ಬುಧವಾರ, ಮೇ 27, 2020
27 °C
ನಾ ಕಂಡ ಬದುಕು

ರಾಮಸ್ವಾಮಿ ನೆನಪಿನ ಭಿತ್ತಿ: ಬೆಂಗಳೂರು ಬೆಳವಣಿಗೆ ದಾಖಲಿಸಿದ ಛಾಯಾಗ್ರಾಹಕ

ನಿರೂಪಣೆ: ಸುರೇಖಾ ಹೆಗಡೆ Updated:

ಅಕ್ಷರ ಗಾತ್ರ : | |

ವರ್ಷಗಟ್ಟಲೆ, ದಶಕಗಟ್ಟಲೆ ಬೆಂಗಳೂರನ್ನು ಕಂಡವರಿಗೆ ಈ ನಗರವು ಆಪ್ತವಾದ ಯಾವುದೋ ಜಾಗವನ್ನು ಕೊಡುಗೆಯಾಗಿ ಕೊಟ್ಟಿರುತ್ತದೆ. ಆ ಜಾಗದೊಟ್ಟಿಗೆ ಬೆಸೆದುಕೊಂಡ ನೆನಪುಗಳ ಮಾತು ಮಧುರವೂ ಹೌದು, ಮರೆಯಲಾಗದವೂ ಹೌದು. ವಿವಿಧ ಕ್ಷೇತ್ರಗಳ ದಿಗ್ಗಜರು ವಾರಕ್ಕೊಮ್ಮೆ ಅಂಥ ನೆನಪುಗಳ ಮೆಲುಕು ಹಾಕುವ ಜಗಲಿ ಇದು. ಈ ವಾರ (ಜುಲೈ 18, 2016) ಜಗಲಿಯ ಮೇಲೆ ಛಾಯಾಗ್ರಾಹಕ ಟಿ.ಎಲ್‌.ರಾಮಸ್ವಾಮಿ.

---

ಟುರ್‌ ಎಂದು ಸದ್ದು ಮಾಡುವ ನನ್ನ ಮೋಟಾರ್‌ ಬೈಕ್‌ ಏರಿ ಇಡೀ ಬೆಂಗಳೂರು ಸುತ್ತಿದ್ದೇನೆ. ಭುಜಕ್ಕೆ ಸದಾ ಜೋತು ಬೀಳುವ ಕ್ಯಾಮೆರಾ ಹಿಡಿದು ನೋಡದ ಸ್ಥಳಗಳಿಲ್ಲ, ಕ್ಲಿಕ್ಕಿಸದ ಚಿತ್ರಗಳಿಲ್ಲ.

ಬೆಂಗಳೂರಿನ ರಸ್ತೆಯನ್ನಲಂಕರಿಸಿದ ಮರಗಳ ಸಾಲಿನಿಂದ ಹಿಡಿದು, ವಿಧಾನಸೌಧ, ಸಂಘ ಸಂಸ್ಥೆಗಳು, ಅನೇಕ ಗಣ್ಯರ ಭಾವಚಿತ್ರಗಳನ್ನು ನನ್ನ ಕ್ಯಾಮೆರಾ ಕಣ್ಣಲ್ಲಿ ಸೆರೆಹಿಡಿದ್ದೇನೆ. ನಾನು ಬೆಂಗಳೂರಿನ ಬೆಳವಣಿಗೆಯ ಹಲವು ಹಂತಗಳನ್ನು ನೋಡಿದ ಹಿರಿಯ ಛಾಯಾಗ್ರಾಹಕ ಟಿ.ಎಲ್‌.ರಾಮಸ್ವಾಮಿ. ರೀಲ್‌ ಕ್ಯಾಮೆರಾ ಕಾಲದಿಂದ ಇಂದಿನ ರಿಯಲ್‌ ಕ್ಯಾಮರಾಗಳ ಸಾಂಗತ್ಯ ಬೆಳೆಸಿರುವ ನಾನು ನೆಗೆಟಿವ್‌ ಮಿಲಿಯನೇರ್‌ ಕೂಡ ಹೌದು!

ತುಮಕೂರಿನ ತುರುವೆಕೆರೆ ನನ್ನ ಹುಟ್ಟೂರು. ತಂದೆ ಲಕ್ಷ್ಮೀನರಸಿಂಹಯ್ಯ ಅರಣ್ಯಾಧಿಕಾರಿಯಾಗಿದ್ದರು. ಹೀಗಾಗಿ ಅವರಿಗೆ ವರ್ಗವಾದಲ್ಲೆಲ್ಲಾ ನಾವೂ ಹೋಗುವುದು ಅನಿವಾರ್ಯವಾಗಿತ್ತು. ಪ್ರಾಥಮಿಕ, ಪ್ರೌಢಶಾಲೆ ವಿದ್ಯಾಭ್ಯಾಸವನ್ನು ಸೊರಬ, ಸಾಗರದಲ್ಲಿ ಮುಗಿಸಿದೆ. ನಾನು ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗುತ್ತಿದ್ದ ಹಾಗೂ ರ್‍ಯಾಂಕ್‌ ವಿದ್ಯಾರ್ಥಿಯಾಗಿದ್ದರಿಂದ ಎಲ್ಲ ಶಿಕ್ಷಕರಿಗೆ ತುಂಬಾ ಅಚ್ಚುಮೆಚ್ಚಿನವನಾಗಿದ್ದೆ.

ಎಸ್ಸೆಸ್ಸೆಲ್ಸಿ ನಂತರದ ಇಂಟರ್‌ ಮೀಡಿಯೇಟ್‌ ವಿದ್ಯಾಭ್ಯಾಸಕ್ಕಾಗಿ 1947ರಲ್ಲಿ ಬೆಂಗಳೂರಿಗೆ ಬಂದೆ. ಆಗ ಎಚ್‌.ಬಿ.ಸಮಾಜ ರಸ್ತೆಯಲ್ಲಿ ಅತ್ತೆ ಮಗನ ಮನೆಯಲ್ಲಿ ಉಳಿದುಕೊಂಡು ಓದಿದೆ. ವಿಶ್ವೇಶ್ವರಪುರದಲ್ಲಿರುವ ವಿಜಯಾ ಕಾಲೇಜಿನಲ್ಲಿ ಪಿಯುಸಿ ವಿದ್ಯಾಭ್ಯಾಸ ಮಾಡಿದೆ. ಆಗ ಎಲ್ಲೇ ಹೊರಟರೂ ಸೈಕಲ್‌ ನನ್ನ ಜತೆಗಿರುತ್ತಿತ್ತು. ನಂತರದ ದಿನಗಳಲ್ಲಿ ಮೋಟಾರ್‌ ಬೈಕ್‌ ನನ್ನ ಸಾಥಿಯಾಯಿತು.

ಇದನ್ನೂ ಓದಿ: ಹಿರಿಯ ಛಾಯಾಗ್ರಾಹಕ ಟಿ.ಎಲ್.ರಾಮಸ್ವಾಮಿ ನಿಧನ


ವಿಧಾನಸೌಧದ ಎದುರಲ್ಲಿ ಟಿ.ಎಲ್‌.ರಾಮಸ್ವಾಮಿ (ಫಿಶ್‌ ಐ ಲೆನ್ಸ್‌ನಲ್ಲಿ ಸೆರೆಹಿಡಿದ ಚಿತ್ರ). ಚಿತ್ರ: ಆನಂದ ಬಕ್ಷಿ

ಪತ್ರಿಕೆಗಳ ಸಾಂಗತ್ಯ

ವಿಜಯಾ ಕಾಲೇಜಿಗೆ ಹೋಗುತ್ತಿದ್ದ ನಾನು ಮಿನರ್ವ ಸರ್ಕಲ್‌ನಲ್ಲಿದ್ದ ‘ಜನವಾಣಿ’ ಪತ್ರಿಕೆಯ ಸಂಪರ್ಕಕ್ಕೆ ಬಂದೆ. ಅಲ್ಲಿ ಛಾಯಾಗ್ರಾಹಣ ವಿಭಾಗದ ಮುಖ್ಯಸ್ಥರಾಗಿದ್ದ ವುಡನ್‌ ಷರೀಫ್‌ ಅವರ ಸ್ನೇಹವಾಗಿತ್ತು.

ತರಗತಿಗೆ ಬಿಡುವಿದ್ದಾಗಲೆಲ್ಲಾ ಅಲ್ಲಿಗೆ ಹೋಗುತ್ತಿದ್ದೆ. ಷರೀಫ್‌ ಅನೇಕ ಕಾರ್ಯಕ್ರಮಗಳಿಗೆ ನನ್ನನ್ನು ಕರೆದುಕೊಂಡು ಹೋಗುತ್ತಿದ್ದರು. ಚಿತ್ರ ತೆಗೆಯುವುದರ ಬಗ್ಗೆ ತಿಳಿಸಿಕೊಡುತ್ತಿದ್ದರು. ಕೊನೆಕೊನೆಗೆ ಕೆಲ ಕಾರ್ಯಕ್ರಮಗಳಿಗೆ ನನ್ನೊಬ್ಬನನ್ನೇ ಕಳುಹಿಸುತ್ತಿದ್ದರು.

ಪತ್ರಿಕೆಗಳಲ್ಲಿ ಮುದ್ರಣಗೊಳ್ಳುತ್ತಿದ್ದ ಛಾಯಾಚಿತ್ರಗಳ ಮೂಲಕ ಬೆಂಗಳೂರಿಗೆ ಮತ್ತು ಇಲ್ಲಿನ ನಾಗರಿಕರಿಗೆ ಹತ್ತಿರವಾದೆ. ನಾನು ವಾಸವಾಗಿದ್ದ ಗಾಂಧಿ ಬಜಾರ್‌ ಪ್ರದೇಶದಿಂದ ಸ್ಕೂಟರ್‌ ಏರಿ ಹೊರೆಟೆನೆಂದರೆ ಎಲ್ಲರೂ ಮಾತನಾಡಿಸುವವರೇ. ಆಗ ಬೆಂಗಳೂರಿನ ಜನಸಂಖ್ಯೆ ಈಗಿನಷ್ಟಿರಲಿಲ್ಲ. ಪಕ್ಕಾ ಹಳ್ಳಿ ವಾತಾವರಣವಿತ್ತು. ಎಲ್ಲರಿಗೂ ನನ್ನ ಪರಿಚಯವಾಗಿತ್ತು.

ಆಗ ತಾನೆ ಆರಂಭವಾಗಿದ್ದ ‘ಡೆಕ್ಕನ್‌ ಹೆರಾಲ್ಡ್‌’ ಹಾಗೂ ‘ಪ್ರಜಾವಾಣಿ’ ಪತ್ರಿಕೆಗೆ ಛಾಯಾಗ್ರಾಹಕನಾಗಿ ಸೇರಿಕೊಂಡೆ. ಬೆಂಗಳೂರಿನಲ್ಲಿದ್ದ ವಿವಿಧ ಕಾನ್ಸುಲೇಟ್‌ಗಳು, ಬೇರೆ ಬೇರೆ ಪತ್ರಿಕೆಗಳಲ್ಲೂ ಕೆಲಸ ಮಾಡುತ್ತಿದ್ದೆ. ಪತ್ರಿಕೆಗಳಲ್ಲಿ ದಿನನಿತ್ಯ ನಾನು ಸೆರೆಹಿಡಿದ ಛಾಯಾಚಿತ್ರಗಳಿರುತ್ತಿದ್ದವು. ಹೀಗಾಗಿ ಎಲ್ಲೇ ಹೋಗಲಿ ನನಗೆ ಪ್ರವೇಶವಿರುತ್ತಿತ್ತು. ಒಂದು ರೀತಿಯಲ್ಲಿ ನನ್ನ ಚಿತ್ರ ಮೋಹಕ್ಕೆ ನೀರೆರೆದು ಪೋಷಿಸಿದ್ದು ಬೆಂಗಳೂರು, ಇಲ್ಲಿನ ಪತ್ರಿಕೆಗಳು.

ಕಲಾಮಂದಿರ, ಡಿವಿಜಿ ಒಲುಮೆ

ಅ.ನ.ಸುಬ್ಬರಾಯರು ನಡೆಸುತ್ತಿದ್ದ ಕಲಾಮಂದಿರದಲ್ಲಿ ನಾನು ಚಿತ್ರಕಲೆ ತರಬೇತಿ ಪಡೆದೆ. ಚಿತ್ರಕಲೆಗೆ ಸಂಬಂಧಿಸಿದ ಪರೀಕ್ಷೆಯಲ್ಲೂ ತೇರ್ಗಡೆಯಾಗಿದ್ದೆ. ಗಾಂಧಿ ಬಜಾರ್‌ನಲ್ಲಿ ನಡೆಯುತ್ತಿದ್ದ ಸಾಕಷ್ಟು ಕಾರ್ಯಕ್ರಮಗಳ ಚಿತ್ರ ಸೆರೆಹಿಡಿಯಲು ಓಡಾಡುತ್ತಿದ್ದೆ.

ಬಿಎಂಎಸ್‌ ಎಂಜಿನಿಯರಿಂಗ್‌ ಕಾಲೇಜಿನಲ್ಲಿದ್ದಾಗಲೂ  (ಗಾಂಧಿ ಬಜಾರ್‌ ಬಳಿಯ ಪ್ರಜಾಮತ ಕಚೇರಿ ಎದುರು ಬಿಎಂಎಸ್‌ ಕಾಲೇಜಿತ್ತು. ಈಗ ಸುಂಕೇನಹಳ್ಳಿಯಲ್ಲಿದೆ.) ಕ್ಲಾಸ್‌ಗೆ ಚಕ್ಕರ್‌ ಹೊಡೆದು ವಿದ್ಯಾರ್ಥಿ ಭವನದಲ್ಲಿ ಮಸಾಲೆ ದೋಸೆ ಸವಿಯುತ್ತಿದ್ದೆ. ಗಾಂಧಿ ಬಜಾರ್‌ ಭೇಟಿಯ ಹಿಂದೆ ಡಿ.ವಿ.ಗುಂಡಪ್ಪನವರನ್ನು ನೋಡುವುದೂ ನನ್ನ ಆದ್ಯತೆ ಆಗಿತ್ತು.

ಸಂಗೀತ ಹಾಗೂ ಕಲೆಯ ಬಗ್ಗೆ ಅಪಾರ ಪ್ರೀತಿ ಇದ್ದ ಅವರಿಗೆ ವಯೊಲಿನ್‌ ನುಡಿಸುವುದನ್ನು ಕಲಿತಿದ್ದ ನಾನು ಹತ್ತಿರವಾಗಿದ್ದೆ. ಅವರ ಅಂತಃಪುರ ಗೀತೆ ಪರಿಕಲ್ಪನೆಯನ್ನು ನೃತ್ಯಕ್ಕೆ ಬಳಸಿಕೊಳ್ಳಲಾಯಿತು. ಆಗ ಜೂಮ್‌ ಲೆನ್ಸ್‌ ಇರಲಿಲ್ಲ. ನೃತ್ಯ ಕಾರ್ಯಕ್ರಮದಲ್ಲಿ ಸೆರೆಹಿಡಿದ ಚಿತ್ರಗಳನ್ನು ನೋಡಿ ಡಿ.ವಿ.ಜಿ. ಅವರು ತುಂಬಾ ಖುಷಿ ಪಟ್ಟರು.


ಇಳಿವಯಸ್ಸಿನಲ್ಲಿಯೂ ಕ್ಯಾಮೆರಾ ಸಾಂಗತ್ಯ ಬಿಟ್ಟಿರಲಿಲ್ಲ. (ಪ್ರಜಾವಾಣಿ ಚಿತ್ರ: ಆನಂದ ಬಕ್ಷಿ)

ಮಲ್ಲೇಶ್ವರದ ಹಸಿರಿನ ನಡುವೆ

ಪಿಯುಸಿ ಅಭ್ಯಾಸಕ್ಕೆಂದು ನಾನು ಬೆಂಗಳೂರಿಗೆ ಬಂದಾಗಿತ್ತು. ನಂತರದ ದಿನಗಳಲ್ಲಿ ಅಪ್ಪ ಕೂಡ ಇಲ್ಲೇ ಬಂದರು. ಆಗ ನಾವಿದ್ದುದು ಮಲ್ಲೇಶ್ವರದ 18ನೇ ಅಡ್ಡರಸ್ತೆಯಲ್ಲಿದ್ದ ಅರಣ್ಯ ಇಲಾಖೆಯ ಸರ್ಕಾರಿ ಕ್ವಾಟ್ರಸ್‌ನಲ್ಲಿ. ಅಲ್ಲಿನ ಪರಿಸರ, ವಾತಾವರಣ, ವಾಹನಗಳ ಕಿರಿಕಿರಿಯಿಲ್ಲದ ಪ್ರಶಾಂತ ರಸ್ತೆಗಳು ತುಂಬಾ ಚೆನ್ನಾಗಿದ್ದವು. ಈಗ ನೋಡಿದರೆ ಮಲ್ಲೇಶ್ವರ ಪೂರ್ತಿ ಬದಲಾಗಿದೆ. ನಾವಿದ್ದ ಕಟ್ಟಡಕ್ಕೂ ಹೊಸತನ ಸಿಕ್ಕಿ ಗುರುತೇ ಸಿಗದಷ್ಟು ಬದಲಾಗಿಬಿಟ್ಟಿದೆ.

ಅಲ್ಲೇ ಹಿಂಭಾಗದಲ್ಲಿ ಬಸ್‌ಸ್ಟ್ಯಾಂಡ್‌  ಇತ್ತು. ಮನೆಯ ಸುತ್ತೆಲ್ಲಾ ಹಸಿರು ಕಂಗೊಳಿಸುತ್ತಿತ್ತು. ಅಪ್ಪ ಅನೇಕ ನೀಲಗಿರಿ ಮರಗಳನ್ನು ನೆಡಿಸಿದ್ದರು. ಜ್ಞಾನಭಾರತಿ ಆವರಣದಲ್ಲಿ ಕೂಡ ಬರೀ ಕಲ್ಲುಬಂಡೆಗಳಿದ್ದವು. ಅಲ್ಲಿ ಕೂಡ ಅನೇಕ ಮರಗಳನ್ನು, ಔಷಧಿ ಸಸ್ಯಗಳನ್ನು ಅವರು ನೆಡಿಸಿದ್ದರು. ನಾನೂ ಅವರೊಂದಿಗೆ ಅಲ್ಲೆಲ್ಲಾ ಸುತ್ತಾಡುತ್ತಿದ್ದೆ. ಈಗಲೂ ಕೆಲ ಔಷಧೀಯ ಸಸ್ಯಗಳು ಉಳಿದುಕೊಂಡಿವೆ ಎಂಬ ಸಮಾಧಾನ ನನಗೆ.

ಅದು ಬಿಡಿ, ಆಗ ಇಷ್ಟೊಂದು ಕಾರು ಇರಲಿಲ್ಲ. ನಾವಿದ್ದ ಮಲ್ಲೇಶ್ವರದ 18ನೇ ಅಡ್ಡರಸ್ತೆ ಮನೆಯಿಂದ ಸೈಕಲ್‌ ಪೆಡಲ್‌ ತುಳಿದು ಸುಯ್ಯ ಎಂದು ಹೊರಟರೆ 11ನೇ ಅಡ್ಡರಸ್ತೆಯವರೆಗೂ ಮತ್ತೆ ಪೆಡಲ್‌ ತುಳಿಯುವ ಅವಶ್ಯಕತೆಯೇ ಇರಲಿಲ್ಲ. ಕಾಲೇಜಿಗೆ ಸೈಕಲ್‌ ತುಳಿದುಕೊಂಡೇ ಬರುತ್ತಿದ್ದೆ.

ಸಿ.ವಿ.ರಾಮನ್‌ ಒಡನಾಟ

ನಾನು ಮಲ್ಲೇಶ್ವರದ 18ನೇ ಅಡ್ಡರಸ್ತೆಯಲ್ಲಿ ಇದ್ದೆ. 16ನೇ ಅಡ್ಡರಸ್ತೆಯಲ್ಲಿ ಸಿ.ವಿ.ರಾಮನ್‌ ವಾಸವಾಗಿದ್ದರು. ವಿಜ್ಞಾನಿಯಾಗಿದ್ದ ಅವರನ್ನು ಭೇಟಿಯಾಗಲು ಅನೇಕ ದೇಶ–ವಿದೇಶದ ಅನೇಕ ನೋಬೆಲ್‌ ಪ್ರಶಸ್ತಿ ವಿಜೇತ ವಿಜ್ಞಾನಿಗಳು ಬರುತ್ತಿದ್ದರು. ಆಗ ಅವರು ನನಗೂ ತಿಳಿಸುತ್ತಿದ್ದರು. ಹೀಗಾಗಿ ಡಜನ್‌ಗೂ ಹೆಚ್ಚು ನೋಬೆಲ್‌ ವಿಜೇತರ ಕೈಕುಲುಕಿದ ಖುಷಿ ನನಗಿದೆ.

‘ರಾಮನ್ಸ್‌ ರೇ’ ಪ್ರಯೋಗಕ್ಕಿಳಿದಿದ್ದ ರಾಮನ್‌ ಅವರು ಚಿಕ್ಕಕೋಣೆಯಲ್ಲಿ ನೂರಾರು ವಜ್ರದ ಹರಳುಗಳನ್ನಿಟ್ಟುಕೊಂಡು ಸಂಶೋಧನೆ ನಡೆಸುತ್ತಿದ್ದರು. ಛಾಯಾಚಿತ್ರಗಳ ಬಗ್ಗೆ ವಿಶೇಷ ಒಲವು ಬೆಳೆಸಿಕೊಂಡಿದ್ದ ಅವರು ನನಗೂ ಪ್ರಯೋಗಾಲಯಕ್ಕೆ ಪ್ರವೇಶಿಸಲು ಅನುಮತಿ ನೀಡಿದ್ದರು.


ರಾಮಸ್ವಾಮಿ ಅವರಿಗೆ ವಿದ್ಯಾರ್ಥಿ ಭವನ ಅಚ್ಚುಮೆಚ್ಚು (ಪ್ರಜಾವಾಣಿ ಚಿತ್ರ: ಆನಂದ ಬಕ್ಷಿ)

ಬದಲಾದ ಬೆಂಗಳೂರು

ನಾನು ಬೆಂಗಳೂರಿಗೆ ಕಾಲಿಟ್ಟ ದಿನಕ್ಕೂ ಇತ್ತೀಚಿನ ಬೆಂಗಳೂರಿಗೂ ಸಾಕಷ್ಟು ವ್ಯತ್ಯಾಸವಿದೆ. ವಾತಾವರಣ ಬದಲಾಗಿದೆ, ಟ್ರಾಫಿಕ್‌ ಹೆಚ್ಚಾಗಿದೆ. ಅಭಿವೃದ್ಧಿಯ ಹೆಸರಲ್ಲಿ ಬೆಂಗಳೂರು ಸಾಕಷ್ಟು ಬದಲಾಗಿದೆ. ಆ ಬಗ್ಗೆ ದೂರುವುದು ಸರಿಯೂ ಅಲ್ಲ. ಅಭಿವೃದ್ಧಿ ಬೇಕು ಎಂದರೆ ಆಗುಹೋಗುಗಳ ಪಟ್ಟಿಯೂ ಬೆಳೆಯುತ್ತದೆ. ಬದಲಾವಣೆಯಿಂದ ಅನುಕೂಲವೇ ಹೆಚ್ಚು ಎಂಬುದು ನನ್ನ ಭಾವನೆ.

ವಿಧಾನಸೌಧದ ಅಂಗಳದಲ್ಲಿ

ಜಯನಗರದ ಅಶೋಕ ಪಿಲ್ಲರ್‌ ಉದ್ಘಾಟನೆಯ ಚಿತ್ರ ಕ್ಲಿಕ್ಕಿಸಿದ್ದೆ. ಟೌನ್‌ ಹಾಲ್‌ ಒಂದು ಬಿಟ್ಟು ಅಲ್ಲಿನ ಸುತ್ತಮುತ್ತಲಿನ ಬೇರೆಲ್ಲಾ ಕಟ್ಟಡಗಳ ಉದ್ಘಾಟನೆ ಸಂದರ್ಭದಲ್ಲಿ ನಾನು ಹಾಜರಿದ್ದೆ. ನಗರದ ಬೆಳವಣಿಗೆಯ ಹೆಜ್ಜೆಯೊಂದಿಗೆ ಹೆಜ್ಜೆ ಹಾಕಿದ ನಾನು ವಿಧಾನ ಸೌಧಕ್ಕೆ 1951ರಲ್ಲಿ ನೆಹರು ಅವರು ಅಡಿಗಲ್ಲು ಹಾಕಿದ್ದಕ್ಕೂ ಸಾಕ್ಷಿಯಾಗಿದ್ದೇನೆ. ಇಲ್ಲಿರುವ ಕಂಬಗಳನ್ನು ಬಿಟ್ಟರೆ ಅಂದಿನಿಂದ ಇಂದಿನವರೆಗೆ ಈ ಸ್ಥಳಕ್ಕೆ ಬರುತ್ತಿರುವವನು ನಾನೊಬ್ಬನೇ ಇರಬಹುದು.

ಮೊದಲ ಮುಖ್ಯಮಂತ್ರಿ ಕೆ.ಸಿ.ರೆಡ್ಡಿ ಯಿಂದ ಹಿಡಿದು ಇಂದಿನ ಮುಖ್ಯಮಂತ್ರಿಗಳವರೆಗಿನ ಪ್ರಮಾಣ ವಚನ ಕಾರ್ಯಕ್ರಮದ ಛಾಯಾಚಿತ್ರ ತೆಗೆದಿದ್ದೇನೆ. ಶಾಸಕಾಂಗದ ಸದಸ್ಯನಲ್ಲದಿದ್ದರೂ ಇಲ್ಲಿ ನಡೆದ 60 ಶಾಸಕಾಂಗ ಸಭೆಯನ್ನು ನೋಡಿದ ಹೆಮ್ಮೆ ನನ್ನದು. ಸಾರ್ಕ್‌, ಯುನಿಸೆಫ್‌ ಸಭೆಗಳಲ್ಲಿಯೂ  ನಾನು ಹಾಜರಿದ್ದೆ.

ಎಂಜಿನಿಯರಿಂಗ್‌ ಅನುತ್ತೀರ್ಣ

ನಾನಾಗ ಎಂಜಿನಿಯರಿಂಗ್‌ ಅಂತಿಮ ತರಗತಿಯಲ್ಲಿ ಓದುತ್ತಿದ್ದೆ. ಅನೇಕ ಪತ್ರಿಕೆಗಳಿಗೆ ಹಾಗೂ ಕಾನ್ಸುಲೇಟ್‌ಗಳಿಗೆ ಛಾಯಾಗ್ರಾಹಕನಾಗಿದ್ದರಿಂದ ದೆಹಲಿಗೆ ಕೆನೆಡಿ ಬಂದಾಗ ಹೋಗಲೇಬೇಕಾಯಿತು.

ಅದೇ ಸಂದರ್ಭ ನನ್ನ ಎಂಜಿನಿಯರಿಂಗ್‌ ಪರೀಕ್ಷೆಯೂ ಇತ್ತು. ಕೆನೆಡಿ ನೋಡಬಹುದು ಎನ್ನುವ ಕಾರಣಕ್ಕೆ ಪರೀಕ್ಷೆ ಬಿಟ್ಟು ಅಲ್ಲಿಗೆ ಹೋದೆ. ದುರಾದೃಷ್ಟ ನೋಡಿ, ಅಂದು ಕೆನೆಡಿ ತಾವು ಬರದೆ ತಮ್ಮ ಪತ್ನಿ ಹಿಲರಿಯನ್ನು ಕಳುಹಿಸಿಕೊಟ್ಟಿದ್ದರು. ಮೊದಲಿನಿಂದಲೂ ರ್‍ಯಾಂಕ್‌ ವಿದ್ಯಾರ್ಥಿಯಾಗಿದ್ದರೂ ಎಂಜಿನಿಯರಿಂಗ್‌ನಲ್ಲಿ ಅನುತ್ತೀರ್ಣನಾದೆ. ಇದಕ್ಕೆ ನನ್ನ ಛಾಯಾಗ್ರಹಣ ಪ್ರೀತಿಯೇ ಕಾರಣ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು