ಶುಕ್ರವಾರ, ನವೆಂಬರ್ 27, 2020
18 °C

ಬೀಸಿದ ಬಲೆಯಿಂದ ಹೊಸ ಅಲೆಗೆ...

ನಿರೂಪಣೆ: ಎಚ್.ಎಸ್. ರೋಹಿಣಿ Updated:

ಅಕ್ಷರ ಗಾತ್ರ : | |

`ನಿನ್ನ ನೀನು ಮರೆತರೇನು ಸುಖವಿದೆ..' ಎನ್ನುತ್ತಾ `ದೇವರ ಕಣ್ಣು' ಚಿತ್ರದ ಹಾಡಿನಲ್ಲಿ ಸಿತಾರ್ ಮೀಟುವ ನಟಿ ಜಯಲಕ್ಷ್ಮಿ ಇಂದು ಪೋಷಕ ಪಾತ್ರಗಳಲ್ಲಿ ಸಕ್ರಿಯರು. ಎಪ್ಪತ್ತರ ದಶಕದಲ್ಲಿ ನಾಯಕಿಯಾಗಿ ನಟಿಸಿದ್ದ ಈ ಚೆಲುವೆ ಈಗ ತಾಯಿ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಕಲಾವಿದೆ.ತಂದೆ ಊರು ಮಂಗಳೂರು. ತಾಯಿ ಮಾತು ಮಲಯಾಳಂ. ಹಾಗಾಗಿ ಕನ್ನಡ-ಮಲಯಾಳಂ ಎರಡೂ ಭಾಷೆಗಳನ್ನು ಬಲ್ಲ ಈ ಕರಾವಳಿ ಚೆಲುವೆ ಬೆಳೆದದ್ದು ಬೆಂಗಳೂರಿನಲ್ಲಿಯೇ. ಚಿಕ್ಕಂದಿನಿಂದ ನರ್ತನ, ಗಾಯನದಲ್ಲಿ ಆಸಕ್ತಿ ತಳೆದಿದ್ದ ಅವರು ತಂದೆಯ ಪ್ರೋತ್ಸಾಹದಿಂದ ಪೂನಾ ಫಿಲ್ಮ್ ಇನ್‌ಸ್ಟಿಟ್ಯೂಟ್‌ನಲ್ಲಿ ಅಭಿನಯದ ತರಬೇತಿಗೆ ಸೇರಿಕೊಂಡರು. ಅಲ್ಲಿ ಕಲಿತು ಬಂದು ಮಲಯಾಳಂ ನಟ ಪ್ರೇಮ್ ನಸೀರ್ ಅವರೊಂದಿಗೆ ಎರಡು ಚಿತ್ರಗಳಲ್ಲಿ ನಾಯಕಿಯಾಗಿಯೂ ಕಾಣಿಸಿಕೊಂಡರು. ಕನ್ನಡದಲ್ಲಿ ಅರಸು ಕುಮಾರ್ ನಿರ್ದೇಶನದ `ಬೀಸಿದ ಬಲೆ' ಚಿತ್ರದಲ್ಲಿ ನಾಯಕಿಯಾದರು.ಅವರು ನಾಯಕಿಯಾಗಿದ್ದ `ದೇವರ ಕಣ್ಣು' ಚಿತ್ರದಲ್ಲಿ ಅನಂತನಾಗ್ ನಾಯಕ. `ಸೀತೆಯಲ್ಲ ಸಾವಿತ್ರಿ' ಚಿತ್ರದಲ್ಲಿ ವಿಷ್ಣುವರ್ಧನ್ ನಾಯಕ. ಹೀಗೆ ಅಂದಿನ ನಟರಾದ ಅಂಬರೀಷ್, ಲೋಕೇಶ್, ಅಶೋಕ್, ದ್ವಾರಕೀಶ್ ಅವರೊಂದಿಗೆ ನಟಿಸಿದ ಈ ಚೆಲುವೆ `ಬಯಲು ದಾರಿ'ಯ ಪಾತ್ರಕ್ಕೆ ಅತ್ಯುತ್ತಮ ಪೋಷಕ ನಟಿ ರಾಜ್ಯ ಪ್ರಶಸ್ತಿಯನ್ನೂ ಪಡೆದರು. `ಜಾಗೃತಿ', `ಕಳ್ಳಕುಳ್ಳ', `ಬೆಸುಗೆ' ಅವರ ನಟನೆಯ ಜನಪ್ರಿಯ ಚಿತ್ರಗಳು.ಮದುವೆ ನಂತರ ಪತಿ ಜೊತೆ ಸೌದಿ ಅರೇಬಿಯಾದಲ್ಲಿ ನೆಲೆಸಿದ್ದ ಕಾರಣ ಅಭಿನಯದಿಂದ ದೂರ ಉಳಿದ ಜಯಲಕ್ಷ್ಮಿ , 1999ರಲ್ಲಿ `ನೀತಿ ಚಕ್ರ' ಧಾರಾವಾಹಿ ಮೂಲಕ ಅಭಿನಯದ ಲೋಕಕ್ಕೆ ಪುನರಾಗಮಿಸಿದರು. `ಕನ್ಯಾದಾನ', `ದುರ್ಗ', `ಕುಂಕುಮಭಾಗ್ಯ', `ರಾಘವೇಂದ್ರ ವೈಭವ', `ಕೃಷ್ಣ ರುಕ್ಮಿಣಿ' ಧಾರಾವಾಹಿಗಳಲ್ಲಿ ನಟಿಸಿರುವ ಅವರು ಸಿನಿಮಾಗಳಿಂದ ಬರುತ್ತಿರುವ ಅವಕಾಶಗಳನ್ನೂ ಒಪ್ಪಿಕೊಳ್ಳುತ್ತಿದ್ದಾರೆ. `ಶಾಪ', `ಶುಕ್ರದೆಸೆ', `ಕುಟುಂಬ', `ಹೀರೋ', `ಅಂಕ', `ಬಾನಲ್ಲೂ ನೀನೇ ಭುವಿಯಲ್ಲು ನೀನೇ', `ಭಗವಾನ್', `ಕಿಟ್ಟಿ', `ಮಿ. ಹರಿಶ್ಚಂದ್ರ', `ಸೀಯು', `ಒಲವಿನ ಓಲೆ' ಚಿತ್ರಗಳಲ್ಲಿ ನಟಿಸಿದ್ದಾರೆ. ಅವರ ನಟನೆಯ `ನಂದೀಶ', `ಬಚ್ಚನ್', `ಬೀಟ್', `ಜಟಾಯು' ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿವೆ.ಆತ್ಮ ಸಂತೋಷಕ್ಕಾಗಿ ಐದು ವರ್ಷಗಳಿಂದ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಕಲಿಯುತ್ತಿದ್ದಾರಂತೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.