ಶನಿವಾರ, ಜನವರಿ 18, 2020
20 °C

ಬೀಡಿ ಕಾರ್ಮಿಕರಿಗೆ ಮನೆ: ಕೇಂದ್ರದ ಪಾಲು ಹೆಚ್ಚಳ ಭರವಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ~ಬೀಡಿ ಕಾರ್ಮಿಕರಿಗೆ ಮನೆ ನಿರ್ಮಿಸಿಕೊಡುವುದಕ್ಕಾಗಿ ಕೇಂದ್ರದಿಂದ ನೀಡಲಾಗುವ ಸಹಾಯಧನದ ಪಾಲನ್ನು 40,000 ರೂಪಾಯಿಯಿಂದ 75,000 ರೂಪಾಯಿಗೆ ಏರಿಸಲಾಗುವುದು~ ಎಂದು ಕೇಂದ್ರ ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆ ಭರವಸೆ ನೀಡಿದರು.ನಗರದ ಬಿಡ್ನಾಳ ಗ್ರಾಮದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಹಾಯಧನದಲ್ಲಿ ಜಿಲ್ಲಾ ಆಡಳಿತ ಹಾಗೂ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ನಿರ್ಮಿಸುವ ಬೀಡಿ ಕಾರ್ಮಿಕರ ಮನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.`ದೇಶದಲ್ಲಿ 18 ಲಕ್ಷ ಪುರುಷರು ಸೇರಿದಂತೆ ಒಟ್ಟು 50 ಲಕ್ಷ ಮಂದಿ ಬೀಡಿ ಕಾರ್ಮಿಕರಿದ್ದಾರೆ. ಇವರ ಆರೋಗ್ಯ ರಕ್ಷಣೆ, ವಸತಿ ಸೌಲಭ್ಯ ಇತ್ಯಾದಿಗಳಿಗಾಗಿ ಕೇಂದ್ರ ಸರ್ಕಾರ 1976ರಲ್ಲೇ ವಿಶೇಷ ಯೋಜನೆಗಳನ್ನು ಜಾರಿಗೆ ತಂದಿದೆ~ ಎಂದರು.`ಕಾರ್ಮಿಕ ಸಂಘಟನೆಗಳು ಕ್ರಿಯಾಶೀಲವಾಗಿರುವ ಕೇರಳ, ಪಶ್ಚಿಮ ಬಂಗಾಳ, ಆಂಧ್ರಪ್ರದೇಶ ಮುಂತಾದ ರಾಜ್ಯಗಳಲ್ಲಿ ಈ ಯೋಜನೆಗಳ ಫಲ ಕಾರ್ಮಿಕರಿಗೆ ಲಭಿಸುತ್ತಿದೆ~ ಎಂದು ತಿಳಿಸಿದ ಖರ್ಗೆ, `ಕರ್ನಾಟಕದಲ್ಲಿರುವ 2.45 ಲಕ್ಷ ಬೀಡಿ ಕಾರ್ಮಿಕರ ಪೈಕಿ 2.03ಲಕ್ಷ ಮಂದಿಗೆ ಮಾತ್ರ ಗುರುತಿನ ಚೀಟಿ ಲಭಿಸಿದ್ದು ಉಳಿದವರಿಗೆ ಅದನ್ನು ಒದಗಿಸಲು ಅಧಿಕಾರಿಗಳು ಮುಂದಾಗಬೇಕು~ ಎಂದು ಸಲಹೆ ನೀಡಿದರು.ಬೆಳಗಾವಿ ಹಾಗೂ ಕಾರವಾರದಲ್ಲಿ ಭವಿಷ್ಯನಿಧಿ ಕಚೇರಿ ತೆರೆಯಲು ಇಲಾಖೆ ಮುಂದಾಗಿದ್ದು ರಾಜ್ಯದಲ್ಲಿ ಅನೇಕ ಉಪ ಕಚೇರಿಗಳನ್ನು ಕೂಡ ತೆರೆಯಲಾಗುವುದು ಎಂದು ಅವರು ತಿಳಿಸಿದರು.ಸಚಿವ ಜಗದೀಶ ಶೆಟ್ಟರ, ಸಂಸದ ಪ್ರಹ್ಲಾದ ಜೋಶಿ, ಶಾಸಕರಾದ ವೀರಭದ್ರಪ್ಪ ಹಾಲಹರವಿ, ಚಂದ್ರಕಾಂತ ಬೆಲ್ಲದ, ಜಿಲ್ಲಾಧಿಕಾರಿ ದರ್ಪಣ ಜೈನ್, ಪಾಲಿಕೆ ಆಯುಕ್ತ ಡಾ. ಕೆ.ವಿ. ತ್ರಿಲೋಕಚಂದ್ರ ಮತ್ತಿತರರು ಭಾಗವಹಿಸಿದ್ದರು.

 

ಪ್ರತಿಕ್ರಿಯಿಸಿ (+)