ಮಂಗಳವಾರ, ಸೆಪ್ಟೆಂಬರ್ 22, 2020
26 °C

ಬಿಸಿಲೂರಿನಲ್ಲಿ ಹಸಿರಾದ ಸರ್ಕಾರಿ ಶಾಲೆ

ಪ್ರಜಾವಾಣಿ ವಾರ್ತೆ/ಚಿದಂಬರಪ್ರಸಾದ Updated:

ಅಕ್ಷರ ಗಾತ್ರ : | |

ಬಿಸಿಲೂರಿನಲ್ಲಿ ಹಸಿರಾದ ಸರ್ಕಾರಿ ಶಾಲೆ

ಯಾದಗಿರಿ: ಬಿಸಿಲು ನಾಡು ಎಂದೇ ಖ್ಯಾತವಾಗಿರುವ ಜಿಲ್ಲೆಯಲ್ಲಿ ಹಸಿರು ಕಾಣುವುದು ಕೇವಲ ನೀರಾವರಿ ಸೌಲಭ್ಯ ಇರುವ ಪ್ರದೇಶದಲ್ಲಿ ಮಾತ್ರ. ಇಂದಿನ ಆಧುನಿಕ ಯುಗದಲ್ಲಿ ಕಡಿಮೆಯಾಗುತ್ತಿರುವ ಹಸಿರು ಸಿರಿಯನ್ನು ಬೆಳೆಸಲು ಶಾಲೆಯೊಂದು ಸದ್ದಿಲ್ಲದೇ ಕೆಲಸ ಮಾಡುತ್ತಿದ್ದು, ಆವರಣವೆಲ್ಲ ಹಸಿರುಮಯವಾಗಿ ಕಂಗೊಳಿಸುತ್ತಿದೆ.ಪರಿಸರದ ಬಗ್ಗೆ ನಿಜವಾದ ಕಾಳಜಿಯನ್ನು ತೋರುತ್ತಿರುವ ಶಹಾಪುರ ತಾಲ್ಲೂಕಿನ ಕಂದಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಹತ್ತು ಹಲವು ಗಿಡಗಳು ಬೆಳೆದು ನಿಂತಿದ್ದು, ನೆರಳಿನ ಜೊತೆಗೆ ಶಾಲೆಯ ಸೌಂದರ್ಯವನ್ನು ಹೆಚ್ಚಿಸಿವೆ.ಈ ಶಾಲೆಯಲ್ಲಿ ಸುಮಾರು 68 ತೆಂಗಿನ ಮರಗಳು, 48 ಅಶೋಕ ಗಿಡಗಳು, ಹತ್ತು ಗುಲಾಬಿ ಗಿಡಗಳು, ಮೂರು ಬಾದಾಮ ಗಿಡಗಳು, ಕಟಿಂಗ್ ಗಿಡಗಳು, ನುಗ್ಗೆ ಗಿಡ, ಕರಿಬೇವಿನ ಗಿಡ, ಪಪ್ಪಾಯಿ ಹೀಗೆ ಹಲವಾರು ಗಿಡಗಳನ್ನು ಬೆಳೆಸಲಾಗಿದೆ. ಇದರಿಂದಾಗಿ ತಂಪಾದ ವಾತಾವರಣ ನಿರ್ಮಾಣವಾಗಿದ್ದು, ಪರಿಸರದ ಮಹತ್ವದ ಕುರಿತು ಶಾಲಾ ಮಕ್ಕಳಲ್ಲಿ ಜಾಗೃತಿ ಮೂಡಿಸಿದೆ. ಇದರಿಂದಾಗಿ ಬೇಸಿಗೆಯಲ್ಲೂ ಶಾಲೆಯ ಆವರಣದಲ್ಲಿ ತಂಪಾದ ವಾತಾವರಣ ಇರುವುದರಿಂದ ಮಕ್ಕಳು ನೆಮ್ಮದಿಯಿಂದ ಪಾಠ ಮಾಡುವಂತಾಗಿದೆ.ಶಾಲೆ ಚಿಕ್ಕದಾಗಿದ್ದರೂ, ಸುಂದರವಾಗಿ ಇಟ್ಟುಕೊಂಡಿದ್ದು, ಒಂದರಿಂದ ಐದನೇ ತರಗತಿಯವರೆಗೆ 171 ವಿದ್ಯಾರ್ಥಿಗಳು ಓದುತ್ತಿದ್ದಾರೆ. ನಿತ್ಯ ಶಾಲೆಗೆ ಹಾಜರಾಗುವವರು ಸುಮಾರು 150 ವಿದ್ಯಾರ್ಥಿಗಳು.

ಶಾಲೆಯ ಒಳಗೆ ಪ್ರವೇಶಿಸುತ್ತಿದ್ದಂತೆ ದ್ವಾರ ಪಾಲಕರಂತೆ ಕಾಣುವ ತೆಂಗಿನ ಮರಗಳು ಅದ್ದೂರಿ ಸ್ವಾಗತ ನೀಡುತ್ತವೆ. ಶಾಲೆಯ ಆವರಣದ ಒಳಗೆ  ಹೋದರೆ ಸುಂದರವಾಗಿ ಬೆಳೆದ ವಿವಿಧ ಗಿಡಗಳು ಕಣ್ಣಿಗೆ ತಂಪು ನೀಡುತ್ತವೆ. ನಿಸರ್ಗ ದೇವತೆಯ ಮಡಿಲಲ್ಲಿ ಮಕ್ಕಳು ಆಟ ಆಡುತ್ತಿರುವಂತೆ ಭಾಸವಾಗದೇ ಇರದು.ಶಾಲೆಯ ಬಿಡುವಿನ ಸಮಯದಲ್ಲಿ ಶಾಲಾ ಮಕ್ಕಳು, ಶಿಕ್ಷಕರು ಗಿಡಗಳಿಗೆ ನೀರು ಹಾಕುವುದು, ಕಳೆ ತೆಗೆಯುವುದು, ಗೊಬ್ಬರವನ್ನು ಸಿಂಪಡಿಸುವುದು ಸೇರಿದಂತೆ ಹಲವಾರು ಕೆಲಸಗಳನ್ನು ಮಾಡುವ ಮೂಲಕ ಪರಿಸರದ ಕಾಳಜಿ ಮೆರೆಯುತ್ತಿದ್ದಾರೆ. ಶಾಲೆಯ ಪ್ರತಿಯೊಂದು ವರ್ಗ ಕೊಣೆಯಲ್ಲಿ ಫ್ಯಾನ್, ಬೆಳಕಿನ ಸೌಕರ್ಯ, ಗೋಡೆ ಬರಹದಲ್ಲಿ ಸ್ವಾತಂತ್ರ್ಯ ಹೋರಾಟಗಾರರ, ವಿಜ್ಞಾನಿಗಳ ಹಾಗೂ ಕಲಿಕೆಗೆ ಪೂರಕವಾದ ಭಿತ್ತಿ  ಚಿತ್ರಗಳು ಕಾಣುತ್ತವೆ.ಬಾಲ್ಯದಲ್ಲಿಯೇ ಮಕ್ಕಳಿಗೆ ಪರಿಸರದ ಬಗ್ಗೆ ಜಾಗೃತಿ ಹಾಗೂ ಗಿಡಗಳನ್ನು ಬೆಳೆಸಿ ರಕ್ಷಣೆಯನ್ನು ಮಾಡುವ ಬಗ್ಗೆ ಬೋಧನೆಯನ್ನು ಮಾಡಿದರೆ ಸಾಲದು. ಪ್ರತಿಯೊಂದು ಮಗು ಒಂದು ಗಿಡವನ್ನು ಬೆಳೆಸಿದರೆ, ಇದರಿಂದ ಪರಿಸರದ ರಕ್ಷಣೆಯನ್ನು ಮಾಡಬಹುದು ಎಂಬ ಆಲೋಚನೆಯಿಂದ ಶಾಲೆಯಲ್ಲಿ ವಿವಿಧ ರೀತಿಯ ಮರಗಿಡಗಳನ್ನು ಬೆಳೆಸಿದ್ದೇವೆ ಎಂದು ಶಾಲೆಯ ಮುಖ್ಯಾಧ್ಯಾಪಕ ಯೇಸುಮಿತ್ರ ಹೇಳುತ್ತಾರೆ.ಈ ಶಾಲೆಯ ಪರಿಸರ ಕಾಳಜಿ ನೋಡಿದರೆ ಸಂತೋಷವಾಗುತ್ತದೆ. ಪ್ರತಿಯೊಂದು ಶಾಲೆಯಲ್ಲಿ ಇಂತಹ ಮರಗಿಡಗಳನ್ನು ಬೆಳೆಸಿದರೆ ಶಾಲೆಯ ಜೊತೆಗೆ ಗ್ರಾಮವೂ ಹಸಿರಾಗುತ್ತದೆ. ಪರಿಸರ ರಕ್ಷಣೆ ಮಾಡಿದಂತಾಗುತ್ತದೆ ಎಂದು ನೇತಾಜಿ ಯುವ ಸೇನೆ ಅಧ್ಯಕ್ಷ ನಿಂಗು ಜಡಿ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ

ಶಿಕ್ಷಣ ಇಲಾಖೆಯ ಅಧಿಕಾರಿಗಳು ಈ ಶಾಲೆಗೆ ಒಮ್ಮೆ ಭೇಟಿ ನೀಡಿ, ಇತರ ಶಾಲೆಗಳಲ್ಲೂ ಇಂತಹ ಚಟುವಟಿಕೆ ಕೈಗೆತ್ತಿಕೊಳ್ಳಲು ಪ್ರೋತ್ಸಾಹಿಸಬೇಕು. ಈ ಶಾಲೆಯಲ್ಲಿ ಪರಿಸರ ರಕ್ಷಣೆಗೆ ಇನ್ನಷ್ಟು ಉತ್ತೇಜನ ನೀಡಬೇಕು ಎಂದು ಮನವಿ ಮಾಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.