನ್ನು ನೋಂದಣಿ ಮಾಡಿಕೊಂಡರೆ ಅಂಥವರ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಇದನ್ನು ಎಚ್.ಹೇಮಂತಕುಮಾರ್ ಹಾಗೂ ಇತರರು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.

`ಈ ಆದೇಶವನ್ನು ವಿವೇಚನಾರಹಿತವಾಗಿ ಹೊರಡಿಸಲಾಗಿದೆ. ಇದು ಸಂವಿಧಾನದ 300-ಎ ವಿಧಿಗೆ ವಿರುದ್ಧವಾಗಿದೆ. ಇದರಿಂದ ಭೂ ಮಾಲೀಕರಿಗೆ ತುಂಬಲಾರದ ನಷ್ಟವಾಗಿದೆ~ ಎಂದು ಅರ್ಜಿದಾರರ ಪರ ವಕೀಲ ಎಂ.ಎಸ್.ಭಾಗ್ವತ ಅವರು ಕೋರ್ಟ್ ಗಮನಕ್ಕೆ ತಂದರು.

ಈ ವಾದವನ್ನು ಮಾನ್ಯ ಮಾಡಿದ ನ್ಯಾಯಮೂರ್ತಿಗಳಾದ ಹುಲುವಾಡಿ ಜಿ.ರಮೇಶ್ ಹಾಗೂ ಎಲ್.ನಾರಾಯಣಸ್ವಾಮಿ ಅವರನ್ನು ಒಳಗೊಂಡ ವಿಭಾಗೀಯ ಪೀಠ ವಿಚಾರಣೆಯನ್ನು ಮುಂದೂಡಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.